ಟ್ರ್ಯಾಕ್ಟರ್ಗೆ ಆಟೋ ಗುದ್ದಿ ಚಾಲಕ ಸಾವು
ಮಾಲೂರು: ರಸ್ತೆಯಲ್ಲಿ ನಿಂತಿದ್ದ ಪೋಲ್ಸ್ ತುಂಬಿದ ಟ್ರ್ಯಾಕ್ಟರ್ಗೆ ಆಟೋವೊಂದು ಹಿಂಬಂದಿಯಿಂದ ಗುದ್ದಿದ್ದ ಪರಿಣಾಮ ಆಟೋ ಚಾಲಕ ಸ್ಥಳದಲ್ಲಿಯೇ ಸತ್ತ ಘಟನೆ ಕೋಲಾರ ರಸ್ತೆಯ ಕಡತೂರು-ಶಿವಾರ ಮಧ್ಯೆ ಭಾನುವಾರ ರಾತ್ರಿ ನಡೆದಿದೆ.
ಮೃತನನ್ನು ವೇಮಗಲ್ ಹೋಬಳಿಯ ಬೆಳ್ಳೂರು ಗ್ರಾಮದ ಮಂಜುನಾಥ್(32)ಎಂದು ಗುರುತಿಸಲಾಗಿದೆ. ವೇಮಗಲ್ನಿಂದ ಭಾನುವಾರ ಸಂಜೆ ಮಾಲೂರು ಕಡೆ ಹೊರಟಿದ್ದ ಮಂಜುನಾಥ್ ಶಿವಾರ ಗೇಟ್ ದಾಟಿ ಮುಂದೆ ಬಂದಾಗ ಕತ್ತಲಲ್ಲಿ ನಿಲ್ಲಿಸಿದ್ದ ನೀಲಗಿರಿ ಪೋಲ್ಸ್ ತುಂಬಿದ ಟ್ರ್ಯಾಕ್ಟರ್ಗೆ ಜೋರಾಗಿ ಗುದ್ದಿದ್ದಾನೆ. ಪರಿಣಾಮ ಟ್ರ್ಯಾಕ್ಟರ್ನಲ್ಲಿದ್ದ ಪೋಲ್ಸ್ಗಳು ಮಂಜುನಾಥನ ಹಣೆ ಹಾಗೂ ಮರ್ಮಾಂಗಕ್ಕೆ ಭಾರೀ ಪೆಟ್ಟು ಬಿದ್ದಿದ್ದು, ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾನೆ. ಘಟನೆ ನಡೆದ ಸಂದರ್ಭದಲ್ಲಿ ಆಟೋದಲ್ಲಿ ಪ್ರಯಾಣಿಕರು ಇರಲಿಲ್ಲ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ರಸ್ತೆಯಲ್ಲಿ ಯಾವ ಮುನ್ಸೂಚನೆ ನೀಡದೆ ಪೋಲ್ಸ್ ತುಂಬಿದ ಟ್ರ್ಯಾಕ್ಟರ್ ನಿಲ್ಲಿಸುವುದರಿಂದ ಈ ರೀತಿಯ ಅಪಘಾತಗಳು ನಡೆಯುತ್ತಿದ್ದು, ಪೊಲೀಸರು ಪೋಲ್ಸ್ ಟ್ರ್ಯಾಕ್ಟರ್ ಮಾಲೀಕರಿಗೆ ಸೂಕ್ತ ನಿರ್ದೇಶನ ನೀಡಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.
ಸಾಲ ನೀಡಲು ರೈತರಿಗೆ ತಾರತಮ್ಯ
ಬಂಗಾರಪೇಟೆ: ರೈತರಿಗಾಗಿ ಇರುವ ಭೂ ಅಭಿವೃದ್ಧಿ ಬ್ಯಾಂಕ್ನಲ್ಲಿ ವಿತರಿಸುವ ಸಾಲದಲ್ಲಿ ನಿರ್ದೇಶಕರು ತಾರತಮ್ಯ ಮಾಡಲಾಗುತ್ತಿದೆ ಸಕಾಲಕ್ಕೆ ರೈತರಿಗೆ ಸಾಲ ದೊರೆಯದೆ ಪರದಾಡುವಂತಾಗಿದೆ ಎಂದು ಬ್ಯಾಂಕಿನ ಷೇರುದಾರರು ಆರೋಪಿಸಿದ್ದಾರೆ. ಪಟ್ಟಣದ ಲಯನ್ಸ್ ಭವನದಲ್ಲಿ ಭೂ ಬ್ಯಾಂಕಿನ ಸರ್ವ ಸದಸ್ಯರ ವಾರ್ಷಿಕ ಮಹಾಸಭೆಯಲ್ಲಿ ಬ್ಯಾಂಕಿನಿಂದ ರೈತರಿಗೇನಾದರೂ ತೊಂದರೆಯಾಗುತ್ತಿದ್ದರೆ ಹೇಳಬಹುದು ಎಂದು ಅಧ್ಯಕ್ಷ ಬಿ.ಎಂ. ವೆಂಕಟೇಶ್ ಹೇಳುತ್ತಿದ್ದಂತೆ,ಬೂದಿಕೋಟೆ ಹಾಗೂ ಐನೋರಹೊಸಹಳ್ಳಿ ಗ್ರಾಮದ ಬ್ಯಾಟಪ್ಪ ಮತ್ತಿತರರು ಎಲ್ಲಾ ದಾಖಲೆಗಳೊಂದಿಗೆ ಸಾಲಕ್ಕೆ ಬ್ಯಾಂಕಿಗೆ ಹೋದರೆ ವಿನಾಕಾರಣ ಅಲೆದಾಡಿಸುತ್ತಾರೆ. ಅಲ್ಲದೆ, ಸಾಲ ವಿತರಣೆಯಲ್ಲಿಯೂ ತಾರತಮ್ಯ ಎಸಗಲಾಗುತ್ತಿದೆ. ಪದೇ ಪದೆ ಪ್ರಶ್ನಿಸಿದರೆ ಹಣವಿಲ್ಲ ಎಂಬ ಉತ್ತರ ಬರುತ್ತದೆ. ಇದೇನಾ ಬ್ಯಾಂಕಿನ ನೀತಿ, ರೈತರಿಗಾಗಿ ಇರುವ ಬ್ಯಾಂಕಿನಲ್ಲಿ ರೈತರಿಗೇ ಸಾಲ ಇಲ್ಲವೆಂದರೆ ಹೇಗೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ನಂತರ ಮಾತನಾಡಿದ ಬ್ಯಾಂಕಿನ ಉಪಾಧ್ಯಕ್ಷ ಬಿ.ಸಿ. ಶ್ರೀನಿವಾಸಮೂರ್ತಿ, ಬ್ಯಾಂಕಿನ ಕೆಲವು ದೋಷಗಳ ಬಗ್ಗೆ ಷೇರುದಾರರು ಬೆಳಕು ಚೆಲ್ಲಿದ್ದಾರೆ. ಇಂತಹ ಪ್ರಕರಣಗಳು ಮರುಕಳಿಸದಂತೆ ಮುಂದೆ ಎಚ್ಚರ ವಹಿಸುವುದಾಗಿ ಹೇಳಿದರು.ಇದೇ ವೇಳೆ ಬ್ಯಾಂಕಿನ ವಾರ್ಷಿಕ ಬಜೆಟ್ ಮಂಡಿಸಲಾಯಿತು. ಕಳೆದ ಸಾಲಿನಲ್ಲಿ 25.60 ಲಕ್ಷ ಬಜೆಟ್ ಮಂಡಿಸಲಾಗಿತ್ತು. ಅದರಲ್ಲಿ 18.19 ಲಕ್ಷ ವೆಚ್ಚವಾಗಿದ್ದು, 7.41ಲಕ್ಷ ಉಳಿತಾಯ ಮಾಡಲಾಗಿದೆ ಎಂದು ಬ್ಯಾಂಕಿನ ಲೆಕ್ಕ ಪರಿಶೋಧಕರ ವಿ.ಎಂ. ಚಂದ್ರಶೇಖರರೆಡ್ಡಿ ಹೇಳಿದರು. ಬ್ಯಾಂಕಿನ ಅಧ್ಯಕ್ಷ ಬಿ.ಎಂ. ವೆಂಕಟೇಶ್, ನಿರ್ದೇಶಕರಾದ ಎಸ್.ಸಿ. ನಾಗರಾಜ್, ಶಿವಶಂಕರಪ್ಪ, ನಾರಾಯಣಗೌಡ, ರಾಮಕೃಷ್ಣರೆಡ್ಡಿ,ತಿಮ್ಮರಾಯನಾಯಕ್, ಚೌಡಮ್ಮ, ವೆಂಕಟೇಶಗೌಡ, ವ್ಯವಸ್ಥಾಪಕ ಶ್ರೀನಿವಾಸ್ ಇತರರು ಇದ್ದರು.