ಅಧಿಕಾರಿ ಬೆವರು ಇಳಿಸಿದ ಸಚಿವೆ ಉಮಾಶ್ರೀ
ಕೋಲಾರ: ಸರ್ಕಾರಕ್ಕೆ ಒಳ್ಳೆಯ ಕೆಲಸಗಳು ಮಾಡುವ ಉದ್ದೇಶವಿದೆ. ಆದರೆ, ನೀವು ಸಹಕಾರ ನೀಡುತ್ತಿಲ್ಲ, ಏನಾದರೂ ಸಲಹೆ-ಸೂಚನೆ ನೀಡಿದ್ದರೆ ಅದನ್ನು ಪಾಲಿಸುವುದು ಇರಲಿ, ಮಾಹಿತಿಯನ್ನೂ ಗಮನಿಸುತ್ತಿಲ್ಲ, ಜಿಡ್ಡುಗಟ್ಟಿ ಹೋಗಿದ್ದೀರಾ...
ಹೀಗೆಂದು ಜಿಲ್ಲಾ ವಿಕಲಚೇತನರ ಪುನರ್ವಸತಿ ಕೇಂದ್ರ ಹಾಗೂ ಹಿರಿಯ ನಾಗರಿಕರ ಕಲ್ಯಾಣಾಧಿಕಾರಿ ನಾಗರತ್ನ ಅವರನ್ನು ತರಾಟೆಗೆ ತೆಗೆದುಕೊಂಡಿದ್ದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವರಾದ ಉಮಾಶ್ರೀ.
ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಶನಿವಾರ ತಮ್ಮ ಇಲಾಖೆಗೆ ಸಂಬಂಧಿಸಿದ ಪ್ರಗತಿ ಪರಿಶೀಲನೆ ನಡೆಸಿದ ಸಚಿವರು, ಅಕ್ಟೋಬರ್ 1 ರಂದು ಆಚರಿಸುವ ಹಿರಿಯ ನಾಗರಿಕರ ದಿನಾಚರಣೆ ಅಂಗವಾಗಿ ಜಿಲ್ಲೆಯ ಹಿರಿಯರಿಗೆ ಸದರಿ ಕಾರ್ಯಕ್ರಮದ ಬಗ್ಗೆ ಮಾಹಿತಿ ನೀಡದಿರುವುದು ಹಾಗೂ ಕ್ರೀಡಾ ಮತ್ತು ಸಾಂಸ್ಕೃತಿಕ ಸ್ಪರ್ಧೆಗಳ ವ್ಯವಸ್ಥೆ ಮಾಡಿರುವುದಕ್ಕೆ ಆಕ್ರೋಶ ವ್ಯಕ್ತಪಡಿಸಿ ಸೆ.23ರೊಳಗೆ ಸ್ಪರ್ಧೆಗಳಲ್ಲಿ ಗೆದ್ದವರ ವಿವರ ಇಲಾಖೆಗೆ ನೀಡಬೇಕಾಗಿದೆ. ಆದರೆ ತಾವು ಇಲಾಖೆಯ ಸೂಚನೆಯನ್ನು ಏಕೆ ಪಾಲಿಸಲಿಲ್ಲವೆಂದು ಗರಂ ಆಗುವ ಮೂಲಕ ಅಧಿಕಾರಿ ನಾಗರತ್ನರವರ ಮುಖದಲ್ಲಿ ಬೇವರು ಇಳಿಸಿದರು.
ಸೆ.18ರಂದೇ ನಿಮಗೆ ಕಾರ್ಯಕ್ರಮ ಕುರಿತು ಮೆಸೇಜ್ ಮಾಡಿದ್ದೇವೆ, ತಾವು ಅದನ್ನು 19 ರಂದು ಗಮನಿಸಿದ್ದರೂ ಹಿರಿಯ ನಾಗರಿಕರನ್ನು ಭೇಟಿಯಾಗಿ ಸ್ಪರ್ಧೆಗಳಿಗೆ ಆಹ್ವಾನ ನೀಡಿಲ್ಲ, ನಾಳೆ ಭಾನುವಾರವಾಗಿರುವುದರಿಂದ ಮನೆಯಲ್ಲಿ ಕುಳಿತು ವಿಶ್ರಾಂತಿ ಪಡೆಯುತ್ತೀರಾ, ಸೋಮವಾರ ಸ್ಪರ್ಧೆಗಳು ನಡೆಸುವುದು ಹೇಗೆ ಸಾಧ್ಯವೆಂದು ಸಚಿವೆ ಉಮಾಶ್ರೀ ಪ್ರಶ್ನಿಸಿದಾಗ ಅಧಿಕಾರಿ ಉತ್ತರಿಸಲು ಚಡಪಡಿಸಿದರು.
ರಾಜ್ಯ ವಿಕಲಚೇತನರ ಪುನರ್ವಸತಿ ಹಾಗೂ ಹಿರಿಯ ನಾಗರಿಕರ ಕಲ್ಯಾಣ ಕೇಂದ್ರದ ಅಧಿಕಾರಿ ಜಯವಿಭವಸ್ವಾಮಿ ಮಧ್ಯ ಪ್ರವೇಶಿಸಿ ಮಾತನಾಡಿ, ಜಿಲ್ಲೆಯ ವೃದ್ಧಾಶ್ರಮಗಳಿಗೆ ಭೇಟಿ ನೀಡಿ ತಕ್ಷಣ ಸ್ಪರ್ಧೆಗಳಿಗೆ ಏರ್ಪಾಟು ಮಾಡಿ, ಅಕ್ಟೋಬರ್ 1 ರಂದು ಬೆಂಗಳೂರಿನ ಟೌನ್ಹಾಲ್ನಲ್ಲಿ ನಡೆಯಲಿರುವ ಹಿರಿಯ ನಾಗರಿಕರ ದಿನಾಚರಣೆಗೆ ಜಿಲ್ಲೆಯಿಂದ ಹಿರಿಯ ನಾಗರಿಕರನ್ನು ಕರೆತರಲು ವ್ಯವಸ್ಥೆ ಮಾಡುವಂತೆ ಸೂಚಿಸಿದರು.
ಹಿರಿಯ ನಾಗರಿಕರ ದಿನವನ್ನು ಅರ್ಥಪೂರ್ಣವಾಗಿ ಆಚರಿಸಬೇಕೆಂಬುದು ನನ್ನ ಉದ್ದೇಶ, ಈ ಕಾರ್ಯಕ್ರಮವನ್ನು ಗಂಭೀರವಾಗಿ ಪರಿಗಣಿಸಿದ್ದೇನೆ, ಅಧಿಕಾರಿಗಳು ಯಾವುದೇ ಸಬೂಬು ಹೇಳದೆ ಕಾರ್ಯಕ್ರಮ ಯಶಸ್ವಿಗೆ ಸಹಕಾರ ನೀಡಬೇಕೆಂದು ಆದೇಶಿಸಿದರು.
ವಿಕಲಚೇತನರ ಹಾಗೂ ಹಿರಿಯ ನಾಗರಿಕರಿಗೆ ಸರ್ಕಾರ ನೀಡುವ ಮಾಸಾಶನ ದುರುಪಯೋಗವಾಗದಂತೆ ಎಚ್ಚರವಹಿಸಿ, ಲೋಪ ಕಂಡು ಬಂದರೆ ಕ್ರಮ ಜರುಗಿಸುತ್ತೇನೆ, ಈ ವಿಚಾರದಲ್ಲಿ ಜಿಲ್ಲಾಧಿಕಾರಿಗಳು ಸಹ ಗಮನ ನೀಡಬೇಕೆಂದು ಸೂಚಿಸಿದರು.
ಆರ್ಥಿಕ ಸಹಾಯ ಕೋರಿ ಲಿಂಗತ್ವ ಅಲ್ಪಸಂಖ್ಯಾತರಿಂದ ಮನವಿ ಸಲ್ಲಿಕೆ
ಕೋಲಾರ: ಜಿಲ್ಲೆಯಲ್ಲಿ 106 ಲೈಂಗಿಕ ವೃತ್ತಿಪರ ಮಹಿಳೆಯರು ಸಹಾಯಧನಕ್ಕಾಗಿ ಅರ್ಜಿ ಸಲ್ಲಿಸಿದ್ದು ಅದರಲ್ಲಿ ಕೇವಲ 14 ಅರ್ಜಿದಾರರಿಗೆ ಮಾತ್ರ ಸಾಲ ಸೌಲಭ್ಯ ಬ್ಯಾಂಕ್ಗಳಿಂದ ದೊರೆತಿದ್ದು ಉಳಿದವರಿಗೂ ಸಾಲ ನೀಡಬೇಕೆಂದು ಕೋರಿ ಸೌಖ್ಯ ಸಮೃದ್ಧಿ ಸಂಸ್ಥೆಯ ಯೋಜನಾ ನಿರ್ದೇಶಕಿ ವೈ.ಎಸ್. ವೀಣಾ ಅವರು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಖಾತೆ ಸಚಿವೆ ಉಮಾಶ್ರೀ ಅವರಿಗೆ ಮನವಿ ಸಲ್ಲಿಸಿದರು. ಈ ಸಂದರ್ಭದಲ್ಲಿ ಲಿಂಗತ್ವ ಅಲ್ಪಸಂಖ್ಯಾತ ಸಮುದಾಯದ ಮಹಿಳೆಯರು ಇದ್ದರು.