ಇಲಾಖೆ ಅಧೋಗತಿಗೆ ಬಿಎಸ್‌ವೈ, ಮುನಿಯಪ್ಪ ಕಾರಣ
ಕ.ಪ್ರ.ವಾರ್ತೆ ಕೋಲಾರ ಸೆ. 25
ದಲಿತರ ಏಳಿಗೆಗಾಗಿ ಇರುವ ಸಮಾಜ ಕಲ್ಯಾಣ ಇಲಾಖೆ ಅಧೋಗತಿಗೆ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಮತ್ತು ಕೇಂದ್ರ ಸಚಿವ ಕೆ.ಎಚ್. ಮುನಿಯಪ್ಪನವರೇ ಕಾರಣ ಎಂದು ಮಾಜಿ ಸಚಿವ, ಹಾಲಿ ಶಾಸಕ ಆರ್. ವರ್ತೂರ್ ಪ್ರಕಾಶ್ ಆರೋಪಿಸಿದರು.
ತಾಲೂಕಿನ ವೇಮಗಲ್‌ನಲ್ಲಿ ಬುಧವಾರ ಏರ್ಪಡಿಸಿದ್ದ ಸರ್ಕಾರಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಜಿಲ್ಲೆಯ ಸಮಾಜ ಕಲ್ಯಾಣ ಇಲಾಖೆ ಸರಿಪಡಿಸಲಾಗದಷ್ಟು ಹೀನಾಯ ಸ್ಥಿತಿ ತಲುಪಿದೆ. ಅಧಿಕಾರಿಗಳು ಯಾರೂ ಬರುತ್ತಿಲ್ಲ. ಜಿಲ್ಲೆಯ ಅಭಿವೃದ್ಧಿಗಾಗಿ ಸರ್ಕಾರ ನೀಡುತ್ತಿರುವ ರು. 500 ಕೋಟಿ ಅನುದಾನದಲ್ಲಿ ರು. 250 ಕೋಟಿ ಸಮಾಜ ಕಲ್ಯಾಣ ಇಲಾಖೆಗೆ ಸಿಗುತ್ತಿದ್ದರೂ ಬಡ ದಲಿತರ ಅಭಿವೃದ್ಧಿ ಆಗುತ್ತಿಲ್ಲವೆಂದು ದೂರಿದರು.
2 ಕೋಟಿ ರು. ಲಂಚ: ಮುಖ್ಯಮಂತ್ರಿ ಸಿದ್ದರಾಮಯ್ಯ ಉಪಸ್ಥಿತರಿದ್ದ ಕಾರ್ಯಕ್ರಮದಲ್ಲಿ ಸಮಾಜ ಕಲ್ಯಾಣ ಇಲಾಖೆಯ ವೈಫಲ್ಯಗಳನ್ನು ಬಿಚ್ಚಿಟ್ಟ ಶಾಸಕರು. ಹಿಂದೆ ಇಲಾಖೆಯ ಅಧಿಕಾರಿಯೊಬ್ಬರನ್ನು ಕರ್ತವ್ಯಲೋಪದ ಮೇಲೆ ಅಮಾನತುಗೊಳಿಸಲಾಗಿತ್ತು. ಆದರೆ ಆಗಿನ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅದೇ ಅಧಿಕಾರಿಯಿಂದ 2 ಕೋಟಿ ರು. ಲಂಚ ಪಡೆದು ಜಿಲ್ಲೆಯಲ್ಲಿ ಮುಂದುವರೆಸಿದರೆಂದು ಗಂಭೀರ ಆರೋಪ ಮಾಡಿದರು. ಸಮಾಜ ಕಲ್ಯಾಣ ಇಲಾಖೆ ಕೇವಲ ಐದಾರು ಜನರ ಸ್ವತ್ತು ಆಗಿದೆ. ದಕ್ಷ, ಪ್ರಾಮಾಣಿಕ ಅಧಿಕಾರಿಗಳು ಬರದಿರುವುದಕ್ಕೆ ರಾಜಕಾರಣಿಗಳ ಕುಮ್ಮಕ್ಕು ಇದೆ. ಪರಿಶಿಷ್ಟ ಜಾತಿ ಮತ್ತು ಪಂಗಡಕ್ಕೆ ಇದರಿಂದ ಅನ್ಯಾಯವಾಗುತ್ತಿದೆ ಎಂದರು.
ಮೌನವಾಗಿದ್ದಾರೆ: ಕೇಂದ್ರ ಸಚಿವ ಕೆ.ಎಚ್. ಮುನಿಯಪ್ಪನವರಿಗೆ ಸಮಾಜ ಕಲ್ಯಾಣ ಇಲಾಖೆಯಲ್ಲಿ ಏನೇನು ನಡೆಯುತ್ತಿದೆ ಎಂಬುದು ಗೊತ್ತಿದ್ದರೂ ಮೌನವಾಗಿದ್ದಾರೆ. ಸಚಿವರ ಮನೆಯಲ್ಲಿ ಟೀ-ಕಾಫಿ ಕೊಡುವ ವ್ಯಕ್ತಿಗೆ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ವ್ಯವಹಾರ ನಡೆಸುತ್ತಾನೆ. ಇದನ್ನು ಮುನಿಯಪ್ಪನವರು ಏಕೆ ನಿಯಂತ್ರಿಸುತ್ತಿಲ್ಲವೆಂದು ಪ್ರಶ್ನಿಸಿದರು.
ದಲಿತ ವರ್ಗಕ್ಕೆ ಅಪಮಾನ: ಕೆ.ಎಚ್. ಮುನಿಯಪ್ಪನವರು ಸಮಾಜ ಕಲ್ಯಾಣ ಇಲಾಖೆಯ ವಿಚಾರದಲ್ಲಿ ಕೂಡಲೇ ಮಧ್ಯಪ್ರವೇಶ ಮಾಡಿ ಇಲಾಖೆಯ ಆಗುತ್ತಿರುವ ಲೋಪ ನಿಯಂತ್ರಿಸದಿದ್ದರೆ ದಲಿತ ವರ್ಗಕ್ಕೆ ಅಪಮಾನ ಮಾಡಿದಂತಾಗುತ್ತದೆ, ಇಲಾಖೆಯ ಬಗ್ಗೆ ಎಲ್ಲವೂ ಗೊತ್ತಿರುವ ಮುನಿಯಪ್ಪನವರು ಈಗಲಾದರೂ ಎಚ್ಚರವಹಿಸಿ ಇಲಾಖೆಗೆ ಕಾಯಕಲ್ಪ ನೀಡಬೇಕೆಂದು ಆಗ್ರಹಿಸಿದರು.
ಜಿಲ್ಲೆಯಲ್ಲಿ ಹಸುಗಳಿಗೆ ಕಾಲುಬಾಯಿ ರೋಗ ಬಂದು ಸಾವಿರಾರು ಹಸುಗಳು ಸತ್ತಿವೆ. ಪಶುವೈದ್ಯ ಆಸ್ಪತ್ರೆಯ ವೈದ್ಯರು ಕೇಂದ್ರ ಸ್ಥಾನದಲ್ಲಿ ಇರುತ್ತಿಲ್ಲ ಎಂದು ಮುಖ್ಯಮಂತ್ರಿಗಳ ಗಮನಕ್ಕೆ ತಂದರು.
ಜಿಲ್ಲೆಯ ಜನಪ್ರತಿನಿಧಿಗಳಿಗೆ ಜನತೆಯ ಕಷ್ಟ ಅರ್ಥವಾಗುತ್ತಿಲ್ಲ. ನಾನು ಕೋಲಾರದಲ್ಲೇ ಇದ್ದು ಕ್ಷೇತ್ರದ ಕೆಲಸ ಮಾಡುತ್ತೀದ್ದೇನೆ. ಕೇಂದ್ರ ಸಚಿವ ಕೆ.ಎಚ್. ಮುನಿಯಪ್ಪ ಸೇರಿದಂತೆ ಅನೇಕರು ಬೆಂಗಳೂರಿನಲ್ಲಿ ನೆಲಸಿರುವುದರಿಂದ ಜನತೆಯ ಸಮಸ್ಯೆಗೆ ಸ್ಪಂದಿಸಲು ಆಗುತ್ತಿಲ್ಲವೆಂದರು.
ನೀರಿನ ಸಮಸ್ಯೆ ಹೆಚ್ಚಾಗುತ್ತಿದೆ, ನೀರಾವರಿ ಯೋಜನೆಗೆ ಸಂಬಂಧಿಸಿದ ಟೆಂಡರ್ ಬೇಗನೆ ಕರೆದು ಕಾಮಗಾರಿ ಮುಗಿಸಿ, ಕೈಗಾರಿಕೆಗಳಲ್ಲಿ ಸ್ಥಳೀಯರಿಗೆ ಉದ್ಯೋಗ ಸಿಗುತ್ತಿಲ್ಲವಾದ್ದರಿಂದ ಉದ್ದಿಮೆದಾರರನ್ನು ಕರೆಸಿ ಸಮಸ್ಯೆ ನಿವಾರಿಸುವಂತೆ ತಿಳಿಸಿದರು. ಜಿಲ್ಲೆಗೆ ಬಂದಿರುವ ಕೈಗಾರಿಕೆಗಳು ಮುಚ್ಚದಂತೆ ನೋಡಿಕೊಳ್ಳುವ ಜವಾಬ್ದಾರಿ ಪ್ರತಿಭಟನಾಕರರ ಮೇಲಿದೆ. ಸಮಸ್ಯೆ ಇದ್ದರೆ ಚರ್ಚಿಸಿ ಬಗೆಹರಿಸಿಕೊಳ್ಳಿ, ಇಲ್ಲದಿದ್ದರೆ ಉದ್ದಿಮೆದಾರರು ಕೈಗಾರಿಕೆಗಳನ್ನು ಬಂದ್ ಮಾಡಿ ಬೇರೆ ಕಡೆಗೆ ಹೋಗುತ್ತಾರೆಂದು ಕಿವಿಮಾತು ಹೇಳಿದರು.