'ಮೂಢನಂಬಿಕೆ ತಡೆ ಕಾಯ್ದೆ ಜಾರಿಯಾಗಲಿ'
ಕ.ಪ್ರ.ವಾರ್ತೆ ಮಾಲೂರು ಸೆ.23
ಮೂಢನಂಬಿಕೆ ನಿರ್ಮೂಲನಾ ಕಾಯ್ದೆಯನ್ನು ಕೇಂದ್ರ ಸರ್ಕಾರವು ಸಂಸತ್ನಲ್ಲಿ ಮಂಡಿಸಿ ಜಾರಿ ತರಬೇಕು ಎಂದು ಪೆರಿಯಾರ್ ಪ್ರಶಸ್ತಿ ವಿಜೇತರಾದ ಸಮತಾ ಸೈನಿಕದಳ ಹಾಗೂ ಆರ್ಪಿಐನ ರಾಜ್ಯಾಧ್ಯಕ್ಷ ಎಂ. ವೆಂಕಟಸ್ವಾಮಿ ಆಗ್ರಹಿಸಿದರು.
ಸ್ಥಳೀಯ ಸಮತಾ ಸೈನಿಕ ದಳದ ಘಟಕವು ಪಟ್ಟಣದ ಕೃಷಿಕ ಸಮಾಜದಲ್ಲಿ ಭಾನುವಾರ ಆರ್ಪಿಐ ರಾಜ್ಯಾಧ್ಯಕ್ಷ ಎಂ.ವೆಂಕಟಸ್ವಾಮಿ ಅವರು ಪೆರಿಯಾರ್ ಪ್ರಶಸ್ತಿ ಪಡೆದ ಹಿನ್ನೆಲೆಯಲ್ಲಿ ಆಯೋಜಿಸಿದ್ದ ಅಭಿನಂದನಾ ಸಭೆಯಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿ, ಮುಂದುವರಿದ ಜನಾಂಗದವರು ಮೂಢನಂಬಿಕೆಗಳ ಮೂಲಕ ದೇಶದಲ್ಲಿ ಬೆಳೆಸಿರುವ ಪುರೋಹಿತ ಶಾಯಿಗಳ ಗುರ್ಭಗುಡಿ ಸಂಸ್ಕೃತಿಯಿಂದ ದಲಿತರು ಶೋಷಣೆಗೆ ಒಳಗಾಗುತ್ತಿದ್ದಾರೆ. ತಮ್ಮ ಭವಿಷ್ಯ ಗೊತ್ತಿಲ್ಲದೆ ಕೇವಲ ತಮ್ಮ ಜೀವನಕ್ಕೆ ಜ್ಯೋತಿಷ್ಯ ಹೇಳುವ ಸ್ವಾಮೀಜಿಗಳಿಂದ ದೇಶ ಅಭಿವೃದ್ಧಿ ಸಾಧ್ಯವಿಲ್ಲ. ವೈಚಾರಿಕತೆ ಅಡಿಯಲ್ಲಿ ದೇಶವನ್ನು ಮುನ್ನಡೆಸಿದಾಗ ಮಾತ್ರ ಮೌಢ್ಯಕ್ಕೆ ಬೆಲೆ ನೀಡದ ಜಪಾನ್, ಅಮೆರಿಕ ರೀತಿ ದೇಶ ಅಭಿವೃದ್ಧಿಯಾಗುತ್ತದೆ ಎಂದರು.
ಮಹಾರಾಷ್ಟ್ರ ಜಾರಿ ತರಲಿರುವ ಮೂಢನಂಬಿಕೆ ನಿಷೇಧ ಕಾಯ್ದೆ ಇಡೀ ದೇಶದಲ್ಲಿ ಜಾರಿಗೊಳಿಸಬೇಕು. ಕೇಂದ್ರ ಸರ್ಕಾರವು ಈ ಕಾಯ್ದೆಯನ್ನು ಸಂಸತ್ನಲ್ಲಿ ಮಂಡಿಸಬೇಕು ಎಂದು ಅಗ್ರಹಿಸಿದರು.
ಪೆರಿಯಾರ್ ಹೆಸರನ್ನು ಉಳಿಸುವ ಕಾರ್ಯವನ್ನು ಅವರ ಮಾದರಿಯ ಹೋರಾಟದಿಂದ ಸಾಧಿಸುವುದಾಗಿ ತಿಳಿಸಿದರು. ಪ್ರಶಸ್ತಿ ಜತೆ ನೀಡಿರುವ 25 ಸಾವಿರಗಳನ್ನು ಪೆರಿಯಾರ್ ಸಾಹಿತ್ಯ ಅಭಿವೃದ್ಧಿಗಾಗಿ ಮೀಸಲಿಟ್ಟಿರುವುದಾಗಿ ಇದೇ ಸಂದರ್ಭದಲ್ಲಿ ತಿಳಿಸಿದರು.
ಬಾಪೂಜಿ ವಿದ್ಯಾಸಂಸ್ಥೆಯ ಅಧ್ಯಕ್ಷ ಹನುಮಂತಯ್ಯ ಮಾತನಾಡಿ, ಮಾನವತಾವಾದಿ ಡಾ. ಬಿ.ಆರ್. ಅಂಬೇಡ್ಕರ್ ಅವರ ಸಮಕಾಲೀನರಾಗಿದ್ದರೂ ರಾಮಸ್ವಾಮಿ ಪೆರಿಯಾರ್ ಅವರು ದಲಿತರಪರ ಧ್ವನಿ ಎತ್ತಿದ್ದ ಮೊದಲ ವ್ಯಕ್ತಿಯಾಗಿದ್ದರು. ಅವರ ಹೋರಾಟಗಳಿಗೆ ಮುಂದಿನ ಮುಖಂಡ ಡಾ. ಅಂಬೇಡ್ಕರ್ ಅವರನ್ನು ಹೆಸರಿಸಿದ ಪೆರಿಯಾರ್ ಅವರು ಈ ದೇಶ ಕಂಡ ಮಹಾನ್ ವಿಚಾರವಾದಿಗಳಲ್ಲಿ ಪ್ರಮುಖರಾಗಿದ್ದರು ಎಂದರು.
ಸಾಹಿತಿ ಜ.ಮು. ಚಂದ್ರ ಮಾತನಾಡಿದರು. ವಕೀಲ ಮುನಿಕೃಷ್ಣಪ್ಪ, ದಲಿತ ಸೈನಿಕ ಸಮಿತಿಯ ಜಿಲ್ಲಾಧ್ಯಕ್ಷ ವಿ.ಬಿ. ಗಿರಿ ಮಾತನಾಡಿದರು. ರೈತ ಸಂಘದ ಸಂಚಾಲಕ ಗೋಪಾಲ್, ದಲಿತ ಸೈನಿಕ ದಳದ ಕಾರ್ಯದರ್ಶಿ ಸಂಜೀವಯ್ಯ, ತಾಲೂಕು ಅಧ್ಯಕ್ಷ ಗೋವಿಂದ್ ಇದ್ದರು.