ಜಿಲ್ಲಾಡಳಿತ ಭವನ ಲೋಕಾರ್ಪಣೆ
ಕ.ಪ್ರ.ವಾರ್ತೆ ಚಿಕ್ಕಬಳ್ಳಾಪುರ ಸೆ.20
ನಗರದ ಹೊರವಲಯದ ಅಣಕನೂರು ಬಳಿ ಸುಮಾರು 22 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಿರುವ ನೂತನ ಜಿಲ್ಲಾಡಳಿತ ಭವನವನ್ನು ಲೋಕಾರ್ಪಣೆ ಮಾಡಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮೆಚ್ಚುಗೆ ವ್ಯಕ್ತಪಡಿಸಿದರು.
ಕಟ್ಟಡದ ಉದ್ಘಾಟನೆ ಮಾಡಿ ತಮ್ಮ ಸಚಿವರ ಬಳಗದೊಂದಿಗೆ ಒಂದು ಸುತ್ತು ಹಾಕಿ, ಭವನ ಆಕರ್ಷಕವಾಗಿ ನಿರ್ಮಾಣವಾಗಿದೆ. ಜಿಲ್ಲಾ ಮಟ್ಟದ ಸರ್ಕಾರಿ ಕಚೇರಿಗಳು ಬಾಡಿಗೆ ಕಟ್ಟಡದಲ್ಲಿ ಆ ಮೂಲೆಗೊಂದು ಈ ಮೂಲೆಗೊಂದು ಎನ್ನುವಂತೆ ಕಾರ್ಯ ನಿರ್ವಹಿಸುತ್ತಿದ್ದು, ಇದೀಗ ನೂತನ ಭವನದಲ್ಲಿ ಒಂದೇ ಕಡೆ 60 ಕಚೇರಿಗಳು ಕಾರ್ಯ ನಿರ್ವಹಿಸುವಂತಾಗಿ ಜನರಿಗೆ ಅನುಕೂಲವಾಗುತ್ತಿದೆ ಎಂದು ತಿಳಿಸಿದರು.
ನಂತರ ನಗರದ ಸರ್ ಎಂ.ವಿ. ಜಿಲ್ಲಾ ಕ್ರೀಡಾಂಗಣಕ್ಕೆ ತೆರಳಿದ ಅವರು ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಿದರು. ಬಯಲುಸೀಮೆಯ ಜಿಲ್ಲೆಗಳಿಗೆ ಶಾಶ್ವತ ನೀರಾವರಿ ಸೌಲಭ್ಯ ಕಲ್ಪಿಸಲು ಡಾ. ಪರಮಶಿವಯ್ಯನವರ ವರದಿ ಅನುಷ್ಠಾನಗೊಳಿಸಬೇಕೆಂದು ನೀರಾವರಿ ಹೋರಾಟಗಾರರು ಒತ್ತಾಯಿಸಿದರು. ಕರ್ನಾಟಕ ರಾಜ್ಯ ಅಲ್ಪಸಂಖ್ಯಾತರ ವೇದಿಕೆ ಮುಖಂಡರು, ಲಿಂಗತ್ವ ಅಲ್ಪಸಂಖ್ಯಾತರ ಅಭಿವೃದ್ಧಿಗೋಸ್ಕರ 50 ಕೋಟಿ ಮೀಸಲಿಡಬೇಕು. ಸಮುದಾಯದ ಪ್ರತಿನಿಧಿಗಳು, ಅನುಭವವುಳ್ಳವರು, ಸರ್ಕಾರಿ ಅಧಿಕಾರಿಗಳನ್ನು ಒಳಗೊಂಡಂತೆ ಲಿಂಗತ್ವ ಅಲ್ಪಸಂಖ್ಯಾತರ ಕಲ್ಯಾಣ ಮಂಡಳಿ (ಸಮಾಜ ಕಲ್ಯಾಣ ಇಲಾಖೆಯ ಅಡಿಯಲ್ಲಿ) ರಚಿಸುವುದು ಮತ್ತು ಲಿಂಗತ್ವ ಅಲ್ಪಸಂಖ್ಯಾತರಿಗೆ ಉದ್ಯೋಗ ಒದಗಿಸುವುದು ಸೇರಿದಂತೆ ತಮ್ಮ ಪ್ರಮುಖ ಬೇಡಿಕೆ ಈಡೇರಿಸಬೇಕೆಂದು ಒತ್ತಾಯಿಸಿದರು.
ನೀರು ಘಟಕ ವಿದ್ಯುತ್ ಕಡಿತಕ್ಕೆ ಸೂಚನೆ
ಕೋಲಾರ: ಜಿಲ್ಲೆಯಲ್ಲಿ ಅನೇಕ ಕಡೆ ಕುಡಿಯುವ ನೀರು ಪೂರೈಕೆ ಘಟಕಗಳು ಐ.ಎಸ್.ಐ. ದೃಢೀಕರಣ ಪತ್ರವನ್ನು ಪಡೆಯದೆ ನೀರು ಪೂರೈಕೆ ಮಾಡುತ್ತಿರುವುದರಿಂದ ಕೂಡಲೇ ಸದರಿ ಘಟಕಗಳಿಗೆ ಕಲ್ಪಿಸಲಾಗಿರುವ ವಿದ್ಯುತ್ ಸಂಪರ್ಕ ಕಡಿತಗೊಳಿಸಬೇಕೆಂದು ಜಿಲ್ಲಾಧಿಕಾರಿ ಡಿ.ಕೆ. ರವಿ ಅವರು ಬೆಸ್ಕಾಂ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಕೋಲಾರ, ಬಂಗಾರಪೇಟೆ, ಶ್ರೀನಿವಾಸಪುರ ತಾಲೂಕಿನ ಅನೇಕ ಕಡೆ ಅನಧಿಕೃತ ನೀರು ಘಟಕಗಳು ನಡೆಯುತ್ತಿದ್ದು ಇದರಿಂದ ಜನತೆಯ ಆರೋಗ್ಯದ ಮೇಲೆ ಪರಿಣಾಮ ಬೀರುತ್ತಿರುವುದರಿಂದ ವಿದ್ಯುತ್ ಸರಬರಾಜನ್ನು ಕಡಿತಗೊಳಿಸುವ ಮೂಲಕ ಅಕ್ರಮ ತಡೆಯುವಂತೆ ಹಾಗೂ ಕ್ರಮ ಕೈಗೊಂಡಿರುವ ಬಗ್ಗೆ ವರದಿ ಸಲ್ಲಿಸಬೇಕೆಂದು ತಿಳಿಸಿದ್ದಾರೆ. ತಂಬಾಕು ಮತ್ತು ನಿಕೋಟಿನ್ ಯುಕ್ತ ಗುಟ್ಕಾ ಮತ್ತು ಪಾನ್ ಮಸಾಲ ಮಾರಾಟ ಮಾಡುತ್ತಿರುವ ಅಂಗಡಿಗಳ ಮೇಲೆ ಆರಕ್ಷಕ ಅಧೀಕ್ಷಕರು ಸಹಯೋಗದೊಂದಿಗೆ ದಾಳಿ ಮಾಡಿ ಅಂಗಡಿಗಳನ್ನು ಜಪ್ತಿ ಮಾಡಲು ಸಹ ಸೂಚಿಸಿದ್ದಾರೆ.