ಕಪ್ಪು ಪಟ್ಟಿ ಪ್ರದರ್ಶನ ಬೆದರಿಕೆ
ಬಂಗಾರಪೇಟೆ: ಸ್ಥಳೀಯ ಚುನಾಯಿತ ಪ್ರತಿನಿಧಿಗಳನ್ನು ಕಡೆಗಣಿಸಿ ಕಾಮಗಾರಿ ಪೂರ್ಣಗೊಳ್ಳುವ ಮುನ್ನವೆ ಮುಖ್ಯಮಂತ್ರಿಗಳಿಂದ ಕ್ಷೇತ್ರದ ಜನರ ಬಹು ನಿರೀಕ್ಷಿತ ಮಿನಿ ವಿಧಾನಸೌಧ ಕಟ್ಟಡವನ್ನು ಕೋಲಾರದಲ್ಲಿ ಶಾಸಕ ಎಸ್.ಎನ್. ನಾರಾಯಣಸ್ವಾಮಿ ಉದ್ಘಾಟಿಸುತ್ತಿರುವುದನ್ನು ಬಿಜೆಪಿ ಮುಖಂಡರು ತೀವ್ರವಾಗಿ ಖಂಡಿಸಿ ಬುಧವಾರ ಪಟ್ಟಣದಲ್ಲಿ ಕಪ್ಪು ಪಟ್ಟಿ ಧರಿಸಿ ಮೌನ ಪ್ರತಿಭಟನೆ ಮಾಡುವುದಾಗಿ ಜಿಪಂ ಸದಸ್ಯ ಆನಂದ್ ಮತ್ತು ಬಿಜೆಪಿ ಅಧ್ಯಕ್ಷ ಮಾರ್ಕಂಡೇಗೌಡ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿ, ಮಿನಿ ವಿಧಾನಸೌಧ ಪಟ್ಟಣದಲ್ಲಿ ತಲೆ ಎತ್ತಲೆ ಮಾಜಿ ಶಾಸಕ ಎಂ.ನಾರಾಯಣಸ್ವಾಮಿ ಹಾಗೂ ಬಿ.ಪಿ. ವೆಂಕಟಮುನಿಯಪ್ಪ ಕಾರಣಕರ್ತರು. ಸೌರ್ಜನ್ಯಕ್ಕಾದರು ಅವರಿಗೆ ಉದ್ಘಾಟನಾ ಕಾರ್ಯಕ್ಕೆ ಆಮಂತ್ರಣ ನೀಡಿಲ್ಲ. ಕಾಮಗಾರಿ ಪೂರ್ಣಗೊಳ್ಳಲು ಇನ್ನೂ ಮೂರು ತಿಂಗಳು ಬೇಕು. ಇಷ್ಟು ಬೇಗನೆ ಅದು ಆತುರವಾಗಿ ಅದು ಕೋಲಾರದಲ್ಲಿ ಮುಖ್ಯಮಂತ್ರಿಗಳಿಂದ ಚಾಲನೆ ಕೊಡಿಸುವ ಅಗತ್ಯ ಏನಿತ್ತು ಎಂದು ಪ್ರಶ್ನಿಸಿದ ಮುಖಂಡರು, ಮುಖ್ಯಮಂತ್ರಿಗಳನ್ನು ಪಟ್ಟಣಕ್ಕೆ ಕರೆತರುವ ತಾಕತ್ತು ಶಾಸಕರಿಗೆ ಇಲ್ಲವೆ ಅಥವಾ ಮುಖ್ಯಮಂತ್ರಿಗಳು ಕ್ಷೇತ್ರಕ್ಕೆ ಬಂದರೆ ಅಧಿಕಾರ ಕಳೆದುಕೊಳ್ಳುವ ಭೀತಿಯೆ ಎಂಬ ಅನುಮಾನವ್ಯಕ್ತಪಡಿಸಿದರು. ನಾಮಫಲಕದಲ್ಲಿ ಹೆಸರು ಹಾಕಿಸಿಕೊಳ್ಳಲು ಶ್ರಮಿಸುತ್ತಿದ್ದಾರೆ. ಪ್ರಸ್ತುತ ಸನ್ನಿವೇಶವನ್ನು ಗಮನಿಸಿದರೆ ಮುಖ್ಯಮಂತ್ರಿ ಮತ್ತು ಸ್ಥಳೀಯ ಶಾಸಕರ ನಡುವೆ ಹೊಂದಾಣಿಕೆ ಕೊರತೆ ಇರುವುದರಿಂದ ಶಾಸಕರ ಮಾತಿಗೆ ಕಿವಿ ಕೊಡದೆ ಕೋಲಾರದಲ್ಲಿ ಪಟ್ಟಣದ ಕಾಮಗಾರಿಗಳನ್ನು ಚಾಲನೆ ನೀಡುತ್ತಿದ್ದಾರೆ ಎಂದು ಟೀಕಿಸಿದರು. ಇದಲ್ಲದೆ ನಾಲ್ಕು ತಾಲೂಕಿನ ಜನರ ಬಾಯಾರಿಸುವ ಯರಗೋಳ್ ಯೋಜನೆಗೆ ಈಗಗಾಲೇ ಮಾಜಿ ಮುಖ್ಯಮಂತ್ರಿಗಳಾದ ಕುಮಾರಸ್ವಾಮಿ ಚಾಲನೆ ನೀಡಿದ್ದಾರೆ. ಆದರೂ ನಾಳೆ ಬುಧವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಇದನ್ನೂ ಕೋಲಾರದಲ್ಲೆ ಮತ್ತೊಮ್ಮೆ ಚಾಲನೆ ನೀಡುತ್ತಿರುವುದು ಹಾಸ್ಯಸ್ಪದವಾಗಿದೆ. ಹಳೇ ಬಾಟಲಿಯಲ್ಲಿ ಹೊಸ ಮದ್ದು ಹಾಕಿಕೊಟ್ಟಂತಿದೆ ಕಾಂಗ್ರೆಸ್ ಸರ್ಕಾರದ ಕಾರ್ಯವೈಖರಿ ಎಂದು ವ್ಯಂಗ್ಯವಾಡಿದರಲ್ಲದೆ ಮುಖ್ಯಮಂತ್ರಿಗಳು ಇಷ್ಟಕ್ಕೆ ಕೋಲಾರಕ್ಕೆ ಯಾವ ಪುರುಷಾರ್ಥಕ್ಕೆ ಬರಬೇಕು ಬೆಂಗಳೂರಿನಲ್ಲೆ ಚಾಲನೆ ಕೊಡಬಹುದು ಮೊದಲು ಆನ್‌ಲೈನ್ ಉದ್ಘಾಟನೆ ಕಾರ್ಯವನ್ನು ಪಕ್ಕಕ್ಕೆ ಇಟ್ಟು ಆಯಾ ಪ್ರದೇಶಕ್ಕೆ ಹೋಗಿ ಕಾಮಗಾರಿಗಳನ್ನು ಚಾಲನೆ ನೀಡಬೇಕು ಎಂದರು.
ಪತ್ರಿಕಾಗೋಷ್ಠಿಯಲ್ಲಿ ಜಿಪಂ ಸದಸ್ಯ ಎಂ.ಎಸ್. ಆನಂದ್, ತಾ-ಬಿಜೆಪಿ ಅಧ್ಯಕ್ಷ ಮಾರ್ಕಂಡೇಗೌಡ, ತಾಪಂ ಅಧ್ಯಕ್ಷ ರೇಣುಕಾ ಬಾಲಚಂದ್ರ, ಮುಖಂಡರಾದ ಮೋಹನ್ ಮೂರ್ತಿ, ಜುಂಜನಹಳ್ಳಿ ನಾರಾಯಣಸ್ವಾಮಿ, ಅಮರೇಶ್ ಇದ್ದರು.