ಲೋಕಸಭಾ ಚುನಾವಣೆ: ಸ್ಥಳೀಯರಿಗೆ ಅವಕಾಶ ನೀಡಿ
ಕ.ಪ್ರ.ವಾರ್ತೆ ಕೋಲಾರ ಸೆ. 21
ಲೋಕಸಭಾ ಚುನಾವಣೆಗೆ ಸ್ಪರ್ಧಿಸಲು ಈ ಬಾರಿ ಸ್ಥಳೀಯರಿಗೆ ಅವಕಾಶ ನೀಡಬೇಕೆಂದು ಕೋಲಾರ ಮೀಸಲು ಲೋಕಸಭಾ ಕ್ಷೇತ್ರದ ಜೆಡಿಎಸ್‌ನ ಪರಿಶಿಷ್ಟ ಜಾತಿಯ ಮುಖಂಡರು ಪಕ್ಷದ ವರಿಷ್ಠರನ್ನು ಒತ್ತಾಯಿಸಿದ್ದಾರೆ.
ಈ ಸಂಬಂಧ ಶನಿವಾರ ನಗರದ ಪತ್ರಕರ್ತರ ಭವನದಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಜೆಡಿಎಸ್‌ನ ಪರಿಶಿಷ್ಟ ಜಾತಿಯ ಮುಖಂಡರು, ಜಿಲ್ಲೆಯಲ್ಲಿ ಜೆಡಿಎಸ್ ಬಲಿಷ್ಠವಾಗಿದೆ, ಕೋಲಾರ ಲೋಕಸಭಾ ಕ್ಷೇತ್ರ ವ್ಯಾಪ್ತಿಯ 8 ವಿಧಾನಸಭಾ ಕ್ಷೇತ್ರಗಳ ಪೈಕಿ ಜೆಡಿಎಸ್ ನೂರು ಕ್ಷೇತ್ರದಲ್ಲಿ ಗೆಲುವು ಸಾಧಿಸಿದೆ. ಸೋತ ಕ್ಷೇತ್ರದಲ್ಲೂ ಗಣನೀಯ ಪ್ರಮಾಣದಲ್ಲಿ ಮತ ಗಳಿಸಿದ್ದೇವೆ. ಸ್ಥಳೀಯ ಮುಖಂಡರಲ್ಲೇ ಗೆಲ್ಲುವ ಶಕ್ತಿ ಇರುವುದರಿಂದ ಹೊರಗಿನವರಿಗೆ ಟಿಕೆಟ್ ನೀಡುವ ಅವಶ್ಯಕತೆಯಿಲ್ಲ ಎಂದು ತಿಳಿಸಿದ್ದಾರೆ.
ನಮ್ಮಲ್ಲಿ ಸಾಕಷ್ಟು ಮಂದಿ ಆಕಾಂಕ್ಷಿಗಳು ಇದ್ದಾರೆ, ಪಕ್ಷದ ಹಿರಿಯ ನಾಯಕರಾದ ಮಾಜಿ ಪ್ರಧಾನಮಂತ್ರಿ ಹೆಚ್.ಡಿ. ದೇವೇಗೌಡರೂ ಸ್ಥಳೀಯರಿಗೆ ಟಿಕೆಟ್ ನೀಡಬೇಕೆಂಬ ಉದ್ದೇಶ ಹೊಂದಿದ್ದಾರೆ. ವರಿಷ್‌ಠರು ಸ್ಥಳೀಯರಲ್ಲಿ ಯಾರಿಗೇ ಟಿಕೆಟಟ್ನೀಡಿದರೂ ಒಗ್ಗಟ್ಟಿನಿಂದ, ಒಮ್ಮತದಿಂದ ಕೆಲಸ ಮಾಡಿ ಪಕ್ಷಕ್ಕೆ ಜಯ ತಂದುಕೊಡುವುದಾಗಿ ಟಿಕೆಟ್ ಆಕಾಂಕ್ಷಿತರ ಪೈಕಿ ಒಬ್ಬರಾದ ಜಿ.ಪಂ ಸದಸ್ಯ ಎಸ್.ಬಿ.ಮುನಿವೆಂಕಟಪ್ಪ ಹೇಳಿದರು.
ಜಿ.ಪಂ ಮಾಜಿ ಅಧ್ಯಕ್ಷ ಶ್ರೀನಿವಾಸಪುರ ತಾಲೂಕಿನ ಜೆಡಿಎಸ್ ಮುಖಂಡ ಶ್ರೀನಿವಾಸನ್ ಮಾತನಾಡಿ, ನಮ್ಮಲ್ಲಿ ಈ ಹಿಂದೆ ಕೆಲವರು ಮ್ಯಾಚ್ ಫಿಕ್ಸಿಂಗ್ ರಾಜಕಾರಣಿ ಮಾಡಿ ಕಾರ್ಯಕರ್ತರಲ್ಲಿ ಗೊಂದಲ ಉಂಟು ಮಾಡಿದ್ದರಿಂದ ಸ್ಥಳೀಯರಿಗೆ ಟಿಕೆಟಟ್ಸಿಗಲಿಲ್ಲ. ಹೊರಗಿನವರಾದ ಚಂದ್ರಣ್ಣ ಚುನಾವಣೆಗೆ ಸ್ಪರ್ಧಿಸಿ 2 ಲಕ್ಷಕ್ಕೂ ಹೆಚ್ಚು ಮತ ಗಳಿಸಿದ್ದಾರೆ. ಈ ಬಾರಿ ವಾತಾವಣ ಚೆನ್ನಾಗಿರುವುದರಿಂದ ಸ್ಥಳೀಯರಿಗೆ ಟಿಕೆಟ್ ನೀಡಿದಲ್ಲಿ ಖಂಡಿತ ಜಯ ಗಳಿಸುವುದಕ್ಕೆ ಅವಕಾಶವಿರುವುದರಿಂದ ವರಿಷ್ಠರ ಬಳಿ ನಿಯೋಗ ತೆರಳಿ ಒತ್ತಾಯ ಮಾಡುತ್ತೇವೆಂದರು.
ಈ ಬಾರಿ ಸ್ಥಳೀಯರಿಗೇ ಟಿಕೆಟ್ ಸಿಗುವ ವಿಶ್ವಾಸವಿದೆ, ಬಿಜೆಪಿಗೆ ಕ್ಷೇತ್ರದಲ್ಲಿ ಗೆಲ್ಲುವ ಶಕ್ತಿ ಇಲ್ಲ, ಒಂದು ವೇಳೆ ರಾಜ್ಯದಲ್ಲಿ ಬಿಜೆರಿ ಜೊತೆ ಮೈತ್ರಿ ಮಾಡಿಕೊಂಡರೂ ಕೋಲಾರ ಕ್ಷೇತ್ರವನ್ನು ಮಾತ್ರ ಜೆಡಿಎಸ್ ಬಿಟ್ಟುಕೊಡುವುದಿಲ್ಲ. ಜೆಡಿಎಸೆಗೆ ಜನತೆಯ ಬೆಂಬಲ ಇರುವುದರಿಂದ ಬಿಜೆಪಿಗೆ ಬೆಂಬಲ ನೀಡುವ ಪ್ರಶ್ನೆಗೆ ಉದ್ಬವಿಸುವುದಿಲ್ಲವೆಂದು ಶ್ರೀನಿವಾಸ್ ನುಡಿದರು.
ಜಿಲ್ಲೆಯಲ್ಲಿ ನಮ್ಮ ಪಕ್ಷದ ಕೆಲ ಮುಖಂಡರ ತಪ್ಪಿನಿಂದ ಪಕ್ಷಕ್ಕೆ ಹಾನಿಯಾಗಿದೆ, ಯಾವುದೇ ಕಾರಣಕ್ಕೂ ಹೊರಗಿನವರಿಗೆ ಅವಕಾಶ ನೀಡಲು ಬಿಡುವುದಿಲ್ಲ ಎಂದು ಮತ್ತೊಬ್ಬ ಮುಖಂಡ ಶ್ರೀಕೃಷ್ಣ ಹೇಳಿದರು.
ವಿಧಾನಸಭಾ ಚುನಾವಣೆಯಲ್ಲಿ ಕೆಲ ಪರಿಶಿಷ್ಟ ಜಾತಿಯ ಮುಖಂಡರೇ ಜೆಡಿಎಸ್‌ನಿಂದ ಸ್ಪರ್ಧಿಸಿದ್ದ ಶ್ರೀನಿವಾಸಗೌಡ, ವೆಂಕಟಶಿವಾರೆಡ್ಡಿ ವಿರುದ್ಧ ಕೆಲಸ ಮಾಡಿದ್ದಾರೆಂಬ ಆರೋಪವಿದೆ. ಇಂತಹವರು ಲೋಕಸಭಾ ಚುನಾವಣೆಗೆ ಟಿಕೆಟ್ ಕೇಳಿದ್ರೆ ಒಪ್ಪಿಗೆ ನೀಡುವಿರೇ ಎಂಬ ಪ್ರಶ್ನೆಗೆ ಉತ್ತರಿಸಲು ಮುಖಂಡರು ನಿರಾಕರಿಸಿದರಲ್ಲದೆ, ರಾಜಕೀಯದಲ್ಲಿ ಇದೆಲ್ಲಾ ಸಹಜ, ಲೋಕಸಭಾ ಚುನಾವಣೆಯಲ್ಲಿ ಆ ರೀತಿ ಆಗುವುದಿಲ್ಲವೆಂದು ಹಾರಿಕೆಯ ಉತ್ತರ ನೀಡಿದರು.
ಪಕ್ಷದಲ್ಲಿ ಈ ಹಿಂದೆ ಮ್ಯಾಚ್ ಫಿಕ್ಸಿಂಗ್ ರಾಜಕಾರಣ ಮಾಡಿದವರು ಯಾರು ಎಂಬುದಕ್ಕೂ ಮುಖಂಡರಿಂದ ಉತ್ತರ ಸಿಗಲಿಲ್ಲ. ಈ ಸಂದರ್ಭದಲ್ಲಿ ಮುಖಂಡರಾದ ಮಂಗಮ್ಮ ಮುನಿಸ್ವಾಮಿ, ಗಣೇಶ್, ಹನುಮಪ್ಪ, ರವಿ, ಮಂಜುನಾಥ್, ಜಿ.ಪಂ ಉಪಾಧ್ಯಕ್ಷೆ ಅಲುವೇಲಮ್ಮ, ಆನಂದ್, ಎಪಿಎಂಸಿ ಮಾಜಿ ಅಧ್ಯಕ್ಷ ಈರಪ್ಪ ಇದ್ದರು.