ಅಕ್ರಮ ಮರಳು ಕೇಂದ್ರ ಮೇಲೆ ದಾಳಿ
ಮುಳಬಾಗಲು: ತಾಲೂಕಿನ ಭೀಮನತ್ತ, ಪುಲಿಓಬಿರೆಡ್ಡಿಹಳ್ಳಿ, ನಂಗಲಿ ಗ್ರಾಮದ ಸುತ್ತಮುತ್ತ ಕಂದಾಯ ಇಲಾಖೆ ಅಧಿಕಾರಿಗಳು ಶನಿವಾರ ದಾಳಿ ನಡೆಸಿ 4 ಇಂಜಿನ್ ನಾಶಪಡಿಸಿದರು. ಅಲ್ಲದೆ, ಒಂದು ಇಂಜಿನ್ ವಶಪಡಿಸಿಕೊಳ್ಳಲಾಯಿತು. ವ್ಯಕ್ತಿಯೊಬ್ಬರು ಅಕ್ರಮ ಮರಳು ದಾಳಿ ಸಮಯದಲ್ಲಿ ಅಡ್ಡಿಪಡಿಸಿದ ಹಿನ್ನೆಲೆಯಲ್ಲಿ ಅವರ ಮೇಲೆ ಕೇಸು ದಾಖಲು ಮಾಡಲಾಗಿದೆ ಎಂದು ತಹಸೀಲ್ದಾರ್ ಡಿ.ವಿ. ರಾಮಮೂರ್ತಿ ತಿಳಿಸಿದ್ದಾರೆ. ಅಕ್ರಮ ಮರಳು ಲಾರಿಯವರು ದಂಡವನ್ನು ಡಿಡಿ ಮೂಲಕ ಪೊಲೀಸರಿಗೆ ನೀಡಿದರು. ನಂತರ ಅಕ್ರಮ ಮರಳನ್ನು ಮುಳಬಾಗಲು ಪ್ರವಾಸಿ ಮಂದಿರದಲ್ಲಿ ಇಳಿಸಲಾಗಿದೆ. ಮರಳನ್ನು ಹರಾಜು ಮೂಲಕ ವಿಲೇವಾರಿ ಮಾಡಲಾಗುವುದೆಂದು ತಹಸೀಲ್ದಾರ್ ಡಿ.ವಿ.ರಾಮಮೂರ್ತಿ ತಿಳಿಸಿದ್ದಾರೆ. ದಾಳಿಯಲ್ಲಿ ರಾಜಸ್ವ ನಿರೀಕ್ಷಕ ಬಿ.ವಿ. ರೆಡ್ಡಪ್ಪ ಗುಪ್ತ, ಕೃಷ್ಣಪ್ಪ, ಸುರೇಶ್ ಮುಂತಾದವರು ಭಾಗವಹಿಸಿದ್ದರು.
ಇಂದು ಪೌರ ಕಾರ್ಮಿಕರ ದಿನ
ಕೋಲಾರ: ನಗರಸಭೆ ಸಹಕಾರದೊಂದಿಗೆ ರಾಜ್ಯ ಪೌರಸೇವಾ ನೌಕರರ ಸೇವಾ ಸಂಘದ ಕೋಲಾರ ಶಾಖೆ ವತಿಯಿಂದ ದ್ವಿತೀಯ ಪೌರ ಕಾರ್ಮಿಕರ ದಿನಾಚರಣೆಯನ್ನು ಸೆ. 23ರಂದು ಸೋಮವಾರ ಮಧ್ಯಾಹ್ನ 12 ಗಂಟೆಗೆ ನಗರದ ನಗರಸಭೆ ಆವರಣದಲ್ಲಿ ಹಮ್ಮಿಕೊಳ್ಳಲಾಗಿದೆ. ಬೆಳಗ್ಗೆ 10.30 ಗಂಟೆಗೆ ಪೌರ ಕಾರ್ಮಿಕರು ಪ್ರವಾಸಿ ಮಂದಿರದಿಂದ ಮೆರವಣಿಗೆ ಮುಖಾಂತರ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ನಗರಸಭೆ ಆವರಣಕ್ಕೆ ಆಗಮಿಸಿ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಇಂದು ದಲಿತಸಿಂಹ ಸೇನೆ ಪ್ರತಿಭಟನೆ
ಕೋಲಾರ: ಮಾಲೂರು ತಾಲೂಕಿನ ಇಂದು ಮಂಗಲದ ಗ್ರಾಮದ ಸವರ್ಣೀಯರು ದಲಿತರ ಮೇಲೆ ನಡೆಸಿರುವ ದೌರ್ಜನ್ಯ ಖಂಡಿಸಿ ಹಾಗೂ ಘಟನೆಗೆ ಕಾರಣರಾದ ಆರೋಪಿಗಳನ್ನು ಬಂಧಿಸುವಲ್ಲಿ ವಿಫಲವಾಗಿರುವ ಪೊಲೀಸ್ ಇಲಾಖೆಯ ವಿರುದ್ಧ ಕರ್ನಾಟಕ ದಲಿತ ಸಿಂಹಸೇನೆ ಕೋಲಾರ ಜಿಲ್ಲಾ ಸಮಿತಿಯಿಂದ ಸೆ. 23ರ ಸೋಮವಾರ ಬೆಳಗ್ಗೆ 11 ಗಂಟೆಗೆ ಕೋಲಾರದ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಪ್ರತಿಭಟನಾ ಮೆರವಣಿಗೆ ಹಾಗೂ ಧರಣಿ ನಡೆಸಲಾಗುವುದೆಂದು ಜಿಲ್ಲಾ ಉಪಾಧ್ಯಕ್ಷ ಸಿ.ನಾಗೇಶ್ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ತುಟ್ಟಿ ಭತ್ಯೆ ಏರಿಕೆಗೆ ಒತ್ತಾಯ
ಕೋಲಾರ: ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಸರ್ಕಾರಿ ನೌಕರರೂ ತತ್ತರಿಸಿದ್ದು, ರಾಜ್ಯ ಸರ್ಕಾರ ಕೂಡಲೇ ತುಟ್ಟಿಭತ್ಯೆ ಏರಿಸುವಂತೆ ಜಿಲ್ಲಾ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಕೆ.ಎನ್. ಮಂಜುನಾಥ್ ಆಗ್ರಹಿಸಿದ್ದಾರೆ. ರಾಜ್ಯ ಸರ್ಕಾರ ಕೂಡಲೇ ತುಟ್ಟಿಭತ್ಯೆ ಏರಿಸುವ ಮೂಲಕ ನೌಕರರ ನೆರವಿಗೆ ಬರಬೇಕೆಂದು ಅವರು ಮುಖ್ಯಮಂತ್ರಿಗಳಿಗೆ ಮನವಿ ಮಾಡಿದ್ದಾರೆ.
ಮಹಿಳೆ ಆತ್ಮಹತ್ಯೆ
ಚಿಕ್ಕಬಳ್ಳಾಪುರ: ವರದಕ್ಷಿಣೆ ಕಿರುಕುಳ ತಾಳದೇ ಗೃಹಿಣಿಯೊಬ್ಬರು ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಗರದಲ್ಲಿ ನಡೆದಿದೆ. ಮೃತ ಮಹಿಳೆಯನ್ನು ನಗರದ ಕಂದವಾರದ ನೇತ್ರಾವತಿ(29) ಎಂದು ಗುರುತಿಸಲಾಗಿದೆ. ನಗರದ ಕೋಟೆ ನಿವಾಸಿ ಹಂಸರಾಜ್ ಅವರಿಗೆ ನೇತ್ರಾವತಿ ಅವರನ್ನು ಕೊಟ್ಟು ಮದುವೆ ಮಾಡಿಕೊಡಲಾಗಿತ್ತು. ಆದರೆ, ಗಂಡ ತವರು ಮನೆಯಿಂದ ಹೆಚ್ಚಿಗೆ ವರದಕ್ಷಿಣೆ ತರುವಂತೆ ಪೀಡಿಸುತ್ತಿದ್ದನು ಎನ್ನಲಾಗಿದೆ. ಇದರಿಂದ ಬೇಸತ್ತ ನೇತ್ರಾವತಿ ರಾತ್ರಿ ತಮ್ಮ ಕೋಣೆಯಲ್ಲಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮೃತಳ ತಾಯಿ ಲಕ್ಷ್ಮಮ್ಮ ಪೊಲೀಸರಿಗೆ ದೂರು ನೀಡಿದ್ದು, ನಗರ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.
ಪರಭಾಷೆಗಳಲ್ಲಿ ಬ್ಯಾನರ್, ಫ್ಲೆಕ್ಸ್ ಪ್ರದರ್ಶನಕ್ಕೆ ಕರವೇ ಆಕ್ರೋಶ
ಕೆಜಿಎಫ್: ನಗರದಲ್ಲಿ ಹಬ್ಬ ಮತ್ತು ಇನ್ನಿತರ ಸಮಾರಂಭಗಳಲ್ಲಿ ವಿವಿಧ ರಾಜಕೀಯ ಪಕ್ಷಗಳು ಹಾಗೂ ಸಂಘ ಸಂಸ್ಥೆಗಳು ಪರಭಾಷೆಗಳಲ್ಲಿ ಬ್ಯಾನರ್ಗಳನ್ನು ಮತ್ತು ಫ್ಲೆಕ್ಸ್ಗಳನ್ನು ಅಳವಡಿಸುತ್ತಿದ್ದು ಮುಂದಿನ ದಿನಗಳಲ್ಲಿ ಅದನ್ನು ನಿಲ್ಲಿಸದಿದ್ದಲ್ಲಿ ತೀವ್ರ ಹೋರಾಟಗಳನ್ನು ನಡೆಸುವುದಾಗಿ ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾಧ್ಯಕ್ಷ ರಾಘವೇಂದ್ರ ತಿಳಿಸಿದರು. ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾಧ್ಯಕ್ಷ ರಾಘವೇಂದ್ರ ಅದೇ ರೀತಿ ನಗರದಲ್ಲಿ ಪರಭಾಷೆಯ ಬ್ಯಾನೆರ್ ಹಾಗೂ ಫ್ಲೆಕ್ಸ್ಗಳನ್ನು ಅಳವಡಿಸುವುದಕ್ಕೆ ಅನುಮತಿ ನೀಡಬಾರದು ಎಂದು ನಗರಸಭಾ ಪೌರಾಯುಕ್ತರಿಗೆ ಮನವಿ ಪತ್ರವನ್ನು ಸಲ್ಲಿಸುವುದಾಗಿ ತಿಳಿಸಿದರು. ಅದೇ ರೀತಿ ಡಾ. ಸರೋಜಿನಿ ಮಹಿಷಿ ಅವರ ವರದಿಯನ್ನು ಜಾರಿಗೊಳಿಸಬೇಕು ಎಂದು ಒತ್ತಾಯಿಸಿ ಬರುವ 25 ರಂದು ಬೆಂಗಳೂರಿನಲ್ಲಿ ಹಮ್ಮಿಕೊಂಡಿರುವ ಬೃಹತ್ ರ್ಯಾಲಿಯಲ್ಲಿ ರಾಜ್ಯದ ಮತ್ತು ಕ್ಷೇತ್ರದ ಜನರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಕರೆ ನೀಡಿದರು. ಪತ್ರಿಕಾಗೋಷ್ಠಿಯಲ್ಲಿ ತಾಲೂಕು ಅಧ್ಯಕ್ಷ ನಂಜುಂಡಪ್ಪ, ಜಿಲ್ಲಾ ಮಹಿಳಾ ಅಧ್ಯಕ್ಷೆ ಚಿತ್ರಾರಮೇಶ್, ಜಿಲ್ಲಾ ಉಪಾಧ್ಯಕ್ಷ ವಿ.ಎಸ್.ಪ್ರಕಾಶ್, ಮದಿರಪ್ಪ, ತಿಮ್ಮರಾಜು, ನಾಗರಾಜ್, ಸುಬ್ರಮಣಿ ಸೇರಿದಂತೆ ಇತರೆ ಮುಖಂಡರು ಕಾರ್ಯಕರ್ತರು ಹಾಜರಿದ್ದರು.