ಅ.2ರಂದು ಸರ್ ಎಂ.ವಿ ಟ್ರೇನರ್ಸ್ ಕೇಂದ್ರಕ್ಕೆ ಶಂಕು: ಮೊಯ್ಲಿ
ಬೆಂಗಳೂರು: ಕೌಶಲ್ಯ ಅಭಿವೃದ್ಧಿಗಾಗಿನ ಮೋಕ್ಷಗುಂಡಂ ವಿಶ್ವೇಶ್ವರಯ್ಯ ಮಾಸ್ಟರ್ ಟ್ರೇನರ್ಸ್ ಕೇಂದ್ರಕ್ಕೆ (ಎಂವಿಸಿಟಿಎಂಟಿಎಸ್‌ಡಿ) ಅಕ್ಟೋಬರ್ 2ರಂದು ಶಂಕು ಸ್ಥಾಪನೆ ನೆರವೇರಿಸಲಾಗುವುದು ಎಂದು ಪೆಟ್ರೋಲಿಯಂ ಖಾತೆ ಸಚಿವ ಡಾ.ಎಂ. ವೀರಪ್ಪ ಮೊಯ್ಲಿ ತಿಳಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಬುಧವಾರ ಈ ವಿಷಯ ತಿಳಿಸಿರುವ ಅವರು, ಚಿಕ್ಕಬಳ್ಳಾಪುರದ ಮುದ್ದೇನಹಳ್ಳಿಯಲ್ಲಿ 10 ಎಕರೆ ಪ್ರದೇಶದಲ್ಲಿ ಕೇಂದ್ರ ಸ್ಥಾಪಿಸಲಾಗುವುದು. ಮುಖ್ಯಮಂತ್ರಿ ಸಿದ್ದರಾಮಯ್ಯ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ ಎಂದು ಹೇಳಿದರು.
ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಎಸ್.ವಿ. ರಂಗನಾಥ್ ಈ ಸಂಸ್ಥೆಯ ಅಧ್ಯಕ್ಷರಾಗಿದ್ದು, ಶಿಕ್ಷಣ ತಜ್ಞ ಎನ್.ಆರ್. ಶೆಟ್ಟಿ ಉಪಾಧ್ಯಕ್ಷರಾಗಿರುತ್ತಾರೆ. ಸರ್ಕಾರಿ ಹಾಗೂ ಖಾಸಗಿ ಸಹಭಾಗಿತ್ವದಲ್ಲಿ ಕೇಂದ್ರವನ್ನು ನಿರ್ಮಿಸಲಾಗುತ್ತಿದ್ದು, ರಾಜ್ಯ ಸರ್ಕಾರ ಹತ್ತು ಎಕರೆ ಜಾಗ ನೀಡಲು ಒಪ್ಪಿದೆ ಎಂದು ಹೇಳಿದರು.
ಇದೊಂದು ವಿಶ್ವ ದರ್ಜೆಯ ತರಬೇತಿ ಕೇಂದ್ರ. ಕೇಂದ್ರ ಯೋಜನಾ ಆಯೋಗಕ್ಕೂ ಈ ಬಗ್ಗೆ ವಿವರಣೆ ನೀಡಲಾಗಿದ್ದು, ಯೋಜನೆ ಬಗ್ಗೆ ಪ್ರಶಂಸೆ ವ್ಯಕ್ತವಾಗಿದೆ. ಮಾತ್ರವಲ್ಲ ಹಲವು ಖಾಸಗಿ ಸಂಸ್ಥೆಗಳು ಸಹಾಯ ನೀಡಲು ಮುಂದೆ ಬಂದಿವೆ ಎಂದರು.
ಉಪಾಧ್ಯಕ್ಷ ಎಸ್.ಆರ್. ಶೆಟ್ಟಿ ಮಾತನಾಡಿ, ಈ ಮಹತ್ವಾಕಾಂಕ್ಷಿ ಯೋಜನೆ ಕೇವಲ ಶಂಕು ಸ್ಥಾಪನೆಗೆ ಸೀಮಿತವಲ್ಲ. ಅಕ್ಟೋಬರ್ 2ರಿಂದ ಯಲಹಂಕದಲ್ಲಿರುವ ನಿಟ್ಟೆ ಮೀನಾಕ್ಷಿ ತಾಂತ್ರಿಕ ಕಾಲೇಜು ಪರಿಸರದಲ್ಲಿ ಕೋರ್ಸ್‌ಗಳನ್ನು ಆರಂಭಿಸಲಾಗುವುದು. ಕಟ್ಟಡ ಪೂರ್ಣಗೊಂಡ ನಂತರ ಮುದ್ದೇನಹಳ್ಳಿಗೆ ಸ್ಥಳಾಂತರಿಸುತ್ತೇವೆ ಎಂದು ಹೇಳಿದರು.
ಈ ಕೇಂದ್ರ ಸ್ಥಾಪನೆಗೆ ಸಹಕಾರ ನೀಡಲು ಹಲವರು ಮುಂದೆ ಬಂದಿದ್ದಾರೆ. ರಾಜ್ಯದ ಐದು ರಾಷ್ಟ್ರೀಕೃತ ಬ್ಯಾಂಕ್‌ಗಳು ತಲಾ 1 ಕೋಟಿ ನೀಡುವುದಾಗಿ ಭರವಸೆ ನೀಡಿವೆ. ಒಎನ್‌ಜಿಸಿ 5 ಕೋಟಿ ನೀಡಲು ಒಪ್ಪಿದೆ. ಗೇಲ್ ಸಂಸ್ಥೆ 2 ಕೋಟಿ ನೀಡಲು ಒಪ್ಪಿದೆ. ಎರಡು ತಿಂಗಳಲ್ಲಿ ಕಾಮಗಾರಿ ಆರಂಭವಾಗುತ್ತದೆ ಎಂದರು.
ಬಹುರಾಷ್ಟ್ರೀಯ ಕಂಪನಿಗಳ ತಾಂತ್ರಿಕ ಪರಿಣತರು ಮಾಸ್ಟರ್ ಟ್ರೇನರ್ ಆಗಿ ಕೌಶಲ್ಯ ತರಬೇತಿ ನೀಡುತ್ತಾರೆ. ಬಾಷ್, ಎಲ್ ಆಂಡ್‌ಟಿಯಂಥ ಸಂಸ್ಥೆಗಳು ಈಗಲೇ ಒಪ್ಪಿಗೆ ನೀಡಿವೆ ಎಂದರು.
ಮುಖ್ಯ ಕಾರ್ಯದರ್ಶಿ ಎಸ್.ವಿ.ರಂಗನಾಥ್, ಕಾರ್ಮಿಕ ಇಲಾಖೆ ಪ್ರಧಾನ ಕಾರ್ಯದರ್ಶಿ ದ್ಯಾಬೇರಿ, ಶಾಸಕ ವೆಂಕಟರಮಣಯ್ಯ ಭಾಗವಹಿಸಿದ್ದರು.