ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಲೋಕಸಭಾ ಚುನಾವಣೆಗೆ ಮುನಿಯಪ್ಪ ಸಿದ್ಧತೆ

Srinivasa Murthy VN
Updated On : 23 Sept 2013, 1:24 am

-ಪಾ.ಶ್ರೀ.ಅನಂತರಾಮ್
ಕ.ಪ್ರ.ವಾರ್ತೆ ಕೋಲಾರ ಸೆ. 22
ಸತತ ಆರು ಬಾರಿ ಕೋಲಾರ ಮೀಸಲು ಲೋಕಸಭಾ ಕ್ಷೇತ್ರದಿಂದ ಗೆದ್ದು ಸೋಲಿಲ್ಲದ ಸರದಾರ ಎಂದು ಬಿರುದು ಹೊತ್ತಿರುವ ಕೇಂದ್ರ ಸರ್ಕಾರದಲ್ಲಿ ಹಾಲಿ ಸಣ್ಣ, ಅತಿ ಸಣ್ಣ ಹಾಗೂ ಮಧ್ಯಮ ಕೈಗಾರಿಕೆಗಳ ರಾಜ್ಯ ಸಚಿವರಾಗಿರುವ ಕೆ.ಎಚ್.ಮುನಿಯಪ್ಪ 2014ರಲ್ಲಿ ನಡೆಯಲಿರುವ ಚುನಾವಣೆಯಲ್ಲೂ ಜಯಭೇರಿ ಭಾರಿಸಲು ಸಿದ್ಧತೆ ನಡೆಸಿದ್ದಾರೆ.
ಕಡು ವೈರಿಗಳಿಗಿಂತ ಪಕ್ಷದಲ್ಲಿನ ಒಳ ಶತ್ರುಗಳಿಂದ ಹಾನಿ ಸಂಭವಿಸಬಹುದೆಂದು ಅರಿತಿರುವ ಮುನಿಯಪ್ಪ ತಮ್ಮ ವಿರೋಧಿಗಳನ್ನು ಬಗ್ಗು ಬಡಿಯಲು ರಣತಂತ್ರ ರೂಪಿಸುತ್ತಿದ್ದಾರೆ.
ಎಂಟು ವಿಧಾನಸಭಾ ಕ್ಷೇತ್ರಗಳ ಪೈಕಿ ಕೆಜಿಎಫ್‌ನ ಕೆಲ ಮುಖಂಡರು ಮಾತ್ರ ವೈಯಕ್ತಿಕ ರಾಜಕೀಯ ಕಾರಣಗಳಿಂದ ಮುನಿಯಪ್ಪ ವಿರುದ್ಧ ತಿರುಗಿ ಬಿದ್ದಿದ್ದಾರೆ. ವಿಧಾನಸಭಾ ಚುನಾವಣೆಯಲ್ಲಿ ಸೋತು ಸುಣ್ಣವಾಗಿರುವ ರಾಜ್ಯ ಎನ್‌ಎಸ್‌ಯುಐ ಮಾಜಿ ಅಧ್ಯಕ್ಷ ಶ್ರೀನಿವಾಸ್, ಎನ್‌ಜಿಎಫ್ ಮಾಜಿ ಅಧ್ಯಕ್ಷ ಶಂಕರ್ ಅವರು ಮುನಿಯಪ್ಪ ವಿರುದ್ಧ ಬಹಿರಂಗವಾಗಿ ತೊಡೆ ತಟ್ಟಿದ್ದಾರೆ. ಆದರೆ ಮುನಿಯಪ್ಪ ಕೆಜಿಎಫ್‌ನಲ್ಲಿ ಪರ್ಯಾಯ ಮಾರ್ಗ ಹುಡುಕುವ ಮೂಲಕ ಡ್ಯಾಮೇಜ್ ಕಂಟ್ರೋಲ್‌ಗೆ ಲೆಕ್ಕಾಚಾರ ಹಾಕುತ್ತಿದ್ದಾರೆ.
ಕೆಜಿಎಫ್‌ನ ಕಾಂಗ್ರೆಸ್ ಮುಖಂಡ ಶಂಕರ್ ತಾವು ಸಹ ಟಿಕೆಟ್ ಆಕಾಂಕ್ಷಿ ಎಂದು ಹೇಳಿಕೊಂಡಿದ್ದಾರೆ. ಮುನಿಯಪ್ಪನವರಿಗೆ ಟಿಕೆಟ್ ತಪ್ಪಿಸಲು ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ಬಳಿ ಲಾಬಿ ನಡೆಸಲು ಯತ್ನಿಸುತ್ತಿರುವ ಶ್ರೀನಿವಾಸ್ ಮೂಲಕ ಟಿಕೆಟ್ ಗಿಟ್ಟಿಸಲು ಶಂಕರ್ ಹರಸಾಹಸ ಮಾಡುತ್ತಿದ್ದಾರೆ. ಇದನ್ನು ಅರಿತಿರುವ ಮುನಿಯಪ್ಪ ಹೈಕಮಾಂಡ್‌ಗೆ ಕ್ಷೇತ್ರದ ಸ್ಥಿತಿಗತಿಗಳನ್ನು ವಿವರಿಸಿ ಟಿಕೆಟ್ ಖಾತ್ರಿ ಪಡಿಸಿಕೊಳ್ಳುವುದಕ್ಕೆ ತಮ್ಮದೇ ಪ್ರಭಾವ ಬಳಸುತ್ತಿದ್ದಾರೆ.
ಈಗಿನ ಪರಿಸ್ಥಿತಿ ಗಮನಿಸಿದರೆ ಮುನಿಯಪ್ಪಗೆ ಟಿಕೆಟ್ ಸಿಗುವುದು ಬಹುತೇಕ ಖಚಿತವೆನಿಸುತ್ತಿದೆ. ಇದನ್ನು ಅರಿತೇ ಮುನಿಯಪ್ಪನವರು ಎಲ್ಲ 8 ವಿಧಾನಸಭಾ ಕ್ಷೇತ್ರಗಳಲ್ಲಿ ಪ್ರವಾಸ ಆರಂಭಿಸಿ ಚುನಾವಣೆಗೆ ಸಿದ್ಧತೆ ನಡೆಸುತ್ತಿದ್ದಾರೆ. ಕೋಲಾರ ಲೋಕಸಭಾ ಕ್ಷೇತ್ರಕ್ಕೆ ಸೇರಿದ ಶ್ರೀನಿವಾಸಪುರ, ಬಂಗಾರಪೇಟೆಯಲ್ಲಿ ಮಾತ್ರ ಕಾಂಗ್ರೆಸ್ ಶಾಸಕರಿದ್ದಾರೆ. ಮುಳಬಾಗಿಲು ಪಕ್ಷೇತರ ಶಾಸಕ ಕೊತ್ತೂರು ಮಂಜುನಾಥ್ ಅವರನ್ನು ಪಕ್ಷದ ಕೆಲ ಮುಖಂಡರ ವಿರೋಧದ ನಡುವೆಯೂ ಸದಸ್ಯರನ್ನಾಗಿ ಸೇರಿಸಿಕೊಳ್ಳಲಾಗಿದೆ. ಚಿಂತಾಮಣಿಯಲ್ಲಿ ಮಾಜಿ ಶಾಸಕ ಡಾ. ಸುಧಾಕರ್ ಅವರನ್ನು ಸೋಲಿಸುವ ಮೂಲಕ ಅಲ್ಲಿ ತಮಗೆ ಆಗಬಹುದಾಗಿದ್ದ ನಷ್ಟ ತಪ್ಪಿಸುವಲ್ಲಿ ಮುನಿಯಪ್ಪ ಒಂದು ರೀತಿಯಲ್ಲಿ ಯಶಸ್ಸು ಕಂಡಿದ್ದಾರಾದರೂ ಲೋಕಸಭಾ ಚುನಾವಣೆಯಲ್ಲಿ ಹೇಗೆ ಸವಾಲು ಎದುರಿಸುತ್ತಾರೆಂಬುದು ಕುತೂಹಲ ಮೂಡಿಸಿದೆ.
ಜೆಡಿಎಸ್ ತೊರೆದು ಕಾಂಗ್ರೆಸ್ ಸೇರಿರುವ ವಾಣಿ ಕೃಷ್ಣಾರೆಡ್ಡಿ ಹಾಗೂ ಅಲ್ಲಿನ ಜೆಡಿಎಸ್ ಮುಖಂಡರೊಂದಿಗೆ ಒಳ ಒಪ್ಪಂದ ಮಾಡಿಕೊಂಡು ಸವಾಲು ಎದುರಿಸಲು ಮುನಿಯಪ್ಪ ಪ್ರಯತ್ನಿಸುತ್ತಿದ್ದಾರೆ.
ಕೋಲಾರ ಶಾಸಕ ವರ್ತೂರ್ ಪ್ರಕಾಶ್ ಸಹ ಮುನಿಯಪ್ಪ ವಿರುದ್ಧ ಮುನಿಸಿಕೊಂಡಿರುವುದರಿಂದ ಸಮಸ್ಯೆ ನಿವಾರಣೆಗಾಗಿ ರಹಸ್ಯ ಕಾರ್ಯಾಚರಣೆ ನಡೆಸುತ್ತಿರುವ ಕೇಂದ್ರ ಸಚಿವರು, ಲೋಕಸಭಾ ಚುನಾವಣೆ ವೇಳೆಗೆ  ಕೋಲಾರ ಶಾಸಕರೊಂದಿಗೆ ರಾಜಿ ಆಗುವ ಸಾಧ್ಯತೆಗಳಿವೆ ಎಂಬ ಗುಸು ಗುಸು ಕೇಳಿ ಬಂದಿದೆ.
ಮಾಲೂರು ಕ್ಷೇತ್ರದಲ್ಲೂ ತಮ್ಮ ವಿರೋಧಿಗಳನ್ನು ಬುಟ್ಟಿಗೆ ಹಾಕಿಕೊಳ್ಳುವುದಕ್ಕೆ ಪ್ರಯತ್ನಿಸುತ್ತಿದ್ದಾರೆ. ಅಗತ್ಯಬಿದ್ದಲ್ಲಿ ಅಲ್ಲಿನ ಮಾಜಿ ಶಾಸಕ ಎ.ನಾಗರಾಜ್ ಜೊತೆ ಮತ್ತೆ ರಾಜಿ ಮಾಡಿಕೊಂಡು ಮತಗಳ ಸಂಖ್ಯೆ ಹೆಚ್ಚಿಸಿಕೊಳ್ಳುವ ಸಾಧ್ಯತೆ ತಳ್ಳಿ ಹಾಕುವಂತಿಲ್ಲ. ಹಾಗೆಯೇ ಮಾಜಿ ಶಾಸಕ ಕೃಷ್ಣಯ್ಯಶೆಟ್ಟಿ ಅವರನ್ನು ಸಹ ಚುನಾವಣೆ ವೇಳೆಗೆ ಪಕ್ಷಕ್ಕೆ ಅಧಿಕೃತವಾಗಿ ಸೇರ್ಪಡೆ ಮಾಡಿಕೊಂಡು ಚುನಾವಣೆ ಎದುರಿಸಲು ಮುನಿಯಪ್ಪ ಕಸರತ್ತು ನಡೆಸುತ್ತಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement