ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಸ್ಥಳೀಯರಿಗೆ ಉದ್ಯೋಗ ನೀಡುವುದು ಉದ್ದಿಮೆದಾರರ ಕರ್ತವ್ಯ

Srinivasa Murthy VN
Updated On : 26 Sept 2013, 12:30 pm

ಕೋಲಾರ: ರಾಜ್ಯ ಸರ್ಕಾರ ಕೈಗಾರಿಕೆಗಳ ಸ್ಥಾಪನೆಗಾಗಿ ಉದ್ದಿಮೆದಾರರಿಗೆ ಭೂಮಿ ಸೇರಿದಂತೆ ಎಲ್ಲಾ ರೀತಿಯ ಮೂಲ ಸೌಕರ್ಯ ಕಲ್ಪಿಸುತ್ತಿರುವುದರಿಂದ ಒಪ್ಪಂದದ ಪ್ರಕಾರ ಉದ್ದಿಮೆದಾರರು ಸ್ಥಳೀಯರಿಗೆ ಹೆಚ್ಚಿನ ಉದ್ಯೋಗಾವಕಾಶ ಕಲ್ಪಿಸುವುದು ಕರ್ತವ್ಯವಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ನುಡಿದರು. ವೇಮಗಲ್‌ನಲ್ಲಿ ಅವರು ಸರ್ಕಾರಿ ಕಾರ್ಯಕ್ರಮದಲ್ಲಿ ಮಾತನಾಡಿ, ನಮ್ಮ ಸರ್ಕಾರ ಕೋಲಾರ ಜಿಲ್ಲೆಯ ವೇಮಗಲ್‌ಕೈಗಾರಿಕಾ ಪ್ರದೇಶದಲ್ಲಿ ಉದ್ದಿಮೆಗಳ ಸ್ಥಾಪನೆಗೆ ಎಲ್ಲಾ ರೀತಿಯ ನೆರವು ನೀಡಿರುವುದರಿಂದ 700 ಕೋಟಿ ರು.ಬಂಡವಾಳ ಹರಿದು ಬರುತ್ತಿದೆ. ಟಾಟಾ ಪವರ್ ಕಂಪನಿಯವರು ಕಾರ್ಖಾನೆ ಸ್ಥಾಪಿಸುತ್ತಿದ್ದು ಸ್ಥಳೀಯರಿಗೆ ಉದ್ಯೋಗ ಸಿಗದಿದ್ದರೆ ಕೈಗಾರಿಕೆಗಳು ಬಂದರೂ ಪ್ರಯೋಜವಾಗುವುದಿಲ್ಲವೆಂದರಲ್ಲದೆ, ಅಧಿಕಾರಿಗಳು ಇತ್ತ ಗಮನ ನೀಡಬೇಕೆಂದು ತಾಕೀತು ಮಾಡಿದರು.

ಸ್ವಾಮಿಗೆ ಸಚಿವ ಸ್ಥಾನಕ್ಕೆ ಒತ್ತಾಯ
ಕೋಲಾರ: ಮುಖ್ಯಮಂತ್ರಿ ಅವರು ಭಾಷಣ ಮಾಡುವಾಗ ಶ್ರೀನಿವಾಸಪುರದಿಂದ ಬಂದಿದ್ದ ಶಾಸಕ ಕೆ.ಆರ್. ರಮೇಶ್ ಕುಮಾರ್ ಬೆಂಬಲಿಗರು ಸಚಿವ ಸಂಪುಟಕ್ಕೆ ರಮೇಶ್ ಕುಮಾರ್(ಸ್ವಾಮಿ) ಅವರನ್ನು ಸೇರಿಸಿಕೊಳ್ಳುವಂತೆ ಒತ್ತಾಯಿಸಿದರು. ಇದಕ್ಕೆ ಸ್ಪಂಧಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ನಿಮ್ಮ ಭಾವನೆಗಳನ್ನು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾಗಾಂಧಿ ಅವರಿಗೆ ತಿಳಿಸುತ್ತೆನೆಂದರು. ಮತ್ತೆ ಸ್ವಾಮಿ ಬೆಂಬಲಿಗರು ಸಚಿವ ಸ್ಥಾನಕ್ಕೆ ಒತ್ತಾಯಿಸಿದಾಗ, ಹಾಗೆಲ್ಲ ಭರವಸೆ ನೀಡುವುದಕ್ಕೆ ನಮ್ಮ ಪಕ್ಷದಲ್ಲಿ ಆಗಲ್ಲವೆಂದು ಅಸಹಾಯಕತೆ ವ್ಯಕ್ತಪಡಿಸಿದಾಗ, ವೇದಿಕೆಯಲ್ಲಿದ್ದ ಶಾಸಕ ರಮೇಶ್ ಕುಮಾರ್ ತಲೆಯಾಡಿಸಿ ಸಮ್ಮತಿ ಸೂಚಿಸಿದರು.

ಕುಡಿದ ಅಮಲಿನಲ್ಲಿ ಹಲ್ಲೆ; ಮಹಿಳೆ ಸಾವು
ಗೌರಿಬಿದನೂರು: ಕುಡಿದುಬಂದು ಪ್ರತಿದಿನ ಕಾಲೋನಿಯ ಎಲ್ಲರನ್ನೂ ಬೈಯುತ್ತಿದ್ದ ವ್ಯಕ್ತಿಯೋರ್ವನಿಗೆ ಬುದ್ದಿಹೇಳಿದ ಮಹಿಳೆಯನ್ನು ಕಬ್ಬಿಣದ ರಾಡಿನಿಂದ ಹೊಡೆದು ಕೊಲೆ ಮಾಡಿರುವ ಘಟನೆ ತಾಲೂಕು ಮಂಚೇನಹಳ್ಳಿಯ ಗಾಂಧಿನಗರ ಕಾಲೋನಿಯಲ್ಲಿ ನಡೆದಿದೆ. ಬುಧವಾರ ರಾತ್ರಿ ಮದ್ಯ ಸೇವಿಸಿದ್ದ ಶಿವು(33) ಅವಾಚ್ಯಶಬ್ದಗಳಿಂದ ಎಲ್ಲರನ್ನೂ ಬೈಯುತ್ತಾ ತೊಂದರೆ ನೀಡುತ್ತಿದ್ದ. ಇದರಿಂದ ಓದುತ್ತಿರುವ ಮಕ್ಕಳಿಗೆ ತೊಂದರೆಯಾಗುತ್ತೆ ಎಂದು ಬುದ್ದಿವಾದ ಹೇಳಿದ್ದಕ್ಕೆ ಕೊಪಗೊಂಡ ಶಿವು ತನ್ನ ಮನೆಯಲ್ಲಿದ್ದ ಕಬ್ಬಿಣದ ರಾಡ್ ತಂದು ಗಂಗಮ್ಮ(30) ಮತ್ತು ಆಕೆಯ ಗಂಡ ನರಸಪ್ಪ(37)ನಿಗೆ ಹೊಡೆದಾಗ ತೀವ್ರ ಗಾಯಗೊಂಡಿದ್ದ ಗಂಗಮ್ಮ ಮತ್ತು ನರಸಪ್ಪರನ್ನು ಚಿಕ್ಕಬಳ್ಳಾಪುರಕ್ಕೆ ತುರ್ತು ಚಿಕಿತ್ಸೆಗಾಗಿ ಕರೆದೊಯ್ಯುವಾಗ ಮಾರ್ಗಮಧ್ಯದಲ್ಲಿಯೇ ಗಂಗಮ್ಮ ಮೃತಪಟ್ಟಿದ್ದು, ನರಸಪ್ಪರನ್ನು ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿಗೆ ಕಳುಹಿಸಲಾಗಿದೆ. ಸ್ಥಳಕ್ಕೆ ಸಿಪಿಐ ಲಕ್ಷ್ಮಯ್ಯ ಮತ್ತು ಪಿಎಸ್‌ಐ ಸುಧಾಕರರೆಡ್ಡಿ ಭೇಟಿ ನೀಡಿದ್ದು ಆರೋಪಿ ಶಿವುನನ್ನು ಬಂಧಿಸಲಾಗಿದೆ.

ಪತಿಯ ಕಿರುಕುಳ; ಪತ್ನಿ ದೂರು
ಕೆಜಿಎಫ್: ಪತ್ನಿಗೆ ಕಿರುಕುಳ ನೀಡಿದ ಪತಿಯ ವಿರುದ್ಧ ಪತ್ನಿ ದೂರು ನೀಡಿರುವ ಘಟನೆ ನಗರದಲ್ಲಿ ನಡೆದಿದೆ. ತುಮ್ಮಿಸಿ ಗ್ರಾಮದ ನಿವಾಸಿ ರಜಾಕ್ ಎಂಬವನೊಂದಿಗೆ 2010ರಲ್ಲಿ ಮದುವೆ ಮಾಡಿಕೊಡಲಾಗಿತ್ತು. ಪತಿ ರಜಾಕ್ ಕಿರುಕುಳ ನೀಡುತ್ತಿದ್ದು ಇದರಿಂದ ಬೇಸತ್ತ ಹೀನಾಕೌಸರ್ ತವರಿಗೆ ಬಂದಿದ್ದಳು. ಪತಿ ರಜಾಕ್ ಅಲ್ಲಿಗೂ ಆಗಮಿಸಿ ಹೀನಾಳ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ರಾಬರ್ಟ್‌ಸನ್‌ಪೇಟೆ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.

ನರೇಂದ್ರ ಮೋದಿ ಪ್ರಧಾನಿಯಾಗಲು ಸಂಕಲ್ಪ
ಕೋಲಾರ: ಸಂಕಷ್ಟದಲ್ಲಿದ್ದ ದೇಶವನ್ನು ಮುನ್ನಡೆಸಿದ ಧೀಮಂತ ನಾಯಕರಲ್ಲಿ ಪಂಡಿತ್ ದೀನ್ ದಯಾಳ್ ಉಪಾಧ್ಯಯರು ಒಬ್ಬರಾಗಿದ್ದರು. ಮಾಜಿ ಪ್ರಧಾನಿ ವಾಜಪೇಯಿರವರಿಗೆ ಉತ್ತಮ ಮಾರ್ಗದರ್ಶಕರಾಗಿದ್ದರೆಂದು ಬಿಬಿಎಂಪಿ ಸದಸ್ಯ ಶಿವಕುಮಾರ್ ಅಭಿಪ್ರಾಯಪಟ್ಟರು. ನಗರದ ಬಾಲಾಜಿ ಪ್ರಾರ್ಥನಾ ಮಂದಿರದಲ್ಲಿ ಬುಧವಾರ ಬಿಜೆಪಿ ಘಟಕದಿಂದ ಹಮ್ಮಿಕೊಂಡಿದ್ದ ಪಂಡಿತ್ ದೀನ್ ದಯಾಳ್ ಉಪಾಧ್ಯಾಯರ 97ನೇ ಜನ್ಮದಿನಾಚರಣೆಯಲ್ಲಿ ಮಾತನಾಡಿ, ಬಿಜೆಪಿ ಜಿಲ್ಲಾಧ್ಯಕ್ಷ ಕೃಷ್ಣಾರೆಡ್ಡಿ ಮಾತನಾಡಿ, ಪಂಡಿತ್ ಜೀ ಹುಟ್ಟಿದ ದಿನದಂದು ಮೋದಿಯವರನ್ನು ಪ್ರಧಾನಿಯನ್ನಾಗಿ ಮಾಡಲು ಸಂಕಲ್ಪ ಮಾಡಬೇಕೆಂದರು. ಕಾರ್ಯಕ್ರಮದಲ್ಲಿ ಮಾಜಿ ಶಾಸಕ ವೈ. ಸಂಪಂಗಿ, ಓಂ. ಶಕ್ತಿ ಚಲಪತಿ, ನೀಲಿ ಜಯಶಂಕರ್, ಡಿ.ಆರ್.ನಾಗರಾಜ್, ಜಿಪಂ ಸದಸ್ಯ ಎಂ.ಎಸ್. ಆನಂದ್, ನಗರಾಧ್ಯಕ್ಷ ಜಯಂತಿಲಾಲ್, ಗ್ರಾಮಾಂತರ ಅಧ್ಯಕ್ಷ ಚಿನ್ನಾಪುರ ನಾರಾಯಣಸ್ವಾಮಿ, ವಕ್ತಾರ ಶಿಳ್ಳಂಗೆರೆ ಮಹೇಶ್, ಪ್ರಮೀಳಾಮಲ್ಲಿಕಾರ್ಜುನ್, ಮಮತಾ, ಕಾರ್ಯದರ್ಶಿ ಮು. ರಾಘವೇಂದ್ರ, ವಿಜಯಕುಮಾರ್, ತಿಮ್ಮರಾಯಪ್ಪ, ಎಂ.ಪಿ.ನಾರಾಯಣಸ್ವಾಮಿ, ಗುಟ್ಲೂರು ಮಂಜುನಾಥ್ ಇದ್ದರು.

ಉಚಿತ ಆರೋಗ್ಯ ತಪಾಸಣೆ ಶಿಬಿರ
ಕೆಜಿಎಫ್: ಜಾನ್ ಟೈಲರ್ ಮೆಮೋರಿಯಲ್ ಚಾರಿಟಬಲ್ ಟ್ರಸ್ಟ್ ವತಿಯಿಂದ ಆರ್.ಎಲ್. ಜಾಲಪ್ಪ ಆಸ್ಪತ್ರೆ, ಲಯನ್ಸ್ ಕ್ಲಬ್ ಮತ್ತು ಬೆಂಗಳೂರಿನ ವಿಕಲಚೇತನ ಟ್ರಸ್ಟ್ ರವರ ಸಂಯುಕ್ತ ಆಶ್ರಯದಲ್ಲಿ ಉಚಿತ ಆರೋಗ್ಯ ತಪಾಸಣೆ ಶಿಬಿರವನ್ನು ನಗರದ ನೆಹರು ಕಲ್ಯಾಣ ಮಂಟಪದಲ್ಲಿ ಆಯೋಜಿಸಲಾಗಿತ್ತು.
ಶಿಬಿರದಲ್ಲಿ ನಗರದ ಸಾವಿರಾರು ನಾಗರಿಕರಿಗೆ ವೈದ್ಯ ತಜ್ಞರಿಂದ ವಿವಿಧ ರೀತಿಯ ಖಾಯಿಲೆಗಳನ್ನು ಪರೀಕ್ಷಿಸಿ ಚಿಕಿತ್ಸೆ ನೀಡಿ ಉಚಿತವಾಗಿ ಔಷಧಿ ವಿತರಿಸಿದರು. ಜಾನ್ ಟೈಲರ್ ಮೆಮೋರಿಯಲ್ ಚಾರಿಟಬಲ್ ಟ್ರಸ್ಟ್‌ನ ಮುಖ್ಯಸ್ಥ ಜಾಕೋಬ್ ಚಾಮ್‌ಬರ್ಲಿನ್ ಮಾತನಾಡಿ, ಕೆಜಿಎಫ್ ಚಿನ್ನದ ಗಣಿ ಪ್ರದೇಶದಲ್ಲಿ ಬಿಜಿಎಂಎಲ್‌ನ ಸಂಸ್ಥಾಪಕ ಜಾನ್ ಟೈಲರ್ ಅವರು ಚಿನ್ನದ ನಿಕ್ಷೇಪವನ್ನು ಕಂಡು ಹಿಡಿದು ಪ್ರಪಂಚಕ್ಕೆ ಸಾವಿರಾರು ಟನ್ ಚಿನ್ನವನ್ನು ತೆಗೆದು ಕೆಜಿಎಫ್ ಕ್ಷೇತ್ರ ಪ್ರಸಿದ್ದ ಪಡೆಯಲು ಕಾರಣಕರ್ತರಾದರು ಎಂದರು. ಮಾಜಿ ಶಾಸಕ ವೈ. ಸಂಪಂಗಿ, ಟ್ರಸ್ಟ್‌ನ ಎಸ್. ರಮೇಶ್, ಪ್ರಸಾದ್‌ಪೀಟರ್, ರಾಜಾದಾಸ್, ಡೊಮ್ನಿಕ್‌ರಾಜ್, ಡಾ. ಕೃಷ್ಣಮೂರ್ತಿ, ಡಾ. ಮಹೇಂದ್ರನ್ ಸೇರಿದಂತೆ ಆರ್.ಎಲ್. ಜಾಲಪ್ಪ ಆಸ್ಪತ್ರೆಯ ಡಾ. ಸನಿಕೊಪ್, ಡಾ. ಶ್ರೀರಾಮುಲು, ಡಾ. ಮುನಿನಾರಾಯಣ ಹಾಜರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement