ಮಹಿಳಾ ಕಾಲೇಜಿನಲ್ಲಿ ಕಾಮರ್ಸ್ ಫೋರಂ ಅಸ್ತಿತ್ವಕ್ಕೆ
ಕೋಲಾರ: ವಾಣಿಜ್ಯ ವಿದ್ಯಾರ್ಥಿಗಳಿಗೆ ಉತ್ತಮ ಭವಿಷ್ಯ ಹಾಗೂ ಉದ್ಯೋಗ ಅವಕಾಶಗಳು ಇರುವುದರಿಂದ ಹೆಚ್ಚಿನ ಆಸಕ್ತಿ ವಹಿಸಿ ಗುರಿ ಸಾಧಿಸಿ ಎಂದು ವಾಣಿಜ್ಯ ಮತ್ತು ತೆರಿಗೆ ಕ್ಷೇತ್ರದ ಪರಿಣಿತರಾದ ಬಿ.ವಿ. ರುದ್ರಮೂರ್ತಿ ತಿಳಿಸಿದರು.
ನಗರದ ಟಿ. ಚನ್ನಯ್ಯ ರಂಗಮಂದಿರಲ್ಲಿ ಶನಿವಾರ ಹಮ್ಮಿಕೊಂಡಿದ್ದ ಸರ್ಕಾರಿ ಮಹಿಳಾ ಕಾಲೇಜಿನಲ್ಲಿ ಅಸ್ತಿತ್ವಕ್ಕೆ ಬಂದಿರುವ ಕಾಮರ್ಸ್ ಫೋರಂನ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿ, ಇಂಡಿಯನ್ ಸ್ಟಾಕ್ ಮಾರ್ಕೆಟ್ ಎಂಬ ವಿಷಯದ ಬಗ್ಗೆ ಮಾತನಾಡಿ, ವಿಶ್ವದ ಮತ್ತು ರಾಷ್ಟ್ರದ ಯಶಸ್ವಿ ಉದ್ಯಮಿಗಳ ಉದಾಹರಣೆ ನೀಡಿ, ಇದೇ ರೀತಿ ಯಶಸ್ಸು ಗಳಿಸಲು ವಿದ್ಯಾರ್ಥಿಗಳು ಮುಂದಾಗಬೇಕೆಂದರು.
ಬೆಂಗಳೂರಿನ ಮಲ್ಲೇಶ್ವರಂನ ಸರ್ಕಾರಿ ಕಾಲೇಜಿನ ವಾಣಿಜ್ಯ ವಿಭಾಗದ ಮುಖ್ಯಸ್ಥ ಪ್ರೊ. ಆಂಜಿನಪ್ಪ ಕಾಮರ್ಸ್ ಫೋರಂ ಉದ್ಘಾಟಿಸಿ ಮಾತನಾಡಿ, ಕಾಮರ್ಸ್ ವಿದ್ಯಾರ್ಥಿಗಳಿಗೆ ಬೇಡಿಕೆ ಹೆಚ್ಚುತ್ತಿದೆ. ಗುಣಮಟ್ಟದ ಶಿಕ್ಷಣ ಪಡೆಯುವ ಮೂಲಕ ವಾಣಿಜ್ಯ ಕ್ಷೇತ್ರದಲ್ಲಿ ದೊಡ್ಡ ಸಾಧನೆ ಮಾಡಬಹುದಾಗಿದೆ ಎಂದರು.
ಸರ್ಕಾರಿ ಮಹಿಳಾ ಕಾಲೇಜಿನ ಪ್ರಾಂಶುಪಾಲ ಎಸ್.ವಿ. ನಂದವಾಡಗಿ ಅಧ್ಯಕ್ಷತೆ ವಹಿಸಿದ್ದರು. ಕಾಲೇಜಿನ ವಾಣಿಜ್ಯ ಮತ್ತು ನಿರ್ವಹಣಾ ವಿಭಾಗದ ಮುಖ್ಯಸ್ಥೆ ಡಾ. ಕೆ.ಎಸ್. ಶೈಲಜಾ ಪ್ರಸ್ತಾವಿಕವಾಗಿ ಮಾತನಾಡಿ ಕಾಮರ್ಸ್ ಫೋರಂ ಉದ್ದೇಶವನ್ನು ತಿಳಿಸಿದರು.
ಇತ್ತೀಚೆಗೆ ಬೆಂಗಳೂರಿಗೆ ವರ್ಗಾವಣೆಗೊಂಡಿರುವ ಪ್ರೊ. ಆಂಜಿನಪ್ಪ ಅವರನ್ನು ವಾಣಿಜ್ಯ ಮತ್ತು ನಿರ್ವಹಣಾ ವಿಭಾಗದಿಂದ ಸನ್ಮಾನಿಸಲಾಯಿತು. ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ಎನ್.ಎಲ್. ವಿಜಯ ಸ್ವಾಗತಿಸಿ, ಸುಮತಿ ವಂದಿಸಿದರು.