ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ನಂದವರೀಕ ಬ್ರಾಹ್ಮಣರು ಸಮಾಜಮುಖಿಯಾಗಲಿ

Srinivasa Murthy VN
Updated On : 23 Sept 2013, 1:22 am

ಕೋಲಾರ: ವೃತ್ತಿ ಸಂಹಿತೆಯಲ್ಲಿ ಹೆಸರುವಾಸಿಯಾಗಿರುವ ನಂದವರೀಕ ಬ್ರಾಹ್ಮಣರು ಸವಾಲು ಎದುರಿಸುತ್ತಿರುವವರಿಗೆ ಪ್ರೋತ್ಸಾಹ ನೀಡುವ ಮೂಲಕ ಸಮಾಜಮುಖಿಗಳಾಗಬೇಕೆಂದು ಶಾಸಕ ಕೆ.ಆರ್. ರಮೇಶ್‌ಕುಮಾರ್ ತಿಳಿಸಿದರು.
ನಗರದ ಕೋಟೆ ಪ್ರದೇಶದಲ್ಲಿ ಶಂಕರಮಠದಲ್ಲಿ ನಂದವರೀಕ ಬ್ರಾಹ್ಮಣರ ಸಂಘದಿಂದ ಭಾನುವಾರ ಹಮ್ಮಿಕೊಂಡಿದ್ದ ನಿವೃತ್ತ ಕನ್ನಡ ಪ್ರಾಧ್ಯಾಪಕಿ ಕೆ.ಆರ್. ಜಯಶ್ರೀ ಅವರ ನಂದವರೀಕ ಬ್ರಾಹ್ಮಣರು ಕೃತಿ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿ, ಈ ಸಮಾಜದಲ್ಲಿ ಹುಟ್ಟಿರುವುದು ನನಗೆ ಹೆಮ್ಮೆಯಾಗಿದೆ ಎಂದರು. ನಂದವರೀಕರು ದೇಶ- ವಿದೇಶಗಳಲ್ಲಿ ನೆಲೆಸಿದ್ದಾರೆ. ಕುಲಕ್ಕಿಂತ ತಮ್ಮ ವೃತ್ತಿಗಳಲ್ಲಿ ಸಂಹಿತೆ, ಶಿಷ್ಟಾಚಾರ ಪಾಲನೆ ಮಾಡುವ ಮೂಲಕ ಕೀರ್ತಿ ಸಂಪಾದಿಸಿದ್ದಾರೆಂದು ಹೇಳಿದರು.
ಸಂಕುಚಿತ, ಸ್ವಾರ್ಥ ಇಲ್ಲದೆ ವಿವಿಧ ಕ್ಷೇತ್ರಗಳಲ್ಲಿ ಗುರುತಿಸಿಕೊಂಡಿರುವ ನಂದವರೀಕರು ಕೆಲವರು ಸವಾಲುಗಳನ್ನು ಎದುರಿಸುತ್ತಿದ್ದಾರೆ. ಈ ಜನರಿಗೆ ಸಹಕಾರ ನೀಡುವ ಮೂಲಕ ಅನಗತ್ಯವಾಗಿ ತೇಜೋವಧೆ ಮಾಡುವವರಿಗೆ ಬುದ್ಧಿ ಹೇಳುವ ಶಕ್ತಿ ಬೆಳೆಸಿಕೊಳ್ಳುವಂತೆ ಸೂಚ್ಯವಾಗಿ ನುಡಿದರು.
ನಮ್ಮ ತಪ್ಪನ್ನು ಬೇರೆಯವರಿಂದ ತಿಳಿದುಕೊಳ್ಳುವ ಪರಿಸ್ಥಿತಿ ತಂದುಕೊಳ್ಳಬಾರದು. ನಮ್ಮ ತಪ್ಪಿಗೆ ನಾವೇ ಹೊಣೆಗಾರರು ಆಗಿರುತ್ತೇವೆಯಾದ್ದರಿಂದ ಬೇರೆಯವರನ್ನು ಹೊಣೆ ಮಾಡುವುದು ತಪ್ಪಾಗುತ್ತದೆ ಎಂದು ಮಾರ್ಮಿಕವಾಗಿ ತಿಳಿಸಿದರು. ನಂದವರೀಕ ಸಮಾಜದಿಂದ ಸಮಾಜಮುಖಿ ಕಾರ್ಯಗಳು ಹೆಚ್ಚಾಗಿ ನಡೆಯಲಿ ಎಂದು ಹೇಳಿದರು. ಲೇಖಕಿ ಕೆ.ಆರ್. ಜಯಶ್ರೀ ಅವರು ಪ್ರತಿಭಾವಂತ ಹಾಗೂ ಕೀರ್ತಿಶೇಷ ನಂದವರೀಕ ಬ್ರಾಹ್ಮಣರನ್ನು ಪತ್ತೆ ಮಾಡಿ ಸಮಾಜದ ಹಿರಿಮೆ ಮತ್ತು ಗರಿಮೆ ಪರಿಚಯಿಸಿದ್ದಾರೆ. ಇದು ಸಾಲದು. ಸಮಾಜದ ಕೀರ್ತಿ ಹೆಚ್ಚಿಸಿರುವ ಇನ್ನಷ್ಟು ಪ್ರತಿಭೆ ಪತ್ತೆ ಮಾಡಿ ಎರಡನೇಯ ಅಧ್ಯಾಯಕ್ಕೆ ಅಣಿಯಾಗಬೇಕೆಂದು ಸಲಹೆ ನೀಡಿದರು.
ಮಾಜಿ ಶಾಸಕ ಕೆ.ಆರ್. ಶ್ರೀನಿವಾಸಯ್ಯ ಉದ್ಘಾಟಿಸಿದರು. ನಂದವರೀಕ ಸಮಾಜದ ಸಂಸ್ಥಾಪಕ ಕಿಟ್ಟಪ್ಪ, ಪ್ರೊ. ವೇಣುಗೋಪಾಲ್ ಹಾಗೂ ಲೇಖಕಿ ಕೆ.ಆರ್. ಜಯಶ್ರೀ ಜಯರಾಮ್ ಇದ್ದರು. ಟಿ.ಆರ್. ಪ್ರಭಾಕರ್ ಸ್ವಾಗತಿಸಿ, ಸಿ.ಎಲ್. ವಾಸುದೇವಮೂರ್ತಿ ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement