ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ದೇಗುಲಗಳ ಮೇಲೆ ಕಳ್ಳರ ಕೆಂಗಣ್ಣು

Srinivasa Murthy VN
Updated On : 22 Sept 2013, 12:06 pm

ಕ.ಪ್ರ.ವಾರ್ತೆ ಚಿಕ್ಕಬಳ್ಳಾಪುರ ಸೆ. 21
ಮುಜರಾಯಿ ಇಲಾಖೆಗೆ ಸೇರಿರುವ ದೇವಾಲಯಗಳ ಮೇಲೆ ಕಳ್ಳರು ಕಣ್ಣಿಟ್ಟಿರುವ ಬಗ್ಗೆ ಅನುಮಾನಗಳು ವ್ಯಕ್ತವಾಗಿವೆ. ಇದಕ್ಕೆ ನಿದರ್ಶನವಾಗಿ ಐತಿಹಾಸಿಕ ಮತ್ತು ಪುರಾಣ ಪ್ರಸಿದ್ಧ ನಂದಿ ಬೆಟ್ಟದಲ್ಲಿರುವ ಯೋಗನಂದೀಶ್ವರ ಸ್ವಾಮಿ ದೇವಾಲಯದ ಹುಂಡಿಯಲ್ಲಿನ ಹಣ ಕದಿಯಲು ಯತ್ನಿಸಿರುವ ಘಟನೆ ಶನಿವಾರ ಬೆಳಗ್ಗೆ ಬೆಳಕಿಗೆ ಬಂದಿದೆ.
ಇದು ಕಳೆದ ಒಂದು ವಾರದಲ್ಲಿ ಜಿಲ್ಲೆಯಲ್ಲಿ ಮುಜರಾಯಿ ದೇವಾಲಯದ ಮೇಲೆ ನಡೆದ ಎರಡನೇ ಕಳ್ಳತನ ಪ್ರಕರಣವಾಗಿರುವುದು ಸಹಜವಾಗಿ ಭದ್ರತೆಯ ಬಗ್ಗೆ ಪ್ರಶ್ನಿಸುವಂತೆ ಮಾಡಿದೆ.
ಘಟನೆ ಹಿನ್ನೆಲೆ: ಶನಿವಾರ ಮುಂಜಾವಿನಲ್ಲಿ ನಂದಿ ಬೆಟ್ಟದ ಯೋಗನಂದೀಶ್ವರ ಸ್ವಾಮಿ ದೇವಾಲಯ ಹಿಂಬದಿಯ ಬಾಗಿಲು ಮುರಿದಿರುವ ಕಳ್ಳರು ಒಳಗಿದ್ದ ಹುಂಡಿಯ ಬೀಗ ಒಡೆದಿದ್ದಾರೆ. ಅದೇ ರೀತಿ ಹಣ ತೆಗೆದುಕೊಳ್ಳಬೇಕೆನ್ನುವಷ್ಟರಲ್ಲಿ ಸುತ್ತಮುತ್ತಲಿದ್ದ ನಾಯಿಗಳು ದೇವಾಲಯದ ಬಳಿ ಜೋರಾಗಿ ಬೊಗಳಿವೆ. ಇದರಿಂದ ಕಳ್ಳರು ಯಾರೋ ಬರುತ್ತಿದ್ದಾರೆ ಎಂಬ ಭಾವನೆಯಲ್ಲಿ ಹಣದ ಸಮೇತ ಹುಂಡಿಯನ್ನು ಅಲ್ಲಿಯೇ ಬಿಟ್ಟು ಬಂದ ಕಳ್ಳದಾರಿಯಲ್ಲಿಯೇ ಪರಾರಿಯಾಗಿದ್ದಾರೆ. ಬೆಳಗ್ಗೆ ಅರ್ಚಕರು ಪೂಜೆಗಾಗಿ ಆಲಯಕ್ಕೆ ಬಂದಾಗ ಬೀಗ ಮುರಿದಿದ್ದ ಹುಂಡಿ ಒಂದು ಕಡೆ ಬಿದ್ದಿದ್ದು, ನೋಟುಗಳು ಚೆಲ್ಲಾಪಿಲ್ಲಿಯಾಗಿದ್ದವು ಎನ್ನಲಾಗಿದೆ.ಅವರು ತಕ್ಷಣ ಪೊಲೀಸರಿಗೆ ಸುದ್ದಿ ಮುಟ್ಟಿಸಿದ್ದಾರೆ. ಘಟನಾ ಸ್ಥಳಕ್ಕೆ ಆಗಮಿಸಿದ ಗ್ರಾಮಾಂತರ ಠಾಣೆಯ ಪೊಲೀಸರು ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಎರಡನೇ ಘಟನೆ: ಕಳೆದ ಕೆಲ ದಿನಗಳ ಹಿಂದೆ ಚಿಕ್ಕಬಳ್ಳಾಪುರ-ಗೌರಿಬಿದನೂರು ಮಾರ್ಗದ ರಸ್ತೆಯಲ್ಲಿರುವ ಐತಿಹಾಸಿಕ ಶ್ರೀರಂಗಸ್ಥಳದ ರಂಗನಾಥಸ್ವಾಮಿ ದೇವಾಲಯದಲ್ಲೂ ಹುಂಡಿ ಮತ್ತು ಬೀರು ಒಡೆದು ಕಳ್ಳರು ಹಣ ದೋಚಿಕೊಂಡು ಪರಾರಿಯಾಗಿದ್ದರು. ಯಾರೂ ಇರದ ಬೆಳಗಿನ ಸಮಯದಲ್ಲಿ ಆಲಯದ ಹಿಂಭಾಗದ ಗವಾಕ್ಷಿ ಒಡೆದು ಆಲಯದೊಳಕ್ಕೆ ನುಗ್ಗಿದ್ದರು. ಪೊಲೀಸರು ಸ್ಥಳಕ್ಕೆ ಶ್ವಾನದಳ ಕರೆಸಿ ಪರಿಶೀಲನೆ ನಡೆಸಿದರೂ ಸುಳಿವು ಪತ್ತೆಯಾಗಿರಲಿಲ್ಲ.
ಹೆಚ್ಚುತ್ತಿರುವ ಕಳ್ಳತನ: ರಾಜ್ಯದಲ್ಲಿ ಮುಜರಾಯಿ ಇಲಾಖೆಗೆ ಸೇರಿರುವುದು ಸೇರಿದಂತೆ ಹಳೆಯ ದೇವಸ್ಥಾನಗಳಲ್ಲಿ ಕಳ್ಳತನ ಪ್ರಕರಣಗಳು ಹೆಚ್ಚಿಗೆ ಸಂಭವಿಸುತ್ತಲೇ ಇವೆ. ಪ್ರಮುಖವಾಗಿ ಮನೆಗಳು, ನಗರ ಪ್ರದೇಶಗಳಿಂದ ದೂರವಿರುವ ಆಲಯಗಳನ್ನು ಟಾರ್ಗೆಟ್ ಮಾಡಿಕೊಂಡು ರಾತ್ರಿ ಸಮಯದಲ್ಲಿ ಕೊಳ್ಳೆ ಹೊಡೆಯಲಾಗುತ್ತಿದೆ. ಜಿಲ್ಲೆಯಲ್ಲೂ ಅನೇಕ ಆಲಯಗಳು ಕಳ್ಳತನಕ್ಕೆ ಗುರಿಯಾಗುತ್ತಿದ್ದು, ಇತ್ತೀಚೆಗೆ ತಾಲೂಕಿನ ಗುರುಕಲನಾಗೇನಹಳ್ಳಿಯಲ್ಲಿರುವ ಸಪ್ಪಲಮ್ಮ ದೇವಾಲಯದಲ್ಲಿ 8 ಮಾಂಗಲ್ಯ ಸರ ಮತ್ತು ಬೆಳ್ಳಿ ಛತ್ರ ಸೇರಿದಂತೆ ಹಣವನ್ನು ದುಷ್ಕರ್ಮಿಗಳು ಕದ್ದು ಪರಾರಿಯಾಗಿದ್ದರು. ಅದೇ ರೀತಿ ಬಾಗೇಪಲ್ಲಿ, ಗುಡಿಬಂಡೆ, ಶಿಡ್ಲಘಟ್ಟ, ಚಿಂತಾಮಣಿ ಸೇರಿದಂತೆ ವಿವಿಧೆಡೆ ಆಲಯದಲ್ಲಿ ಕಳ್ಳತನ ನಡೆದ ಪ್ರಕರಣಗಳು ದಾಖಲಾಗುತ್ತಿವೆ. ಜಿಲ್ಲೆ ಆಂಧ್ರದ ಗಡಿಗೆ ಹೊಂದಿಕೊಂಡಿರುವ ಹಿನ್ನೆಲೆಯಲ್ಲಿ ಅಲ್ಲಿಂದ ತಂಡೋಪತಂಡವಾಗಿ ಆಗಮಿಸುವ ಕಳ್ಳರು ಪ್ರಮುಖ ದೇವಾಲಯಗಳ ಮೇಲೆ ಕಣ್ಣು ಹಾಕಿ, ತಮಗೆ ಸೂಕ್ತ ಎನಿಸಿದ ಸಮಯದಲ್ಲಿ ಹಣ ದೋಚಿ ಪರಾರಿಯಾಗುತ್ತಿದ್ದಾರೆ.   

ನಿಧಿಗಾಗಿ ದುಷ್ಕರ್ಮಿಗಳ ಹುಡುಕಾಟ
ಐತಿಹಾಸಿಕ ಮತ್ತು ಪುರಾಣ ಪ್ರಸಿದ್ಧಿ ಹೊಂದಿರುವ ಜಿಲ್ಲೆಯಲ್ಲಿ ಅನೇಕ ಶತಮಾನಗಳ ಹಿಂದೆ ನಿರ್ಮಿಸಿರುವ ದೇವಾಲಯಗಳು ಬಹಳಷ್ಟಿವೆ. ಈ ಹಿನ್ನೆಲೆಯಲ್ಲಿ ಆಲಯಗಳಲ್ಲಿ ಮತ್ತು ಅದರ ಸುತ್ತಮುತ್ತಲಿನ ಪ್ರದೇಶಗಳಲ್ಲಿ ನಿಧಿ ಅಡಗಿದೆ ಎಂಬ ಅಸತ್ಯದ ಮಾತು ನಂಬಿ ಕೆಲ ದುಷ್ಕರ್ಮಿಗಳು ಸದ್ದಿಲ್ಲದೆ ವಿವಿಧೆಡೆ ನಿಧಿ ಹುಡುಕುವ ಕೆಲಸ ಮಾಡುತ್ತಿದ್ದಾರೆ.
ಇದಕ್ಕೆ ಗುಮ್ಮನಾಯಕನಪಾಳ್ಯದ ಪಾಳೇಗಾರರು, ನಂದಿಗಿರಿ ಸೇರಿದಂತೆ ಹಲವೆಡೆ ಕೋಟೆ ಕೊತ್ತಲಗಳನ್ನು ಕಟ್ಟಿ ಆಡಳಿತ ನಡೆಸಿದ ಅರಸರ ಇತಿಹಾಸ ದುರ್ಬಳಕೆ ಮಾಡಿಕೊಂಡು ಅಮಾಯಕರನ್ನು ನಂಬಿಸಿ, ಜತೆಗೆ ತಮ್ಮ ದುರಾಸೆಯಲ್ಲಿ ವಾಮಾಚಾರದ ಪೂಜೆ ಕೈಗೊಂಡು ಗುಣಿ ಅಗೆಯುವುದು, ಪ್ರತಿಷ್ಠಾಪಿಸಲಾಗಿರುವ ಮೂರ್ತಿ, ಕಂಬ ನಾಶಪಡಿಸುವಂತಹುದು ಅಲ್ಲಲ್ಲಾಗುತ್ತಿದೆ. ಇಂತಹ ಘಟನೆಗಳು ತಾಲೂಕಿನ ಹನುಮಂತಪುರ ಸಮೀಪದ ಜಾಲಾರಿ ನರಸಿಂಹಸ್ವಾಮಿ ದೇವಾಲಯದ ಸುತ್ತಮುತ್ತಲ ಬೆಟ್ಟ ಗುಡ್ಡ ಪ್ರದೇಶ, ನಂದಿ ಗಿರಿಧಾಮದ ತಪ್ಪಲು, ಬಾಗೇಪಲ್ಲಿ ತಾಲೂಕಿನ ಹಲವೆಡೆ ನಡೆಯುತ್ತಿರುವುದು ಇದಕ್ಕೆ ಉದಾಹರಣೆ. ಇತ್ತೀಚೆಗೆ ನಿಡುಮಾಮಿಡಿ ಮಠದ ಚನ್ನಮಲ್ಲ ವೀರಭದ್ರ ಸ್ವಾಮೀಜಿ ಈ ಬಗ್ಗೆ ಅಳಲನ್ನು ತೋಡಿಕೊಂಡು ಜಚನಿ ಮಠದ ಸುತ್ತಲು ನಿಧಿಗಳ್ಳರ ದುಷ್ಕೃತ್ಯ ಚಟುವಟಿಕೆ ನಡೆಯುತ್ತಿವೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈ ನಿಧಿಗಳ್ಳರು ಕಾಣದ ನಿಧಿಯಿಂದ ಇದೀಗ ಆಲಯದಲ್ಲಿನ ಹುಂಡಿಯಲ್ಲಿನ ಹಣವನ್ನು ಮತ್ತು ಆಭರಣ ಕದಿಯುವ ಪ್ರಯತ್ನ ಮಾಡುತ್ತಿದ್ದಾರೆ ಎಂಬ ಅಭಿಪ್ರಾಯ ಕೇಳಿ ಬರುತ್ತಿದೆ. ಆಲಯಗಳಲ್ಲಿನ ಕಳ್ಳತನ ಪ್ರಕರಣಗಳು ಕನಿಷ್ಠ ವಾರಕೊಮ್ಮೆ ನಡೆಯುತ್ತಿರುವುದರಿಂದ ಆತಂಕಗೊಂಡಿರುವ ಜನರು, ಇದಕ್ಕೆ ಕಡಿವಾಣ ಹಾಕಲು ಪೊಲೀಸ್ ಇಲಾಖೆ ಮುಂದಾಗಬೇಕೆಂದು ಒತ್ತಾಯಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement