ಅಡೆತಡೆ ಬಂದರೂ ಒಳ್ಳೆಯ ಕೆಲಸ ಬಿಡದಿರಿ
ಕ.ಪ್ರ. ವಾರ್ತೆ ಚಿಕ್ಕಬಳ್ಳಾಪುರ ಸೆ.21
ಯಾರೇ ಆಗಲಿ ಎಷ್ಟೇ ಅಡೆತಡೆಗಳು ಬಂದರೂ ತಲೆ ಕೆಡಿಕೊಳ್ಳದೆ ಒಳ್ಳೆಯ ಕೆಲಸ ಮಾಡಿಕೊಂಡು ಹೋಗುವುದನ್ನು ಬಿಡಬಾರದು. ಕೊನೆಗೆ ಒಳ್ಳೆಯದೇ ಆಗುತ್ತದೆ ಎಂದು ಅದಿಚುಂಚನಗಿರಿ ಶಾಖಾ ಮಠದ ಮಂಗಳನಾಥ ಸ್ವಾಮೀಜಿ ಅಭಿಪ್ರಾಯ ವ್ಯಕ್ತಪಡಿಸಿದರು.
ಒಕ್ಕಲಿಗರ ಕಲ್ಯಾಣ ಮಂಟಪದಲ್ಲಿ ಒಕ್ಕಲಿಗರ ಸಂಘದ ವತಿಯಿಂದ ಶನಿವಾರ ಹಮ್ಮಿಕೊಂಡಿದ್ದ ಶಾಸಕ ಸುಧಾಕರ್ ಅವರಿಗೆ ಸನ್ಮಾನ ಸಮಾರಂಭದಲ್ಲಿ ಮಾತನಾಡಿದರು.
ಹಣ್ಣು ತುಂಬಿದ ಮರಕ್ಕೆ ಪ್ರತಿಯೊಬ್ಬರೂ ಕಲ್ಲೆಸೆಯುತ್ತಾರೆ. ಹಾಗೆಯೇ ಒಳ್ಳೆಯ ಕೆಲಸ ಮಾಡುವವರು ಕಷ್ಟವೆಂಬ ಕಲ್ಲುಗಳನ್ನು ಎದುರಿಸಬೇಕು. ಆ ಕಷ್ಟ ಎದುರಿಸಿ ಮುನ್ನಡೆದರೆ ಜೀವನದ ಸಾರ್ಥಕತೆ ಹೆಚ್ಚಾಗುತ್ತದೆ ಎಂದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಶಾಸಕ ಡಾ. ಕೆ. ಸುಧಾಕರ್, ಜನ್ಮ ನೀಡಿದ ತಂದೆ- ತಾಯಿ, ತಿದ್ದಿ ತೀಡಿದ ಗುರುಗಳು, ಆಶ್ರಯ ನೀಡಿದ ಮಾತೃಭೂಮಿಯನ್ನು ಪ್ರತಿಯೊಬ್ಬರೂ ಗೌರವದಿಂದ ಕಾಣಬೇಕು. ಹೆತ್ತವರು ಹೆಮ್ಮೆಪಡುವ ಕೆಲಸ ಮಾಡಬೇಕು ಎಂದು ಸಲಹೆ ನೀಡಿದರು. ಈಗ ಮಾಡಿದ ಸನ್ಮಾನದ ಜತೆಗೆ ಐದು ವರ್ಷ ನಂತರ ನಾನು ಮಾಡಿದ ಅಭಿವೃದ್ಧಿ ಕಾರ್ಯ ನೋಡಿ ಮಾಡುವ ಸನ್ಮಾನದಿಂದ ನಿಜವಾದ ಅರ್ಥ ಸಿಗಲಿದೆ ಎಂದರು.
ಒಕ್ಕಲುತನ ಒಂದು ಜಾತಿಯ ಪ್ರತೀಕವಲ್ಲ. ಅದರ ವ್ಯಾಪ್ತಿಯನ್ನು ಇಷ್ಟಕ್ಕೇ ಸೀಮಿತಗೊಳಿಸುವುದು ಸರಿಯಲ್ಲ. ಭೂಮಿ ನಂಬಿ ವ್ಯವಸಾಯ ಮಾಡುವವರೆಲ್ಲಾ ಒಕ್ಕಲಿಗರು ಎಂದರು. ಮಾಜಿ ಶಾಸಕ ಎಸ್.ಎಂ. ಮುನಿಯಪ್ಪ, ಜಿಪಂ ಮಾಜಿ ಸದಸ್ಯ ಪಿ.ಎನ್. ಕೇಶವರೆಡ್ಡಿ, ಒಕ್ಕಲಿಗರ ಸಂಘದ ಅಧ್ಯಕ್ಷ ಜಿ.ಆರ್. ನಾರಾಯಣಸ್ವಾಮಿ, ಕಾರ್ಯದರ್ಶಿ ಎನ್. ನಾರಾಯಣಸ್ವಾಮಿ, ಖಜಾಂಚಿ ನಾಗರಾಜ್, ನಿರ್ದೇಶಕರಾದ ವೆಂಕಟರೆಡ್ಡಿ, ಸೀನಣ್ಣ, ರಮೇಶ್, ಉದ್ಯಮಿ ಪಾಪಣ್ಣ, ಸಂಘದ ಜಂಟಿ ಕಾರ್ಯದರ್ಶಿ ರಾಮಸ್ವಾಮಿ ಮತ್ತಿತರರು ಇದ್ದರು.
ರೈತರಿಂದ ಸನ್ಮಾನ: ಚಿಕ್ಕಬಳ್ಳಾಪುರದಲ್ಲಿ ನೀರಿನ ಅಭಾವ ಕಾಡುತ್ತಿದೆ. ರೈತರ ಕಷ್ಟ ಹೇಳತೀರದಾಗಿದೆ ಎಂದು ಶಾಸಕ ಡಾ. ಕೆ. ಸುಧಾಕರ್ ವಿಷಾದ ವ್ಯಕ್ತಪಡಿಸಿದರು.
ನಗರದಲ್ಲಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಚಿಕ್ಕಬಳ್ಳಾಪುರ ತಾಲೂಕು ಘಟಕ ಹಮ್ಮಿಕೊಂಡಿದ್ದ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು.
ರೈತಪರ ಯೋಚಿಸುವ ಸರ್ಕಾರ ಎಂದರೆ ಅದು ಕಾಂಗ್ರೆಸ್ ಮಾತ್ರ. ರೈತರ ಹಿತ ಕಾಪಾಡುವ ನಿಟ್ಟಿನಲ್ಲಿ ಅನೇಕ ಅಭಿವೃದ್ಧಿ ಯೋಜನೆ ಜಾರಿಗೆ ತಂದಿದೆ. ಪ್ರಣಾಳಿಕೆಯಲ್ಲಿ ನೀಡಿದ ಎಲ್ಲಾ ಆಶ್ವಾಸನೆ ಈಡೇರಿಸುವುದು ನಮ್ಮ ಗುರಿಯಾಗಿದೆ ಎಂದ ಅವರು, ರೈತ ಸಂಘದ ಭವನ ನಿರ್ಮಾಣ ಮಾಡಲು ನಗರದ ಹೊರವಲಯದಲ್ಲಿ ಸೂಕ್ತ ಜಾಗ ನೀಡುವುದಾಗಿ ಭರವಸೆ ನೀಡಿದರು.
ರೈತ ಸಂಘದ ಜಿಲ್ಲಾಧ್ಯಕ್ಷ ನರಸಿಂಹಪ್ಪ ಮುಂತಾದವರು ಉಪಸ್ಥಿತರಿದ್ದರು.
ಜಿಲ್ಲಾಡಳಿತ ಭವನ ಉದ್ಘಾಟನೆ ವೇಳೆ ಪೂಜೆ ಮಾಡಿದ ಡಿಸಿ ಕ್ರಮಕ್ಕೆ ಆಕ್ಷೇಪ
ಚಿಕ್ಕಬಳ್ಳಾಪುರ: ನಗರದ ಹೊರವಲಯದಲ್ಲಿ (ಅಣಕನೂರು ಬಳಿ) ಸುಮಾರು 22 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಿರುವ ಜಿಲ್ಲಾಡಳಿತ ಭವನದ ಉದ್ಘಾಟನೆ ಸಮಯದಲ್ಲಿ ಗಣಪತಿ, ದೋಷ ನಿವಾರಣೆ ಹೋಮ ಹವನಾದಿ ಪೂಜಾ ಕಾರ್ಯಕ್ರಮ ಕೈಗೊಂಡ ಜಿಲ್ಲಾಧಿಕಾರಿ ವಿಶಾಲ್. ಆರ್ ಅವರ ವರ್ತನೆ ಸಿಪಿಐ(ಎಂ) ಖಂಡಿಸಿದೆ.
ನಗರದ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಿಪಿಐ(ಎಂ)ಮುಖಂಡ ಜಿ.ವಿ. ಶ್ರೀರಾಮರೆಡ್ಡಿ, ಭಾರತ ದೇಶ ಒಂದು ಜಾತ್ಯತೀತ ರಾಷ್ಟ್ರ. ಯಾವುದೇ ಒಂದು ಧರ್ಮಕ್ಕೂ ಸೀಮಿತವಾಗಿಲ್ಲ. ಹೀಗಿರುವಾಗ ಪ್ರಜಾಪ್ರಭುತ್ವದ ಮೌಲ್ಯ ಎತ್ತಿ ಹಿಡಿಯಬೇಕಾದ ಜಿಲ್ಲಾಧಿಕಾರಿ ವಿಶಾಲ್ ಅವರು ನೂತನ ಜಿಲ್ಲಾಡಳಿತ ಭವನದಲ್ಲಿ ಹೋಮ ಹವನಾದಿ ಪೂಜಾ ಕಾರ್ಯಕ್ರಮ ಕೈಗೊಂಡಿದ್ದಾರೆ. ಇದು ಸಂವಿಧಾನದ ತತ್ವಗಳಿಗೆ ವಿರುದ್ಧವಾದುದು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಜಾತ್ಯತೀತ ಬಗ್ಗೆ ಮಾತನಾಡುತ್ತಾರೆ. ಆಡಳಿತದಲ್ಲಿ ಯಾವುದೇ ಒಂದು ಧರ್ಮಕ್ಕೆ, ಪಕ್ಷದ ಪರವಾಗಿ ನಡೆಸಲು ಬಿಡುವುದಿಲ್ಲ. ಜಾತ್ಯತೀತ ಆಡಳಿತ ನೀಡುತ್ತೇನೆ ಎಂದು ಭಾಷಣ ಬಿಗಿಯುತ್ತಿದ್ದಾರೆ. ಆದರೆ, ಜಿಲ್ಲಾಡಳಿತ ಭವನದ ಉದ್ಘಾಟನೆಗೆ ಮುನ್ನಾ ಭವನದಲ್ಲಿ ಹೋಮ- ಹವನಾದಿ ಕಾರ್ಯಕ್ರಮ ಕೈಗೊಂಡಿರುವುದಕ್ಕೆ ಅವರು ಉತ್ತರ ಏನು ಹೇಳುತ್ತಾರೆ. ಒಂದು ಧರ್ಮಕ್ಕೆ ಸಂಬಂಧಪಟ್ಟ ಕಾರ್ಯಕ್ರಮಗಳನ್ನು ಒಬ್ಬ ಸರ್ಕಾರಿ ಅಧಿಕಾರಿಯೇ ಕೈಗೊಂಡರೆ ಏನು ಹೇಳಬೇಕು. ಈ ಹಿನ್ನೆಲೆಯಲ್ಲಿ ಸಂವಿಧಾನದ ಆಶಯಗಳಿಗೆ ವಿರುದ್ಧವಾಗಿ ನಡೆದುಕೊಂಡಿರುವ ಜಿಲ್ಲಾಧಿಕಾರಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು. ಈ ಬಗ್ಗೆ ಸ್ಪಷ್ಟನೆ ನೀಡಬೇಕೆಂದು ಆಗ್ರಹಿಸಿದರು.