'ವಿದ್ಯಾರ್ಥಿ ವೃಂದ ಕನ್ನಡ ಸಾಹಿತ್ಯ ಗಂಧ ಅರಿಯಲಿ'
ಕ.ಪ್ರ.ವಾರ್ತೆ ಶಿಡ್ಲಘಟ್ಟ ಸೆ. 23
ಎಲ್ಲ ವಿದ್ಯಾರ್ಥಿಗಳು ಕನ್ನಡ ಸಾಹಿತ್ಯ ಅಧ್ಯಯನ ಮಾಡಬೇಕು ಎಂದು ಪ್ರೊ. ಎಚ್.ಎಸ್. ಲಕ್ಷ್ಮೀನಾರಾಯಣ ಭಟ್ಟ ತಿಳಿಸಿದರು.
ಪಟ್ಟಣದ ಪ್ರಥಮದರ್ಜೆ ಕಾಲೇಜಿನಲ್ಲಿ ತಾಲೂಕು ಸಾಹಿತ್ಯ ಪರಿಷತ್ ವತಿಯಿಂದ ಶನಿವಾರ ಡಾ. ಡಿವಿಜಿ ಅವರ 125ನೇ ಜನ್ಮದಿನಾಚರಣೆ ಪ್ರಯುಕ್ತ 'ಮಂಕುತಿಮ್ಮನ ಕಗ್ಗ' ಕುರಿತು ಉಪನ್ಯಾಸ ನೀಡಿ, ಕೇವಲ ಸಿರಿಗನ್ನಡಂ ಗೆಲ್ಗೆ ಎಂದರೆ ಕನ್ನಡ ಉಳಿಯದು. ಕಾಲೇಜು ಪ್ರಾಧ್ಯಾಪಕರು ತಮ್ಮ ಹಣದಲ್ಲಿ ಕನ್ನಡದ ಕವಿಗಳ ಸಾಲುಗಳನ್ನು ಅಲ್ಲಲ್ಲಿ ಬರೆಸಿ ಕನ್ನಡ ಬಳಸಿ ಬೆಳೆಸಿ ಎಂದು ಹೇಳಿದರು.
ಐದು ಭಾಷೆಗಳ ಪಾಂಡಿತ್ಯವಿದ್ದ ಡಿವಿಜಿ ಅವರು ರಚನೆಗಳು ಸಾರ್ವಕಾಲಿಕ. ಡಿವಿಜಿ ಅವರ ಬರಹಗಳನ್ನು ಓದಿ ಜ್ಞಾನ ಹೆಚ್ಚಿಸಿಕೊಳ್ಳಬೇಕೆಂದು ತಿಳಿಸಿದರು.
ಅವರು ರಚಿಸಿದ ಮಂಕುತಿಮ್ಮನ ಕಗ್ಗ ಮೇಲ್ನೋಟದ ಅರ್ಥದೊಂದಿಗೆ ಆಧ್ಯಾತ್ಮಿಕ ಚಿಂತನೆಗಳನ್ನೂ ಅರ್ಥ ಮಾಡಿಕೊಳ್ಳಬೇಕೆಂದು ತಿಳಿಸಿದರು.
ಈ ಸಂದರ್ಭದಲ್ಲಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ರಾಜ್ಯ ಪ್ರಶಸ್ತಿ ವಿಜೇತ ಶಿಕ್ಷಕ ಗಂಗಾಪುರ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕ ಮುನಿವೆಂಕಟಸ್ವಾಮಿ, ಜಿಲ್ಲಾ ಪ್ರಶಸ್ತಿ ವಿಜೇತ ಶಿಕ್ಷಕರಾದ ವರದನಾಯಕನಹಳ್ಳಿಯ ರಾಮಕೃಷ್ಣ ಮತ್ತು ಎಸ್‌ಆರ್‌ಇಟಿ ಪ್ರೌಢಶಾಲೆಯ ರಾಜಣ್ಣ ಅವರನ್ನು ಸನ್ಮಾನಿಸಲಾಯಿತು.
ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಎಂ. ನಾರಾಯಣಸ್ವಾಮಿ, ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ವೈ.ಎಲ್. ಹನುಮಂತರಾವ್, ನಿಕಟಪೂರ್ವ ಅಧ್ಯಕ್ಷ ಎಸ್.ವಿ.ನಾಗರಾಜರಾವ್, ತಾಲೂಕು ಅಧ್ಯಕ್ಷ ವಿ. ಕೃಷ್ಣ, ಕೋಶಾಧ್ಯಕ್ಷ ವಾಸುದೇವಮೂರ್ತಿ, ಕಾರ್ಯದರ್ಶಿ ಮಂಜುನಾಥ್, ಡಾ. ಎಂ. ಚಂದ್ರಾನಾಯಕ್, ಸರಸ್ವತಿ ವಿದ್ಯಾಸಂಸ್ಥೆಯ ಕಾರ್ಯದರ್ಶಿ ಶ್ರೀಕಾಂತ್ ಭಾಗವಹಿಸಿದ್ದರು.