ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಗೋದಾಮು ಸ್ಥಾಪನೆಗೆ ಪ್ರಾಮಾಣಿಕ ಯತ್ನ: ಚಂದ್ರಶೇಖರ ರೆಡ್ಡಿ

Srinivasa Murthy VN
Updated On : 24 Sept 2013, 12:47 pm

ಬಾಗೇಪಲ್ಲಿ:ವ್ಯವಸಾಯೋತ್ಪನ್ನಗಳ ಮಾರಾಟ ಸಹಕಾರ ಸಂಘದ ವತಿಯಿಂದ ತಾಲೂಕಿನ ಚೇಳೂರು ಹೋಬಳಿ ಕೇಂದ್ರದಲ್ಲಿ ಗೋದಾಮು ಸ್ಥಾಪಿಸಲು ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ವ್ಯವಸಾಯೋತ್ಪನ್ನಗಳ ಮಾರಾಟ ಸಹಕಾರ ಸಂಘದ ಅಧ್ಯಕ್ಷ ವಿ. ಚಂದ್ರಶೇಖರ ರೆಡ್ಡಿ ಭರವಸೆ ನೀಡಿದರು.
ಪಟ್ಟಣದ ತಾಲೂಕು ವ್ಯವಸಾಯೋತ್ಪನ್ನಗಳ ಮಾರಾಟ ಸಹಕಾರ ಸಂಘದ ಆವರಣದಲ್ಲಿ ಹಮ್ಮಿಕೊಳ್ಳಲಾಗಿದ್ದ 2013-14ನೇ ಸಾಲಿನ ಸರ್ವಸದಸ್ಯರ ವಾರ್ಷಿಕ ಮಹಾಸಭೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ರೈತರಿಗಾಗಿ ಇರುವ ಈ ಸಂಘ ರೈತರ ಅಭಿವೃದ್ಧಿಗಾಗಿ ಶ್ರಮಿಸುವುದು ಸಂಘದ ಅಧ್ಯಕ್ಷ ಸೇರಿದಂತೆ ಎಲ್ಲಾ ಸದಸ್ಯರ ಜವಾಬ್ದಾರಿ ಎಂದರು.
  ತಾಲೂಕಿನಿಂದ ಸುಮಾರು 40 ಕಿ.ಮೀ. ದೂರದಲ್ಲಿರುವ ಚೇಳೂರು ಹೋಬಳಿ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳಿಂದ ತಾಲ್ಲೂಕು ಕೇಂದ್ರದಲ್ಲಿರುವ ಸಂಘಕ್ಕೆ ರೈತರು ಬಂದು ರಸಗೊಬ್ಬರವನ್ನು ಸಾಗಿಸಿಕೊಂಡು ಹೋಗಲು ತುಂಬಾ ತೊಂದರೆಯಾಗುತ್ತದೆ. ಇದರಿಂದ ಆ ಭಾಗದ ರೈತರಿಗೆ ಅನಕೂಲವಾಗುವ ಉದ್ದೇಶದಿಂದ  ಚೇಳೂರಿನಲ್ಲಿಯೇ ಒಂದು ಗೋದಾಮು  ಸ್ಥಾಪಿಸಬೇಕೆಂಬ ಆಲೋಚನೆ ಇದೆ, ಚೇಳೂರಿನಲ್ಲಿ ಗೋದಾಮು ಸ್ಥಾಪನೆಗಾಗಿ ಸೂಕ್ತ(ನಿವೇಶನ) ಸ್ಥಳಕ್ಕಾಗಿ ಹುಡುಕುತ್ತಿದ್ದು ಸೂಕ್ತ ಸ್ಥಳವನ್ನು ನೀಡುವಂತೆ ಗ್ರಾ.ಪಂ.ಗೆ ಮನವಿಯನ್ನು ಸಹ ಮಾಡಲಾಗಿದೆಯೆಂದರು.  
ಯಾವುದೇ ಸಂಘ-ಸಂಸ್ಥೆಗಳು ಲಾಭದಲ್ಲಿ ನಡೆಸುವುದು ತುಂಬಾ ಕಷ್ಟ ಎಂದ ಅವರು, ನಮ್ಮ ಸಂಘ ಹಲವಾರು ಸಮಸ್ಯೆಗಳಿಂದ ಹೊರಬಂದಿದೆ, ಸದಸ್ಯರುಗಳ ಹಾಗೂ ಸಿಬ್ಬಂದಿ ವರ್ಗದವರ ಸಹಕಾರದಿಂದ ಇಂದು ಸಂಘವನ್ನು ಲಾಭದತ್ತ ಸಾಗಲು ಸಾಧ್ಯವಾಯಿತು ಎಂದರು. ರಸಗೊಬ್ಬರಗಳ ಬೇಡಿಕೆ ಹೆಚ್ಚಾಗಿದ್ದ ಹಿನ್ನೆಲೆಯಲ್ಲಿ ಹೆಚ್ಚಿನ ಬೆಲೆಗೆ ಮಾರಾಟ ಮಾಡಬಹುದಿತ್ತು. ಆದರೆ ರೈತರಿಗಾಗಿಯೇ ಸ್ಥಾಪಿಸಿರುವಂತಹ ಸಂಘದ ಹಿತದೃಷ್ಟಿಯಿಂದ ಯಾವುದೇ ಕಾರಣಕ್ಕೂ ಬೆಲೆಯಲ್ಲಿ ವ್ಯತ್ಯಾಸ ಮಾಡಿ ಹೆಚ್ಚಿನ ಲಾಭಾಂಶವನ್ನು ನಮ್ಮ ರೈತರಿಂದ ಪಡೆಯುವುದು ಸರಿಯಾದ ಕ್ರಮವಲ್ಲ, ರೈತರಿಂದ ಪಡೆದು ರೈತರಿಗೆ ಸಂಘದಿಂದ ಹೆಚ್ಚಿನ ಲಾಭವನ್ನು ಪಡೆಯುತ್ತಿದ್ದೇವೆ. ಆದರೆ ಸಂಘದ ಹಿತದೃಷ್ಟಿಯಿಂದ ಲಾಭಾಂಶವನ್ನು ಕಡಿಮೆ ಮಾಡಲು ಸಾಧ್ಯವಾಗುತ್ತಿಲ್ಲ.ರೈತರಿಗೆ ಯಾವುದೇ ರೀತಿಯಲ್ಲಿ ಸಹಾಯವನ್ನು ಮಾಡಲು ಸಾಧ್ಯವಾಗುತ್ತಿಲ್ಲವೆಂದು ವಿಷಾದ ವ್ಯಕ್ತಪಡಿಸಿದ ಅವರು, ಮುಂದಿನ ದಿನಗಳಲ್ಲಿ ರೈತರಿಗೆ ಬೆನ್ನಲುಬಾಗಿ ಸಂಘ ಇರುತ್ತದೆ. ರೈತರ ಕಷ್ಟ-ಸುಖಗಳಲ್ಲಿ ಭಾಗಿಯಾಗುವುದು ನಮ್ಮೆಲ್ಲರ ಕರ್ತವ್ಯ ಎಂದರು.
ಸದಸ್ಯರ ಅನುಮತಿಯನ್ನು ಪಡೆದು ಮುಂದಿನ ದಿನಗಳಲ್ಲಿ ಬೆಂಬಲ ಬೆಲೆಯಲ್ಲಿ ಮೆಕ್ಕೆಜೋಳ ಖರೀದಿ ಕೇಂದ್ರವನ್ನು ಸ್ಥಾಪಿಸುವ ಉದ್ದೇಶವಿದೆ ಎಂದರು.
ಸಂಘದ ಕಾರ್ಯಕಾರಿ ಮಂಡಳಿ ನಿರ್ದೇಶಕರಾದ  ಹೆಚ್.ವಿ. ನಾಗರಾಜ್, ಗೂಳೂರು ರಾಮಯ್ಯಶೆಟ್ಟಿ, ಡಿ.ಎನ್. ಸೂರ್ಯ ನಾರಾಯಣರೆಡ್ಡಿ, ಬಿ.ಎಂ.ಚಂದ್ರಶೇಖರರೆಡ್ಡಿ, ಕೆ.ಆರ್.ಆದ್ಯಪ್ಪ, ರಂಗಾರಾವ್ ಸದಸ್ಯರಾದ ಆದಿಮೂರ್ತಿ, ಬಿ. ಸಂಜೀವಪ್ಪ (ನ್ಯಾತಪ್ಪ), ಬಿ.ಎನ್. ಶ್ರೀನಿವಾಸ್, ಕಾರ್ಯದರ್ಶಿ ನಾರಾಯಣಸ್ವಾಮಿ, ನಿವೃತ್ತ ಕಾರ್ಯದರ್ಶಿ ಆದಿನಾರಾಯಣಪ್ಪ, ಸಿಬ್ಬಂದಿ ವೆಂಕಟನಾರಾಯಣ ಮತ್ತಿತರರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement