ನಿಧಿ ದುರಾಸೆಯಿಂದ ದೇಗುಲ ಮೇಲೆ ದಾಳಿ
ಬಾಗೇಪಲ್ಲಿ: ನಿಧಿ ಕಳ್ಳರ ದುರಾಸೆಯಿಂದಾಗಿ ದೇಶದಲ್ಲಿ ಪ್ರಾಚೀನ ಹಾಗೂ ಐತಿಹಾಸಿಕ ದೇವಾಲಯ, ಮಠಗಳ ಸ್ಮಾರಕಗಳ ಮೇಲೆ ನಿರಂತರವಾಗಿ ಆಕ್ರಮಣ ನಡೆಯುತ್ತಿರುವುದರಿಂದ ಅನೇಕ ಸ್ಮಾರಕಗಳು ನಾಶವಾಗುತ್ತಿವೆ ಎಂದು ನಿಡುಮಾಮಿಡಿ ಪೀಠಾಧ್ಯಕ್ಷ ವೀರಭದ್ರ ಚನ್ನಮಲ್ಲ ದೇಶಿಕೇಂದ್ರ ಸ್ವಾಮೀಜಿ ಕಳವಳ ವ್ಯಕ್ತಪಡಿಸಿದರು.
ತಾಲೂಕಿನ ಗೂಳೂರಿನಲ್ಲಿರುವ ನಿಡುಮಾಮಿಡಿ ಮಠದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಾಚೀನ ಕಾಲದ ದೇವಾಲಯ, ಮಠ, ಗುಡಿ ಗೋಪುರಗಳಲ್ಲಿ ರಾಜ ಮಹಾರಾಜರು ನಿಧಿ ಇಟ್ಟಿರುತ್ತಾರೆ ಎಂಬ ನಂಬಿಕೆ ಬೆಳೆದು ಬಂದಿರುವ ನಿಟ್ಟಿನಲ್ಲಿ ಅದರ ಆಸೆಗಾಗಿ ಪುರಾತನ ಗುಡಿ ಗೋಪುರಗಳ, ಶಿಲ್ಪಿಗಳ ಹಾಗೂ ಸ್ಮಾರಕ ನಾಶ ಪಡಿಸುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ವಿಷಾದಿಸಿದರು.
ಕನಸು ನನಸಾಗಲಿಲ್ಲ: ಶೋಷಿತರ, ಅಲ್ಪಸಂಖ್ಯಾತ, ಹಿಂದುಳಿದ ವರ್ಗಗಳ ಪರವಾಗಿ ಮಾತನಾಡುವುದು ತಪ್ಪೆ? ಈ ಭಾಗಕ್ಕೆ ಈಗಾಗಲೇ 60 ಗ್ರಾಮಗಳಲ್ಲಿ ಸಮಗ್ರ ಶಿಕ್ಷಣ ದೊರಕಿಸುವ ನಿಟ್ಟಿನಲ್ಲಿ ಪ್ರಾಥಮಿಕ ಶಾಲೆಗಳನ್ನು ಪ್ರಾರಂಭಿಸಿದೆ. ಈ ಭಾಗದ ಜನರು ಅದರ ಪ್ರಯೋಜನ ಪಡೆಯಲ್ಲಿಲ್ಲ ನಂತರ ಪದವಿ ಪೂರ್ವ, ಪದವಿಯೇತರ ವಿದ್ಯಾಲಯಗಳನ್ನು ತೆರೆದು ಅನೇಕ ಬಡ ವಿದ್ಯಾರ್ಥಿಗಳಿಗೆ ಶೈಕ್ಷಣಿಕವಾಗಿ ಸಹಾಯವಾಗುವಂತೆ ಮಾಡಿದೆ. ಮುಂದಿನ ದಿನಗಳಲ್ಲಿ ಬಡ ವಿದ್ಯಾರ್ಥಿಗಳು ಭವಿಷ್ಯ ರೂಪಿಸಲು ಪ್ರಯತ್ನಿಸಿ ಶಿಕ್ಷಣ ಕ್ರಾಂತಿಯನ್ನು ಮಾಡಿ ವಿಶ್ವವಿದ್ಯಾಲಯ ತೆರೆಯಲು ಕನಸು ಕಂಡಿದ್ದೆ. ಆದರೆ ಸ್ಥಳೀಯರ ಮತ್ತು ಸರಕಾರದ ಅಸಹಕಾರದಿಂದ ನನ್ನ ಕನಸು ಕನಸಾಗಿಯೇ ಉಳಿಯಿತು ಎಂದರು.
ರಾಜ್ಯ ಹಿಂದುಳಿದ ವರ್ಗಗಳ ಆಯೋಗ ಸದಸ್ಯ ಪ್ರೊ.ಎನ್.ವಿ. ನರಸಿಂಹಯ್ಯ ಮಾತನಾಡಿ, ಮಠದ ಅಸ್ತಿಪಾಸ್ತಿಗೆ ಧಕ್ಕೆ ತರುತ್ತಿರುವ ಕೆಲ ಕೀಡಿಗೇಡಿಗಳು ಅಪಪ್ರಚಾರ ಮಾಡಿ ನಿಧಿ ಎಂಬ ಊಹಾಪೋಹ ತೇಲಿ ಬೀಡುತ್ತಿದ್ದಾರೆ ಎಂದರು. ನಿಡಮಾಮಿಡಿ ಸಂಸ್ಥಾನದ ಕಾರ್ಯದರ್ಶಿ ರೇಣುಕಾರಾಧ್ಯ, ಡಿ.ವಿ. ದೇವರಾಜ್, ಟ್ರಸ್ಟಿಗಳಾದ ಗುರುಮೂರ್ತಿ, ಬಸಮ್ಮ, ಕೆ.ಎಂ.ನಾಗರಾಜ್, ಡಾ.ಕೆ.ಎಂ.ನಯಾಜ್ ಅಹಮದ್, ತಾಪಂ ಮಾಜಿ ಅಧ್ಯಕ್ಷ ಎಸ್.ಎಸ್. ರಮೇಶ್ಬಾಬು, ಬಿಜೆಪಿ ಮಂಡಲ ಅಧ್ಯಕ್ಷ ಗೂಳೂರು ಲಕ್ಷ್ಮಿನಾರಾಯಣ, ಅಹಿಂದ ಮುಖಂಡ ಎಂ.ಹೆಚ್. ಅಬ್ದುಲ್ಲಾ, ಜಿಪಂ ಉಪಾಧ್ಯಕ್ಷ ಚೆಂಡೂರ್ ವೆಂಕಟೇಶ, ಕರವೇ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜಿ.ಚಂದ್ರಶೇಖರ್, ರಾಜಸ್ವ ನಿರೀಕ್ಷಕ ಸುಬ್ರಮಣ್ಯಂ ಮತ್ತಿತರರು ಹಾಜರಿದ್ದರು.
ಬಾಗೇಪಲ್ಲಿ ಐತಿಹಾಸಿಕ ಪ್ರಸಿದ್ದ ನಿಡುಮಾಮಿಡಿ ಮಹಾಸಂಸ್ಥಾನದ ಮಠದಲ್ಲಿ ನಿಧಿಯನ್ನು ತೆಗೆಯುವುದರ ಬಗ್ಗೆ ಹೆಚ್ಚಿನ ಪ್ರಚಾರವನ್ನು ನೀಡಿದ್ದರಿಂದ ತಾಲ್ಲೂಕು ಸೇರಿದಂತೆ ಬೆಂಗಳೂರು ಮತ್ತು ನೆರೆಯ ಆಂಧ್ರಪ್ರದೇಶಗಳಿಂದ ಸಾವಿರಾರು ಜನರು ಕುತೂಹಲದಿಂದ ಕಾದು ಕುಳಿತಿದ್ದರು. ಸಂಬಂಧಪಟ್ಟ ಅಧಿಕಾರಿಗಳು, ಮಠದ ಅಭಿಮಾನಿಗಳು ಅಪಾರವಾದ ನಿಧಿ ಇದೆ ಎಂದು ಹೇಳಲಾಗುತ್ತಿದ್ದ ಮಠದ ಆವರಣದಲ್ಲಿರುವ ದೊಡ್ಡ ಕಲ್ಲಿನ ಗುಂಡಿನ ಕೆಳಗೆ ಅಗೆಯುವಾಗ. ಇನ್ನೇನು ಕಲ್ಲಿನ ಗುಂಡನ್ನು ಭೂಮಿಯಿಂದ ಹೊರತೆಗೆದರೆ ಆಪಾರ ಪ್ರಮಾಣದಲ್ಲಿ ವಜ್ರ, ವೈಢೂರ್ಯ,ಬಂಗಾರ ಹಾಗೂ ಬಂಗಾರದ ನಾಣ್ಯಗಳು ಸಿಗುತ್ತೆ ಎಂದು ಕಾತುರದಿಂದ ನೋಡುತ್ತಿದ್ದರು.
ಆದರೆ ಅಲ್ಲಿ ಆಗಿದ್ದೆ ಬೇರೆ ಅಧಿಕಾರಿಗಳು ಹಾಗೂ ಸಾರ್ವಜನಿಕರು ನಿಧಿ ಶೋಧನೆಯ ಸ್ಥಳಕ್ಕೆ ಬಂದು ನೋಡಿದಾಗ ಭಾರೀ ಗಾತ್ರದ ಒಂದು ಕಲ್ಲಿನ ಗುಂಡು.ಈ ಕಲ್ಲಿನ ಗುಂಡಿನ ಮೇಲ್ಭಾಗದಲ್ಲಿ ವೀರಭಧ್ರ ಸ್ವಾಮಿಯ ಮೂರ್ತಿಯನ್ನು ಕೆತ್ತಲಾಗಿದ್ದ ಭಾಗವನ್ನು ಈ ಹಿಂದಯೇ ತೆಗಿಸಲಾಗಿತ್ತು. ಉಳಿದಿರುವಂತಹ ಗುಂಡು ಭೂಮಿಯಲ್ಲಿಂದ ಕಲ್ಲಿನ ಗುಂಡನ್ನು ಹೊರಕ್ಕೆ ತೆಗೆಯುವ ಪ್ರಯತ್ನ ಮಾಡಿ ಕೊನೆಗೆ ಅದು ಸಾಧ್ಯವಾಗುವುದಿಲ್ಲ.
ಈ ಕಲ್ಲಿನ ಗುಂಡನ್ನು ತೆಗೆಯುವುದರಿಂದ ಮಠದ ಕೋಟೆಯ ಗೋಡೆಗೆ ಹಾನಿಯಾಗುತ್ತದೆ. ಈ ಕಲ್ಲಿನ ಗುಂಡಿನ ಕೆಳಗೆ ಯಾವುದೇ ರೀತಿಯಲ್ಲಿ ನಿಧಿಯನ್ನು ಇಟ್ಟಿರಲ್ಲಿಕ್ಕೆ ಸಾಧ್ಯವಿಲ್ಲ ಎಂದು ನಿಧಿ ಶೋಧನೆಯ ಕಾರ್ಯಕ್ಕೆ ಮಂಗಳ ಹಾಡಲಾಯಿತು.ನಿಧಿ ಇದೆಯೆಂಬ ಅಂತೆ-ಕಂತೆಗಳಿಗೆ ತೆರೆ ಎಳೆಯಲಾಯಿತು.
ತೀವ್ರ ಕುತೂಹಲದಿಂದ ಎದುರು ನೋಡುತ್ತಿದ್ದ ಜನರು ಬಂದ ದಾರಿಗೆ ಸುಂಕವಿಲ್ಲ ಎನ್ನುವಂತೆ ನಿರಾಸೆಯಿಂದ ಜಾಗ ಖಾಲಿ ಮಾಡಿದರು.
ಪ್ರಾಚೀನ ಹಾಗೂ ಐತಿಹಾಸಿಕ ಪ್ರಸಿದ್ದ ನಿಡುಮಾಮಿಡಿ ಮಹಾಸಂಸ್ಥಾನದ ಮಠದಲ್ಲಿ ನಿಧಿ ಇದೆಯೆಂದು ಹಲವು ವರ್ಷಗಳಿಂದ ಪ್ರಚಾರದಲ್ಲಿತ್ತು. ಈ ಮಠವು ಸುಮಾರು ಒಂದು ಸಾವಿರ ವರ್ಷಗಳ ಹಿಂದೆ ಸ್ಥಾಪನೆ ಮಾಡಿದ್ದು ಚೋಳರ ಹಾಗೂ ಶ್ರೀಕಷ್ಣದೇವರಾಯರ ಕಾಲದಲ್ಲಿ ಈ ಮಠ ಸ್ಥಾಪನೆಯಾಗಿದೆ.
ಈ ಮಠದಲ್ಲಿ ಆಪಾರವಾದ ಸಂಪತ್ತು(ನಿಧಿ) ಇರಬಹುದು ಎಂದು ಈ ಭಾಗದ ಹಿರಿಯರು ಹೇಳುವುದುಂಟು.ಈ ಸಂಬಂಧ ಅನೇಕ ಬಾರಿ ಈ ಮಠದಲ್ಲಿರುವ ದೇವರ ವಿಗ್ರಹಗಳನ್ನು,ಕೋಟೆಯ ಗೋಡೆ, ಕರಿಬಸವಣ್ಣ ಮುಂತಾದವುಗಳನ್ನು ನಿಧಿಯ ಆಸೆಗೆ ಧ್ವಂಸ ಮಾಡಲಾಗಿದೆ.ಹಲವು ವರ್ಷಗಳ ಹಿಂದೆ ಮಠದಲ್ಲಿದ್ದ ಗೋಪುರದಲ್ಲಿ ನಿಧಿ ಸಿಕ್ಕಿದೆ ಎಂದು ಈ ಭಾಗದ ಜನರು ಹೇಳಿಕೊಳ್ಳುತ್ತಾರೆ.
ಇನ್ನೂ ಮಠದಲ್ಲಿ ಹಾಗೂ ಕೋಟೆಯ ಗೋಡೆಗಳಲ್ಲಿ ಹಾಗೂ ಬಸವಣ್ಣ ವಿಗ್ರಹದ ಕೆಳಗೆ ನಿಧಿ ಇದೆ ಎಂದು ಇನ್ನೂ ಹೇಳಿಕೊಳ್ಳುತ್ತಿರುವ ಹಿನ್ನೆಲೆಯಲ್ಲಿ ನಿಡುಮಾಮಿಡಿ ಪೀಠಾಧ್ಯಕ್ಷ ಶ್ರೀವೀರಭದ್ರಚನ್ನಮಲ್ಲ ದೇಶಿಕೇಂದ್ರ ಸ್ವಾಮಿಜೀರವರು ಸೇರಿದಂತೆ ಕಂದಾಯ ಇಲಾಖೆಯ ಅಧಿಕಾರಿಗಳು, ಪೊಲೀಸ್,ವಿವಿಧ ಪಕ್ಷಗಳ ಮುಖಂಡರು,ಸಾರ್ವಜನಿಕರು, ಶ್ರೀಮಠದ ಭಕ್ತರ,ಅಭಿಮಾನಿಗಳ ಹಾಗೂ ಟ್ರಸ್ಟಿಗಳ ಸಮ್ಮುಖದಲ್ಲಿ ನಿಧಿ ಶೋಧನೆ ಮಾಡುವ ಕಾರ್ಯವನ್ನು ಸೋಮವಾರ ಕೈಗೊಳ್ಳಲಾಯಿತು.