ದಲ್ಲಾಳಿಗಳಿಂದ ರೈತರಿಗೆ ಅನ್ಯಾಯ: ಆರೋಪ
ಚಿಂತಾಮಣಿ: ಜಾಕ್ಪಾಟ್ ಹೆಸರಿನಲ್ಲಿ ದಲ್ಲಾಳಿಗಳು ರೈತರಿಗೆ ಅನ್ಯಾಯ ಮಾಡುತ್ತಿದ್ದರೂ ಸಂಬಂಧಪಟ್ಟ ಎಪಿಎಂಸಿ ಅಧಿಕಾರಿಗಳು ಮೌನವಾಗಿರುವ ಬಗ್ಗೆ ರೈತ ಸಂಘ ಹಾಗೂ ಹಸಿರುಸೇನೆಯ ಕಾರ್ಯಕರ್ತರು ಎಪಿಎಂಸಿ ಕಾರ್ಯಾಲಯಕ್ಕೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದೆರು.
ಪಟ್ಟಣದ ಎಪಿಎಂಸಿ ಮಾರುಕಟ್ಟೆಯಲ್ಲಿ ರೈತರು ಬೆಳೆದಿರುವ ಟೊಮೆಟೋಗೆ ಜಾಕ್ಪಾಟ್ ಹೆಸರಿನಲ್ಲಿ 100ಕ್ಕೆ 10 ರಂತೆ ಕಮೀಷನ್ ತೆಗೆದುಕೊಂಡು ಮತ್ತು ಟೊಮೆಟೋ 100 ಬಾಕ್ಸ್ಗೆ 10 ಬಾಕ್ಸ್ ಜಾಕ್ಪಾಟ್ ತೆಗೆದುಕೊಳ್ಳತಿದ್ದರೂ ಅಧಿಕಾರಿಗಳು ಕಂಡು ಕಾಣದಂತೆ ಇರುವ ಬಗ್ಗೆ ಎಪಿಎಂಸಿ ಕಾರ್ಯಾಲಯಕ್ಕೆ ರೈತ ಸಂಘ ಹಾಗೂ ಹಸಿರುಸೇನೆಯ ತಾಲೂಕು ಅಧ್ಯಕ್ಷ ರಘುನಾಥರೆಡ್ಡಿ ನೇತೃತ್ವದಲ್ಲಿ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.
ಕಮೀಷನ್ ಎಂಬ ಅಸ್ತ್ರದೊಂದಿಗೆ ದಲ್ಲಾಳಿಗಳು ಅಮಾಯಕ ರೈತರನ್ನು ವಂಚಿಸುತ್ತಿರುವ ಬಗ್ಗೆ ಹಲವು ಬಾರಿ ಅರ್ಜಿ ನೀಡಿದ್ದರೂ ಪ್ರಯೋಜನವಾಗದೆ ಹಾಗೂ ಇಲ್ಲಿನ ಅಧಿಕಾರಿಗಳು ಮತ್ತು ದಲ್ಲಾಳಿಗಳು ಒಳಒಪ್ಪಂದ ಮಾಡಿಕೊಂಡು ಬಾಡಿಗೆ ಗೂಂಡಾಗಳನ್ನು ಇಟ್ಟುಕೊಂಡು ರೈತರಿಗೆ ಧಮಕಿ ಹಾಕಿ ಬೆದರಿಸುತ್ತಿದ್ದಾರೆಂದು ಆರೋಪಿಸಿದರು.
ರೈತ ಸಂಘದ ತಾಲೂಕು ಕಾರ್ಯದರ್ಶಿ ಕೆ.ಎನ್. ಕೃಷ್ಣ, ರೈತ ಮುಖಂಡರಾದ ಶ್ರೀನಾಥ್, ಗಂಗಾಧರ, ಅಲ್ಸಂಬೇಗ್, ನಾರಾಯಣಸ್ವಾಮಿ, ಎಸ್.ಎನ್. ಗೋಪಾಲ್, ಜಿ.ಎಂ. ದೇವರಾಜ್, ನರಸಿಂಹಪ್ಪ, ರೆಡ್ಡಪ್ಪ, ಶ್ರೀರಾಮಪ್ಪ, ಶ್ರೀರಾಮರೆಡ್ಡಿ, ಜಿ.ರೆಡ್ಡಿಪ್ರಸಾದ್, ಕೋನಪ್ಪ ಇದ್ದರು.
ದಾಳಿಂಬೆ ತೋಟಕ್ಕೆ ಭೇಟಿ
ಟೇಕಲ್: ಸಮೀಪದ ಬನಹಳ್ಳಿಯ ಪ್ರಗತಿಪರ ರೈತ ಕೃಷ್ಣಮೂರ್ತಿ ಅವರು ಸಾವಯವ ವಿಧಾನದ ಮೂಲಕ ದಾಖಲೆ ಪ್ರಮಾಣದಲ್ಲಿ ದಾಳಿಂಬೆ ಬೆಳೆದ ಹಿನ್ನೆಲೆಯಲ್ಲಿ ಟೇಕಲ್ ಸಹಾಯಕ ತೋಟಗಾರಿಕಾ ಅಧಿಕಾರಿ ಶಿವಪ್ರಸಾದ್ ಅವರು ಸ್ಥಳಕ್ಕೆ ಭೇಟಿ ನೀಡಿ ವೀಕ್ಷಿಸಿದರು. ಬೆಂಗಳೂರಿನ ಕೃಷಿ ವಿಶ್ವವಿದ್ಯಾನಿಲಯದ ವಿದ್ಯಾರ್ಥಿಗಳು, ವಿಶ್ವವಿದ್ಯಾನಿಲಯದ ಪ್ರಾಧ್ಯಾಪಕರಾದ ಡಾ. ಬಿ. ಕೃಷ್ಣಮೂರ್ತಿ ನೇತೃತ್ವದ ತರಬೇತಿಯ ಕೃಷಿ ವಿದ್ಯಾರ್ಥಿಗಳಾದ ಶಿಲ್ಪಶ್ರೀವಾಸ್ತವ್, ಶೃತಿ, ಶುಭ, ಸೌಮ್ಯ, ಶ್ವೇತ, ರಮೇಶ್, ಶಶಿಕುಮಾರ್, ಶಿವಶಂಕರ್, ಸುಧಾಕರ್, ಸುಮಂತ್, ರಾಮಕೃಷ್ಣ, ರವಿಂದ್ರನಾಥ್, ಶಬರಿ, ಶೈಲ, ಶಾಲಿನಿ ಮುಂತಾದವರು ಉಪಸ್ಥಿತರಿದ್ದರು.