ಹಾಲಿಗೆ ಸೂಕ್ತ ಮಾರುಕಟ್ಟೆ ಅಗತ್ಯ: ಗುಡಿಯಪ್ಪ
ಕ.ಪ್ರ.ವಾರ್ತೆ ಕೋಲಾರ ಸೆ. 21
ರಾಜ್ಯದ 13 ಹಾಲು ಒಕ್ಕೂಟಗಳಲ್ಲಿ ಉತ್ಪಾದನೆಯಾಗುವ ಹಾಲನ್ನು ಕ್ರೋಢೀಕರಿಸಿ ಮಾರುಕಟ್ಟೆ ಸೌಲಭ್ಯವನ್ನು ಕೆಎಂಎಫ್ ಒದಗಿಸಬೇಕೆಂದು ಕೋಚಿಮುಲ್ ಅಧ್ಯಕ್ಷ ಕೆ. ಗುಡಿಯಪ್ಪ ತಿಳಿಸಿದರು.
ತಾಲೂಕಿನ ವಿಟ್ಟಪ್ಪನಹಳ್ಳಿಯಲ್ಲಿ ಶನಿವಾರ ಹಾಲು ಉತ್ಪಾದಕರ ಸಹಕಾರ ಸಂಘದ ಬೆಳ್ಳಿಹಬ್ಬ ಮತ್ತು ವಾರ್ಷಿಕ ಮಹಾಸಭೆ ಉದ್ಘಾಟಿಸಿ ಮಾತನಾಡಿದರು. ರಾಜ್ಯದಲ್ಲಿ ಪ್ರತಿನಿತ್ಯವೂ 54 ಲಕ್ಷ ಲೀಟರ್ ಹಾಲು ಉತ್ಪಾದನೆಯಾಗುತ್ತಿದ್ದು ಬೆಂಗಳೂರು ಡೇರಿ ನಿತ್ಯವೂ 11 ಲಕ್ಷ ಲೀಟರ್ ಮತ್ತು ಕೋಲಾರ ಡೇರಿ 9 ಲಕ್ಷ ಲೀಟರ್ ಹಾಲು ಉತ್ಪಾದನೆ ಮಾಡುತ್ತಿದೆ ಎಂದರು.
ರಾಜ್ಯ ಸರಕಾರ ಹಾಲು ಉತ್ಪಾದಕರಿಗೆ ಪ್ರತಿ ಲೀಟರ್ ಹಾಲಿಗೆ 4 ರು. ಬೆಂಬಲ ಬೆಲೆ ಪ್ರಕಟಿಸಿದ ನಂತರ ಕೋಲಾರ ಜಿಲ್ಲೆಯಲ್ಲಿ 1 ಲಕ್ಷ ಲೀಟರ್ ಹಾಲು ಉತ್ಪಾದನೆ ಹೆಚ್ಚಾಗಿದೆ, ಕೋಚಿಮುಲ್ ಸಂಗ್ರಹಿಸುತ್ತಿರುವ ಹಾಲನ್ನು ಸದ್ಬಳಕೆ ಮಾಡಿಕೊಳ್ಳುವ ಉದ್ದೇಶದಿಂದ ಪೌಡರ್ ತಯಾರಿಕಾ ಘಟಕ ಸ್ಥಾಪನೆಗೆ ಪ್ರಸ್ತಾವನೆ ಸಲ್ಲಿಸಲಾಗಿದೆ, ಚಿಕ್ಕಬಳ್ಳಾಪುರದಲ್ಲಿ 65 ಕೋಟಿ ರು. ವೆಚ್ಚದಲಿ ಮೆಗಾಡೇರಿ ಆರಂಭಿಸಲು ಸಿದ್ಧತೆ ನಡೆದಿದೆ ಎಂದರು.
ಕೋಚಿಮುಲ್ ಮಾಜಿ ಅಧ್ಯಕ್ಷ ಎ.ವಿ. ಪ್ರಸನ್ನ ಮಾತನಾಡಿ, ಚಿಕ್ಕಬಳ್ಳಾಪುರದ ಮೆಗಾಡೇರಿಯಲ್ಲಿ 1 ಲಕ್ಷ ಲೀಟರ್ಪ್‌ನ್ನೀರು ತಯಾರಿಕೆ ಆರಂಭಿಸಲಾಗುವುದು, ಗೌರಿಬಿದನೂರಿನಲ್ಲಿ ಇಟ್ಟಿಗೆ ರೂಪದ ಪಶು ಆಹಾರವನ್ನು ತಯಾರಿಸಲಾಗುತ್ತಿದೆ ಎಂದರು.
ಕೋಲಾರ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಬಿ.ವಿ. ಗೋಪಿನಾಥ್, ಹಿರಿಯ ಸಹಕಾರಿ ಅಬ್ಬಣಿ ಶಂಕರ್ ಮಾತನಾಡಿದರು. ವಿಟ್ಟಪ್ಪನಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಟಿ. ಹನುಮಪ್ಪ ಅಧ್ಯಕ್ಷತೆ ವಹಿಸಿದ್ದರು. ಕೋಚಿಮುಲ್ ನಿರ್ದೇಶಕ ಮದ್ದೇರಿ ಎಸ್. ರಾಮೇಗೌಡ, ಕೋಚಿಮುಲ್ ವ್ಯವಸ್ಥಾಪಕ ನಿರ್ದೇಶಕ ಎಸ್.ಹನುಮೇಶ್, ಪತ್ರಕರ್ತರ ಸಂಘದ ಖಜಾಂಚಿ ವಿ. ಮುನಿರಾಜು, ಆಡಿಟರ್ ಎನ್.ದೇವರಾಜ್, ಗ್ರಾಪಂ ಸದಸ್ಯೆ ರೇಣುಕಾ ಶ್ರೀನಿವಾಸ್, ರಾಮಕೃಷ್ಣಪ್ಪ, ಇತರರು ಇದ್ದರು.
ಸಂಘದ ಕಾರ್ಯದರ್ಶಿ ಡೇರಿ ವೆಂಕಟೇಶ್ ಸ್ವಾಗತಿಸಿ, ವಿಶ್ವನಾಥ್ ನಿರೂಪಿಸಿದರು.
ಇಂಗ್ಲಿಷ್ ಕಲಿಕೆಗೂ ಒತ್ತು ನೀಡಿ: ಪ್ರೊ. ಕೃಷ್ಣಪ್ಪ
ಕ.ಪ್ರ.ವಾರ್ತೆ ಚಿಕ್ಕಬಳ್ಳಾಪುರ ಸೆ. 21
ಪ್ರಸ್ತುತ ದಿನಗಳಲ್ಲಿ ಇಂಗ್ಲಿಷ್ ಭಾಷಾ ಜ್ಞಾನ ಅವಶ್ಯಕವಾಗಿದೆ. ಈ ಹಿನ್ನೆಲೆಯಲ್ಲಿ ಇಂಗ್ಲಿಷ್ ಕಲಿಕೆಗೂ ಒತ್ತು ಕೊಡಬೇಕಾಗಿದೆ ಎಂದು ಕಾಲೇಜಿನ ಪ್ರಾಂಶುಪಾಲ ಪ್ರೊ. ಎಸ್. ಕೃಷ್ಣಪ್ಪ ತಿಳಿಸಿದರು.
ನಗರದ ಸರ್ಕಾರಿ ಪ್ರಥಮದರ್ಜೆ ಕಾಲೇಜಿನಲ್ಲಿ ನಡೆದ ಇಂಗಿಷ್ ಲಿಟೆರರಿ ಕ್ಲಬ್ ಮತ್ತು ಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ ಸ್ವಾಗತ ಕೋರುವ ಕಾರ್ಯಕ್ರಮದಲ್ಲಿ ಮಾತನಾಡಿದರು.
ವಿದ್ಯಾಭ್ಯಾಸ ಕೈಗೊಳ್ಳಲು ಬಹಳಷ್ಟು ವಿದ್ಯಾರ್ಥಿಗಳಿಗೆ ಸೌಲಭ್ಯಗಳ ಕೊರತೆಯಿಂದ ತೊಂದರೆಯಾಗುತ್ತಿದೆಯಾದರೂ ತಮ್ಮ ಪಟ್ಟು ಬಿಡದೇ ಗುಣಮಟ್ಟದ ಶಿಕ್ಷಣ ಪಡೆದುಕೊಂಡು ಸಮಾಜದಲ್ಲಿ ಉನ್ನತ ಸ್ಥಾನ ಪಡೆಯಬೇಕೆಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.
ಜಗತ್ತಿನ ದೈನಂದಿನ ವಿದ್ಯಮಾನಗಳು ತಕ್ಷಣ ಅರಿಯಲು ಪ್ರಮುಖವಾಗಿ ಇಂಗ್ಲಿಷ್ ಭಾಷೆಯಿಂದ ಸಾಧ್ಯವಾಗುತ್ತದೆ. ಇಂಗ್ಲಿಷ್ ಭಾಷೆಯ ಸುಲಭ ಕಲಿಕೆಗೆ ಆಲಿಸುವುದು, ಮಾತನಾಡುವುದು, ನಿರಂತರ ಓದುವುದು, ದಿನಚರಿ ಬರವಣಿಗೆ ಮುಂತಾದ ಚಟುವಟಿಕೆಗಳು ಸಹಕಾರಿಯಾಗಿವೆ ಎಂದು ತಿಳಿಸಿದರು.
ಕಾಲೇಜಿನ ಇಂಗ್ಲಿಷ್ ವಿಭಾಗದ ಮುಖ್ಯಸ್ಥ ಪ್ರೊ. ಬಿ.ಆರ್. ವೆಂಕಟರಾಮು ಮಾತನಾಡಿ, ಇಂಗ್ಲಿಷ್ ಸಾಹಿತ್ಯ ಕ್ಲಬ್ ಮೂಲಕ ಹಮ್ಮಿಕೊಳ್ಳಲಾಗುವ ವಿವಿಧ ಕಾರ್ಯಕ್ರಮಗಳ ರೂಪುರೇಷೆಯನ್ನು, ಕಾಲೇಜಿನಲ್ಲಿ ಐಚ್ಛಿಕ ಇಂಗ್ಲಿಷ್‌ನ ವಿಭಾಗದಲ್ಲಿನ ಸೌಲಭ್ಯಗಳು ಮತ್ತು ಸವಾಲು ವಿವರಿಸಿದರು.
ಕನ್ನಡ ವಿಭಾಗದ ಪ್ರಾಧ್ಯಾಪಕ ಡಾ. ರವಿಕುಮಾರ್ ಮಾತನಾಡಿ, ಇಂಗಿಷ್ ಭಾಷೆಯಲ್ಲಿ ಹಿಡಿತ ಸಾಧಿಸಿದವರಿಗೆ ವಿವಿಧ ಕ್ಷೇತ್ರಗಳಲ್ಲಿ ವಿಫುಲ ಅವಕಾಶ ಲಭ್ಯವಿವೆ. ಕನ್ನಡ ಪ್ರೀತಿಸಬೇಕು. ಹಾಗೆಯೇ ಉತ್ತಮ ಬದುಕನ್ನು ರೂಪಿಸಿಕೊಳ್ಳಬೇಕಾದರೆ ಇಂಗ್ಲಿಷ್‌ಅನ್ನು ಅನಿವಾರ್ಯವಾಗಿ ಕಲಿಯಲೇಬೇಕೆಂದರು.
ಕಾಲೇಜಿನ ಇಂಗ್ಲಿಶ್‌ವಿಭಾಗದ ಪ್ರೊ. ಬಿ. ಮಂಜುನಾಥ ಮಾತನಾಡಿ, ಶ್ರದ್ಧೆಯಿಂದ ಅಧ್ಯಯನ ಮಾಡುವವರಿಗೆ ಭಾಷೆಯ ಮೇಲೆ ಹಿಡಿತ ಸಾಧಿಸಲು ಸಾಧ್ಯವಾಗುತ್ತದೆ ಎಂದರು.
ಕಾಲೇಜಿನ ಪ್ರಾಧ್ಯಾಪಕರಾದ ಪ್ರೊ. ಎಲ್. ನಾರಾಯಣಸ್ವಾಮಿ, ಪ್ರೊ. ಚಂದ್ರಯ್ಯ, ಪ್ರೊ. ಶಕುಂತಲಾ, ಪ್ರೊ. ಶಶಿಕಲಾ, ಪ್ರೊ. ತಾಜ್ ಉನ್ನೀಸಾ ಮುಂತಾದವರು ಉಪಸ್ಥಿತರಿದ್ದರು.