ಸರ್ಕಾರಿ ಸವಲತ್ತು ಸದುಪಯೋಗವಾಗಲಿ
ಚಿಂತಾಮಣಿ: ಸರ್ಕಾರದಿಂದ ದೊರೆಯುವ ಸೌಲಭ್ಯಗಳನ್ನು ಸದುಪಯೋಗಪಡಿಸಿಕೊಂಡು ಶೈಕ್ಷಣಿಕವಾಗಿ ಅಭಿವೃದ್ಧಿ ಹೊಂದಬೇಕೆಂದು ಶಿಡ್ಲಘಟ್ಟ ಶಾಸಕ ಎಂ.ರಾಜಣ್ಣ ಕಿವಿಮಾತು ಹೇಳಿದ್ದಾರೆ.
ತಾಲೂಕಿನ ಚಿಲಕಲನೇರ್ಪು ಹೋಬಳಿಯ ಕೋರ್ಲಪರ್ತಿ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ಸೋಮವಾರ ರಾಷ್ಟ್ರೀಯ ಮಾಧ್ಯಮಿಕ ಶಿಕ್ಷಕ ಯೋಜನೆಯಡಿಯಲ್ಲಿ ರು. 21 ಲಕ್ಷ ವೆಚ್ಚದಲ್ಲಿ ಗ್ರಂಥಾಲಯ ಹಾಗೂ 2 ಕೊಠಡಿ ಮತ್ತು ಅಡಿಗೆ ಕೋಣೆ ನಿರ್ಮಾಣಕ್ಕೆ ಗುದ್ದಲಿಪೂಜೆ ನೆರವೇರಿಸಿ ಮಾತನಾಡಿದರು.
ಹಳ್ಳಿಗಾಡಿನ ವಿದ್ಯಾರ್ಥಿಗಳು ಶೈಕ್ಷಣಿಕವಾಗಿ ಅಭಿವೃದ್ಧಿ ಹೊಂದಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಯೋಜನೆಗಳಾದ ಬೈಸಿಕಲ್, ಕ್ಷೀರ ಯೋಜನೆ ಮತ್ತು ವಿವಿಧ ಕರಕುಶಲ ತರಬೇತಿ ಪಡೆಯಲು ಪ್ರೋತ್ಸಾಹ ಧನ ಉಪಯೋಗಿಸಿಕೊಂಡು ಸಮಾಜದಲ್ಲಿ ಎಲ್ಲಾ ರಂಗಗಳಲ್ಲಿಯೂ ಹೆಚ್ಚು ಹೆಚ್ಚು ಅಭಿವೃದ್ಧಿ ಹೊಂದಲು ಶಾಸಕ ರಾಜಣ್ಣ ವಿದ್ಯಾರ್ಥಿಗಳಲ್ಲಿ ಆತ್ಮಸ್ಥೈರ್ಯ ತುಂಬಿದರು. ಭವ್ಯ ಭಾರತ ನಿರ್ಮಾಣ ಮಾಡುವ ಶಕ್ತಿ ವಿದ್ಯಾರ್ಥಿಗಳಲ್ಲಿದೆ. ಈ ನಿಟ್ಟಿನಲ್ಲಿ ವಿದ್ಯೆ ಕಡೆ ಹೆಚ್ಚು ಗಮನ ನೀಡಬೇಕೆಂದು ವಿದ್ಯಾರ್ಥಿಗಳಲ್ಲಿ ಮನವರಿಕೆ ಮಾಡಿದರು.
ನಂತರ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಜಿಲ್ಲಾ ಪಂಚಾಯ್ತಿ ಸದಸ್ಯ ನಂದನವನ ಶ್ರೀರಾಮರೆಡ್ಡಿ ಶಿಕ್ಷಣ ಮಕ್ಕಳ ಜನ್ಮಸಿದ್ದ ಹಕ್ಕು ಪೋಷಕರು ಮಕ್ಕಳನ್ನು ಕಡ್ಡಾಯವಾಗಿ ಶಾಲೆಗೆ ಕಳುಹಿಸಿ ಸಮಾಜದಲ್ಲಿ ಉತ್ತಮ ಪ್ರಜೆಗಳನ್ನು ಮಾಡಲು ಜವಾಬ್ದಾರಿ ಪೋಷಕರ ಹಾಗೂ ಶಿಕ್ಷಕರ ಮೇಲಿದೆಯೆಂದು ಸಭೆಯನ್ನು ಉದ್ದೇಶಿಸಿ ಹೇಳಿದರು.
ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ಜಿ.ರಂಗಯ್ಯ ಮಾತನಾಡಿ, ಶಾಲೆಗೆ ಬೇಕಾಗುವ ಸೌಲತ್ತುಗಳನ್ನು ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಸಂಪೂರ್ಣ ಪ್ರೋತ್ಸಾಹ ಇದ್ದಲ್ಲಿ ಮಾತ್ರ ಗ್ರಾಮೀಣ ಪ್ರದೇಶದ ಶಾಲೆಗಳು ಅಭಿವೃದ್ಧಿ ಹೊಂದಲು ಸಾಧ್ಯವೆಂದು ಹೇಳಿದರು.
ಮನಸ್ಸು ಹತೋಟಿಯಲ್ಲಿರಲಿ: ತಾಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಬಿ.ಜನಾರ್ದನರೆಡ್ಡಿ ವಿವಿಧ ಕ್ರೀಡೆಗಳಲ್ಲಿ ಜಯಶೀಲರಾದ ಮಕ್ಕಳನ್ನು ಅರ್ಹತಾ ಪ್ರಮಾಣ ಪತ್ರ ಹಾಗೂ ನೆನಪಿನ ಕಾಣಿಕೆ ನೀಡಿ ಮಾತನಾಡಿ, ಕ್ರೀಡೆಗಳಲ್ಲಿಯೂ ಸಹ ವಿದ್ಯಾರ್ಥಿಗಳು ಸಕ್ರಿಯವಾಗಿ ಪಾಲ್ಗೊಂಡು ದೈಹಿಕ ಮತ್ತು ಮಾನಸಿಕವಾಗಿ ಮನಸ್ಸನ್ನು ಹತೋಟಿಯಲ್ಲಿಟ್ಟುಕೊಂಡು ಆರೋಗ್ಯವಾಗಿರಲು ಕೋರಿದರು.
ತಾಪಂ ಸದಸ್ಯ ನಾಗರಾಜ್, ಮುಖ್ಯ ಶಿಕ್ಷಕ ಅಜಯ್, ದೈಹಿಕ ಶಿಕ್ಷಕ ನಾಗೇಶ್, ಮುಖಂಡರಾದ ನಡಂಪಲ್ಲಿ ಶ್ರೀನಿವಾಸ್, ವೆಂಕಟರಾಮರೆಡ್ಡಿ , ಭಾರತಿ ಮಲ್ಲಯ್ಯ, ಶಿವಣ್ಣ, ಜಯರಾಮರೆಡ್ಡಿ, ಓಬಣ್ಣ, ತುಳುವನೂರು ರವಿ ಮತ್ತಿತರರು ಭಾಗವಹಿಸಿದ್ದರು.
ನ.13 ರಂದು ಮಕ್ಕಳ ಸಮ್ಮೇಳನ
ಮಾಲೂರು: ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ಕೆಜಿಎಫ್ನಲ್ಲಿ ಮುಂದಿನ ನ.13 ರಂದು ಕೋಲಾರ ಜಿಲ್ಲಾ ಪ್ರಥಮ ಮಕ್ಕಳ ಸಮ್ಮೇಳನ ಹಮ್ಮಿಕೊಂಡಿದ್ದು, ತಾಲೂಕಿನ ಪ್ರತಿಭಾವಂತ ಮಕ್ಕಳು ಸಮ್ಮೇಳನವನ್ನು ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಕಸಾಪ ತಾಲೂಕು ಅಧ್ಯಕ್ಷ ಮಾ.ಗೋ.ಮಧುಸೂಧನ್ ಹೇಳಿದರು.
ಪತ್ರಕರ್ತರ ಭವನದಲ್ಲಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮಕ್ಕಳಲ್ಲಿ ಹುದುಗಿರುವ ಸಾಹಿತ್ಯ ಜ್ಞಾನ ಹೂರ ತರುವ ಪ್ರಯತ್ನ ಈ ಸಮ್ಮೇಳನ ಮೂಲಕ ಮಾಡಲಾಗುತ್ತಿದೆ ಎಂದರು. ಸಮ್ಮೇಳನದಲ್ಲಿ ಎಲ್ಲ ವಿಧವಾದ ಗೋಷ್ಠಿ-ಚರ್ಚೆಗಳು ಮಕ್ಕಳ ನೇತೃತ್ವದಲ್ಲೇ ನಡೆಯಲಿದ್ದು, ತಾಲೂಕಿನ ಆಸಕ್ತ ವಿದ್ಯಾರ್ಥಿಗಳು ತಮ್ಮ ಶಾಲೆಯ ಮುಖ್ಯೋಪಾಧ್ಯಯ ಅಥವಾ ಕ್ಷೇತ್ರ ಶಿಕ್ಷಣಾಧಿಕಾರಿ ಅಥವಾ ಕಸಾಪ ತಾಲೂಕು ಅಧ್ಯಕ್ಷರನ್ನು ಸೆ.30 ರ ಒಳಗೆ ಬೇಟಿ ಮಾಡಬೇಕು ಎಂದು ಮನವಿ ಮಾಡಿದರು.