ಸಂಪೂರ್ಣ ಸಾಕ್ಷರತೆಯಿಂದ ದೇಶ ಬಲಿಷ್ಠ
ಕ.ಪ್ರ.ವಾರ್ತೆ ಚಿಂತಾಮಣಿ ಸೆ. 21
ಸಾಕ್ಷರತೆಯ ದೀಪವನ್ನು ಅನಕ್ಷರಸ್ಥರಿಗೆ ಜ್ಞಾನದ ಬೆಳಕಾಗಿ ಬೆಳಗಿಸಿ ಸಾಕ್ಷರತಾ ದೇಶ ನಿರ್ಮಾಣ ಮಾಡಲು ಶ್ರಮಿಸಿದರೆ ದೇಶವು ಪ್ರಪಂಚದಲ್ಲೇ ಬಲಿಷ್ಠ ರಾಷ್ಟ್ರವಾಗಲು ಸಾಧ್ಯ ಎಂದು ಶಾಸಕ ಜೆ.ಕೆ. ಕೃಷ್ಣಾರೆಡ್ಡಿ ಹೇಳಿದರು.
ಪಟ್ಟಣದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಶನಿವಾರ ಜಿಲ್ಲಾ ಸಾಕ್ಷರತಾ ಸಮಿತಿ, ಜಿಲ್ಲಾ ಲೋಕ ಶಿಕ್ಷಣ ಸಮಿತಿ ಹಾಗೂ ತಾಲೂಕು ಲೋಕ ಶಿಕ್ಷಣ ಸಮಿತಿಗಳ ಸಹಯೋಗದೊಂದಿಗೆ ತಾಲೂಕು ಮಟ್ಟದ ಅಂತಾರಾಷ್ಟ್ರೀಯ ಸಾಕ್ಷರತಾ ದಿನಾಚರಣಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಸಾಕ್ಷರತಾ ದಿನಾಚರಣಾ ಉದ್ಘಾಟನಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಎಸ್.ಎನ್. ಚಿನ್ನಪ್ಪ, ಸರ್ಕಾರದ ಯೋಜನೆಗಳನ್ನು ಉಪಯೋಗಿಸಿಕೊಳ್ಳದೆ ಅನಕ್ಷರಸ್ಥರಾಗಿ ಕೂಲಿ ಆಳುಗಳಾಗಿ ಜೀವನ ನಡೆಸುತ್ತಿರುವುದು ಸರಿಯಲ್ಲ. ಮುಖ್ಯವಾಗಿ ಪೋಷಕರು ತಮ್ಮ ಮಕ್ಕಳಿಗೆ ಅಕ್ಷರಭ್ಯಾಸಕ್ಕೆ ಮುಂದಾಗಬೇಕೆಂದು ಹೇಳಿದರು.
ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ಜಿ. ರಂಗಯ್ಯ ಮಾತನಾಡಿ, ಅಕ್ಷರಜ್ಞಾನ ಒಬ್ಬರಿಂದ ಒಬ್ಬರಿಗೆ ಕಲಿಕೆಯಾಗಿದ್ದಲ್ಲಿ ಮಾತ್ರ ಸಮಾಜದಲ್ಲಿ ಪ್ರತಿಯೊಬ್ಬರೂ ಅಕ್ಷರಸ್ಥರಾಗಲು ಸಾಧ್ಯವೆಂದು ಹೇಳಿದರು.
ಕಾರ್ಯಕ್ರಮಕ್ಕೂ ಮುನ್ನ ತಾಲೂಕು ಪಂಚಾಯಿತಿ ಕೆ.ವಿ. ಮೀನಾ ಶ್ರೀರಾಮರೆಡ್ಡಿ ಸಾಕ್ಷರತಾ ಧ್ವಜಾರೋಹಣ ಮಾಡಿದರು. ಸಭೆಯಲ್ಲಿ ನೆರೆದಿದ್ದ ಎಲ್ಲರೂ ಸಾಕ್ಷರತಾ ಪ್ರಮಾಣವಚನ ಸ್ವೀಕರಿಸಿದರು. ತಾಲೂಕು ದಂಡಾಧಿಕಾರಿ ಎಂ.ಎನ್. ಮಂಜುನಾಥ್, ಎಪಿಎಂಸಿ ಅಧ್ಯಕ್ಷ ನಾರಾಯಣಸ್ವಾಮಿ, ಜಿಲ್ಲಾ ಪಂಚಾಯಿತಿ ಸದಸ್ಯರಾದ ವೀಣಾಗಂಗುಲಪ್ಪ, ಮಂಜುಳಾಮೂರ್ತಿ, ಉಮಾದೇವಿ, ಜಿಲ್ಲಾ ವಯಸ್ಕರ ಶಿಕ್ಷಣಾಧಿಕಾರಿ ದಸ್ತಗಿರ್‌ಸಾಬ್, ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಬಿ.ಸಿ. ವಸಂತಕುಮಾರ್, ಸಾಕ್ಷರತಾ ಸಂಯೋಜಕ ವಿ.ಗಂಗುಲಪ್ಪ ಸೇರಿದಂತೆ ಇತರರು ಭಾಗವಹಿಸಿದ್ದರು.
ಕಾಮಗಾರಿಗೆ ಚಾಲನೆ
ಕೋಲಾರದ ಹೊರವಲಯದಲ್ಲಿರುವ ಖಾದ್ರಿಪುರದಲ್ಲಿ ಸುವರ್ಣ ಗ್ರಾಮ ಯೋಜನೆಯಲ್ಲಿ 32 ಲಕ್ಷ ವೆಚ್ಚದಲ್ಲಿ ನಡೆಸಲಾಗುತ್ತಿರುವ ಸಿಮೆಂಟ್ ರಸ್ತೆ ಕಾಮಗಾರಿಗೆ ಶಾಸಕ ವರ್ತೂರು ಆರ್. ಪ್ರಕಾಶ್ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಮುಖಂಡರಾದ ಬೆಗ್ಲಿ ಪ್ರಕಾಶ್, ರಘುರಾಂ, ಗ್ರಾಪಂ ಅಧ್ಯಕ್ಷೆ ರತ್ನಮ್ಮ, ಸದಸ್ಯೆ ನಾಗರತ್ನಮ್ಮ, ಆನಂದ್, ರಾಮನಾಯಕ್, ಶಂಕರ್, ಉಮಾರಾಣಿ, ಗೋವಿಂದ್, ಕೆಎಸ್ಸಾರ್ಟಿಸಿ ಮುನಿಯಪ್ಪ, ಆಂಜಿನಪ್ಪ ಮತ್ತಿತರರು ಭಾಗವಹಿಸಿದ್ದರು.