ಕಾಡುತ್ತಿದೆ ಕಾಲು ಬಾಯಿ ಜ್ವರ
ಚಿಕ್ಕಬಳ್ಳಾಪುರ: ಪಶು ಸಂಗೋಪನಾ ಇಲಾಖೆ ಎಷ್ಟೇ ಪ್ರಚಾರ ಕೈಗೊಂಡರೂ ರೈತರು ಕಿವಿಗೊಡದೇ ಅವೈಜ್ಞಾನಿಕ ಮಾತುಗಳನ್ನು ನಂಬಿ ನಿರ್ಲಕ್ಷ್ಯ ವಹಿಸಿದ ಪರಿಣಾಮ ಕಾಲು ಬಾಯಿ ಜ್ವರ ವ್ಯಾಪಕವಾಗಿ ಹರಡುತ್ತ ರಾಸುಗಳನ್ನು ಬಲಿ ತೆಗೆದುಕೊಳ್ಳುತ್ತಿದೆ.
ಈ ಮೂಲಕ ಬ್ಯಾಂಕುಗಳಿಂದ ಸಾಲವನ್ನು ಮಾಡಿ ಖರೀದಿಸಿದ್ದ ರಾಸುಗಳು ಸಾವನ್ನಪ್ಪುತ್ತಿರುವುದರಿಂದ ಲಾಭದ ನಿರೀಕ್ಷೆ ತಲೆಕೆಳಕಾಗಿ ಇನ್ನೂ ಬಹಳಷ್ಟು ಮಂದಿ ರೈತರು ಆರ್ಥಿಕ ಸಂಕಷ್ಟಕ್ಕೀಡಾಗಿ ಪಶ್ಚತ್ತಾಪ ಪಡುತ್ತಿದ್ದಾರೆ.
ಈಗಾಗಲೇ ಕೋಲಾರ ಜಿಲ್ಲೆಯಲ್ಲಿ 300 ಕ್ಕೂ ಹೆಚ್ಚು ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ 73 ಹಸುಗಳು ಕಾಲುಬಾಯಿ ಜ್ವರಕ್ಕೆ ಮೃತಪಟ್ಟಿದ್ದು ಕಳೆದ ಒಂದು ವಾರದಲ್ಲಿ ಚಿಕ್ಕಬಳ್ಳಾಪುರದಲ್ಲಿ 8 ಹಸುಗಳು ಬಲಿಯಾಗಿವೆ. ಇದು ಸರ್ಕಾರದಿಂದ ಸಬ್ಸಿಡಿ ನೆರವನ್ನು ಪಡೆದುಕೊಂಡು ರೈತರು ಖರೀದಿಸಿ ವಿಮೆ ಯೋಜನೆಗೆ ಒಳಪಟ್ಟಿರುವ ಹಸುಗಳಿಗೆ ಸಂಬಂಧಪಟ್ಟಂತೆ ಪಶು ಸಂಗೋಪನಾ ಇಲಾಖೆಯ ಅಧಿಕಾರಿಗಳು ಹೇಳುವ ಒಂದು ಲೆಕ್ಕ. ಆದರೆ, ಇದಕ್ಕೂ ಹೆಚ್ಚಿನ ಪ್ರಮಾಣದಲ್ಲಿ ಕಾಲುಬಾಯಿ ಜ್ವರ ರಾಸುಗಳ ಜೀವವನ್ನು ನುಂಗಿ ಹಾಕಿದೆ. ನೂರಾರು ಸಂಖ್ಯೆಯಲ್ಲಿ ರಾಸುಗಳಿಗೆ ತಗುಲಿದೆ.
ಗೌರಿಬಿದನೂರು ತಾಲೂಕಿನಲ್ಲಿ ಬಡ ರೈತ ಕುಟುಂಬಕ್ಕೆ ಸೇರಿರುವ ಮನೆಯೊಂದರಲ್ಲಿಯೇ 6 ಹಸುಗಳು ಕಾಲುಬಾಯಿ ಜ್ವರಕ್ಕೆ ಸಾವನ್ನಪ್ಪಿ ರೈತರನ್ನು ಬ್ಯಾಂಕಿನಲ್ಲಿ ಮಾಡಿರುವ ಸಾಲವನ್ನು ಹೇಗೆ ತೀರಿಸಬೇಕೆಂಬ ಆತಂಕಕ್ಕೆ ದೂಡಿದೆ. ಇದು ಕೇವಲ ಒಂದು ಕಡೆಯ ಕತೆಯಾಗಿಲ್ಲ. ಬಹಳಷ್ಟು ಕಡೆ ಇದೇ ದುಸ್ಥಿತಿಯಲ್ಲಿ ರೈತರಿದ್ದಾರೆ.
ಇತ್ತೀಚೆಗೆ ಚಿಂತಾಮಣಿ, ಗೌರಿಬಿದನೂರು ಮತ್ತು ಶಿಡ್ಲಘಟ್ಟ ತಾಲೂಕು ಸೇರಿದಂತೆ ಹಲವೆಡೆ ಅತಿ ವೇಗವಾಗಿ ಕಾಲು ಬಾಯಿ ಜ್ವರಕ್ಕೆ ತುತ್ತಾಗುತ್ತಿರುವ ಪ್ರಕರಣಗಳು ಹೆಚ್ಚಿಗೆ ವರದಿಯಾಗುತ್ತಿವೆ. ಗಾಳೆಮ್ಮ ಜ್ವರ ಎಂತಲೂ ಕರೆಯುವ ಕಾಲುಬಾಯಿ ಜ್ವರಕ್ಕೆ ತ್ರಿಕೋರ್ಣ ಎಂಬ ರೋಗಾಣು ಕಾರಣವಾಗಿದೆ. ಮೊದಲಿಗೆ ತೀವ್ರ ಜ್ವರ ಕಾಣಿಸಿಕೊಂಡು ಹಸುವಿನ ಬಾಯಿ, ನಾಲಿಗೆ, ಮೊಲೆ, ಗೊರಸು, ವಸಡುಗಳಲ್ಲಿ ಕೀವು ಗುಳ್ಳೆಗಳು ಕಂಡು ಬಂದು ಗಾಯಗಳಾಗುತ್ತವೆ. ನಂತರ ಬಾಯಲ್ಲಿ ಒಂದೇ ಸಮನೆ ಜೊಳ್ಳು ಸುರಿಯುತ್ತದೆ. ಇದರಿಂದ ಅಸ್ವಸ್ಥಗೊಂಡ ರಾಸು ಮೇವು ತಿನ್ನದೇ ನೀರೂ ಕುಡಿಯದೇ ಅಸ್ವಸ್ಥಗೊಂಡು ಸಾವನ್ನುಪ್ಪುತ್ತದೆ. ಕಾಲು ಬಾಯಿ ಜ್ವರ ಸಾಂಕ್ರಾಮಿಕ ರೋಗವಾಗಿದ್ದು ಸೋಂಕಿಗೆ ಗುರಿಯಾದ ಹಸುವಿನಿಂದ ಸುರಿಯುವ ಜೊಳ್ಳು, ಸೋಂಕಿತ ಹಸುವಿನೊಂದಿಗೆ ಮೇವು ಮತ್ತು ನೀರನ್ನು ಹಂಚಿಕೊಳ್ಳುವ ಇತರೆ ಹಸುಗಳಿಗೂ ಈ ಕಾಯಿಲೆ ಹರಡುತ್ತದೆ.
ಲಸಿಕೆಯೇ ಅಸ್ತ್ರ: ಕಾಲು ಬಾಯಿ ಜ್ವರ ಬಂದ ನಂತರ ನಿಯಂತ್ರಿಸುವುದು ಕಷ್ಟವಾಗಿದ್ದು 6 ತಿಂಗಳಿಗೊಮ್ಮೆ ಲಸಿಕೆ ಹಾಕಿಸುವ ಮೂಲಕ ಕಾಲುಬಾಯಿ ಜ್ವರವನ್ನು ಸುಲಭವಾಗಿ ದೂರ ಮಾಡಬಹುದಾಗಿದೆ. ಈ ಹಿನ್ನೆಲೆಯಲ್ಲಿ ಪಶುಸಂಗೋಪನಾ ಇಲಾಖೆ ಮತ್ತು ಕೋಲಾರ-ಚಿಕ್ಕಬಳ್ಳಾಪುರ ಹಾಲು ಒಕ್ಕೂಟ ರಾಸುಗಳಿಗೆ ಕಾಲುಬಾಯಿ ಲಸಿಕೆ ಹಾಕಿಸುವ ಕಾರ್ಯಕ್ರಮವನ್ನು ಹಮ್ಮಿಕೊಂಡು ಬರಲಾಗುತ್ತಿದೆ. ಪ್ರಮುಖವಾಗಿ ಇಲಾಖೆಯಿಂದ ಸಬ್ಸಿಡಿ ಹಣದಲ್ಲಿ ಖರೀದಿಸಲಾಗುವ ರಾಸುಗಳಿಗೆ ಕಡ್ಡಾಯವಾಗಿ ಕಾಲು ಬಾಯಿ ಲಸಿಕೆ ಹಾಕಿಸಬೇಕೆಂಬ ಸೂಚನೆಯನ್ನು ಕೊಟ್ಟು ಮುಂದಿನ ದಿನಗಳಲ್ಲಾಗುವ ಅನಾಹುತಗಳನ್ನು ತಪ್ಪಿಸಲು ಪ್ರಯತ್ನಿಸಲಾಗುತ್ತಿದೆ. ಅಲ್ಲದೇ ಕಾರ್ಯಕ್ರಮಗಳ ಮೂಲಕ ಜಾಗೃತಿಯನ್ನೂ ಮೂಡಿಸಲಾಗುತ್ತಿದೆ.
ಮೂಢನಂಬಿಕೆಯಿಂದ ಕುತ್ತು: ಕಾಲುಬಾಯಿ ಜ್ವರದ ಬಗ್ಗೆ ಜಾಗೃತಿ ಮೂಡಿಸುತ್ತಿದ್ದರೂ ಬಹಳಷ್ಟು ಮಂದಿ ರೈತರು ಈ ಕಾಯಿಲೆಯ ಬಗ್ಗೆ ತಪ್ಪು ಕಲ್ಪನೆಯನ್ನು ಹೊಂದಿರುವುದು ಕಾಲುಬಾಯಿ ಜ್ವರ ನಿಯಂತ್ರಣಕ್ಕೆ ಶ್ರಮಿಸುತ್ತಿರುವ ಇಲಾಖೆಯ ಅಧಿಕಾರಿಗಳ ತಲೆ ನೋವಿಗೆ ಕಾರಣವಾಗಿದೆ. ಕಾಲುಬಾಯಿ ಲಸಿಕೆಯನ್ನು ಹಾಕಿಸಿದರೆ ಹಸುಗಳು ಕೊಡುವ ಹಾಲಿನ ಪ್ರಮಾಣ ಕಡಿಮೆಯಾಗುತ್ತದೆ. ಹಾಲಿನ ಗುಣಮಟ್ಟ ಕುಸಿಯುತ್ತದೆ.ಜತೆಗೆ ರಾಸುಗಳು ನಿತ್ರಾಣಗೊಂಡು ತೊಂದರೆಯನ್ನು ಅನುಭವಿಸುತ್ತವೆ ಎಂಬ ಅವೈಜ್ಞಾನಿಕ ಭಾವನೆಯಲ್ಲಿ ರೈತರು ಸಲಹೆ ನೀಡಿದರೂ ಲಸಿಕೆಯನ್ನು ಹಾಕಿಸುತ್ತಿಲ್ಲ. ಮತ್ತೆ ಕೆಲವರು ಬಲವಂತಕ್ಕಾದರೂ ಒಂದು ಸಲ ಲಸಿಕೆ ಹಾಕಿಸಿ ಸುಮ್ಮನಾಗುತ್ತಿದ್ದಾರೆ. ಇತ್ತೀಚೆಗೆ ಕಾಲುಬಾಯಿ ಜ್ವರ ಹರಡುವುದು ಹೆಚ್ಚಾಗುತ್ತಿದ್ದಂತೆ ಕೆಲವೆಡೆ ರೋಗ ನಿಯಂತ್ರಣಕ್ಕಾಗಿ ದೇವರ ಮೊರೆ ಹೋಗಿ ವಿಶೇಷ ಪೂಜಾ ಕಾರ್ಯಕ್ರಮಗಳನ್ನು ಕೈಗೊಳ್ಳುತ್ತಿದ್ದಾರೆ.
ಇನ್ನು ಅಧಿಕಾರಿಗಳು ಹೇಳುವಂತೆ, ಈಗಾಗಲೇ ಜಿಲ್ಲೆಯ ಹಲವೆಡೆ ಕಾಲುಬಾಯಿ ಜ್ವರಕ್ಕೆ ತುತ್ತಾಗಿ ಮೃತಪಟ್ಟ ಹಸುಗಳಲ್ಲಿ ಲಸಿಕೆಯನ್ನು ಹಾಕಿಸದೇ ಇರುವಂತಹುದು. ಕೇವಲ ಅಲ್ಲಲ್ಲಿ ಬೇರೆ ಬೇರೆ ಕಾರಣಗಳಿಂದಾಗಿ ಲಸಿಕೆ ಹಾಕಿಸಿದಂತಹ ರಾಸುಗಳು ಅತಿ ಕಡಿಮೆ ಪ್ರಮಾಣದಲ್ಲಿ ಸಾವನ್ನಪ್ಪಿವೆ ಎನ್ನಲಾಗಿದೆ. ಕಾಲುಬಾಯಿ ಜ್ವರ ಹರಡುತ್ತಿರುವ ಗ್ರಾಮಗಳನ್ನು ಗುರುತಿಸಿ ಇಲಾಖೆಯಿಂದ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗಿದೆ. ಸೋಂಕಿತ ಹಸುವಿನಿಂದ ಒಳ್ಳೆಯ ರಾಸುಗಳನ್ನು ದೂರವಿಡವಂತಹುದು. ಲಸಿಕೆ ಹಾಕಿಸದೇ ಇರುವ ಹಸುಗಳನ್ನು ಗುರುತಿಸಿ ಈಗಲಾದರೂ ಲಸಿಕೆ ಹಾಕಿಸುವಂತಹುದನ್ನು ಮಾಡಲಾಗುತ್ತಿದೆ. ರೈತರಿಗಾಗಿ ಜಾಗೃತಿ ಸಭೆಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ಪ್ರಮುಖವಾಗಿ ಸಮಸ್ಯೆಯಾಗದಿರಲು ಅಗತ್ಯವಿರುವ ಔಷಧಿಗಳನ್ನು ಸಹ ದಾಸ್ತಾನು ಮಾಡಿಟ್ಟುಕೊಳ್ಳಲಾಗಿದೆ ಎಂದಿರುವ ಪಶು ಸಂಗೋಪನಾ ಇಲಾಖೆಯ ಅಧಿಕಾರಿಗಳು, ಕಾಲುಬಾಯಿ ಜ್ವರ ನಿಯಂತ್ರಣಕ್ಕೆ ರೈತರ ಸಹಕಾರವು ಅಗತ್ಯವಾಗಿ ಬೇಕು.ಇಲಾಖೆಯಿಂದ ತಿಳಿಸುವ ಸಲಹೆಗಳನ್ನು ತಪ್ಪದೇ ಪಾಲಿಸಬೇಕೆಂದು ಕೋರಿದ್ದಾರೆ.