ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಶಾಶ್ವತ ಕುಡಿವ ನೀರು ಯೋಜನೆಗೆ ಜಿಜ್ಞಾಸೆಯಿಲ್ಲ

Srinivasa Murthy VN
Updated On : 26 Sept 2013, 12:28 pm

ಕ.ಪ್ರ.ವಾರ್ತೆ ಕೋಲಾರ ಸೆ. 25
ಯಾವುದೇ ನದಿ, ನಾಲೆ ಇಲ್ಲದ ಕೋಲಾರ ಜಿಲ್ಲೆಗೆ ಶಾಶ್ವತ ನೀರಾವರಿ ಯೋಜನೆ ಅನುಷ್ಠಾನ ವಿಚಾರದಲ್ಲಿ ಯಾವುದೇ ಜಿಜ್ಞಾಸೆ ಇಲ್ಲ. ಕುಡಿಯುವುದಕ್ಕೆ ಮತ್ತು ಕೃಷಿಗೆ ಬೇಕಾದ ನೀರು ಒದಗಿಸಲು ಸರ್ಕಾರ ಬದ್ಧವಾಗಿದೆ ಎಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ಸ್ಪಷ್ಟಪಡಿಸಿದರು.
 ತಾಲೂಕಿನ ವೇಮಗಲ್ ಗ್ರಾಮದಲ್ಲಿ ಬುಧವಾರ ಅವರು ವಿವಿಧ ಅಭಿವೃದ್ಧಿ ಕೆಲಸಗಳಿಗೆ ಚಾಲನೆ ನೀಡಿ ನಂತರ ಸಾರ್ವಜನಿಕರ ಸಭೆಯಲ್ಲಿ ಮಾತನಾಡಿ, ಮಳೆ ಅಭಾವದ ನಡುವೆಯೂ ಜಿಲ್ಲೆಯ ರೈತರು ಕಷ್ಟಪಟ್ಟು ಬೇಸಾಯ ಮಾಡುತ್ತಿದ್ದಾರೆ, ಹೈನುಗಾರಿಕೆ, ರೇಷ್ಮೆ, ತೋಟಗಾರಿಕೆ ಅವಲಂಬಿತ ರೈತರಿಗೆ ನೀರಿನ ಸಮಸ್ಯೆ ಇರುವುದು ಸರ್ಕಾರದ ಗಮನಕ್ಕೆ ಬಂದಿದೆ. ಅಂತರ್ಜಲ ಪಾತಾಳ ಸೇರಿರುವುದರಿಂದ ಕುಡಿಯುವ ನೀರಿಗೂ ದುಸ್ತರವಾಗಿದೆ. ಜನರ ಮತ್ತು ಜನಪ್ರತಿನಿಧಿಗಳ ಬೇಡಿಕೆಯನ್ನು ಅರಿತು ಶಾಶ್ವತ ಕುಡಿಯುವ ನೀರಿನ ಯೋಜನೆ ಜಾರಿಗೆ ಸರ್ಕಾರ ಮುಂದಾಗಿದೆ ಎಂದರು.
ಎತ್ತಿನ ಹೊಳೆ ಯೋಜನೆ: ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಿಗೆ ಶಾಶ್ವತ ನೀರಾವರಿ ಯೋಜನೆ ಜಾರಿಗೊಳಿಸಲು ಎತ್ತಿನ ಹೊಳೆ ಮತ್ತು ಡಾ. ಪರಮಶಿವಯ್ಯ ವರದಿಗಳು ಸರ್ಕಾರದ ಮುಂದೆ ಇವೆ. ಈ ಎರಡೂ ಯೋಜನೆಗಳ ವಿಚಾರದಲ್ಲಿ ಗೊಂದಲ ಉಂಟಾಗಿದ್ದು, ಮೊದಲು ಇದನ್ನು ನಿವಾರಣೆ ಮಾಡಲು ಸರ್ಕಾರ ಗಂಭೀರ ಪ್ರಯತ್ನದಲ್ಲಿದೆ ಎಂದು ಹೇಳಿದರು. ಎತ್ತಿನ ಹೊಳೆ ಯೋಜನೆ ಜಾರಿಗೆ ಬಜೆಟ್‌ನಲ್ಲಿ ಹಣ ಮೀಸಲಿಡಲಾಗಿದೆ. ಈಗಾಗಲೇ ಯೋಜನೆ ಅನುಷ್ಠಾನಕ್ಕಾಗಿ ಟೆಂಡರ್ ಕರೆಯಲಾಗಿದೆ. ತಾಂತ್ರಿಕ ಬಿಡ್ ಆಗಿದೆ. ಡಾ.ಪರಮಶಿವಯ್ಯನವರ ಯೋಜನೆಯ ಡಿಪಿಆರ್‌ಗಾಗಿ ಬಜೆಟ್‌ನಲ್ಲಿ 50ಕೋಟಿ ಮೀಸಲಿಡಲಾಗಿದ್ದು. ವರದಿ ಬಂದ ನಂತರ ಅಂತಿಮ ತೀರ್ಮಾನ ಕೈಗೊಳ್ಳುತ್ತೇವೆಂದರು.
ಗೊಂದಲ ನಿವಾರಣೆ: ಎತ್ತಿನ ಹೊಳೆ ಮತ್ತು ಡಾ. ಪರಮಶಿವಯ್ಯ ವರದಿಯ ಬಗ್ಗೆ ಉಂಟಾಗಿರುವ ಗೊಂದಲ ನಿವಾರಣೆಗಾಗಿ ಜನಪ್ರತಿನಿಧಿಗಳ, ತಜ್ಞರ ಸಭೆ ಕರೆಯಬೇಕೆಂಬ ಸಲಹೆ ಕೇಳಿ ಬಂದಿರುವುದರಿಂದ ಅದಷ್ಟು ಬೇಗನೆ ಸಭೆ ಕರೆದು ಎಲ್ಲರ ಅಭಿಪ್ರಾಯ ಸಂಗ್ರಹಿಸಿ ಗೊಂದಲ ನಿವಾರಣೆ ಮಾಡುವುದಾಗಿ ಭರವಸೆ ನೀಡಿದರು.
ಬಯಲು ಸೀಮೆ ಜನತೆಯ ಹಿತದೃಷ್ಟಿಯಿಂದ ಯೋಗ್ಯವಾದ ನಿರ್ಧಾರವನ್ನು ನಮ್ಮ ಸರ್ಕಾರ ಕೈಗೊಳ್ಳುವುದರಿಂದ ಜನತೆ ವಿಶ್ವಾಸವಿಡಬೇಕೆಂದು ತಿಳಿಸಿದರು.
ಕೋಲಾರಕ್ಕೆ ಕೊಡುಗೆ: ಜಿಲ್ಲೆಯ ಸಮಗ್ರ ಅಭಿವೃದ್ಧಿಗಾಗಿ ಜಿಲ್ಲಾ ಆಡಳಿತದಿಂದ 16 ಬೇಡಿಕೆಗಳು ಮಂಡಿಸಲಾಗಿದ್ದು, ಮುಂದಿನ ವರ್ಷ ಕೋಲಾರಕ್ಕೆ ಸರ್ಕಾರಿ ವೈದ್ಯಕೀಯ ಕಾಲೇಜು ಮಂಜೂರು ಮಾಡುವುದಾಗಿ ಪ್ರಕಟಿಸಿದರು.
ರೇಲ್ವೆ ಕೋಚ್ ಫ್ಯಾಕ್ಟರಿ ಸ್ಥಾಪನೆಗಾಗಿ ರಾಜ್ಯ ಸರ್ಕಾರ 700 ಕೋಟಿ ರು. ಹಾಗೂ ಕಾರ್ಖಾನೆ ನಿರ್ಮಿಸಲು ಬೇಕಾದ ಜಮೀನು ನೀಡಲು ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನಿಸಿದೆ. ಸ್ಥಳೀಯರಿಗೆ ಉದ್ಯೋಗ ಸಿಗುತ್ತದೆ ಎಂಬ ಕಾರಣದಿಂದ ರಾಜ್ಯ ಸರ್ಕಾರ ರೇಲ್ವೆ ಕೋಚ್ ಫ್ಯಾಕ್ಟರಿ ಸೇರಿದಂತೆ ಇತರ ಕೈಗಾರಿಗಳ ಸ್ಥಾಪನೆಗೆ ಅವಕಾಶ ನೀಡುತ್ತಿದೆ ಎಂದರು.
ಹೊಸ ತಾಲೂಕು ರಚನೆಗೆ ಬೇಡಿಕೆ; ವೇಮಗಲ್ ಮತ್ತು ಕೆಜಿಎಫ್‌ನ್ನು ತಾಲೂಕು ಕೇಂದ್ರವನ್ನಾಗಿ ಘೋಷಣೆ ಮಾಡಬೇಕೆಂದು ಜನತೆ ಒತ್ತಾಯಿಸಿದಾಗ, ಹೊಸ ತಾಲೂಕುಗಳ ರಚನೆಯ ಸಂದರ್ಭದಲ್ಲಿ ಜನತೆಯ ಬೇಡಿಕೆ ಪರಿಗಣಿಸುವುದಾಗಿ ಭರವಸೆ ನೀಡಿದರು.
ಜಿಲ್ಲೆಯಲ್ಲಿ ಸಂಗ್ರಹಣೆ ಆಗುತ್ತಿರುವ 9 ಲಕ್ಷ ಲೀಟರ್ ಹಾಲಿನ ಪೈಕಿ ಬೆಂಗಳೂರು ಮಾರುಕಟ್ಟೆಯಲ್ಲಿ ಕೇವಲ 2.50 ಲಕ್ಷ ಲೀಟರ್ ಹಾಲು ಮಾರಾಟಕ್ಕೆ ಅವಕಾಶ ಕಲ್ಪಿಸಲಾಗಿದ್ದು. ಇನ್ನು 5 ಲಕ್ಷ ಲೀಟರ್ ಹಾಲನ್ನು ಮಾರಾಟ ಮಾಡಲು ಕೆಎಂಎಫ್‌ನೊಂದಿಗೆ ಚರ್ಚಿಸಿ ನಿರ್ಧರ ಕೈಗೊಳ್ಳಬೇಕಾಗಿದೆ. ಮಂಡ್ಯ, ಬೆಂಗಳೂರು ಹಾಗೂ ಕೋಲಾರ ಹಾಲು ಒಕ್ಕೂಟದ ಅಧಿಕಾರಿಗಳೊಂದಿಗೆ ಈ ಸಂಬಂಧ ಶೀಘ್ರವೇ ಸಭೆ ನಡೆಸುವುದಾಗಿ ಭರವಸೆ ನೀಡಿದರು.
ಕೋಲಾರದಲ್ಲಿ ಹಾಲಿನ ಪುಡಿ ಘಟಕ ಸ್ಥಾಪನೆಗೆ ಬೇಡಿಕೆ ಬಂದಿದೆ. ಮೈಸೂರಿನಲ್ಲಿ ಹಾಲಿನ ಪುಡಿ ಘಟಕ ಸ್ಥಾಪನೆಗೆ ಸರ್ಕಾರ ಮಂಜೂರಾತಿ ನೀಡಿದ್ದು, ಅಗತ್ಯವಿದ್ದಲ್ಲಿ ಕೋಲಾರಕ್ಕೂ ಒಂದು ಘಟಕ ನೀಡುವುದಾಗಿ ಹೇಳಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಸಕ ವರ್ತೂರ್ ಪ್ರಕಾಶ್ ವಹಿಸಿದ್ದರು. ಕೇಂದ್ರ ಸಣ್ಣ,ಅತಿ ಸಣ್ಣ, ಮಧ್ಯಮ ಕೈಗಾರಿಕೆಗಳ ರಾಜ್ಯ ಸಚಿವ ಕೆ.ಎಚ್. ಮುನಿಯಪ್ಪ, ರಾಜ್ಯ ಸರ್ಕಾರದ ನಗರಾಭಿವೃದ್ಧಿ ಸಚಿವ ವಿನಯ ಕುಮಾರ್ ಸೊರಕೆ, ವಿಪ ಸದಸ್ಯ ನಜೀರ್ ಅಹ್ಮದ್, ಶಾಸಕ ಕೆ.ಆರ್. ರಮೇಶ್ ಕುಮಾರ್, ಮಂಜುನಾಥಗೌಡ, ಎಸ್.ಎನ್. ನಾರಾಯಣಸ್ವಾಮಿ, ಕೊತ್ತೂರು ಮಂಜುನಾಥ್, ವೈ. ರಾಮಕ್ಕ, ವಿಧಾನ ಪರಿಷತ್ ಸದಸ್ಯರಾದ ವೈ.ಎ. ನಾರಾಯಣಸ್ವಾಮಿ, ಡಿ.ಎಸ್. ವೀರಯ್ಯ ಇದ್ದರು.
ವಿಧಾನ ಪರಿಷತ್ತಿನ ಮಾಜಿ ಸಭಾಪತಿ ವಿ.ಆರ್. ಸುದರ್ಶನ್ ಕಾರ್ಯಕ್ರಮವನ್ನು ನಿರೂಪಿಸಿದರು. ಜಿಲ್ಲಾಧಿಕಾರಿ ಡಿ.ಕೆ. ರವಿ ಸ್ವಾಗತಿಸಿ, ಜಿಪಂ ಸಿಇಒ ಝುಲ್ಫಿಖಾರ್ ಉಲ್ಲಾ ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement