ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಅಸಮರ್ಪಕ ಪಡಿತರ; ಗ್ರಾಹಕರ ಪ್ರತಿಭಟನೆ

Srinivasa Murthy VN
Updated On : 24 Sept 2013, 12:46 pm

ಚಿಂತಾಮಣಿ: ಹೊಸ ಪಡಿತರ ಚೀಟಿದಾರರಿಗೆ ಕಾರ್ಡ್ ನೀಡಲು ವಿಳಂಬ ಧೋರಣೆ ಅನುಸರಿಸಿ ಗ್ರಾಮೀಣ ಜನತೆಯ ತಾಳ್ಮೆಯನ್ನು ಪರೀಕ್ಷಿಸುತ್ತಿರುವ ತಾಲೂಕು ಆಡಳಿತ ಯಂತ್ರಾಂಗದ ವಿರುದ್ಧ ಸೋಮವಾರ ಏಕಾಏಕಿ ನೂರಾರು ಜನರು ಬೀದಿಗಿಳಿದು ರಸ್ತೆ ತಡೆ ಮಾಡಿ ವಾಹನಗಳ ಮೇಲೆ ಹಲ್ಲೆ ಮಾಡಲು ಯತ್ನಿಸಿದ ಉದ್ರಿಕ್ತ ಗುಂಪನ್ನು ಪೊಲೀಸರು ಚದುರಿಸಿದ ಘಟನೆ ತಾಲೂಕು ಕಚೇರಿ ಎದುರು ಸಂಭವಿಸಿತು.
ತಾಲೂಕಿನ ವಿವಿಧ ಕಡೆಯಿಂದ ನೂರಾರು ಮಹಿಳೆ, ರೈತ, ಕಾರ್ಮಿಕರು,  ವೃದ್ಧರು ಸೇರಿದಂತೆ ತಾಲೂಕು ಕಚೇರಿಯ ಆಹಾರ ನಿರೀಕ್ಷಕರ ಕಚೇರಿ ಎದುರು ಸೋಮವಾರ ಬೆಳಗಿನಿಂದಲೇ ಗಂಟೆ ಗಟ್ಟಲೇ ಕ್ಯೂನಲ್ಲಿ ನಿಂತಿದ್ದರೂ ಸಹ ಹೊಸ ಪಡಿತರ ಚೀಟಿದಾರರಿಗೆ ಕಾರ್ಡ್ ನೀಡಲು ಜನರ ತಾಳ್ಮೆಯನ್ನು ಪರೀಕ್ಷಿಸುತ್ತಿದ್ದ ಆಹಾರ ನಿರೀಕ್ಷಕ ವಿರುದ್ಧ ಧಿಕ್ಕಾರ ಘೋಷಣೆ ಕೂಗಿದರು. ಮಾತ್ರವಲ್ಲ, ನೂರಾರು ಜನರು ಹೊಸ ಕಾರ್ಡ್ ಬೇಕೆಂದು ಆಗ್ರಹಿಸಿ ರಸ್ತೆ ತಡೆ ನಡೆಸಿದರು.
ಲಘು ಲಾಠಿ ಪ್ರಹಾರ: ತಾಲೂಕು ಆಡಳಿತ ಯಂತ್ರಾಂಗ ವೈಫಲ್ಯದಿಂದ ಹಲವಾರು ಹಳ್ಳಿಗಳಿಂದ ಬಂದಂತಹ ನಾಗರಿಕರಿಗೆ ಹೊಸ ಪಡಿತರ ಚೀಟಿ ನೀಡದ ಹಾಗೂ ಯಾವುದೇ ಮಾಹಿತಿ ನೀಡದೇ ಬಾಗಿಲು ಸಹ ತೆಗೆಯದೆ ಇರುವ ಬಗ್ಗೆ ಅಧಿಕಾರಿಗಳ ವಿರುದ್ಧ ರಸ್ತೆ ತಡೆ ನಡೆಸಿ ದ್ವಿಚಕ್ರ ವಾಹನ ಹಾಗೂ ಬಸ್ಸುಗಳನ್ನು ಸಂಚರಿಸದಂತೆ ರಸ್ತೆ ತಡೆ ಮಾಡಿ ಕಲ್ಲು ತೂರಾಟ ನಡೆಸಲು ಮುಂದಾದಾಗ ಕೂಡಲೇ ಘಟನಾ ಸ್ಥಳಕ್ಕೆ ಆಗಮಿಸಿದ ಸಬ್ ಇನ್ಸ್‌ಪೆಕ್ಟರ್ ಮುರಳಿ ಹಾಗೂ ಸಿಬ್ಬಂದಿ ಪರಿಸ್ಥಿತಿ ಹತೋಟಿಗೆ ತರಲು ಗುಂಪನ್ನು ಚದುರಿಸಿದರು. ನಂತರ ಪ್ರತಿಭಟನೆಕಾರರನ್ನು ಸಮಾಧಾನ ಪಡಿಸಿದ ಪೋಲೀಸರು ತಮ್ಮ ಬೇಡಿಕೆಗಳು ಏನೇ ಇದ್ದರೂ ಶಾಂತಿಯುತವಾಗಿ ಬಗೆಹರಿಸಿಕೊಳ್ಳಿ ಎಂದು ಮನವಿ ಮಾಡಿದರು.
ನಂತರ ಪ್ರತಿಭಟನಾಕಾರರು ತಾಲೂಕು ಕಚೇರಿ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿದರು. ಸಂಬಂಧಪಟ್ಟ ಅಧಿಕಾರಿಗಳು ಜನ ಸಾಮಾನ್ಯರನ್ನು ಪರದಾಡಿಸುತ್ತಿರುವ ಬಗ್ಗೆ ಸಿಪಿಎಂ ಮುಖಂಡ ಗೋಪಿನಾಥ್ ತಾಲೂಕು ಆಡಳಿತ ಯಂತ್ರಾಂಗದ ಮೇಲೆ ಕಿಡಿಕಾರಿದರು. ನಂತರ ಪೊಲೀಸರು ಹಾಗೂ ಅಧಿಕಾರಿಗಳು ಪ್ರತಿಭಟನಕಾರರನ್ನು ಸಮಾಧಾನ ಪಡಿಸಿ ಕಾರಣಾಂತರಗಳಿಂದ 2 ದಿನ ಅಂತರ್ಜಾಲ ವೈಪರೀತ್ಯದಿಂದ ಕಾರ್ಡ್‌ಗಳನ್ನು ನೀಡಲು ವಿಳಂಬವಾಯಿತು ಮುಂದಿನ ದಿನಗಳಲ್ಲಿ ಇಂತಹ ಸಮಸ್ಯೆ ಬಗೆಹರಿಸಲು ಕ್ರಮ ಕೈಗೊಳ್ಳುವುದಾಗಿ ಪ್ರತಿಭಟನಾಕರರಿಗೆ ಭರವಸೆಯನ್ನು ನೀಡಿದರು.

'ಹಕ್ಕುಗಳ ಜೊತೆಗೆ ಕರ್ತವ್ಯ ನಿರ್ವಹಿಸಿ'
ಕ.ಪ್ರ.ವಾರ್ತೆ ಕೋಲಾರ ಸೆ.23
ಪೌರ ಕಾರ್ಮಿಕರು ತಮ್ಮ ಹಕ್ಕುಗಳನ್ನು ಪ್ರತಿಪಾದಿಸುವುದರ ಜೊತೆಗೆ, ಕರ್ತವ್ಯ ಪಾಲಿಸುವ ಮೂಲಕ ಜನತೆಯ ವಿಶ್ವಾಸಕ್ಕೆ ಪಾತ್ರರಾಗಬೇಕೆಂದು ನಗರಸಭೆ ಪೌರಾಯುಕ್ತ ಕೆ.ಎನ್.ಜಗದೀಶ್ ಕಿವಿಮಾತು ಹೇಳಿದರು.
ರಾಜ್ಯ ಪೌರಸೇವಾ ನೌಕರರ ಸೇವಾ ಸಂಘದ ಆಶ್ರಯದಲ್ಲಿ ಸೋಮವಾರ ನಗರಸಭೆಯಲ್ಲಿ ಹಮ್ಮಿಕೊಂಡಿದ್ದ ದ್ವಿತೀಯ ಪೌರಕಾರ್ಮಿಕರ ದಿನಾಚರಣೆ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ಪೌರ ಕಾರ್ಮಿಕರಿಗೆ ಸರ್ಕಾರದಿಂದ ಸಿಗುವ ಆರೋಗ್ಯ ಕಾರ್ಡ್, ವೇತನ ಸೇರಿದಂತೆ ತಮಗೆ ಸಲ್ಲಬೇಕಾದ ಸೌಕರ್ಯಗಳನ್ನು ಒದಗಿಸಲು ತಾವು ಸದಾ ಸಿದ್ಧವಿರುವುದಾಗಿ ಹೇಳಿದ ಅವರು, ನಗರದಲ್ಲಿ ಸ್ವಚ್ಛತೆ ಕಾಪಾಡಲು ಹೆಚ್ಚಿನ ಆಸಕ್ತಿ ವಹಿಸಿ ಕೆಲಸ ಮಾಡುವಂತೆ ಸೂಚಿಸಿದರು.
ಪೌರಸೇವಾ ನೌಕರರ ಸೇವಾ ಸಂಘದ ಜಿಲ್ಲಾಧ್ಯಕ್ಷ ಎನ್.ವೆಂಕಟೇಶ್ ಮಾತನಾಡಿ, ಸ್ವಚ್ಛತೆಯಂತಹ ಕೆಲಸವನ್ನು ಪೌರ ನೌಕರರು ಮಾಡುತ್ತಿದ್ದು, ಇಂತಹವರ ದಿನಚರಣೆ ಆಚರಣೆ ಮಾಡುತ್ತಿರುವುದು ಸಂತಸ ಉಂಟು ಮಾಡಿದೆ. ಸರ್ಕಾರ ಪೌರ ಕಾರ್ಮಿಕರ ಪ್ರಮುಖ ಬೇಡಿಕೆಗಳನ್ನು ಈಡೇರಿಸಬೇಕೆಂದರು. ಆರೋಗ್ಯ ನಿರೀಕ್ಷಕ ರಮೇಶ್,ಎಇ ಶ್ರೀನಿವಾಸ ಮಾತನಾಡಿದರು.
ಇದೇ ಸಂದರ್ಭದಲ್ಲಿ ಉತ್ತಮ ಸೇವೆ ಸಲ್ಲಿಸಿದ ಅಕ್ಕಮ್ಮ, ಈರಮ್ಮ, ವೆಂಕಟರಾಮ್, ನಾರಾಯಣಸ್ವಾಮಿ, ಜಿ.ವೆಂಕಟರಮಣ, ರಾಮ, ಮುನಿವೆಂಕಟಪ್ಪ, ಪುಟ್ಟಮ್ಮ, ಸಿ.ಮುನಿಯಪ್ಪ, ವೆಂಕಟೇಶ್ ಅವರನ್ನು ಸನ್ಮಾನಿಸಲಾಯಿತು.
ಪ್ರತಿಭಾ ಪುರಸ್ಕಾರ: ಎಸ್ಸೆಸ್ಸೆಲ್ಸಿಯಲ್ಲಿ ಮತ್ತು ದ್ವೀತಿಯ ಪಿಯುಸಿಯಲ್ಲಿ ಅತಿ ಹೆಚ್ಚು ಅಂಕಗಳಿಸಿದ ಪೌರ ನೌಕರರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು. ರೆವಿನ್ಯೂ ಇನ್ಸ್‌ಪೆಕ್ಟರ್  ಕೃಷ್ಣಪ್ಪ, ಪೌರಸೇವಾ ನೌಕರರ ಸೇವಾ ಸಂಘದ ಜಿಲ್ಲಾ ಕಾರ್ಯದರ್ಶಿ ಆಂಜಿನಪ್ಪ, ಮಂಜುನಾಥ್ ಇದ್ದರು. ಕಂದಾಯ ಅಧಿಕಾರಿ ಸುಬ್ರಮಣಿ ಸ್ವಾಗತಿಸಿದರು.

ಗ್ರಾಪಂ ಅಧ್ಯಕ್ಷರ ವಿರುದ್ಧ ಕ್ರಮಕ್ಕೆ ಒತ್ತಾಯಿಸಿ ಪ್ರತಿಭಟನೆ
ಕ.ಪ್ರ. ವಾರ್ತೆ ಕೋಲಾರ ಸೆ.23
ದಲಿತರ ಮೇಲೆ ದೌರ್ಜನ್ಯವೆಸಗಿರುವ ಮಾಲೂರು ತಾಲೂಕಿನ ಬಾಳಿಗಾನಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷ ನಾರಾಯಣಸ್ವಾಮಿ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ದಲಿತ ಸಿಂಹ ಸೇನೆಯ ಕಾರ್ಯಕರ್ತರು ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು. ಬಾಳಿಗಾನಹಳ್ಳಿ ಗ್ರಾಪಂಗೆ ಸೇರಿದ ಮಂಗಲ ಗ್ರಾಮದ ದಲಿತ ವರ್ಗಕ್ಕೆ ಸೇರಿದ ಮುನಿವೆಂಕಟಪ್ಪ ಹಾಗೂ ಇವರ ಕುಟುಂಬ ಸದಸ್ಯರ ಮೇಲೆ ವಿನಾ ಕಾರಣ ದಬ್ಬಾಳಿಕೆ ನಡೆಸಿ ಮಾರಣಾಂತಿಕ ಹಲ್ಲೆ ನಡೆಸಿರುವ ಗ್ರಾ.ಪಂ ಅಧ್ಯಕ್ಷ ನಾರಾಯಣಸ್ವಾಮಿ ಹಾಗೂ ಇವರ ಬೆಂಬಲಿಗರ ವಿರುದ್ಧ ಮಾಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಆಗಿದ್ದರೂ ಕ್ರಮ ಕ್ರಮ ಕೈಗೊಂಡಿಲ್ಲವೆಂದು ದೂರಿದರು.
ಗ್ರಾಪಂ ಅಧ್ಯಕ್ಷ ನಾರಾಯಣಸ್ವಾಮಿ ಅವರನ್ನು ಕೂಡಲೇ ಬಂಧಿಸಬೇಕು, ಗ್ರಾಪಂ ಅಧ್ಯಕ್ಷ ಸ್ಥಾನದಿಂದ ವಜಾಗೊಲಿಸಬೇಕು ಹಾಗೂ ಯಾವುದೇ ಕಾರಣಕ್ಕೂ ಜಾಮೀನು ಸಿಗದಂತೆ ನೋಡಿಕೊಳ್ಳಬೇಕೆಂದು ಆಗ್ರಹಿಸಿದರು. ಪ್ರತಿಭಟನೆಯ ನೇತೃತ್ವವನ್ನು ದಲಿತ ಸಿಂಹ ಸೇನೆಯ ಜಿಲ್ಲಾಧ್ಯಕ್ಷ ಸೂಲಿಕುಂಟೆ ಆನಂದ್ ವಹಿಸಿದ್ದರು. ಮಾಲೂರು ತಾಲೂಕು ಅಧ್ಯಕ್ಷ ತಿಪ್ಪಸಂದ್ರ ಶ್ರೀನಿವಾಸ್ ಮತ್ತಿತರರು ಇದ್ದರು.

ನೀರಿನ ಸಮಸ್ಯೆ: ಮುಖ್ಯಾಧಿಕಾರಿ ಕಚೇರಿಗೆ ಮುತ್ತಿಗೆ
ಮಾಲೂರು: ಕಳೆದ 6 ತಿಂಗಳಿಂದ ಕುಡಿಯುವ ನೀರಿನ ಸಮಸ್ಯೆ ಎದುರಿಸುತ್ತಿದ್ದರೂ, ಈ ವರಗೆ ವಾರ್ಡ್ ಸದಸ್ಯನಾಗಲಿ,ಪುರಸಭೆ ಅಧಿಕಾರಿಗಳಾಗಲಿ ಸ್ಪಂದಿಸದೆ ನಿರ್ಲಕ್ಷ್ಯ ತೋರುತ್ತಿರುವುದು ಖಂಡಿಸಿ ಪಟ್ಟಣದ 8 ನೇ ವಾರ್ಡ್ ನಿವಾಸಿಗಳು ಸೋಮವಾರ ಮುಖ್ಯಾಧಿಕಾರಿಗಳ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟಿಸಿದರು.   ಪುರಸಭೆ ಚುನಾವಣೆಯ ಪೂರ್ವದಿಂದಲ್ಲೇ ವಾರ್ಡ್‌ನಲ್ಲಿ ನೀರಿನ ಸಮಸ್ಯೆ ಉಂಟಾಗಿದ್ದು,ಚುನಾವಣೆಯಾಗಿ ಪ್ರತಿನಿಧಿ ಬಂದರೂ ನಮ್ಮ ನೀರಿನ ಸಮಸ್ಯೆ ಹಾಗೇ ಮುಂದುವರೆದಿದೆ. ಕುಡಿಯುವ ನೀರಿನ ಸಮಸ್ಯೆ ತೀರಿಸುವುದಾಗಿ ಚುನಾವಣೆಯಲ್ಲಿ ಗೆದ್ದ ಜನಪ್ರತಿನಿಧಿ ಈಗ ನಿರ್ಲಕ್ಷ ತೋರಿಸುತ್ತಿದ್ದಾರೆ. ನೀರಿನ ಸಮಸ್ಯೆ ಬಗ್ಗೆ ಪುರಸಭೆ ಅಧಿಕಾರಿಗಳಿಗೂ ತಿಳಿಸಿದರೂ ಪ್ರಯೋಜನವಾಗುತ್ತಿಲ್ಲ ಎಂದು ದೂರಿದ ನಿವಾಸಿಗಳು ತಕ್ಷಣ ನೀರಿನ ವ್ಯವಸ್ಥೆ ಮಾಡಿಕೊಡುವಂತೆ ಮುಖ್ಯಾಧಿಕಾರಿಗಳನ್ನು ಆಗ್ರಹಿಸಿದರು. ನಿವಾಸಿಗಳ ಮನವಿಗೆ ಸ್ವಂದಿಸಿದ ಮುಖ್ಯಾಧಿಕಾರಿ ರೇಣುಕಾ ರವರು ಮುಂದಿನ ಎರಡು ದಿನದಲ್ಲಿ ವಾರ್ಡ್‌ನಲ್ಲಿ ಕಾಣಿಸಿಕೊಂಡಿರುವ ನೀರಿನ ಸಮಸ್ಯೆಯನ್ನು ತೀರಿಸುವುದಾಗಿ ತಿಳಿಸಿದ ಮುಖ್ಯಾಧಿಕಾರಿಗಳು ವಾರ್ಡ್‌ನಲ್ಲಿ ಕೆಟ್ಟು ನಿಂತಿರುವ ಕೊಳವೆ ಬಾವಿ ಯನ್ನು ಸರಿಪಡಿಸಲು ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು. ವಾರ್ಡ್‌ನ ಸೈಯದ್ ಮುಜೀದ್, ಭಾಗ್ಯಮ್ಮ, ರಾಧಾಬಾಯಿ, ಶಿಲ್ಪಾ, ವಿಜಯಲಕ್ಷ್ಮಿ, ವಿಮಲ, ವೆಂಕಟಮ್ಮ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement