ಸಂತರು ಅಭಿವ್ಯಕ್ತಿ ಸ್ವಾತಂತ್ರ್ಯದ ಪ್ರತಿಪಾದಕರು: ಡಾ.ರಾಮಕೃಷ್ಣ
ಕ.ಪ್ರ.ವಾರ್ತೆ ಕೋಲಾರ ಸೆ.24
ಸಂತರು ಅಭಿವ್ಯಕ್ತಿ ಸ್ವಾತಂತ್ರ್ಯದ ಪ್ರತಿಪಾದಕರಾಗಿದ್ದರು. ನಿಗರ್ವಿಗಳಾಗಿ ಮತ್ತು ತಮ್ಮ ಅಚಾರ- ವಿಚಾರ, ಉತ್ತಮ ನಡವಳಿಕೆಗಳ ಮೂಲಕ ಸಮಾಜದ ಸುಭದ್ರತೆಗೆ ಅಪಾರ ಕೊಡುಗೆ ನೀಡಿದ್ದಾರೆಂದು ಸಂಸ್ಕೃತಿ ಚಿಂತಕ ಡಾ.ಜಿ.ರಾಮಕೃಷ್ಣ ತಿಳಿಸಿದರು.
ನಗರದ ಟಿ.ಚನ್ನಯ್ಯರಂಗ ಮಂದಿರದಲ್ಲಿ ಮಂಗಳವಾರ ರಾಷ್ಟ್ರೀಯ ಸಂತಕವಿ ಕನಕದಾಸ ಅಧ್ಯಯನ ಮತ್ತು ಸಂಶೋಧನಾ ಕೇಂದ್ರ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಹಾಗೂ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಸಂಯುಕ್ತಾಶ್ರಯದಲ್ಲಿ ಪ್ರಾರಂಭಗೊಂಡ ಎರಡು ದಿನಗಳ 'ಕಾಲುದಾರಿ ಸಂತ ಪರಂಪರೆ ಮತ್ತು ಕನಕದಾಸರು' ವಿಚಾರ ಸಂಕಿರಣವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಚಾರಿತ್ರಿಕವಾಗಿ ಸಂತ ಪರಂಪರೆ ಮುಗ್ಗಟ್ಟು ಎದುರಿಸುತ್ತಿರುವುದರಿಂದ ಅದಕ್ಕೆ ಪರಿಹಾರ ದೊರಕಿಸಬೇಕಾಗಿದೆ. ಇದಕ್ಕಾಗಿ ಕಾಲುದಾರಿ ಸಂತರ ಪರಂಪರೆಯ ಕುರಿತು ಸಮಗ್ರ ಅದ್ಯಯನ ಹಾಗೂ ಸಂಶೋಧನೆ ಆಗಬೇಕಾಗಿರುವುದರಿಂದ ಪಂಡಿತರ ಅಭಿಪ್ರಾಯ ಸಂಗ್ರಹಣೆ ಹಾಗೂ ಸಹಕಾರಕ್ಕಾಗಿ ವಿಚಾರ ಸಂಕಿರಣಗಳು ಅತ್ಯಗತ್ಯ. ಸಂತರು ನಮ್ಮವರು ಎನ್ನುವುದಕ್ಕಿಂತ ಅವರಿಂದ ನಾವೇನು ಪಡೆದಿದ್ದೇವೆ, ಸಮಾಜಮುಖಿಗಳು ವಿಮುಕ್ತರಾಗಿರಲು ನಮ್ಮ ಕೊಡುಗೆ ಏನೆಂಬುದನ್ನು ಅರಿಯುವ ಮೂಲಕ ಸಂತರ ಆಶಯಗಳನ್ನು ಮತ್ತು ಆದರ್ಶಗಳನ್ನು ಪ್ರತಿಯೊಬ್ಬರಿಗೆ ತಿಳಿಸುವ ಜವಾಬ್ದಾರಿ ಎಲ್ಲರ ಮೇಲಿದೆ ಎಂದರು.
ಸಂತರು ಅಸಮಾನತೆಯ ವಿರುದ್ಧ ತಮ್ಮದೇ ದಾಟಿಯಲ್ಲಿ ಆಕ್ರೋಶ ವ್ಯಕ್ತಪಡಿದ್ದಾರೆ. ಉಡಾಫೆ ಬಿಟ್ಟು ಸಮಾಜಮುಖಿಗಳಾಗುವಂತೆ ಹೇಳಿದ್ದಾರೆ. ಬಡವರಿಗೆ ಸವಲತ್ತುಗಳು ಪಡೆಯುವ ಸಾಮರ್ಥ್ಯವಿರುವುದಿಲ್ಲ, ಗಟ್ಟಿಗರು ಮಾತ್ರ ಇದನ್ನು ಸುಲಭವಾಗಿ ಪಡೆಯಬಲ್ಲರು ಎಂಬುದನ್ನು ಸಂತರು ಸೂಚ್ಯವಾಗಿ ತಿಳಿಸಿ, ಜನತೆಯಲ್ಲಿ ಆತ್ಮವಿಶ್ವಾಸ ಮೂಡಿಸಲು ಪ್ರಯತ್ನಿಸಿದ್ದಾರೆಂದರು.
ಸಂತರು ಅಸಮಾನತೆಯ ವಿರುದ್ಧವಲ್ಲದೆ ಅಸಹನೀಯ ಸಂಸ್ಕೃತಿ ವಿರುದ್ಧವೂ ಹೇಳಿದ್ದಾರೆ. ಅಜಿಗರ್ಭ ಸಂಸ್ಕೃತಿ ಅಂದರೆ ಎಲ್ಲವನ್ನೂ ಬಾಚಿಕೊಳ್ಳುವ ಪ್ರವೃತ್ತಿಯ ಜನರ ಬಗ್ಗೆ ಸಮಾಜದಲ್ಲಿ ಅರಿವು ಮೂಡಿಸಿದ್ದಾರೆ. ಹಾಗಾಗಿ ಸಂತರನ್ನು ಅನೇಕರು ಗಾಳಿಗೆ ತಲೆ ಗುದ್ದಿ ನೋವು ಮಾಡಿಕೊಳ್ಳುವವರು ಎಂದು ಹೀಯಾಳಿಸಿರುವುದು ಉಂಟು. ಆದರೆ, ಸಂತರ ದೃಷ್ಟಿಕೋನ ಹಾಗೂ ಜೀವನದ ಮೌಲ್ಯಗಳ ಬಗ್ಗೆ ನೀಡಿರುವ ಸಂದೇಶಗಳನ್ನು ಅರ್ಥ ಮಾಡಿಕೊಂಡಲ್ಲಿ ಸಂತರ ಪರಂಪರೆಯ ಬಗ್ಗೆ ಪ್ರೀತಿ ಮತ್ತು ನಂಬಿಕೆ ಉಂಟಾಗುವುದರಿಂದ ವಿಚಾರ ಸಂಕಿರಣದಲ್ಲಿ ಪಂಡಿತರು ಸಂತರು ಪ್ರಸಿದ್ಧರು, ಅಪ್ರಸಿದ್ಧರು ಎಂಬುದಕ್ಕಿಂತ ಸಂತರ ವಾಣಿ ಮತ್ತು ಮೌಲ್ಯಗಳ ಅನುಷ್ಟಾನಕ್ಕೆ ಇರುವ ಅಡ್ಡಿ ಏನೆಂಬುದನ್ನು ಜನತೆಗೆ ಮನವರಿಕೆ ಮಾಡುವುದಕ್ಕೆ ಗಮನ ಹರಿಸಬೇಕೆಂದರು.
ಸಂತರು ಶಾಂತ ಸ್ವಾಭಾವದವರು. ಆದರೆ ಶಾಂತರಲ್ಲ, ಸಂತರು ಬೇರೆಯವರಿಗಿಂತ ಭಿನ್ನರಾಗಿದ್ದರು. ಹೇಳಿದನ್ನು ಆಚರಣೆಗೆ ತರುತ್ತಿದ್ದರು. ಆದರೆ, ಸಂತರ ಸೋಗಿನಲ್ಲಿರುವ ಇಂದಿನ ಕೆಲವು ಸಂತರು ಅನಾಚಾರಿಗಳಾಗಿದ್ದಾರೆ, ಅಧಮಿಗಳಾಗಿದ್ದಾರೆ. ಇದಕ್ಕೆ ಇತ್ತೀಚೆಗೆ ಸಂತರೊಬ್ಬರು ಲೈಂಗಿಕ ಹಗರಣದಲ್ಲಿ ಸಿಲುಕಿ ಜೈಲು ಪಾಲಾಗಿರುವುದೇ ಸಾಕ್ಷಿ. ಇಂಥ ಸಂತರಿಂದ ಯಾವುದೇ ಸಮಾಜಕ್ಕೂ ಪ್ರಯೋಜನವಿಲ್ಲ. ಕಾಲು ದಾರಿ ಸಂತ ಪರಂಪರೆಯನ್ನು ಪಾಲಿಸುವುದು ಈಗ ಅತ್ಯಂತ ಅವಶ್ಯಕವೆಂದು ಹೇಳಿದರು.
ಸಂತರು- ತಾತ್ವಿಕ ವಿವೇಚನೆ ಕುರಿತು ಮೊದಲ ವಿಚಾರ ಗೋಷ್ಠಿಯಲ್ಲಿ ಡಾ.ಬಂಜಗೆರೆ ಜಯಪ್ರಕಾಶ್ ದಾರ್ಶನಿಕ ಬಹುತ್ವ ಕುರಿತು ಮಾತನಾಡಿದರು. ಡಾ.ರಹಮತ್ ತರೀಕರೆ ಸಾಮಾಜಿಕ ಒತ್ತಾಸೆಗಳು ಬಗ್ಗೆ ವಿಷಯ ಮಂಡಿಸಿದರು.
ಭಾರತದ ಅಲಕ್ಷಿತ ಸಂತರು ಮತ್ತು ಕನಕದಾಸರು 2ನೇ ಗೋಷ್ಠಿಯಲ್ಲಿ ಡಾ.ಡಿ.ಡೊಮಿನಿಕ್ ತೌಲನಿಕ ನೋಟಗಳು, ಪ್ರೊ.ಜಯಪ್ರಕಾಶ ಶೆಟ್ಟಿ ವಿಚಾರಾಕೃತಿಯ ನೆಲೆಗಳು ಬಗ್ಗೆ ಪ್ರಬಂಧ ಮಂಡಿಸಿದರು. ಡಾ.ಟಿ.ಎಸ್.ಸತ್ಯನಾಥ ಅರಹುವ ಸಾಧ್ಯತೆಗಳು ಬಗ್ಗೆ ಮಾತನಾಡಿದರು.
ಸಂವಾದ ಕಾರ್ಯಕ್ರಮದಲ್ಲಿ ಸಾಹಿತಿಗಳಾದ ಡಾ.ಕೆ.ಮರಳಸಿದ್ದಪ್ಪ, ಡಾ.ಹಿ.ಶಿ.ರಾಮಚಂದ್ರೇಗೌಡ, ನಿರ್ಮಲ, ವಿಶ್ವಕುಂದಾಪುರ, ಡಾ.ಕೆ.ಜೆ.ರುಕ್ಮಿಣಿ, ಪ್ರೊ.ಮುನಿರತ್ನಪ್ಪ, ಡಾ.ಡಿ.ಎಸ್.ವಿಶ್ವನಾಥ್, ಪದ್ಮಾಲಯ ನಾಗರಾಜ್, ಪಿಚ್ಚಳ್ಳಿ ಶ್ರೀನಿವಾಸ್, ಡಾ.ವಿ.ನಾಗರಾಜು, ಡಾ.ವಸಂತ ಬನ್ನಾಡಿ, ಗವಿಸಿದ್ದಪ್ಪ, ಹೊಸಮನಿ, ಚನ್ನಯ್ಯ ಕಾಳಸ್ತಿಮಠ, ಪ್ರೊ.ಎಸ್.ಜಿ.ಸಿದ್ದರಾಮಯ್ಯ, ಡಾ.ಶಿವಾನಂದ ಕೆಳಗಿನಮನಿ, ಡಾ.ಕುಂಸಿ ಉಮೇಶ್, ಡಾ.ಪ್ರೀತಿ ಶುಭಚಂದ್ರ, ಡಾ.ರಂಗನಾಥ ಕಂಟನಕುಂಟೆ, ಗೋಪಾಲಕೃಷ್ಣ ಕುಲಕರ್ಣಿ, ವೀರಶೆಟ್ಟಿ ಮೈಲೂರಕರ್, ಅಲ್ಲಾ ಗಿರಿರಾಜ್ ಸೇರಿದಂತೆ ರಾಜ್ಯ ವಿವಿಧ ಕಡೆಗಳಿಂದ ಪ್ರತಿನಿಧಿಗಳು ಪಾಲ್ಗೊಂಡಿದ್ದರು. ವಿದ್ಯಾರ್ಥಿಗಳು ಸಂವಾದ ಕಾರ್ಯಕ್ರಮದಲ್ಲಿ ಹೆಚ್ಚಿನ ಆಸಕ್ತಿ ತೋರಿದ್ದು ವಿಶೇಷವಾಗಿತ್ತು.