ಶಾಸಕರ ನಗರ ಪ್ರದಕ್ಷಿಣೆಗೆ ಅಸಮಾಧಾನ
ಚಿಕ್ಕಬಳ್ಳಾಪುರ: ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಲು ಶಾಸಕ ಡಾ.ಕೆ. ಸುಧಾಕರ್ ಅವರು ನಗರ ಪ್ರದಕ್ಷಿಣೆ ಕಾರ್ಯಕ್ರಮ ಕೈಗೊಂಡಿರುವುದಕ್ಕೆ ಕೆಲ ನಗರಸಭಾ ಸದಸ್ಯರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ನಗರದ ಸಮಸ್ಯೆಗಳನ್ನು ತಿಳಿದುಕೊಳ್ಳುವ ಸಲುವಾಗಿ ಹಮ್ಮಿಕೊಂಡಿರುವ ಕಾರ್ಯಕ್ರಮದ ಬಗ್ಗೆ ಶಾಸಕರು ತಮ್ಮ ಗಮನಕ್ಕೆ ತರದೇ ಏಕಪಕ್ಷೀಯವಾಗಿ ನಿರ್ಧಾರ ಕೈಗೊಂಡು ನಮ್ಮನ್ನು ಕಡೆಗಣಿಸಿದ್ದು ಇದರಿಂದ ತಾವು ಕಾರ್ಯಕ್ರಮದಲ್ಲಿ ಭಾಗವಹಿಸುವುದಿಲ್ಲ ಎಂದು ತಿಳಿಸಿದ್ದಾರೆ.
ಜಿಲ್ಲಾ ಕೇಂದ್ರವಾದರೂ ಚಿಕ್ಕಬಳ್ಳಾಪುರ ನಗರದಲ್ಲಿ ಬಹಳಷ್ಟು ರಸ್ತೆಗಳು ಹದಗೆಟ್ಟಿವೆ. ಅಸಮರ್ಪಕ ಕಸ ವಿಲೇವಾರಿಯಿಂದ ಅಸ್ವಚ್ಛತೆ ತುಂಬಿ ತುಳುಕುತ್ತಿದ್ದು ಜನರು ಸಮಸ್ಯೆ ಅನುಭವಿಸುತ್ತಿದ್ದಾರೆ. ಇಷ್ಟಾದರೂ ನಗರಸಭೆ ಕ್ರಮ ಕೈಗೊಳ್ಳದೇ ನಿರ್ಲಕ್ಷ್ಯ ವಹಿಸಿದೆ. ಸಂಬಂಧಪಟ್ಟ ಅಧಿಕಾರಿಗಳು ಗಮನಹರಿಸುತ್ತಿಲ್ಲ ಎಂಬ ಆರೋಪಗಳು ವ್ಯಾಪಕವಾಗಿ ಕೇಳಿ ಬಂದಿರುವುದರ ನಡುವೆ ಶಾಸಕ ಸುಧಾಕರ್ ಗುರುವಾರ ನಗರ ಪ್ರದಕ್ಷಿಣೆ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ. ಆದರೆ, ಈ ವಿಷಯದಲ್ಲಿ ನಗರಸಭೆ ಸದಸ್ಯರಾದ ತಮ್ಮನ್ನು ಗಣನೆಗೆ ತೆಗೆದುಕೊಂಡಿಲ್ಲ ಎನ್ನುವುದು ಕೆಲ ಸದಸ್ಯರ ಆಕ್ರೋಶಕ್ಕೆ ಕಾರಣವಾಗಿದೆ.
ನಗರಸಭಾ ಕಚೇರಿಯಲ್ಲಿ ಸುದ್ದಿಗೋಷ್ಠಿಯನ್ನು ನಡೆಸಿದ ಸುಮಾರು 20 ಹೆಚ್ಚು ಮಂದಿ ಸದಸ್ಯರು, ನಗರದಲ್ಲಿ ಸಮಸ್ಯೆ ಬಗೆಹರಿಸಲು ಶಾಸಕರು ತಮ್ಮೊಂದಿಗೆ ಪ್ರಾಮಾಣಿಕವಾಗಿ ಸ್ಪಂದಿಸಬೇಕು.ನಗರಸಭೆ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲು ಸರ್ಕಾರದಿಂದ ಅಗತ್ಯವಿರುವ ಅನುದಾನವನ್ನು ಬಿಡುಗಡೆ ಮಾಡಿಸಬೇಕು. ಆದರೆ, ನಗರಸಭೆಗೆ ನಿರೀಕ್ಷಿತ ಮಟ್ಟದಲ್ಲಿ ಅನುದಾನ ಬಂದಿಲ್ಲ. ಈ ಹಿನ್ನೆಲೆಯಲ್ಲಿ ಅಭಿವೃದ್ಧಿ ಕೆಲಸ ಕಾರ್ಯಗಳಿಗೆ ತೊಂದರೆಯಾಗಿದ್ದು ಈ ಬಗ್ಗೆ ಶಾಸಕರು ಗಮನಹರಿಸುತ್ತಿಲ್ಲ. ನಗರಸಭೆ ವಿಚಾರವಾಗಿ ಏಕಪಕ್ಷೀಯವಾಗಿ ನಿರ್ಧಾರ ಕೈಗೊಂಡು ನಗರಸಭಾ ಸದಸ್ಯರನ್ನು ಕಡೆಗಣಿಸುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಲೈನ್ಮನ್ ಕಿರುಕುಳ ತಪ್ಪಿಸಿ
ಟೇಕಲ್: ವಿದ್ಯುತ್ ಬಿಲ್ ಕಟ್ಟಿದ್ದರೂ ಬೆಸ್ಕಾಂ ಇಲಾಖೆ ಲೈನ್ ಮನ್ ಗ್ರಾಹಕರ ಮನೆಯ ಬಳಿ ಬಂದು ದೌರ್ಜನ್ಯವೆಸಗಿ ಗ್ರಾಹಕರಿಂದ 300 ರುಪಾಯಿ ವಸೂಲಿ ಮಾಡಿರುವ ಘಟನೆ ಟೇಕಲ್ ಬೆಸ್ಕಾಂ ವ್ಯಾಪ್ತಿಯ ಗೋಪಸಂದ್ರ ಗ್ರಾಮದಲ್ಲಿ ನಡೆದಿದೆ.
ಗ್ರಾಮದ ಎಲ್ಐಸಿ ಶ್ರೀನಿವಾಸ ಕುಟುಂಬದವರು ವಿದ್ಯುತ್ ಬಿಲ್ ಬಾಕಿ ಇಲ್ಲದಿದ್ದರೂ ಟೇಕಲ್ ಬೆಸ್ಕಾ ವ್ಯಾಪ್ತಿಯ ಲೈನ್ಮನ್ ಇಸ್ರೆಲ್ ಹಾಗೂ ಅವರ ಜೊತೆ ಜಿ.ವಿ.ಪಿ. ನಾರಾಯಣಸ್ವಾಮಿ ಎಂಬ ವಿದ್ಯುತ್ ಬಿಲ್ ಕಲೆಕ್ಟರ್ ಜೊತೆ ಬಂದು 300 ರುಪಾಯಿ ಕಟ್ಟಲೆ ಬೇಕೆಂದು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆಂದು, ಗ್ರಾಹಕರು ಆತನಿಗೆ ಹೆದರಿ 300 ರುಪಾಯಿ ನೀಡಿದಾಗ ಯಾವುದೇ ಬಿಲ್ ನೀಡದೆ ಜಾಗ ಖಾಲಿ ಮಾಡಿದ್ದಾರೆ. ನಂತರ ಶ್ರೀನಿವಾಸ್ ಮತ್ತು ಗ್ರಾಮಸ್ಥರು ವಿಷಯ ತಿಳಿದು ಇಸ್ರೆಲ್ನನ್ನು ಕರೆತಂದು ಈ ಬಗ್ಗೆ ಮೇಲಾಧಿಕಾರಿಗಳಿಗೆ ತಿಳಿಸುವುದಾಗಿ ಹೇಳಿ, ಕೊಟ್ಟಿರುವ 300 ರುಪಾಯಿಗೆ ಬಿಲ್ ನೀಡಬೇಕೆಂದು ಒತ್ತಾಯಿಸಿದಾಗ ಆತ ಕ್ಷಮಾಪಣೆ ಪತ್ರ ಬರೆದು 300 ರುಪಾಯಿ ಪಡೆದ ಬಗ್ಗೆ ಬರೆದು ಅದನ್ನು ಶ್ರೀನಿವಾಸ್ ಕೈಯಲ್ಲಿ ಇಟ್ಟು ಹೋಗಿದ್ದಾನೆ.
ಈ ಬಗ್ಗೆ ಎಲ್ಐಸಿ ಶ್ರೀನಿವಾಸ್ ಮಾಲೂರು ಮತ್ತು ಕೋಲಾರ ಜಿಲ್ಲಾ ವಿದ್ಯುತ್ ಇಲಾಖೆಯ ಮೇಲಾಧಿಕಾರಿಗಳಿಗೆ ಮನವಿ ನೀಡಿದ್ದು, ಈತನ ಬಗ್ಗೆ ಕ್ರಮ ಕೈಗೊಳ್ಳದಿದ್ದ ಪಕ್ಷದಲ್ಲಿ ಟೇಕಲ್ ಬೆಸ್ಕಾಂ ಕಚೇರಿ ಮುಂದೆ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಸಿದ್ದಾರೆ.