ಶಾಸಕರ ಆರೋಪಕ್ಕೆ ಮುನಿಯಪ್ಪ ತಿರುಗೇಟು
ಕೋಲಾರ: ಸಮಾಜ ಕಲ್ಯಾಣ ಇಲಾಖೆಯಲ್ಲಿ ಆಗಿರುವ ಲೋಪಗಳಿಗೆ ಸಂಬಂಧಿಸಿದಂತೆ ಶಾಸಕ ವರ್ತೂರ್ ಪ್ರಕಾಶ್ ಮಾಡಿರುವ ಟೀಕೆಗಳಿಗೆ ಅವರ ಶೈಲಿಯಲ್ಲಿ ಉತ್ತರ ನೀಡುವುದಿಲ್ಲ. ವರ್ತೂರ್ ಪ್ರಕಾಶ್ ಮಂತ್ರಿ ಆಗಿದ್ದರು. ಇವರ ಕಾಲದಲ್ಲಿ ಏನೇನು ಅಭಿವೃದ್ಧಿ ಆಗಿದೆ ಎಂಬುದನ್ನು ತಿಳಿಸುವುದಕ್ಕೆ ಈ ವೇದಿಕೆ ಸೂಕ್ತವಲ್ಲವೆಂದು ಕೇಂದ್ರ ಸಚಿವ ಕೆ.ಎಚ್. ಮುನಿಯಪ್ಪ ತಿರುಗೇಟು ನೀಡಿದರು.
ವೇಮಗಲ್ನಲ್ಲಿ ನಡೆದ ಸರ್ಕಾರಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಾಸಕ ವರ್ತೂರ್ ಪ್ರಕಾಶ್ ಅವರು ತಮ್ಮ ವಿರುದ್ಧ ಮಾಡಿದ ಆರೋಪಗಳಿಗೆ ಪ್ರತಿಕ್ರಿಯಿಸಿ, ಎಸ್.ಎಂ. ಕೃಷ್ಣ ಮುಖ್ಯಮಂತ್ರಿ ಆಗಿದ್ದ ಕಾಲದಿಂದ ಈಗಿನವರೆಗೆ ಸಮಾಜ ಕಲ್ಯಾಣ ಇಲಾಖೆಯಲ್ಲಿ ಆಗಿರುವ ಅವ್ಯವಹಾರಗಳ ತನಿಖೆ ಆಗಲಿ, ಆಗ ಸತ್ಯ ಹೊರಬರುತ್ತದೆ ಎಂದು ಸವಾಲು ಹಾಕಿದರು.
ನೀರಿನ ಸಮಸ್ಯೆ: ನಾವಿಂದು ಜಿಲ್ಲೆಗೆ ಮುಖ್ಯಮಂತ್ರಿಗಳನ್ನು ಕರೆಸಿರುವುದು ನೀರು ಕೇಳುವುದಕ್ಕಾಗಿ, ಈ ಸಂದರ್ಭದಲ್ಲಿ ಬೇರೆ ವಿಚಾರಗಳನ್ನು ಚರ್ಚಿಸಿ ಸಮಯ ವ್ಯರ್ಥ ಮಾಡುವುದಕ್ಕೆ ಇಷ್ಟವಿಲ್ಲ, ಜಿಲ್ಲೆಯ ಜನತೆ ನೀರಿನ ಸಮಸ್ಯೆಯಿಂದ ತತ್ತರಿಸುತ್ತಿರುವುದರಿಂದ ಎಲ್ಲಾ ಶಾಸಕರನ್ನು ಕರೆದು ನಿರ್ಧಿಷ್ಟ ಕಾಲಾವಧಿಯಲ್ಲಿ ನೀರಾವರಿ ಯೋಜನೆ ಜಾರಿಗೆ ಮುಖ್ಯಮಂತ್ರಿಗಳು ಆಸಕ್ತಿ ತೋರಬೇಕೆಂದು ಮನವಿ ಮಾಡಿದರು. ಕೈಗಾರಿಕೆಗಳಲ್ಲಿ ಸ್ಥಳೀಯರಿಗೆ ಉದ್ಯೋಗ ಕಲ್ಪಿಸುವ ಸಂಬಂಧ ಅಧಿಕಾರಿಗಳು ಉದ್ದಿಮೆದಾರರ ಜೊತೆ ಸಭೆ ನಡೆಸಬೇಕು, ಸಮಿತಿ ರಚನೆ ಮಾಡಿ ಸ್ಥಳೀಯರಿಗೆ ಅನ್ಯಾಯವಾಗದಂತೆ ಎಚ್ಚರವಹಿಸುವಂತೆ ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ವಿದ್ಯಾಶಂಕರ್ ಅವರಿಗೆ ಸೂಚಿಸಿದರು.
ಶಾಶ್ವತ ನೀರಾವರಿ ಯೋಜನೆ: ಕಾರ್ಯಕ್ರಮದಲ್ಲಿ ಮಾಲೂರು ಶಾಸಕ ಮಂಜುನಾಥಗೌಡ ಮಾತನಾಡಿ, ಕೇಂದ್ರ ಮತ್ತು ರಾಜ್ಯದಲ್ಲಿ ಕಾಂಗ್ರೆಸ್ ನೇತೃತ್ವದ ಸರ್ಕಾರವಿದ್ದು, ಈಗ ಶಾಶ್ವತ ನೀರಾವರಿ ಯೋಜನೆ ಜಾರಿಯಾಗದಿದ್ದರೆ ಮುಂದೆ ಎಂದೂ ಅನುಷ್ಠಾನವಾಗಲ್ಲವೆಂದು ತಿಳಿಸಿದರು. ವಿಧಾನ ಪರಿಷತ್ ಸದಸ್ಯ ಡಿ.ಎಸ್. ವೀರಯ್ಯನವರು ಮುಖ್ಯಮಂತ್ರಿಗಳ ಗುಣಗಾನ ಮಾಡುವ ಮೂಲಕ ಗಮನ ಸೆಳೆದರು. ಕೃಷಿ ಸಚಿವ ಕೃಷ್ಣಬೈರೇಗೌಡ ಮಾತನಾಡಿ, ಜಿಲ್ಲೆಯ ಜನತೆಗೆ ನೀರು ಕೊಡದಿದ್ದರೆ ಮುಂದಿನ ದಿನಗಳಲ್ಲಿ ಇವರ ಬಳಿ ಹೋಗುವುದಕ್ಕೆ ಕಷ್ಟವಾಗುತ್ತದೆ ಎಂದು ಆತಂಕ ತೋಡಿಕೊಂಡರು. ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ. ಖಾದರ್ ಅವರು ಪ್ರಸ್ತಾವಿಕವಾಗಿ ಮಾತನಾಡಿ, ಸರ್ಕಾರ ಸಾಧನೆ ತಿಳಿಸಿದರು.