ಭಕ್ತರಿಂದಲೇ ಪುರಾತನ ದೇಗುಲ ಜೀರ್ಣೋದ್ಧಾರ
-ಪಾ.ಶ್ರೀ.ಅನಂತರಾಮ್
ಕೋಲಾರ: ನಗರದ ದೊಡ್ಡಪೇಟೆ ರಸ್ತೆಯಲ್ಲಿನ ಪುರಾಣ ಪ್ರಸಿದ್ಧ ಶ್ರೀ ಪ್ರಸನ್ನ ನಂಜುಂಡೇಶ್ವರ ದೇವಾಲಯದ ಜೀರ್ಣೋದ್ಧಾರಕ್ಕೆ ಸರ್ಕಾರದಿಂದ ಆರ್ಥಿಕ ನೆರವು ಸಿಗದಿರುವುದರಿಂದ ಭಕ್ತರೇ ಹಣ ಹಾಕಿ ಕಾಮಗಾರಿಗೆ ಚಾಲನೆ ನೀಡಿದ್ದಾರೆ.
ರಾಜ್ಯ ಸರ್ಕಾರದ ಮುಜರಾಯಿ ಇಲಾಖೆಗೆ ಸೇರಿದ ಈ ದೇವಾಲಯವನ್ನು ಸುಮಾರು 700 ವರ್ಷಗಳ ಹಿಂದೆ ಮೈಸೂರು ಸಂಸ್ಥಾನದ ಆಗಿನ ಮಹಾರಾಜ ಶ್ರೀ ತಿಮ್ಮರಾಜ ಒಡೆಯರ್ ನಿರ್ಮಿಸಿಕೊಟ್ಟಿರುವುದಾಗಿ ಭಕ್ತರು ಹೇಳುತ್ತಾರೆ.
ಈ ದೇವಾಲಯದಲ್ಲಿ ನಿತ್ಯ ಪೂಜೆ ನಡೆಯುತ್ತಿತ್ತು. ಜೊತೆಗೆ ಮಾಘ ಶುದ್ಧ ಪೌರ್ಣಿಮೆಯ ದಿನ ನಗರದ ಚಿಂದಲೂರು ಶಂಕರನಾರಾಯಣಶೆಟ್ಟಿ ಮತ್ತು ಬಿ.ಆರ್.ಮುನಿಯಪ್ಪ ಹಾಗೂ ಇನ್ನಿತರ ಭಕ್ತರು ಬ್ರಹ್ಮರಥೋತ್ಸವ, ನವರಾತ್ರಿ ಪೂಜೆ, ಕಾರ್ತಿಕ ಮಾಸದಲ್ಲಿ ದೀಪಾರಾಧಾನೆ ಸೇರಿದಂತೆ ಇನ್ನಿತರ ಸಂದರ್ಭಗಳಲ್ಲಿ ಪೂಜೆ ಪುನಸ್ಕಾರ ನೆರವೇರಿಸುತ್ತಿದ್ದರು.
ದೇವಾಲಯ ಅಭಿವೃದ್ಧಿಗೆ ಸರ್ಕಾರ ನಿರೀಕ್ಷಿತ ಮಟ್ಟದಲ್ಲಿ ಸಹಾಯ ಮಾಡದಿರುವುದರಿಂದ ಶಿಥಲಗೊಂಡಿತ್ತು. ಭಕ್ತರು ಕಳೆದ 12 ವರ್ಷಗಳಿಂದ ದೇವಾಲಯದ ಜೀರ್ಣೋದ್ಧಾರಕ್ಕಾಗಿ ಪ್ರಯತ್ನಿಸುತ್ತಿದ್ದರಾದರೂ ಸರ್ಕಾರ ಬಿಡಿಗಾಸು ನೀಡಿಲ್ಲ.
ದೇವಾಲಯ ಅಭಿವೃದ್ಧಿಗಾಗಿ ಭಕ್ತರ ಮನವಿ ಮೇರೆಗೆ ಶ್ರೀ ಪ್ರಸನ್ನ ನಂಜುಂಡೇಶ್ವರ ದೇವಾಲಯ ಅಭಿವೃದ್ಧಿ ಸಮಿತಿ ರಚಿಸಲಾಗಿದೆ. ಇದಕ್ಕೆ ನಗರದ ಹಿರಿಯ ನಾಗರಿಕರೂ ಆದ ಪ್ರಸಿದ್ಧ ವಾಣಿಜ್ಯೋದ್ಯಮಿ ಬಿ.ಎಂ. ಚನ್ನಪ್ಪ ಅಧ್ಯಕ್ಷರಾಗಿದ್ದಾರೆ. ಸಿ.ಎಸ್. ರಾಘವೇಂದ್ರಶೆಟ್ಟಿ ಕಾರ್ಯದರ್ಶಿ ಹಾಗೂ ಬಿ.ಎಂ. ಪರಮಶಿವಯ್ಯ, ಮುರಳಿಧರ್, ಬಿ.ಎಸ್. ನಂಜುಂಡಯ್ಯ, ವೆಂಕಟೇಶಬಾಬು, ಗೋವಿಂದರಾಜು, ಎಂ.ವಿ. ಶ್ರೀನಿವಾಸಯ್ಯ, ನಂದಕುಮಾರ್ ಸೇರಿದಂತೆ ಅನೇಕರು ಸದಸ್ಯರಾಗಿದ್ದಾರೆ.
ದೇವಾಲಯದ ಜೀರ್ಣೋದ್ಧಾರಕ್ಕಾಗಿ ಆರ್ಥಿಕ ನೆರವು ನೀಡುವಂತೆ ಹಾಗೂ ಕಾಮಗಾರಿಗೆ ಅನುಮತಿ ನೀಡುವಂತೆ ಸಮಿತಿಯ ಮುಖಂಡರು ಅನೇಕ ಬಾರಿ ಮುಜರಾಯಿ ಇಲಾಖೆಗೆ ಮನವಿ ನೀಡಿದ್ದರೂ ಪ್ರಯೋಜನವಾಗಿಲ್ಲ. ಭಕ್ತರೇ ತಮ್ಮ ಸ್ವಂತ ಹಣದಿಂದ ಕಾಮಗಾರಿ ಆರಂಭಕ್ಕೆ ಅನುಮತಿ ಕೋರಿದ್ದರೂ ಅಧಿಕೃತವಾಗಿ ಯಾವುದೇ ಪತ್ರ ನೀಡಿಲ್ಲ.
ಕಳೆದ ಮೂರು ತಿಂಗಳ ಹಿಂದೆಯೂ ಸಮಿತಿಯ ಪದಾಧಿಕಾರಿಗಳು ಅರ್ಜಿ ಗುಜರಾಯಿಸಿದ್ದಾರೆ. ಹಣ ಸಿಕ್ಕಿಲ್ಲ, ಕಾಮಗಾರಿಗೆ ಮೌಖಿಕ ಅನುಮತಿ ಸಿಕ್ಕಿರುವುದರಿಂದ ಕಳೆದ ಮೇ ತಿಂಗಳ 12 ಮತ್ತು 13 ರಂದು ಧಾರ್ಮಿಕ ಕಾರ್ಯಗಳ ಮೂಲಕ ಜೀರ್ಣೋದ್ಧಾರ ಕಾರ್ಯಕ್ಕೆ ಚಾಲನೆ ನೀಡಲಾಗಿದೆ.
ಶಾಸಕ ಆರ್.ವರ್ತೂರ್ ಪ್ರಕಾಶ್ ಅವರು ದೇವಾಲಯದ ಅಭಿವೃದ್ಧಿಗೆ ಸಹಾಯ ಮಾಡುವ ಭರವಸೆಯೊಂದಿಗೆ ಗುದ್ದಲಿಪೂಜೆಯನ್ನು ನೆರವೇರಿಸಿದ್ದಾರೆ. ಭಕ್ತರು ಅದರಲ್ಲೂ ವಿಶೇಷವಾಗಿ ದೇವಾಲಯ ಅಭಿವೃದ್ಧಿ ಸಮಿತಿಯ ಪದಾಧಿಕಾರಿಗಳು ಹಲವರು ತಮ್ಮ ಸ್ವಂತ ಖರ್ಚಿನಿಂದ ಗರ್ಭಗುಡಿ ನಿರ್ಮಾಣ ಕಾಮಗಾರಿ ಆರಂಭಿಸಿದ್ದಾರೆ.
ಇನ್ನು ಎರಡು-ಮೂರು ತಿಂಗಳಲ್ಲಿ ಈ ಕಾಮಗಾರಿ ಪೂರ್ಣಗೊಳಿಸುವ ಭರವಸೆಯನ್ನು ಸಮಿತಿಯವರು ವ್ಯಕ್ತಪಡಿಸಿದ್ದಾರೆ. ಈ ಕಾಮಗಾರಿಗೆ 15ರಿಂದ 20 ಲಕ್ಷ ವೆಚ್ಚವಾಗಬಹುದೆಂದು ಅಂದಾಜು ಮಾಡಲಾಗಿದೆ. ದೇವಾಲಯದ ಸಮಗ್ರ ಅಭಿವೃದ್ಧಿಗೆ ಸುಮಾರು 1.50 ಕೋಟಿ ಯೋಜನೆ ಸಿದ್ಧಪಡಿಸಲಾಗಿದೆ. ಭಕ್ತರು,ದಾನಿಗಳು ನೆರವು ನೀಡುವ ಭರವಸೆಯನ್ನು ಸಮಿತಿಯವರು ಹೊಂದಿದ್ದಾರೆ.
ಹಿರಿಯೂರಿನ ಶಿಲ್ಪಿಯೊಬ್ಬರು ಗರ್ಭಗುಡಿಯ ನಿರ್ಮಾಣ ಕಾರ್ಯದ ಜವಾಬ್ದಾರಿ ಹೊತ್ತಿದ್ದಾರೆ. ಆಂಧ್ರ ಪ್ರದೇಶದ ಕುಪ್ಪಂನ ಕೆಲಸಗಾರರನ್ನು ಶಿಲ್ಪ ಕೆತ್ತನೆಯ ಕಾರ್ಯಕ್ಕೆ ಬಳಸಿಕೊಳ್ಳಲಾಗುತ್ತಿದೆ. ದೇವಾಲಯದ ಅರ್ಚಕರಾದ ರಾಮಪ್ಪ ದೀಕ್ಷಿತ್, ಚಂದ್ರಶೇಖರ ದೀಕ್ಷಿತ್ ಹಾಗೂ ಮಂಜುನಾಥ ದೀಕ್ಷಿತ್ ಸಹ ಜೀರ್ಣೋದ್ಧಾರ ಕೆಲಸಕ್ಕೆ ದೇಣಿಗೆ ನೀಡಿದ್ದಾರೆ.
ಸರ್ಕಾರ ಶ್ರೀ ನಂಜುಂಡೇಶ್ವರ ಸ್ವಾಮಿ ದೇವಾಲಯ ಅಭಿವೃದ್ಧಿ ಸಮಿತಿಗೆ ದೇವಾಲಯದ ಜೀರ್ಣೋದ್ಧಾರ ಹಾಗೂ ಪ್ರತಿನಿತ್ಯ ಪೂಜೆ ಪುನಸ್ಕಾರಗಳನ್ನು ನಡೆಸಿಕೊಂಡು ಹೋಗುವುದಕ್ಕೆ ವಿಶೇಷ ಅಧಿಕಾರ ನೀಡಿದಲ್ಲಿ ದೇವಾಲಯವನ್ನು ಹೆಚ್ಚಿನ ರೀತಿಯಲ್ಲಿ ಅಭಿವೃದ್ಧಿ ಪಡಿಸಲು ಸಹಾಯವಾಗುತ್ತದೆ ಎಂಬುದು ಪದಾಧಿಕಾರಿಗಳ ಒತ್ತಾಸೆಯಾಗಿದೆ.