ಬಿಜಿಎಂಎಲ್ ಮುಚ್ಚಲು ಮುನಿಯಪ್ಪ ಕಾರಣ
ಕ.ಪ್ರ.ವಾರ್ತೆ ಕೆಜಿಎಫ್ ಸೆ. 22
ಬಿಜಿಎಂಎಲ್ ಕಾರ್ಖಾನೆ ಮುಚ್ಚಲು ಪ್ರಮುಖ ಕಾರಣ ಕೇಂದ್ರ ಸಚಿವ ಕೆ.ಹೆಚ್. ಮುನಿಯಪ್ಪ ಅವರು. ಬಿಜಿಎಂಎಲ್ ಚಿನ್ನದ ಗಣಿಗಳನ್ನು ನಷ್ಟದ ನೆಪವೊಡ್ಡಿ ಮುಚ್ಚಬೇಕು ಎಂಬ ಬಿಐಎಫ್‌ಆರ್ ಸಮಿತಿ ವರದಿಯನ್ನು ಕೇಂದ್ರ ಸರ್ಕಾರಕ್ಕೆ ಸಲ್ಲಿಸಲಾಗಿದ್ದು ಆ ವರದಿಯನ್ನು ಅಂಗೀಕರಿಸಬಾರದು ಎಂದು ಕೋಲಾರ ಜಿಲ್ಲೆಯವರಾದ ಕೇಂದ್ರ ಸಚಿವ ಕೆ.ಹೆಚ್. ಮುನಿಯಪ್ಪ ಆಗ್ರಹಿಸಬೇಕಿತ್ತು. ಆದರೆ ಕೆಜಿಎಫ್ ಕಾರ್ಮಿಕರ ಪರಿಸ್ಥಿತಿಯನ್ನು ಅರಿತಿದ್ದ ಮುನಿಯಪ್ಪ ಅವರು ಕಾರ್ಮಿಕರನ್ನು ಬೀದಿಪಾಲಾಗಲು ಕಾರಣಕರ್ತರಾಗಿದ್ದಾರೆ ಎಂದು ಮಾಜಿ ಶಾಸಕ ಎಸ್. ರಾಜೇಂದ್ರನ್ ಹೇಳಿದರು.
ನಗರದ ಕಿಂಗ್‌ಜಾರ್ಜ್ ಹಾಲ್‌ನಲ್ಲಿ ಆಯೋಜಿಸಲಾಗಿದ್ದ ಬಿಜಿಎಂಎಲ್ ನೌಕರರ, ಮೇಲ್ವಿಚಾರಕರ ಮತ್ತು ಅಧಿಕಾರಿಗಳ ಕೈಗಾರಿಕ ಸಹಕಾರ ಸಂಘದ 2ನೇ ವರ್ಷದ ವಾರ್ಷಿಕೋತ್ಸವ ಹಾಗೂ ಕಾರ್ಮಿಕರ ಸಮ್ಮೇಳನ ಗಣಿ ನೌಕರರ ಕುಟುಂಬ ವರ್ಗದ ಮಕ್ಕಳಿಗೆ ಉಚಿತ ನೋಟ್ ಪುಸ್ತಕ ವಿತರಣಾ ಸಂಮಾರಂಭ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಅದೇ ರೀತಿ ಕಾರ್ಮಿಕರು ಸಮ್ಮಿತಿಸಿದರೆ ಬಿಜಿಎಂಎಲ್ ಕಾರ್ಖಾನೆಯಲ್ಲಿ ನಡೆದ ಚಿನ್ನದ ಅದಿರು ಕಳವು ಮತ್ತು ಕೋಟ್ಯಾಂತರ ಬೆಲೆ ಬಾಳುವ ಆಸ್ತಿ ಲೂಟಿ ಬಗ್ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ನ್ಯಾಯಾಲಯದಲ್ಲಿ ದಾಖಲಿಸಲು ತಾವು ಸಿದ್ಧ ಎಂದು ತಿಳಿಸಿದರು.
ಮಾಜಿ ಶಾಸಕ ಎಂ. ಭಕ್ತವಾತ್ಸಲಂ ಮಾತನಾಡಿ ಕೆಜಿಎಫ್‌ನ ಬಿಜಿಎಂಎಲ್ ಗಣಿಯನ್ನು ಪುನರಾರಂಭಿಸುವ ವಿಷಯಕ್ಕೆ ಸಂಬಂಧಿಸಿ ಕ್ಷೇತ್ರದ ಹಾಲಿ ಶಾಸಕರು ಮತ್ತು ಕೇಂದ್ರ ಸಚಿವ ಕೆ.ಹೆಚ್. ಮುನಿಯಪ್ಪ ಅವರು ಅಗತ್ಯ ಪ್ರಾಮಾಣಿಕ ಪ್ರಯತ್ನವನ್ನು ಮಾಡಬೇಕಿದೆ ಹೊರತು ಮಾಜಿ ಶಾಸಕರಾದ ತಾವುಗಳಿಂದ ಏನನ್ನು ಮಾಡಲು ಸಾಧ್ಯವಿಲ್ಲ ಎಂದರು. ಕೆಜಿಎಫ್ ಕ್ಷೇತ್ರದಲ್ಲಿ ಸಾರ್ವಜನಿಕರಿಗೆ ಹಲವಾರು ಸಮಸ್ಯೆಗಳಿದ್ದು ಇಂತಹ ಪರಿಸ್ಥಿತಿಯಲ್ಲಿ ಆರೋಗ್ಯ ಸಚಿವರು ಕೆಜಿಎಫ್ ಆಸ್ಪತ್ರೆಗೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಗೈರು ಹಾಜರಾಗಿ ಕ್ಷೇತ್ರದ ಲಕ್ಷಾಂತರ ಜನರಿಗೆ ಅವಮಾನ ಉಂಟುಮಾಡಿದ್ದಾರೆ ಎಂಬುದು ಜನರು ಅರಿಯಬೇಕು ಎಂದರು. ತಾವು ಬಿಜಿಎಂಎಲ್‌ಗೆ ಕಾರ್ಖಾನೆಯ ಅಳಿವು-ಉಳಿವುಗಾಗಿ ಕಾರ್ಮಿಕರೊಂದಿಗೆ ಕೈಜೋಡಿಸಿ ಕೊನೆತನಕ ಹೋರಾಟ ನಡೆಸುವುದಾಗಿ ತಿಳಿಸಿದರು.
ಅದೇ ರೀತಿ ಬಿಜಿಎಂಎಲ್ ಕಾರ್ಮಿಕ ಒಕ್ಕೂಟ ಸಂಘದ ಸಂಚಾಲಕ ಜಿ. ಜಯಕುಮಾರ್ ಮಾತನಾಡಿ ಕೇಂದ್ರ ಸರ್ಕಾರ ಚಿನ್ನದ ಗಣಿಗಳ ಆಸ್ತಿಯನ್ನು ಮಾರಾಟ ಮಾಡಲು ಟೆಂಡರ್ ಕರೆಯಲು ಹೊರಟಿದೆ. ಆದರೆ 2006ರ ಕ್ಯಾಬಿನೆಟ್ ತೀರ್ಮಾನದ ಪ್ರಕಾರ ಕಾರ್ಮಿಕರಿಗೆ ಕೇಂದ್ರ ಸರ್ಕಾರ ನೀಡಬೇಕಾದ 52 ಕೋಟಿ ಮತ್ತು 20 ಕೋಟಿ ಗ್ರಾಚ್ಯುಟಿ ಹಣವನ್ನು ನೀಡುವ ಕುರಿತು ಇತ್ಯರ್ಥ ಮಾಡಿದ ಬಳಿಕ ಟೆಂಡರ್ ಕರೆಯುವುದು ಉತ್ತಮ ಎಂದು ತಿಳಿಸಿದು.
ಎಡಿಎಂಎಕೆ ಮುಖಂಡ ಅನ್ಬು, ವಳ್ಳಲ್ ಮುನಿಸ್ವಾಮಿ, ಕಾರ್ಮಿಕ ಮುಖಂಡ ಜಯಪಾಂಡಿಯನ್, ಶಿವಭೂಷನ್, ಗೋಪಿನಾಥ್ ಸೇರಿದಂತೆ ಕಾರ್ಮಿಕ ಮುಖಂಡರು ಹಾಗೂ ಕುಟುಂಬ ವರ್ಗದವರು ಹಾಜರಿದ್ದರು.