ವೇಸ್ಟ್ ಆಯಿಲ್ ಈತನ ಆಹಾರ...!
ಶಿರಾ: ಈತನ ಬದುಕೇ ವಿಚಿತ್ರ. ಹಸಿವು, ಬಾಯಾರಿಕೆ ತಾಳಲಾಗದೆ ಜೀವ ಉಳಿಸಿಕೊಳ್ಳಲು ಮನುಷ್ಯನೇ ಆಗಲಿ, ಪ್ರಾಣಿಗಳೇ ಆಗಲಿ ನೀರು ಆಹಾರಕ್ಕಾಗಿ ಪರದಾಡುತ್ತಾರೆ. ಒಂದು ಹನಿ ನೀರು ಸಿಕ್ಕರೆ ಸಾಕೆಂದು ಪರಿತಪಿಸುವುದು ಸಹಜ. ಆದರೆ ಈತನಿಗೆ ಹಸಿವಾದರೆ, ಬಾಯಾರಿಕೆಯಾದರೆ ನೀರು, ಆಹಾರಕ್ಕಾಗಿ ಹುಡುಕುವುದಿಲ್ಲ. ನೇರವಾಗಿ ವರ್ಕ್‌ಷಾಪ್‌ಗಳಿಗೆ ತೆರಳಿ ವೇಸ್ಟ್ ಆಯಿಲ್ ಕೇಳಿಕೊಂಡು ಗಟಗಟನೆ ಕುಡಿದು ಬಿಡುತ್ತಾನೆ. ಹೊಟ್ಟೆ ತುಂಬಾ ಕುಡಿದು ಸಂತೃಪ್ತನಾಗುತ್ತಾನೆ. ಅಚ್ಚರಿಯಾದರೂ ಇದು ನಿಜ. ಕಳೆದ 15 ವರ್ಷಗಳಿಂದ ಈತನಿಗೆ ವೇಸ್ಟ್ ಆಯಿಲ್ ಅಮೃತದಂತಾಗಿದೆ.
ಸುಮಾರು 35 ವರ್ಷ ಪ್ರಾಯದ ಕುಮಾರ ಮೂಲತಃ ಶಿವಮೊಗ್ಗ ಜಿಲ್ಲೆಯವನು. ಸಣ್ಣ ಮಗುವಾಗಿದ್ದಾಗ, ಈತನನ್ನು ಹೆತ್ತವರು ಶಿವಮೊಗ್ಗ ಬಸ್ ನಿಲ್ದಾಣದಲ್ಲಿ ಬಿಟ್ಟು ಹೊದರಂತೆ. ಬಸ್ ನಿಲ್ದಾಣದಲ್ಲೇ ಬೆಳೆದ ಕುಮಾರ್ ಯಾರಾದರೂ ನೀಡಿದ ಆಹಾರವನ್ನು ಸೇವಿಸುತ್ತಾ ಜೀವನ ಸಾಗಿಸುತ್ತಿದ್ದ. ಸ್ವಲ್ಪ ದೊಡ್ಡವನಾದಂತೆ ಗಾರೆ ಕೆಲಸದವರೊಂದಿಗೆ ಕೆಲಸಕ್ಕೆ ಹೋಗಲಾರಂಭಿಸಿದ.
15 ವರ್ಷವಾಗುತ್ತಿದ್ದಂತೆ ಯಾರೂ ಕೂಡ ಸರಿಯಾಗಿ ಕೆಲಸ ಕೊಡುತ್ತಿರಲಿಲ್ಲ. ಹೊಟ್ಟಗೆ ಹಿಟ್ಟಿಲ್ಲದೆ ಪರದಾಡುತ್ತಿದ್ದಾಗ ಯಾರೋ ಒಬ್ಬ ಹುಡುಗ ವೇಸ್ಟ್ ಆಯಿಲ್ ಕುಡಿಯುತ್ತಿದ್ದುದನ್ನು ನೋಡಿ ಈತ ವೇಸ್ಟ್ ಆಯಿಲ್ ಕುಡಿದು ಹೊಟ್ಟೆ ತುಂಬಿಸಿಕೊಂದಿದ್ದಾನೆ. ಅಲ್ಲಿಂದ ಈಗಲೂ ಕೂಡ ಈತನಿಗೆ ವೇಸ್ಟ್ ಆಯಿಲ್ ನಿತ್ಯದ ಊಟವಾಗಿದೆ.
ಅನ್ನತಿಂದರೆ ರಕ್ತವಾಂತಿ: ಅನ್ನ ತಿಂದರೆ ರಕ್ತ ವಾಂತಿಯಾಗುತ್ತೆ. ವೇಸ್ಟ್ ಆಯಿಲ್ ರೂಢಿಯಾಗಿಬಿಟ್ಟಿದೆ. ಅಪರೂಪಕ್ಕೆ ನೀರು, ಕಾಫಿ, ಟೀ ಕುಡಿತೀನಿ, ಅದು ಬಿಟ್ರೆ ಸುಟ್ಟ ಪೇಪರ್ ತಿನ್ತೀನಿ ಅಂತ ಕುಮಾರ್ ತನ್ನ ಆಹಾರ ಪದ್ಧತಿ ಬಗ್ಗೆ ಹೇಳುತ್ತಾನೆ. ಮೇಸ್ತ್ರಿಯೊಬ್ಬರು ಗಾರೆ ಕೆಲಸಕ್ಕೆಂದು ಶಿರಾಗೆ ಕರೆತಂದು ಬಿಟ್ಟವರು ನಂತರ ನಾಪತ್ತೆಯಾಗಿದ್ದಾರೆ. ಇದೀಗ ತಾನು ಅಲ್ಲಿ ಇಲ್ಲಿ ಗಾರೆ ಕೆಲಸ ಹುಡುಕುತ್ತಾ ಮಡಿಕೇರಿಯತ್ತ ಹೊರಟಿರುವುದಾಗಿ ಆತ ಹೇಳಿದ್ದಾನೆ.
ವೇಸ್ಟ್ ಆಯಿಲ್, ಪೇಪರ್ ಪುಕ್ಕಟ್ಟೆಯಾಗಿ ಸಿಗುವುದರಿಂದ ಯಾವುದೇ ಖರ್ಚು ಬರುವುದಿಲ್ಲ. ಗಾರೆ ಕೆಲಸದಿಂದ ಬರುವ ಹಣದಲ್ಲಿ ಬಟ್ಟೆ ಹಾಗೂ ಶಬರಿಮಲೆಗೆ ತೆರಳಲು ಬಳಸಿಕೊಳ್ಳುತ್ತಿರುವುದಾಗಿ ಕುಮಾರ್ ಹೇಳುತ್ತಾನೆ.