ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಅಭಿವೃದ್ಧಿಯಿಂದ ದೂರವೇ ಉಳಿದ ಬಡಾವಣೆ

Srinivasa Murthy VN
Updated On : 24 Sept 2013, 12:47 pm

-ಕೆ.ರಮೇಶ್
ಬಂಗಾರಪೇಟೆ: ಪಟ್ಟಣದ ಅಭಿವೃದ್ಧಿಗೆ ಸರ್ಕಾರ ಕೋಟಿಗಟ್ಟಲೆ ಅನುದಾನ ಕಲ್ಪಿಸಿದ್ದರೂ ಪಟ್ಟಣ ಅಭಿವೃದ್ಧಿಯಿಂದ ದೂರವೇ ಉಳಿಯುವಂತಾಗಿದೆ ಎಂಬುದಕ್ಕೆ ಕುಪ್ಪಸ್ವಾಮಿ ಮೊದಲಿಯಾರ್, ಗಂಗಮ್ಮನಪಾಳ್ಯ, ಕೆರೆಕೋಡಿ, ಅಮರಾವತಿನಗರಗಳೇ ಜೀವಂತ ಸಾಕ್ಷಿ.
ಇಲ್ಲಿನ ಗಂಗಮ್ಮನಪಾಳ್ಯ ಬಡಾವಣೆಯಲ್ಲಿ ಬಹುತೇಕ ಮಂದಿ ದಲಿತರು ಹಾಗೂ ಕೂಲಿ ಕಾರ್ಮಿಕರೇ ಹೆಚ್ಚಾಗಿದ್ದರೂ ಅಭಿವೃದ್ಧಿಯಲ್ಲಿ ಅಷ್ಟಕಷ್ಟೇ. ಇಲ್ಲಿನ ನಿವಾಸಿಗರು ಪ್ರತಿಭಟನೆ ಮಾಡಿ ಅನುಕೂಲ ದಕ್ಕಿಸಿಕೊಂಡರೂ ವಾರ್ಡಿನಲ್ಲಿ ನೋಡಿದರೆ ಇದು ಪಟ್ಟಣದ ಪ್ರದೇಶದಲ್ಲಿರುವ ವಾರ್ಡಾ ಎಂಬ ಸಂಶಯ ಮೂಡುವುದು. ಇಲ್ಲಿನ ಜನರು ಇಂದಿಗೂ ತಮ್ಮ ಮನೆಗಳಲ್ಲಿ ಶೌಚಾಲಯಗಳನ್ನು ನಿರ್ಮಿಸಿಕೊಂಡಿಲ್ಲ. ಬಯಲೇ ಇವರಿಗೆ ಶೌಚಾಲಯ. ಪುರಸಭೆಯಿಂದ ಸಾರ್ವಜನಿಕ ಶೌಚಾಲಯ ನಿರ್ಮಾಣ ಮಾಡಿದ್ದರೂ ಅದು ಅವ್ಯವಸ್ಥೆಯಿಂದ ಕೂಡಿದೆ.
ಮಲತಾಯಿ ಧೋರಣೆ: ಕೆರೆಕೋಡಿ ಬಡಾವಣೆಯ ಜನರು ಸಮಸ್ಯೆಗಳನ್ನು ಎದುರಿಸುವಂತಾಗಿದೆ. ಹೆಸರಿಗೆ ಪುರಸಭೆ ವ್ಯಾಪ್ತಿಗೆ ಸೇರಿಸಲಾಗಿದೆ ಅಷ್ಟೇ. ಸೌಲಭ್ಯಗಳಲ್ಲಿ ಮಲತಾಯಿ ಧೋರಣೆ ಅನುಸರಿಸಲಾಗುತ್ತಿದೆ ಎಂಬ ಆರೋಪವಿದೆ. ಈ ಹಿಂದೆ ಬಡಾವಣೆಯನ್ನು ಕಾರಹಳ್ಳಿ ಪಂಚಾಯಿತಿಯಲ್ಲಿತ್ತು. ಜನಸಂಖ್ಯೆ ಆಧಾರದ ಮೇಲೆ ಪುರಸಭೆಗೆ ಸೇರಿಸಲಾಗಿದೆಯಾದರೂ ಇಂದಿಗೂ ಬಡಾವಣೆ ಎಳ್ಳಷ್ಟೂ ಪ್ರಗತಿ ಕಂಡಿಲ್ಲ. ಇಲ್ಲಿಯೂ ಕೂಲಿ ಕಾರ್ಮಿಕರೇ ಹೆಚ್ಚಾಗಿದ್ದಾರೆ. ಸುಸಜ್ಜಿತವಾದ ಚರಂಡಿಗಳಲ್ಲಿ ಕಿರಿದಾದ ರಸ್ತೆಗಳು, ರಸ್ತೆಗಳ ಮೇಲೆಯೇ ಹರಿಯುವ ಕೊಳಚೆ ನೀರು ಸ್ವಚ್ಛತೆ ಎಂಬುದು ಇಲ್ಲವೇ ಇಲ್ಲ. ಇದರಿಂದ ಈ ವ್ಯಾಪ್ತಿಯಲ್ಲಿ ಹೆಚ್ಚಾಗಿ ಡೆಂಘೀ ಜ್ವರದಿಂದ ಇಬ್ಬರು ಮಕ್ಕಳು ಮೃತಪಟ್ಟಿದ್ದರೂ ಪುರಸಭೆ ಮಾತ್ರ ಎಚ್ಚೆತ್ತುಕೊಂಡಿಲ್ಲದಿರುವುದು ಮಾತ್ರ ವಿಪರ್ಯಾಸವೇ ಸರಿ.
ಅಸಮಾಧಾನ: ಇನ್ನು ಕುಪ್ಪಸ್ವಾಮಿ ಮೊದಲಿಯಾರ್, ಅಮರಾವತಿ ಬಡಾವಣೆಯಲ್ಲಿ ಸರ್ಕಾರಿ ನೌಕರರು ವಾಸವಿರುವ ಸ್ಥಳವಾದರೂ ಇಲ್ಲಿಯೂ ಅಭಿವೃದ್ಧಿ ಸಮಾಧಾನಕರವಾಗಿಲ್ಲ. ಈ ಹಿಂದೆ ಸದಸ್ಯರಾಗಿದ್ದ ಚಂದ್ರಪ್ಪ ಕುಪ್ಪಸ್ವಾಮಿ ಮೊದಲಿಯಾರ್ ಬಡಾವಣೆಯಲ್ಲಿ ಸಾಕಷ್ಟು ಕೆಲಸ ಕೈಗೊಂಡು ಹೊಸ ರೂಪ ನೀಡಿದ್ದರೂ ಇಲ್ಲಿಯೂ ಮಳೆ ಬಂದರೆ ರಸ್ತೆಗಳು ಕೆಸರುಗದ್ದೆಗಳಾಗಿ ಮಾರ್ಪಟ್ಟು ಜನರು ಓಡಾಡಲಿಕ್ಕೆ ತೊಂದರೆಯಾಗಿದೆ. ಅಮರಾವತಿ ಬಡಾಣೆಯಲ್ಲಂತೂ ರಸ್ತೆಗಳು ಮತ್ತು ಚರಂಡಿ ಸ್ಥಿತಿ ಹೇಳಲೇಬೇಕಿಲ್ಲ. ಇಲ್ಲಿ ರಾಜಕಾಲುವೆ ಇವೆ. ಇದನ್ನು ಕೆಲವರು ಒತ್ತುವರಿ ಮಾಡಿಕೊಂಡಿದ್ದರೂ ಪುರಸಭೆ ತೆರವು ಕಾರ್ಯಕ್ಕೆ ಕೈಹಾಕಿಲ್ಲ. ರಾಜಕಾಲುವೆಯಲ್ಲಿ ಮುಳ್ಳುಗಿಡಗಳು ಬೆಳೆದು ಸೊಳ್ಳೆಗಳು ಉತ್ಪತ್ತಿಯಾಗಿ ಜನರನ್ನು ಬಾಧಿಸುತ್ತಿದೆ.
ಆಗದ ಅಭಿವೃದ್ಧಿ: ಹಿಂದಿನ ಬಿಜೆಪಿ ಸರ್ಕಾರ ಪಟ್ಟಣ ಅಭಿವೃದ್ಧಿಗೆ ಮಾಜಿ ಶಾಸಕ ಎಂ. ನಾರಾಯಣಸ್ವಾಮಿ ಒತ್ತಡಕ್ಕೆ ಮಣಿದು ವಿಶೇಷ ಒತ್ತು ಕೊಟ್ಟಿತ್ತು. ಆದರೆ, ಯಾವುದೇ ಬೆಳವಣಿಗೆಯಾಗಿಲ್ಲ. ಈಗ ಹಿಂದೆ ಪುರಸಭೆ ಅಧ್ಯಕ್ಷರಾಗಿದ್ದ ಎಸ್.ಎನ್. ನಾರಾಯಣಸ್ವಾಮಿ ಅವರೇ ಶಾಸಕರಾಗಿದ್ದಾರೆ. ಇವರ ಅವಧಿಯಲ್ಲಾದರೂ ನಿರ್ಲಕ್ಷ್ಯಕ್ಕೆ ಒಳಗಾಗಿರುವ ಬಡಾವಣೆಗಳು ಮೂಲ ಸೌಲಭ್ಯಗಳಿಂದ ಕಂಗೊಳಿಸುವುದೇ ಎಂದು ನಾಗರಿಕರು ಎದುರು ನೋಡುತ್ತಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement