ಕುಡಿವ ನೀರಿಗೆ ಆಗ್ರಹಿಸಿ ಪ್ರತಿಭಟನೆ
ಚಿಂತಾಮಣಿ: ಕುಡಿಯುವ ನೀರಿನ ವ್ಯವಸ್ಥೆ ಮಾಡದ ನಗರಸಭಾ ಅಧಿಕಾರಿಗಳ ವಿರುದ್ಧ ದಿಕ್ಕಾರ ಕೂಗುತ್ತಾ ನೂರಾರು ಮಹಿಳೆಯರು ಖಾಲಿ ಬಿಂದಿಗೆಗಳು ಮತ್ತು ಪೊರಕೆಯಿಂದ ವಿನೂತನ ರೀತಿಯಲ್ಲಿ ಪ್ರತಿಭಟನೆ ನಡೆದರು.
ಪಟ್ಟಣದ ಆಶ್ರಯ ಬಡಾವಣೆ ಹಾಗೂ ವೆಂಕಟಗಿರಿಕೋಟೆ ಸುತ್ತಮುತ್ತಲಿನ ನಿವಾಸಿಗಳು ಕಳೆದ 3 ತಿಂಗಳಿಂದ ಕುಡಿಯುವ ನೀರಿಗಾಗಿ ಪರದಾಡುತ್ತಿದ್ದರೂ ನಿರ್ಲಕ್ಷ್ಯ ತೋರಿದ ಪರಿಣಾಮ ನೂರಾರು ಮಹಿಳೆಯರು ಬುಧವಾರ ಖಾಲಿ ಬಿಂದಿಗೆಗಳೊಂದಿಗೆ ಬೀದಿಗಿಳಿದು ಹೋರಾಟ ನಡೆಸಿದರು.
ಪ್ರತಿಷ್ಟಿತ ಬಡಾವಣೆಗಳಿಗೆ ನೀರು: ವಾಣಿಜ್ಯ ನಗರಿ ಎಂಬ ಹೆಗ್ಗಳಿಕೆಗೆ ಪಾತ್ರವಾದ ಚಿಂತಾಮಣಿ ನಗರಸಭೆ ಹಲವಾರು ಸಮಸ್ಯೆಗಳು ತಾಂಡವಾಡುತ್ತಿದ್ದರೂ ನಗರಸಭೆ ಅಧಿಕಾರಿಗಳು ಒಂದು ಕಣ್ಣಿಗೆ ಬೆಣ್ಣೆ ಒಂದು ಕಣ್ಣಿಗೆ ಸುಣ್ಣ ಎಂಬ ಧ್ವಂಧ್ವ ನೀತಿ ಅನುಸರಿಸಿ ಪ್ರತಿಷ್ಟಿತ ಬಡಾವಣೆಗಳಿಗೆ ನೀರು ಕಲ್ಪಿಸಿದ್ದಾರೆ. ಮತ್ತೊಂದು ಕಡೆ ಕೊಳಚೆ ನಿವಾಸಿಗಳು ವಾಸಿಸುವ ಪ್ರದೇಶಗಳಲ್ಲಿ ಮೂಲ ಸಮಸ್ಯೆಗಳ ಬಗ್ಗೆ ಮನವಿ ಮಾಡಿದರೂ ಪ್ರಯೋಜನವಿಲ್ಲದ ಕಾರಣ ಪ್ರತಿಭಟಿಸಿದರು.
ಅಣಕು ಶವ ಸಂಸ್ಕಾರ: ನಗರಸಭೆ ಮುಂಭಾಗದಲ್ಲಿ ಪ್ರತಿಭಟನಕಾರರು ಹಲವು ಸಮಯ ತಮಟೆ ಬಡಿಯುತ್ತಾ ಅಧಿಕಾರಿಗಳ ವಿರುದ್ಧ ದಿಕ್ಕಾರ ಕೂಗಿ ಬೇಸತ್ತ ಜನ ಅಣಕು ಶವ ಸಂಸ್ಕಾರ ಶೈಲಿಯಲ್ಲಿ ಸತ್ತವರಿಗೆ ಪೊರಕೆ ಪೂಜೆ, ಮಡಿಕೆ ಹೊಡೆದು ನಗರಸಭೆ ಮುಂಭಾಗದಲ್ಲಿ ಬಾಯಿ ಬಡಿದುಕೊಂಡು ಪ್ರತಿಭಟನೆ ನಡೆಸಿದರು.
ನಗರಸಭೆಗೆ ನುಗ್ಗಲು ಯತ್ನ: ಜನರಿಗೆ ಸಮಸ್ಯೆ ಕಲ್ಪಿಸುವಲ್ಲಿ ವಿಫಲರಾಗಿರುವ ಅಧಿಕಾರಿಗಳ ವಿರುದ್ಧ ಆಕ್ರೋಶಗೊಂಡು ನೂರಾರು ಜನರು ನಗರಸಭೆ ಕಾರ್ಯಾಲಯಕ್ಕೆ ನುಗ್ಗಲು ಯತ್ನಿಸಿದಾಗ ಬಿಗುವಿನ ವಾತಾವರಣ ನಿರ್ಮಾಣಗೊಂಡಿತು. ತಕ್ಷಣ ಸಬ್ಇನ್ಸ್ ಪೆಕ್ಟರ್ ಹಾಗೂ ನಗರಸಭಾ ಆಯುಕ್ತ ಚನ್ನೇಗೌಡ ಪ್ರತಿಭಟನಕಾರರನ್ನು ಸಮಾದಾನ ಪಡಿಸಿ ಶಾಂತಿ ಕಾಪಾಡಲು ಕೋರಿದರು. 2 ದಿನಗಳಲ್ಲಿ ನೀರಿನ ವ್ಯವಸ್ಥೆ ಕಲ್ಪಿಸಿಕೊಡುವುದಾಗಿ ಭರವಸೆ ನೀಡಿದರು.