ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಕಾಮಗಾರಿ ಪೂರ್ಣವಾಗುವ ಮೊದಲೇ ಉದ್ಘಾಟನೆಗೆ ಸಜ್ಜು

Srinivasa Murthy VN
Updated On : 22 Sept 2013, 12:07 pm

-ಕೆ.ರಮೇಶ್
ಬಂಗಾರಪೇಟೆ: ತಾಲೂಕಿನ ಜನರ ಬಹು ವರ್ಷದ ಕನಸಾಗಿದ್ದ ಮಿನಿ ವಿಧಾನಸೌಧ ಕಟ್ಟಡ ಇದೀಗ ಮುಗಿಯುವ ಹಂತದಲ್ಲಿದ್ದು, ಕ್ಷೇತ್ರದ ಜನರ ಕನಸು ಈಡೇರಲಿದ್ದು, ಕಾಮಗಾರಿ ಪೂರ್ಣಗೊಳ್ಳುವ ಮೊದಲೇ ಉದ್ಘಾಟನೆಗೆ ತಾಲೂಕು ಆಡಳಿತ ಸಜ್ಜಾಗಿರುವುದು ಸಾರ್ವಜನಿಕರ ಟೀಕೆಗೆ ಗುರಿಯಾಗಿದೆ.
ಪಟ್ಟಣದ ತಾಲೂಕು ಕೇಂದ್ರವಾಗಿದ್ದರೂ ತಾಲೂಕು ಆಡಳಿತಕ್ಕೆ ಸುಸಜ್ಜಿತ ಕಟ್ಟಡವಿಲ್ಲದೆ ಸುಮಾರು ನೂರಕ್ಕೂ ಹೆಚ್ಚು ವರ್ಷಗಳ ಬ್ರಿಟೀಷರ ಕಾಲದ ಹಳೇ ಕಟ್ಟಡದಲ್ಲಿ ಮಳೆ ಬಂದರೆ ಸೋರುತ್ತಿತ್ತು. ಇನ್ನು ಕಂದಾಯ ವ್ಯಾಪ್ತಿಗೆ ಬರುವ ಆಹಾರ ಇಲಾಖೆ, ಸರ್ವೆ ಮತ್ತಿತರ ಇಲಾಖೆಗೆ ನೀಡಲಾಗಿದ್ದ ಕೋಣೆಗಳ ಸ್ಥಿತಿಯಂತೂ ಹೇಳಲೇಬೇಕಾಗಿಲ್ಲ.
ಈ ಹಿಂದೆ ಕ್ಷೇತ್ರವನ್ನು ಪ್ರತಿನಿಧಿಸಿದ್ದ ಯಾವೊಬ್ಬ ಶಾಸಕರು ಮಿನಿವಿಧಾನಸೌಧ ಕಟ್ಟಡ ಮಂಜೂರಾತಿ ಮಾಡಿಸಿಕೊಂಡು ಬರುವ ಗೋಜಿಗೆ ಹೋಗಿರಲಿಲ್ಲ. ಮಾತಿನಲ್ಲೆ ಕಾಲಹರಣ ಮಾಡುತ್ತಿದ್ದರು. ಮಾಜಿ ಶಾಸಕ ಬಿ.ಪಿ. ವೆಂಕಟಮುನಿಯಪ್ಪ ಬಿಜೆಪಿ- ಜೆಡಿಎಸ್ ಸಮಿಶ್ರ ಸರ್ಕಾರದದಲ್ಲಿ ಮಿನಿ ವಿಧಾನಸೌಧ ಕಟ್ಟಡಕ್ಕೆ ಮಂಜೂರಾತಿ ಮಾಡಿಸಿಕೊಂಡು ಬಂದರೂ ಕಾಮಗಾರಿ ಪ್ರಾರಂಭಿಸುವ ಮೊದಲೆ ಅವರು ಮಾಜಿಯಾಗಿದ್ದರು.
ನಂತರ ಎಂ.ನಾರಾಯಣಸ್ವಾಮಿ ಕಾಮಗಾರಿಗೆ ಚಾಲನೆ ನೀಡಿದರೂ ಹಣಕಾಸಿನ ಮುಗ್ಗಟ್ಟಿನಿಂದ ಕುಂಟುತ್ತಾ ಕೆಲಸ ಸಾಗಿತ್ತು. ಕಾಮಗಾರಿ ಪೂರ್ಣಗೊಳಿಸಲು ಐದು ವರ್ಷಗಳೇ ಬೇಕಾಯಿತು. ಈ ಮಿನಿ ವಿಧಾನಸೌಧ ಕಟ್ಟಡದಲ್ಲಿ ಎಲ್ಲಾ ಇಲಾಖೆಗಳು ಒಂದೆಡೆ ಕಾರ್ಯನಿರ್ವಹಿಸಲಿದೆ ಎಂದು ಜನರು ಭಾವಿಸಿದ್ದರು. ಆದರೆ, ಇಲ್ಲಿ ಬರೀ ಕಂದಾಯ, ಆಹಾರ ಮತ್ತು ಸರ್ವೆ ಇಲಾಖೆ, ತಹಸೀಲ್ದಾರ್ ಕಚೇರಿ ಹಾಗೂ ಶಾಸಕರ ಕಚೇರಿ ಬಿಟ್ಟರೆ ಉಳಿದ ಯಾವುದೇ ಇಲಾಖೆಗಳು ಇಲ್ಲಿ ಲಭ್ಯವಿಲ್ಲದಿರುವುದು ಜನರ ಆಸೆ ಮತ್ತೆ ನಿರಾಶೆಗೊಳಿಸಿದೆ.
ಹಾಲಿ ಶಾಸಕ ಎಸ್.ಎನ್. ನಾರಾಯಣಸ್ವಾಮಿ ಅವರು ಕುಂಟುತ್ತಾ ಸಾಗಿದ್ದ ಕಾಮಗಾರಿಗೆ ಮತ್ತಷ್ಟು ವೇಗ ನೀಡಿದರು. ಕಾಮಗಾರಿ ಅಂತಿಮ ಹಂತದಲ್ಲಿದೆ. ಪೂರ್ಣಗೊಳ್ಳಲು ಕನಿಷ್ಠ ಪಕ್ಷ ಎರಡು ತಿಂಗಳಾದರೂ ಬೇಕು. ಆದರೆ, ಮಿನಿ ವಿಧಾನಸೌಧ ಉದ್ಘಾಟಿಸುವ ಸಲುವಾಗಿ ಆತುರವಾಗಿ ಭರದ ಸಿದ್ಧತೆ ಕೈಗೊಳ್ಳಲಾಗಿದೆ. ಇದೇ ತಿಂಗಳು 24ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೋಲಾರಕ್ಕೆ ಆಗಮಿಸುತ್ತಿದ್ದು, ಅಂದೇ ಕೋಲಾರದಲ್ಲಿ ಪಟ್ಟಣದ ಮಿನಿ ವಿಧಾನಸೌಧವನ್ನು ಉದ್ಘಾಟಿಸುವ ಕಾರ್ಯಕ್ರಮ ನಿಗದಿಯಾಗಿತ್ತು. ಆದರೆ, ಸ್ಥಳೀಯ ಶಾಸಕರ ಒತ್ತಡಕ್ಕೆ ಮಣಿದು ಮುಖ್ಯಮಂತ್ರಿಗಳು ಸೆ. 27ರಂದು ಪಟ್ಟಣಕ್ಕೆ ಬಂದು ಮಿನಿ ವಿಧಾನಸೌಧಕ್ಕೆ ಚಾಲನೆ ನೀಡಲಿದ್ದಾರೆಂದು ತಿಳಿದು ಬಂದಿದೆ.
ಈ ಹಿನ್ನೆಲೆಯಲ್ಲಿ ತಾಲೂಕು ಆಡಳಿತ ಅರೆಬರೆ ಮುಗಿದಿರುವ ಕಟ್ಟಡಕ್ಕೆ ಬಣ್ಣ ಬಳೆಯುವ ಬದಲು ಸುಣ್ಣ ಬಳಿದು ಉದ್ಘಾಟನೆಯ ಶಾಸ್ತ್ರ ಮುಗಿಸುವ ಆತುರದಲ್ಲಿದ್ದಾರೆ. ಕಟ್ಟಡದ ಮುಂದೆ ಪತ್ರಬರಹಗಾರರು ಕಾರ್ಯನಿರ್ವಹಿಸುತ್ತಿದ್ದು, ಅವರನ್ನು ತೆರವುಗೊಳಿಸುವಂತೆ ಸೂಚಿಸಲಾಗಿದೆ.
ಆದರೆ, ನೂರು ವರ್ಷಗಳಿಂದ ಹಿಂದಿನ ಬ್ರಿಟೀಷರ ಕಾಲದ ಹಳೇ ಕಟ್ಟಡದ ಮುಂದೆ ನಂದಿ ವಿಗ್ರಹವಿದೆ. ಈಗ ಅದನ್ನು ತೆರವುಗೊಳಿಸುವ ಕೆಲಸ ನಡೆಯುತ್ತಿದ್ದು, ಇದಕ್ಕೆ ಸಾರ್ವಜನಿಕರಿಂದ ತೀವ್ರ ಆಕ್ಷೇಪ ವ್ಯಕ್ತವಾಗುತ್ತಿದೆ. ಯಾವುದೇ ಕಾರಣಕ್ಕೂ ನಂದಿ ವಿಗ್ರಹ ತೆರವುಗೊಳಿಸಬಾರದು, ಹಾಲಿ ಸ್ಥಳದಲ್ಲೇ ಇರಿಸುವ ಮೂಲಕ ಪರಂಪರೆಯನ್ನು ಮುಂದುವರಿಸಿಕೊಂಡು ಹೋಗಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
ಒಂದು ವೇಳೆ ವಿರೋಧದ ನಡುವೆ ವಿಗ್ರಹ ಎತ್ತಂಗಡಿ ಮಾಡಿದರೆ ಹೋರಾಟ ಮಾಡುವುದಾಗಿ ತಾಲೂಕು ಆಡಳಿತಕ್ಕೆ ಎಚ್ಚರಿಕೆ ನೀಡಲಾಗಿದೆ.
ಮಿನಿ ವಿಧಾನಸೌಧ ಕಟ್ಟಡ ಕಾಮಗಾರಿ ಪೂರ್ಣವಾಗುವ ಮೊದಲೇ ಆತುರವಾಗಿ ಚಾಲನೆ ನೀಡುವ ಉದ್ದೇಶವಾದರೂ ಏನಿತ್ತು ಎಂದು ಸಾರ್ವಜನಿಕರು ಪ್ರಶ್ನಿಸಿದ್ದು, ಇಲ್ಲಿಗೆ ಬರುವ ಜನರಿಗೆ ಮೂತ್ರ ವಿಸರ್ಜನೆಗೆ ಶೌಚಾಲಯ ನಿರ್ಮಾಣಗೊಂಡಿಲ್ಲ. ಪತ್ರಬರಹಗಾರರು ಜೋಪಡಿಗಳಲ್ಲಿ ಕೆಲಸ ಮಾಡುತ್ತಿದ್ದು, ಅವರಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸಿಲ್ಲ. ಕಾಮಗಾರಿಗಳು ಬಾಕಿದ್ದರೂ ಮಿನಿವಿಧಾನಸೌಧ ಉದ್ಘಾಟಿಸಲು ಮುಂದಾಗಿರುವುದರ ಹಿಂದಿನ ಗುಟ್ಟೇನು ಎಂದು ಸಾರ್ವಜನಿಕರ ಚರ್ಚೆಗೆ ಗ್ರಾವಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement