ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಕಾಲುಬಾಯಿ ಜ್ವರ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಿ

Srinivasa Murthy VN
Updated On : 24 Sept 2013, 11:35 am

ಚಿಕ್ಕಬಳ್ಳಾಪುರ: ಜಿಲ್ಲೆಯಲ್ಲಿ ಹರಡುತ್ತಿರುವ ಕಾಲುಬಾಯಿ ಜ್ವರವನ್ನು ನಿಯಂತ್ರಿಸಲು ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕೆಂದು ಜಿಪಂ ಅಧ್ಯಕ್ಷ ಚಿನ್ನಪ್ಪ ಪಶು ಸಂಗೋಪನಾ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
 ಜಿಪಂ ಸಭಾಂಗಣದಲ್ಲಿ ಮಂಗಳವಾರ ನಡೆದ ಮಾಸಿಕ ಕೆಡಿಪಿ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡುತ್ತಿದ್ದರು. ಇತ್ತೀಚಿಗಿನ ದಿನಗಳಲ್ಲಿ ಪ್ರಮುಖವಾಗಿ ಕಾಲುಬಾಯಿ ಜ್ವರ ಹರಡಿ ರೈತರನ್ನು ಆರ್ಥಿಕ ಸಮಸ್ಯೆಗೆ ಗುರಿ ಮಾಡುತ್ತಿದೆ.ಇದನ್ನು ನಿಯಂತ್ರಣಕ್ಕೆ ತರಬೇಕೆಂದು ತಿಳಿಸಿದರು.
ಲಸಿಕೆ ಹಾಕಲಾಗಿದೆ: ಇದಕ್ಕೆ ಪ್ರತಿಕ್ರಿಯಿಸಿದ ಪಶುಸಂಗೋಪನಾ ಇಲಾಖೆ ಅಧಿಕಾರಿ, ಜಿಲ್ಲೆಯಲ್ಲಿ 1 ಲಕ್ಷ 71 ಸಾವಿರ ಹಸುಗಳಿಗೆ ಕಾಲುಬಾಯಿ ಜ್ವರ ಲಸಿಕೆ ಹಾಕಲಾಗಿದೆ. ಇತ್ತೀಚೆಗೆ ಕಾಣಿಸಿಕೊಂಡಿರುವ ಕಾಲು ಬಾಯಿ ರೋಗದಲ್ಲಿ 77 ಜಾನುವಾರುಗಳು ಅಸುನೀಗಿದ್ದು ಜಿಲ್ಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಜಾನುವಾರು ಸಂತೆಯನ್ನು ನಿಷೇಧಿಸಲಾಗಿದೆ ಎಂದರು.
ಶಿಕ್ಷಕರ ನಿರ್ಲಕ್ಷ್ಯ: ಗೌರಿಬಿದನೂರು ಡಿಪಾಳ್ಯದಲ್ಲಿ ಇತ್ತೀಚೆಗೆ ನಡೆದ ಬಿಸಿಯೂಟ ಪಾತ್ರೆಗೆ ಬಿದ್ದು ಬಾಲಕಿ ಮೃತಪಟ್ಟ ಘಟನೆ ಇನ್ನೂ ಮುಂದೆ ನಡೆಯಬಾರದು. ಮೃತ ಬಾಲಕಿಯ ಕುಟುಂಬಕ್ಕೆ ಸರ್ಕಾರದಿಂದ ತ್ವರಿತವಾಗಿ ಪರಿಹಾರ ಸಿಗುವಂತೆ ಮಾಡಬೇಕೆಂದು ಅಧ್ಯಕ್ಷ ಚಿನ್ನಪ್ಪ ಸೂಚನೆ ನೀಡಿದಕ್ಕೆ, ಡಿಪಾಳ್ಯ ದುರ್ಘಟನೆಗೆ ಮುಖ್ಯ ಶಿಕ್ಷಕರ ನಿರ್ಲಕ್ಷ್ಯವೇ ಕಾರಣವಾಗಿದ್ದು ಈಗಾಗಲೇ ಅಮಾನತ್ ಮಾಡಲಾಗಿದೆ. ಅಲ್ಲದೇ ಶಾಲಾ ಶಿಕ್ಷಕರಿಗೆ ಬಿಸಿಯೂಟ ಬಡಿಸುವಾಗ ಮುನ್ನೆಚ್ಚರಿಕೆ ಕ್ರಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಲು ತಿಳಿಸಲಾಗಿದೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಅಜಿತ್ ಪ್ರಸಾದ್ ತಿಳಿಸಿದರು.
600 ಕಾಮಾಲೆ ಪ್ರಕರಣ: ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ರಂಗಸ್ವಾಮಿ ಮಾತನಾಡಿ, ಡೆಂಘೀ ಈಗ ನಿಯಂತ್ರಣದಲ್ಲಿದೆ. ಗೌರಿಬಿದನೂರು ತಾಲೂಕಿನಲ್ಲಿ ಒಟ್ಟು 600 ಕಾಮಾಲೆ ಪ್ರಕರಣಗಳು ಪತ್ತೆಯಾಗಿದ್ದು, ಇಲ್ಲಿ ನೀರಿನ ಮೂಲ ಕುಡಿಯಲು ಅರ್ಹ ಇಲ್ಲ. ಇಲ್ಲಿನ ಶುದ್ಧೀಕರಣ ಘಟಕಕ್ಕೆ ಒಳ್ಳೆಯ ನೀರು ಪೂರೈಕೆಗೆ ಮಾರ್ಗರ್ಶನ ನೀಡಲಾಗಿದೆ. ಸಾದಲಿ ಹಾಗೂ ಗುಡಿಬಂಡೆಗೆ ತಲಾ ಒಂದರಂತೆ ಆ್ಯಂಬುಲೆನ್ಸ್ ವಾಹನವನ್ನು ಶೀಘ್ರವೇ ವಿತರಿಸಲಾಗುವುದು. ಕುಂದಲಗುರ್ಕಿ, ಯಮಾರಲಹಳ್ಳಿ, ಸಂತೆಕಲ್ಲಹಳ್ಳಿ ಹಾಗೂ ಯಲ್ಲೋಡು ಆಸ್ಪತ್ರೆಗಳು ಉದ್ಘಾಟನೆಗೆ ಸಿದ್ಧವಿದೆ. ಜಿಲ್ಲೆಯಲ್ಲಿ 50 ಎಎನ್‌ಎಂ (ನರ್ಸ್)ಗಳ ಕೊರತೆಯಿದೆ ಎಂದು ತಿಳಿಸಿದರು.
 ಆಗಸ್ಟ್ ಕೊನೆಯ ವರೆಗೆ 380 ಮಿ.ಮೀಟರ್ ಮಳೆ ಬಂದಿದೆ. ಜಿಲ್ಲೆಯಲ್ಲಿ ಈ ಮೊದಲು ಯೂರಿಯಾ ಕೊರತೆಯಿದ್ದು, ಈಗ 3800 ಟನ್ ಖರೀದಿಸಲಾಗಿದೆ. ಇನ್ನೂ 1100 ಟನ್ ದಾಸ್ತಾನು ಇದ್ದು ಸೆಪ್ಟಂಬರ್ ತಿಂಗಳಲ್ಲಿ ಸುರಿದ ಮಳೆಗೆ ರಾಗಿ, ತೊಗರಿ ಬೆಳೆಗಳು ಮೊದಲಿಗಿಂತಲೂ ಉತ್ತಮವಾಗಿದೆ ಎಂದು ಕೃಷಿ ಇಲಾಖೆಯ ಅಧಿಕಾರಿ ತಿಳಿಸಿದರು. ಸಭೆಯಲ್ಲಿ ಜಿಪಂ ಉಪಾಧ್ಯಕ್ಷ ರಾಘವೇಂದ್ರ ಹನುಮಾನ್, ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ನೀಲಾ ಮಂಜುನಾಥ್ ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement