ತಾಲೂಕು ಘಟಕದ ಅಧ್ಯಕ್ಷರ ವಿರುದ್ಧ ಅಸಮಾಧಾನ
ಚಿಂತಾಮಣಿ: ಕೆ.ಎಸ್.ಆರ್.ಟಿ.ಸಿ ಪರಿಶಿಷ್ಟಜಾತಿ, ಪರಿಶಿಷ್ಟ ವರ್ಗದ ತಾಲೂಕು ಘಟಕದ ಅಧ್ಯಕ್ಷ ಲಕ್ಷ್ಮಿಪತಿ ಕಾರ್ಯವೈಖರಿ ಬಗ್ಗೆ ನೂರಾರು ಕಾರ್ಮಿಕರು ತೀವ್ರ ಅಸಮಧಾನ ವ್ಯಕ್ತಪಡಿಸಿದ್ದಾರೆ. ಪಟ್ಟಣದ ಕೆ.ಎಸ್.ಆರ್.ಟಿ.ಸಿ ಘಟಕದ ಪರಿಶಿಷ್ಟಜಾತಿ, ಪರಿಶಿಷ್ಟ ವರ್ಗದ ತಾಲೂಕು ಸಂಘ 1 ವರ್ಷದಿಂದ ಕಾರ್ಮಿಕರ ಕುಂದು ಕೊರತೆಗಳ ಬಗ್ಗೆ ಸಭೆ ನಡೆಸದೆ ಹಾಗೂ ಪರ್ಯಾಯ ಅಧ್ಯಕ್ಷರನ್ನು ಮಾಡದೆ ಚಿಕ್ಕಬಳ್ಳಾಪುರಕ್ಕೆ ವರ್ಗಾವಣೆಗೊಂಡಿರುವ ಅಧ್ಯಕ್ಷ ಕೆ.ಸಿ. ಲಕ್ಷ್ಮಿಪತಿಯವರ ಕಾರ್ಯವೈಖರಿ ಬಗ್ಗೆ ಉಪಾಧ್ಯಕ್ಷ ನರಸಿಂಹಪ್ಪ ತೀವ್ರ ಅಸಮದಾನ ವ್ಯಕ್ತಪಡಿಸಿದ್ದಾರೆ. ಕಾರ್ಮಿಕರಿಗೆ ಹಲವಾರು ಸಮಸ್ಯೆಗಳು ತಾಂಡವಾಡುತ್ತಿದ್ದರೂ ತಿಂಗಳ ಸಾಮಾನ್ಯ ಸಭೆ ಕರೆಯದ ಪರಿಣಾಮ ತಾಲೂಕು ಘಟಕದ ಪರಿಶಿಷ್ಟಜಾತಿ, ಪರಿಶಿಷ್ಟವರ್ಗದ ನೌಕರರು ಸಭೆ ಸೇರಿ ಅಕ್ಟೋಬರ್ 3 ರಂದು ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸಭೆಯನ್ನು ಕರೆಯಲಾಗಿದೆ. ಈ ಸಭೆಗೆ ತಪ್ಪದೇ ಕೆ.ಎಸ್.ಆರ್.ಟಿ.ಸಿ ಘಟಕದ ಪರಿಶಿಷ್ಟಜಾತಿ,ಪರಿಶಿಷ್ಟ ವರ್ಗದ ಚಾಲಕರು, ನಿರ್ವಾಹಕರು ಹಾಜರಾಗಿ ನೂತನ ಪದಾಧಿಕಾರಿಗಳನ್ನು ನೇಮಿಸಲು ಸಭೆಗೆ ಹಾಜರಾಗುವಂತೆ ಮನವಿ ಮಾಡಿದ್ದಾರೆ.
ಜಗನ್ ಬಿಡುಗಡೆಗೆ; ಹರ್ಷಾಚರಣೆ
ಬಾಗೇಪಲ್ಲಿ: ವೈಸ್.ಎಸ್.ಆರ್. ಕಾಂಗ್ರೆಸ್ ಸಂಸ್ಥಾಪಕ ಹಾಗೂ ಆಂಧ್ರಪ್ರದೇಶದ ಮುಖ್ಯಮಂತ್ರಿ ದಿ.ವೈ.ಎಸ್. ರಾಜಶೇಖರರೆಡ್ಡಿ ಪುತ್ರ ವೈ.ಎಸ್. ಜಗನ್ಮೋಹನ್ ರೆಡ್ಡಿ ಜೈಲಿನಿಂದ ಬಿಡುಗಡೆಯಾದ ಹಿನ್ನೆಲೆಯಲ್ಲಿ ತಾಲೂಕಿನ ಹೋಬಳಿ ಕೇಂದ್ರ ಪಾತಪಾಳ್ಯ ಗ್ರಾಮದಲ್ಲಿ ವೈ.ಎಸ್. ಜಗನ್ ಅಭಿಮಾನಿಗಳ ಬಳಗ ಪಟಾಕಿ ಸಿಡಿಸಿ, ಸಿಹಿ ಹಂಚುವ ಮೂಲಕ ಸಂಭ್ರಮಿಸಿದರು. ಸುದ್ದಿಗಾರರೊಂದಿಗೆ ಮಾತನಾಡಿದ ವೈ.ಎಸ್. ಜಗನ್ ಅಭಿಮಾನಿಗಳ ಬಳಗದ ಮುಖಂಡ ಜಿ. ರಾಮಕೃಷ್ಣ, ಆಕ್ರಮ ಆಸ್ತಿ ಸಂಪಾದನೆ ಆರೋಪಕ್ಕೆ ಸಂಬಂಧಿಸಿ ಕಳೆದ 484 ದಿನಗಳಿಂದ ಜೈಲಿನಲ್ಲಿದ್ದ ಜಗನ್ರವರು ಇಂದು ಜೈಲಿನಿಂದ ಬಿಡುಗಡೆಯಾಗುತ್ತಿರುವುದು ಹರ್ಷ ತಂದಿದೆ ಎಂದರು. ಈ ಸಂದರ್ಭದಲ್ಲಿ ವೈ.ಎಸ್. ಜಗನ್ ಅಭಿಮಾನಿಗಳ ಬಳಗದ ವಿಜಯಕುಮಾರ್, ಗೋಪಿ, ಯಾಸಿಂಖಾನ್, ರಾಮಿರೆಡ್ಡಿ, ಈಶ್ವರ್ರೆಡ್ಡಿ, ವೆಂಕಟರಮಣ, ತಿಪ್ಪಾರೆಡ್ಡಿ, ಬಾಬಾಫಕೃದ್ದೀನ್,ಚಂದ್ರ, ಆವುಲರಾಮಚಂದ್ರಪ್ಪ, ವೆಂಕಟೇಶ್, ಬಾಲಚಂದ್ರ, ಸಿ.ಎಂ. ಅಮರ್ ಇದ್ದರು.