ಕಲಾವಿದರಿಗೆ ಆರ್ಥಿಕ ನೆರವು ನೀಡಲು ಅರ್ಕೆಸ್ಟ್ರಾ
ಚಿಕ್ಕಬಳ್ಳಾಪುರ: ನಿವೃತ್ತ, ಆಶಕ್ತ, ವೃದ್ಧ, ಬಾಲ ಕಲಾವಿದರಿಗೆ ಆರ್ಥಿಕ ನೆರವು ನೀಡಲು ಜೂನಿಯರ್ ರಾಜ್ಕುಮಾರ್ ಅವರ ನೇತೃತ್ವದಲ್ಲಿ ಶ್ರೀ ಕಲಾವಿದರ ಆಶ್ರಯದ ವಿಶ್ವ ಕಲಾಧಾಮ ಸಂಘಟನೆ ನಗರದ ಒಕ್ಕಲಿಗರ ಕಲ್ಯಾಣ ಮಂಟಪದಲ್ಲಿ 25 ರಂದು ಸಂಜೆ 6 ಗಂಟೆಗೆ ರಸಸಂಜೆ ಅರ್ಕೆಸ್ಟ್ರಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.
ಕಾರ್ಯಕ್ರಮವನ್ನು ಶಾಸಕ ಡಾ.ಕೆ. ಸುಧಾಕರ್ ಉದ್ಘಾಟನೆ ಮಾಡಲಿದ್ದಾರೆ. ಮಾಜಿ ಶಾಸಕ ಎಸ್.ಎಂ. ಮುನಿಯಪ್ಪ, ಜಿಪಂ ಸದಸ್ಯೆ ಅನಿತಾ ರವೀಂದ್ರ ರೆಡ್ಡಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೃಷ್ಣ ಮೂರ್ತಿ ಭಾಗವಹಿಸಲಿದ್ದಾರೆ. ಅಂಧ ಕಲಾವಿದರಾದ ಮಹಾಲಿಂಗಯ್ಯ ಮಠದ್, ಮಂಜುನಾಥ್, ವೆಂಕಟೇಶ್, ಹುಸೇನ್ ಭಾನು, ಶಂಕರ್, ಶಾಂತಾಭಾಯಿರವರನ್ನು ಸನ್ಮಾನಿಸಲಾಗುವುದು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಜೂನಿಯರ್ ರಾಜ್ ಕುಮಾರ್, ಬೆಂಗಳೂರಿನ ಕುಂಬಳಗೂಡು ತಮ್ಮಣ್ಣಪ್ಪ ದೇವಸ್ಥಾನದ ಬಳಿ ಶ್ರೀ ಕಲಾವಿದರ ಆಶ್ರಯದ ವಿಶ್ವ ಕಲಾಧಾಮ ಸಂಘಟನೆ ಸತತ 20 ವರ್ಷಗಳಿಂದ ರಾಜ್ಯ ವಿವಿಧ ಕಡೆ ಕಲಾ ಪ್ರದರ್ಶನಗಳನ್ನು ನಡೆಸಿ ಬಂದ ಲಾಭಾಂಶದಿಂದ ಎರಡು ಎಕರೆ ಭೂಮಿಯನ್ನು ಖರೀದಿಸಿ ವಿಶ್ವ ಕಲಾಧಾಮ ಆಶ್ರಮವನ್ನು ನಿರ್ಮಿಸಲು ಮುಂದಾಗಿದ್ದು ಈಗ ಸಂಗೀತ ಪಾಠಶಾಲೆ, ಯಕ್ಷಗಾನ, ಭರತನಾಟ್ಯ, ಜಾನಪದ ಪಾಠಶಾಲೆಗಳನ್ನು ಒಳಗೊಂಡಂತೆ ಕೇವಲ 50 ಮಂದಿಗೆ ಆಗುವಷ್ಟು ಕಟ್ಟಡ ನಿರ್ಮಿಸಲಾಗಿದೆ. ಕಟ್ಟಡವನ್ನು ಮತ್ತಷ್ಟು ವಿಸ್ತರಿಸಿ ಉಚಿತ ಊಟ, ವಸತಿಗಳೊಂದಿಗೆ ವಿವಿಧ ರೀತಿಯ ಕಲೆಗಳ ತರಬೇತಿಯನ್ನು ನೀಡಲು ಉದ್ದೇಶಿಸಲಾಗಿದೆ. ಈ ಹಿನ್ನೆಲೆಯಲ್ಲಿ ರಸಸಂಜೆ ಕಾರ್ಯಕ್ರಮವನ್ನು ಹಮ್ಮಿಕೊಂಡು ಆರ್ಥಿಕ ಸಂಪನ್ಮೂಲವನ್ನು ಕ್ರೋಢೀಕರಿಸಲಾಗುತ್ತಿದೆ. ಇದರ ಭಾಗವಾಗಿ ನಗರದ ಒಕ್ಕಲಿಗರ ಕಲ್ಯಾಣ ಮಂಟಪದಲ್ಲಿ ನಡೆಯುತ್ತಿರುವ ರಸಸಂಜೆ ಕಾರ್ಯಕ್ರಮದಲ್ಲಿ ರಾಜ್ಯದ ಖ್ಯಾತ ನಟರನ್ನು ಹೋಲುವ ತದ್ರೂಪಿ ಕಲಾವಿದರು ಭಾಗವಹಿಸಿ ಹಾಡು, ನೃತ್ಯ, ಹಾಸ್ಯಗಳೊಂದಿಗೆ ಜನರನ್ನು ರಂಜಿಸಲಿದ್ದಾರೆ. ಈ ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಯಶಸ್ವಿಗೊಳಿಸಬೇಕೆಂದು ಅವರು ಕೋರಿದರು.