ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಅರ್ಹ ಫಲಾನುಭವಿಗಳು ಯೋಜನೆ ಸೌಲಭ್ಯ ಪಡೆದುಕೊಳ್ಳಲಿ: ಮುನಿಯಪ್ಪ

Srinivasa Murthy VN
Updated On : 24 Sept 2013, 12:47 pm

ಕೆಜಿಎಫ್: ವೃದ್ಧರಿಗಾಗಿ ಇಂದಿರಾಗಾಂಧಿ ರಾಷ್ಟ್ರೀಯ ವೃದ್ಧಾಪ್ಯ ವೇತನ ಹಾಗೂ ನಿರ್ಗತಿಕ ವಿಧವಾ ವೇತನಗಳ ಸೌಲಭ್ಯಗಳನ್ನು ಅರ್ಹ ಫಲಾನುಭವಿಗಳು ಪಡೆದುಕೊಳ್ಳಬೇಕು ಎಂದು ಕೇಂದ್ರ ಸಚಿವ ಕೆ.ಹೆಚ್. ಮುನಿಯಪ್ಪ ಹೇಳಿದರು.
ಕೆಜಿಎಫ್ ಕ್ಷೇತ್ರದ ಬೇತಮಂಗಲ ಗ್ರಾಮದ ಸರ್ಕಾರಿ ಶಾಲೆಯಲ್ಲಿ ಆಯೋಜಿಸಲಾಗಿದ್ದ ಪೆನ್ಷನ್ ಅದಾಲತ್ ಯೋಜನೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಅದೇ ರೀತಿ ಬಂಗಾರಪೇಟೆ ತಾಲೂಕು ಕಂದಾಯ ಇಲಾಖೆ ವತಿಯಿಂದ ರಾಜ್ಯ ಸರ್ಕಾರದ ವಿವಿಧ ಸಾಮಾಜಿಕ ಭದ್ರತಾ ಯೋಜನೆಗಳಾದ ಸಂಧ್ಯಾ ಸುರಕ್ಷಾ ಯೋಜನೆ, ನಿರ್ಗತಿಕ ವಿಧವಾ ವೇತನ, ಅಂಗವಿಕಲ ವೇತನ, ಇಂದಿರಾಗಾಂಧಿ ರಾಷ್ಟ್ರೀಯ ವೃದ್ಧಾಪ್ಯ ವೇತನಗಳಿಗೆ ಸಮಾಜದ ದುರ್ಬಲ ವರ್ಗಗಳಾದ ಬಡತನ ರೇಖೆಗಿಂತ ಕೆಳಗಿರುವ ಅಸಹಾಯಕ ವೃದ್ಧರು, ನಿರ್ಗತಿರ ವಿಧವೆಯರು ಮತ್ತು ಶೇ.40ಕ್ಕಿಂತ ಹೆಚ್ಚು ಹಾಗೂ ಶೇ.75ಕ್ಕಿಂತ ಹೆಚ್ಚಿನ ಅಂಗವಿಕಲತೆ ಇರುವ ಅಂಗವಿಕಲರಿಗೆ 1000 ಮಾಸಾಶನ ಹೆಚ್ಚಿಸಲಾಗಿದೆ ಎಂದು ತಿಳಿಸಿದರು. ಶಾಸಕಿ ವೈ. ರಾಮಕ್ಕ ಮಾತನಾಡಿ ಸಂಬಂಧಪಟ್ಟ ಗ್ರಾ.ಪಂ. ವ್ಯಾಪ್ತಿಯಲ್ಲಿ ಇಂತಹ ಸೌಲಭ್ಯ ಒದಗಿಸುತ್ತಿರುವುದು ಸಂತಸದ ವಿಷಯವಾಗಿದೆ. ಆದರೆ ಈ ಸೌಲಭ್ಯವನ್ನು ಪಡೆದುಕೊಳ್ಳಲು ಅರ್ಜಿದಾರರು ತಮ್ಮ ಅರ್ಜಿಗಳನ್ನು ಸಲ್ಲಿಸುತ್ತಿರುವುದು ಮೂಲೆಗುಂಪಾಗದಂತೆ ನೋಡಿಕೊಳ್ಳಲು ಸಂಬಂಧಪಟ್ಟ ಅಧಿಕಾರಿಗಳು ಎಚ್ಚರವಹಿಸಬೇಕಿದೆ ಎಂದರು.
ಬೇತಮಂಗಲ ಮತ್ತು ಕ್ಯಾಸಂಬಳ್ಳ ಹೋಬಳಿಯ ಗ್ರಾಮಗಳ ನೂರಾರು ಫಲಾನುಭವಿಗಳಿಗೆ ಹಕ್ಕು ಪತ್ರಗಳನ್ನು ಹಂಚಿ ಅರ್ಹ ಫಲಾನುಭವಿಗಳಿಗೆ ಅರ್ಜಿಗಳನ್ನು ವಿತರಿಸಿದರು.  ಬಂಗಾರಪೇಟೆ ಶಾಸಕ ನಾರಾಯಣಸ್ವಾಮಿ, ಜಿ.ಪಂ. ಸದಸ್ಯರಾದ ಆ.ಮು. ಲಕ್ಷ್ಮೀನಾರಾಯಣ, ನಾರಾಯಣರೆಡ್ಡಿ, ರಾಜ್ಯ ಮಹಿಳಾ ಕಾಂಗ್ರೆಸ್ ಉಪಾಧ್ಯಕ್ಷೆ ರೂಪಾ ಶಶಿಧರ್, ಮಾಜಿ ಶಾಸಕ ವೈ. ಸಂಪಂಗಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಾಧಾಕೃಷ್ಣ, ಬೇತಮಂಗಲ ಗ್ರಾಪಂ ಅಧ್ಯಕ್ಷರು ಸೇರಿದಂತೆ ಮತ್ತಿತರರು ಹಾಜರಿದ್ದರು.

'ಯುವಶಕ್ತಿ ದೇಶದ ದೊಡ್ಡ ಸಂಪತ್ತು'
ಕನ್ನಡಪ್ರಭ ವಾರ್ತೆ ಕೋಲಾರ ಸೆ.23
ಯುವಶಕ್ತಿ ನಮ್ಮ ದೇಶದ ದೊಡ್ಡ ಆಸ್ತಿ. ಸ್ವಾಮಿ ವಿವೇಕಾನಂದರ ವಿಚಾರಧಾರೆಗಳನ್ನು ಅರಿತು ಭವ್ಯ ಭಾರತ ನಿರ್ಮಾಣದ ಕನಸು ಸಾಕಾರಗೊಳಿಸಲು ಯುವಕರು ದೃಢಸಂಕಲ್ಪ ಮಾಡಬೇಕೆಂದು ಎಫ್‌ಕೆಸಿಸಿ ಮತ್ತು ಕೆಎಎಸ್‌ಐಎ ಮಾಜಿ ಅಧ್ಯಕ್ಷ ಪಿಲಿಪ್ ಲೂಯಿಸ್ ತಿಳಿಸಿದರು.
ನಗರದ ಟಿ.ಚನ್ನಯ್ಯ ರಂಗಮಂದಿರದಲ್ಲಿ ಭಾನುವಾರ ಸ್ವಾಮಿ ವಿವೇಕಾನಂದರ 150ನೇ ಜನ್ಮವರ್ಷಾಚರಣೆ ಸಮಿತಿಯಿಂದ ಹಮ್ಮಿಕೊಂಡಿದ್ದ ವಿವೇಕಾನಂದರ ವಿಚಾರವಾಣಿಯ ವಿಚಾರಗೋಷ್ಠಿ ಉದ್ಘಾಟಿಸಿ ಮಾತನಾಡಿದರು.
ಕಿರಿಯ ವಯಸ್ಸಿನಲ್ಲೇ ವಿವೇಕಾನಂದರು ಆಗಾಧವಾದ ಜ್ಞಾನ ಸಂಪತ್ತು ಹಾಗೂ ವಿಚಾರಧಾರೆ ಹೊಂದಿದ್ದರು. ಭಾರತ ಭವ್ಯ ರಾಷ್ಟ್ರವಾಗಬೇಕೆಂಬ ಆಸೆ ಇಟ್ಟುಕೊಂಡಿದ್ದರು. ಇನ್ನು 20- 30 ವರ್ಷಗಳ ಕಾಲ ಅವರು ಬದುಕಿದ್ದಲ್ಲಿ ದೇಶದ ಚಿತ್ರಣ ಬದಲಾಗುತ್ತಿತ್ತು ಎಂದರು.
ವಿವೇಕಾನಂದರು ಇನ್ನಷ್ಟು ಕಾಲ ಬದುಕಿದ್ದರೆ ಭಾರತಾಂಬೆಯ ಸಿಂಗಾರ ಹೆಚ್ಚುತ್ತಿತ್ತು. ಭಾರತೀಯರ ಸಂಖ್ಯೆಯೂ ಹೆಚ್ಚಾಗುತ್ತಿತ್ತು ಎಂದ ಅವರು, ಇಂದಿನ ಯುವಕರು ಸ್ವಾಮಿ ವಿವೇಕಾನಂದರ ಕನಸು ಸಾಕಾರಗೊಳಿಸುವ ಮೂಲಕ ಭವ್ಯ ಭಾರತ ನಿರ್ಮಾಣಕ್ಕೆ ಶ್ರಮಿಸಬೇಕೆಂದು ಸಲಹೆ ನೀಡಿದರು.
ವಿವೇಕಾನಂದರು ದೇವರ ಪೂಜೆ ಮಾಡುತ್ತಿದ್ದರು. ಆದರೆ, ಮೂಢನಂಬಿಕೆ ಒಪ್ಪುತ್ತಿರಲಿಲ್ಲ. ನಮ್ಮ ಯುವಕರು ಸಹ ವಿವೇಕಾನಂದರ ರೀತಿಯಲ್ಲಿ ಚಿಂತನೆ ಮಾಡಿ, ಭಾರತೀಯರ ಸಂಖ್ಯೆ ಕುಗ್ಗದಂತೆ ನೋಡಿಕೊಳ್ಳುವ ಮೂಲಕ ಭಾರತಾಂಬೆಯ ಸಿಂಗಾರ ಹೆಚ್ಚಿಸಬೇಕೆಂದು ಕರೆ ನೀಡಿದರು.

ಮೋದಿ ಪ್ರಧಾನಿ ಆಗಲ್ಲ: ಸಚಿವ ಮುನಿಯಪ್ಪ
ಕೋಲಾರ: ಬಿಜೆಪಿಯ ಹಿರಿಯ ನಾಯಕರ ಅಭಿಪ್ರಾಯಕ್ಕೆ ವಿರುದ್ಧವಾಗಿ ಪ್ರಧಾನಮಂತ್ರಿ ಅಭ್ಯರ್ಥಿಯಾಗಿ ಘೋಷಿಸಲ್ಪಟ್ಟಿರುವ ಗುಜರಾತ್ ಮುಖ್ಯಮಂತ್ರಿ ನರೇಂದ್ರಮೋದಿಗೆ ಜನತೆಯ ಬೆಂಬಲ ಖಂಡಿತ ಸಿಗಲಾರದು ಎಂದು ಕೇಂದ್ರ ಸಚಿವ ಕೆ.ಹೆಚ್.ಮುನಿಯಪ್ಪ ತಿಳಿಸಿದರು.
ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನರೇಂದ್ರಮೋದಿ ಕೇವಲ ಗುಜರಾತ್‌ಗೆ ಮಾತ್ರ ಸಿಮೀತರಾಗಿದ್ದಾರೆ, ಇವರು ಪ್ರಧಾನಿ ಆಗುವುದು ಬಿಜೆಪಿಯ ಹಿರಿಯ ನಾಯಕರಾದ ಎಲ್.ಕೆ.ಅಡ್ವಾಣಿ ಸೇರಿದಂತೆ ಅನೇಕರಿಗೆ ಇಷ್ಟವಿಲ್ಲ. ಇನ್ನು ದೇಶದಲ್ಲಿ ಇವರಿಗೆ ಬೆಂಬಲ ಹೇಗೆ ತಾನೇ ಸಿಗುತ್ತದೆ ಎಂದು ಅನುಮಾನ ವ್ಯಕ್ತಪಡಿಸಿದರು. ಬರಲಿರುವ ಲೋಕಸಭಾ ಚುನಾವಣೆಯಲ್ಲೂ  ಯುಪಿಎ ನೇತೃತ್ವದ ಸಮ್ಮಿಶ್ರ ಸರ್ಕಾರ ಅಧಿಕಾರಕ್ಕೆ ಬರುವುದು ಖಚಿತವೆಂದು ನುಡಿದರು.
ಕಾಂಗ್ರೆಸ್‌ನಿಂದ ಪ್ರಧಾನಿ ಅಭ್ಯರ್ಥಿಯನ್ನು ಇನ್ನು ಅಧಿಕೃತವಾಗಿ ಘೋಷಣೆ ಮಾಡಿಲ್ಲ. ಆದರೆ, ರಾಹುಲ್‌ಗಾಂಧಿಯವರೇ ಪ್ರಧಾನಮಂತ್ರಿ ಆಗುವ ಮೂಲಕ ಕೇಂದ್ರ ಸರ್ಕಾರದ ಸಾರಥ್ಯ ವಹಿಸುತ್ತಾರೆಂದುಮುನಿಯಪ್ಪ  ವಿಶ್ವಾಸ ವ್ಯಕ್ತಪಡಿಸಿದರು.

ಕವಿಗೆ ಜ್ಞಾನದ ಹಸಿವಿರಬೇಕು
ಮಾಲೂರು: ಸಾಹಿತಿಗಳಿಗೆ ಸಾಧನೆ ಮಾಡಿದ ಹಿಂದಿನ ಮಹನೀಯರ ಜೀವನ ಚರಿತ್ರೆ ಜ್ಞಾನ ಅವಶ್ಯಕ. ಈ ನಿಟ್ಟಿನಲ್ಲಿ ಕವಿಯಾದವನಿಗೆ ಜ್ಞಾನದ ಹಸಿವು ಇರಬೇಕುಎಂದು ಸಾಹಿತಿ ಡಾ.ಚಂದ್ರಶೇಖರ್ ನಂಗಲಿ ಕಿವಿಮಾತು ಹೇಳಿದರು. ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಂಭಾಗಣದಲ್ಲಿ ಹಮ್ಮಿಕೊಂಡಿದ್ದ ತಿಂಗಳ ಸಾಹಿತ್ಯ ಹಾಗೂ ಸಾಂಸ್ಕೃತಿಕ ಸಂಭ್ರಮ-ಕವಿಗೋಷ್ಠಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement