ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ನಾಳೆ ವೇಮಗಲ್‌ನಲ್ಲಿ ರು. 100 ಕೋಟಿ ವೆಚ್ಚದ ಟೂಲ್‌ರೂಂ ನಿರ್ಮಾಣಕ್ಕೆ ಮುಖ್ಯಮಂತ್ರಿ ಶಂಕು

Srinivasa Murthy VN
Updated On : 24 Sept 2013, 12:46 pm

ಕ.ಪ್ರ.ವಾರ್ತೆ ಕೋಲಾರ ಸೆ.23
ತಾಲೂಕಿನ ವೇಮಗಲ್ ಕೈಗಾರಿಕಾ ಅಭಿವೃದ್ಧಿ ಪ್ರದೇಶದಲ್ಲಿ ನಿರ್ಮಿಸಲು ಉದ್ದೇಶಿಸಿರುವ ಅಂತರ ರಾಷ್ಟ್ರೀಯ ಗುಣಮಟ್ಟದ ಟೂಲ್‌ಗ್ರೂಮ್‌ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸೆ.25 ರಂದು ಶಂಕುಸ್ಥಾಪನೆ ನೆರವೇರಿಸಲಿದ್ದಾರೆ ಎಂದು ಕೇಂದ್ರ ಸಣ್ಣ,ಅತಿ ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳ ಸಚಿವ ಕೆ.ಹೆಚ್. ಮುನಿಯಪ್ಪ ತಿಳಿಸಿದರು.
ನಗರದ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿಗಳು ಸೆ.25 ಮತ್ತು 27 ರಂದು ಜಿಲ್ಲೆಯ ಪ್ರವಾಸ ಕೈಗೊಳ್ಳಬೇಕಾಗಿತ್ತು. ಕಾರಣಾಂತರಗಳಿಂದ ಸೆ.27ರ ಕಾರ್ಯಕ್ರಮ ರದ್ದು ಮಾಡಿ ಸೆ.25ಕ್ಕೆ ಆಗಮಿಸುತ್ತಿದ್ದಾರೆಂದು ಹೇಳಿದರು.
ವೇಮಗಲ್ ಕೈಗಾರಿಕಾ ಪ್ರದೇಶದ ಅಭಿವೃದ್ಧಿಗಾಗಿ ರಾಜ್ಯ ಸರ್ಕಾರ ರೈತರಿಂದ 670 ಎಕರೆ ಭೂಮಿಯನ್ನು ಸ್ವಾಧೀನಪಡಿಸಿಕೊಂಡಿದೆ. ಇಲ್ಲಿ 205 ಕೈಗಾರಿಕೆಗಳು ಸ್ಥಾಪನೆಗೆ ಅವಕಾಶವಿದ್ದು 1500 ಕೋಟಿ ಬಂಡವಾಳ ಹೂಡಿಕೆಗೆ ಉದ್ದಿಮೆದಾರರು ಆಸಕ್ತಿ ತೋರಿದ್ದಾರೆಂದರು.
ಇದೇ ಕೈಗಾರಿಕಾ ಪ್ರದೇಶದಲ್ಲೇ ರಾಜ್ಯ ಸರ್ಕಾರ ಸುಮಾರು 20 ಎಕರೆ ಜಾಗದಲ್ಲಿ ನಿರುದ್ಯೋಗಿ ಯುವಕರಿಗೆ ಕೈಗಾರಿಕೆ ತರಬೇತಿಗಾಗಿ ಕೇಂದ್ರ ಸರ್ಕಾರದ ಆರ್ಥಿಕ ಸಹಾಯದಿಂದ 100 ಕೋಟಿ ರು.ವೆಚ್ಚದಲ್ಲಿ ಟೂಲ್‌ರೂಮ್ ನಿರ್ಮಿಸಲು ನಿರ್ಧರಿಸಿದ್ದು ಇದಕ್ಕೆ ಮುಖ್ಯಮಂತ್ರಿಗಳು ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ಜೊತೆಗೆ ಜಿಲ್ಲೆಯ ಜನತೆಯ ಆಶಯದಂತೆ ಜಿಲ್ಲಾ ಭವನ ನಿರ್ಮಾಣಕ್ಕೂ ಶಿಲಾನ್ಯಾಸ ನೆರವೇರಿಸುವರೆಂದರು.
ಸುಮಾರು 48 ಕೋಟಿ ರು.ವೆಚ್ಚದಲ್ಲಿ 27 ಇಲಾಖೆಗಳಿಗೆ ಅವಕಾಶ ಕಲ್ಪಿಸುವ ಭವ್ಯವಾದ ಜಿಲ್ಲಾ ಭವನ ನಿರ್ಮಾಣಕ್ಕಾಗಿ ಜಿಲ್ಲಾಧಿಕಾರಿಗಳು ಯೋಜನೆ ಸಿದ್ಧಪಡಿಸಿದ್ದಾರೆ. ಟಮಕ ಬಳಿ ಸರ್ಕಾರದ 8 ಎಕರೆ ಜಾಗದಲ್ಲಿ ಈ ಭವನ ಅತ್ಯಂತ ಸುಂದರವಾಗಿ ಮತ್ತು ಸುಸಜ್ಜಿತವಾಗಿ ನಿರ್ಮಿಸಿ ಆಡಳಿತ ಯಂತ್ರ ಸುಸೂತ್ರವಾಗಿ ನಡೆಸುವುದಕ್ಕೆ ನಿರ್ಧರಿಸಲಾಗಿದೆ ಎಂದು ಹೇಳಿದರು.
ಉದ್ದೇಶಿತ ಅಭಿವೃದ್ಧಿ ಕಾಮಗಾರಿಗಳನ್ನು ಕಾಲಮಿತಿಯಲ್ಲಿ ಮುಗಿಸುವುದು ನಮ್ಮ ಗುರಿಯಾಗಿದೆ. ಜಿಲ್ಲೆಯ ಎಲ್ಲಾ ಶಾಸಕರು ಒಗ್ಗಟ್ಟಿನಿಂದ ಕೆಲಸ ಮಾಡಿ ಜಿಲ್ಲೆಯ ಅಭಿವೃದ್ಧಿಗೆ ಶ್ರಮಿಸುವರೆಂದರು.
ಎತ್ತಿನ ಹೊಳೆ ಯೋಜನೆ ಜಾರಿಗೆ ಸರ್ಕಾರ ಬದ್ಧವಾಗಿದೆ. ಈ ವಿಚಾರದಲ್ಲಿ ಯಾವುದೇ ಗೊಂದಲ ಬೇಡ,ನೀರು ಕೊಡದಿದ್ದರೆ ಹಳ್ಳಿಗಳಿಗೆ ಹೋಗಿ ಓಟು ಕೇಳುವುದಕ್ಕೆ ಕಷ್ಟವಾಗುತ್ತದೆ ಎಂಬ ಅರಿವು ನಮಗಿದೆ. ಪರಮಶಿವಯ್ಯ ವರದಿಯನ್ನು ಜಾರಿಗೆ ತರುವ ಸಂಬಂಧ ಸರ್ಕಾರದ ಮೇಲೆ ನಿರಂತರವಾದ ಒತ್ತಾಯ ಹೇರುತ್ತೇವೆ. ಈ ವಿಚಾರದಲ್ಲಿ ಶಾಸಕರು ರಾಜಿಯಾಗದೆ ಜನತೆಯ ಒತ್ತಾಸೆ ಈಡೇರಿಸಲಿದ್ದಾರೆಂದು ತಿಳಿಸಿದರು.
ಜಿಲ್ಲೆಯ ರೇಲ್ವೆ ಯೋಜನೆಗಳಿಗೆ ರಾಜ್ಯ ಸರ್ಕಾರದ ಸಹಾಯ ಸಿಗುತ್ತಿದೆ. ಕೇಂದ್ರ ಸರ್ಕಾರದ ರೇಲ್ವೆ ಇಲಾಖೆಯು ಕಾಮಗಾರಿಗಳನ್ನು ತ್ವರಿತಗತಿಯಲ್ಲಿ ಮುಗಿಸಲು ಪ್ರಯತ್ನಿಸುತ್ತಿದೆ. ಚಿಕ್ಕಬಳ್ಳಾಪುರದಲ್ಲಿ ಕೆಲ ಕಾಮಗಾರಿಗಳು ಮುಗಿಯುವ ಹಂತ ತಲುಪಿದ್ದು, ಅದಷ್ಟು ಬೇಗನೆ ಕೋಲಾರ-ಚಿಕ್ಕಬಳ್ಳಾಪುರ ರೈಲು ಮಾರ್ಗ ಕಾರ್ಯಾರಂಭವಾಗಲಿದೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಗೊಂದಲ ಸೃಷ್ಟಿ ಬೇಡ: ಎತ್ತಿನ ಹೊಳೆ ಯೋಜನೆ ಜಾರಿಗಾಗಿ ಸರ್ಕಾರದಿಂದ ಎಲ್ಲಾ ರೀತಿಯ ಸಿದ್ಧತೆಗಳು ನಡೆಯುತ್ತಿದೆ. ಕೆಲವರು ಬೇಕಾಗಿಯೇ ಗೊಂದಲ ಸೃಷ್ಟಿಸುತ್ತಿದ್ದಾರೆ. ಜಿಲ್ಲೆಯ ಜನತೆ ಊಹಾಪೂಹಗಳಿಗೆ ಕಿವಿಗೊಡಬಾರದು, ಸಂಗ್ರಹಿಸಲು ಸಾಧ್ಯವಿಲ್ಲದ ನೀರನ್ನು ಖಂಡಿತ ಎತ್ತಿನ ಹೊಳೆ ಯೋಜನೆ ಮೂಲಕ ತರಲು ಪ್ರಯತ್ನಿಸುತ್ತಿಲ್ಲ, ನೇತ್ರಾವತಿ ನದಿ ನೀರನ್ನು ಜೇಬಿನಲ್ಲಿಟ್ಟುಕೊಂಡು ಬಂದು ಜನರಿಗೆ ಕೊಡಲು ಸಾಧ್ಯವಿಲ್ಲ, ಸಮಗ್ರ ಯೋಜನೆ ಸಿದ್ಧಪಡಿಸಲಾಗಿದ್ದು ಮೊದಲು ಕುಡಿಯುವ ನೀರು ಬಗೆಹರಿಸುವುದಕ್ಕೆ ವಿಶೇಷ ಗಮನ ನೀಡಲಾಗುತ್ತಿದೆ ಎಂದು ಶಾಸಕ ಕೆ.ಆರ್. ರಮೇಶ್‌ಕುಮಾರ್ ವಿವರಿಸಿದರು.
ಎತ್ತಿನ ಹೊಳೆ ಯೋಜನೆ ಜಾರಿಗಾಗಿ ಡಿಪಿಆರ್ ಸಿದ್ಧವಾಗಿದೆ. ಟೆಂಡರ್ ಪ್ರಕ್ರಿಯೆ ನಡೆಯುತ್ತಿದೆ. ಆದಷ್ಟು ಶೀಘ್ರ ಯೋಜನೆಗೆ ಚಾಲನೆ ನೀಡಲಾಗುವುದು. ಜೊತೆಗೆ ಮುಂದಿನ ಬಜೆಟ್‌ನಲ್ಲಿ ಡಾ. ಪರಮಶಿವಯ್ಯ ವರದಿ ಅನುಷ್ಠಾನಕ್ಕೂ ಹಣ ಒಗಿಸುವಂತೆ ಸರ್ಕಾರದ ಮೇಲೆ ಒತ್ತಡ ತರುತ್ತೇವೆಂದರು.
ಮಾಲೂರು ಶಾಸಕ ಮಂಜುನಾಥಗೌಡ ಮಾತನಾಡಿ, ಕೇಂದ್ರ ಇಂಧನ ಸಚಿವ ವೀರಪ್ಪ ಮೊಯ್ಲಿಯವರು ಚಿಕ್ಕಬಳ್ಳಾಪುರದಿಂದ ಲೋಕಸಭೆಗೆ ಆಯ್ಕೆಯಾಗಿ ಪ್ರಮುಖ ಖಾತೆಯನ್ನು ಪಡೆದಿದ್ದಾರೆ. ಆದರೆ, ನಮಗೆ ಅವರ ಕೊಡುಗೆ ಏನು, ಎತ್ತಿನ ಹೊಳೆ ಮತ್ತು ಪರಮಶಿವಯ್ಯ ವರದಿಯ ಬಗ್ಗೆ ಅವರು ಜನತೆಗೆ ನಿಖರವಾದ ಭರವಸೆ ನೀಡುವ ಮೂಲಕ ಅನುಮಾನಗಳಿಗೆ ತೆರೆ ಎಳೆಯಬೇಕಾಗಿದೆ ಎಂದರು.
ಜಿಲ್ಲಾಧಿಕಾರಿ ಡಿ.ಕೆ. ರವಿ ಸೆ.25ರ ಮುಖ್ಯಮಂತ್ರಿಗಳ ಪ್ರವಾಸದ ವಿವರ ನೀಡಿದರು. ಶಾಸಕರಾದ ಬಂಗಾರಪೇಟೆಯ ಕೆ.ಎಂ.ನಾರಾಯಣಸ್ವಾಮಿ, ಮುಳಬಾಗಿಲಿನ ಕೊತ್ತೂರು ಮಂಜುನಾಥ್ ಇದ್ದರು. ಕೆಜಿಎಫ್ ಶಾಸಕಿ ವೈ.ರಾಮಕ್ಕ, ಕೋಲಾರದ ವರ್ತೂರ್ ಪ್ರಕಾಸ್ ಗೈರು ಹಾಜರಾಗಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement