ಉಚಿತ ಆರೋಗ್ಯ ತಪಾಸಣೆ ಶಿಬಿರ
ಕೆಜಿಎಫ್: ಪೌರ ಕಾರ್ಮಿಕರ ದಿನಾಚರಣೆ ಅಂಗವಾಗಿ ಕೆಜಿಎಫ್ ನಗರಸಭೆ ಪೌರಾಯುಕ್ತ ವಿ. ಬಾಲಚಂದರ್ ನೇತೃತ್ವದಲ್ಲಿ ಕಾರ್ಮಿಕರಿಗೆ ಮತ್ತು ಕುಟುಂಬ ವರ್ಗದವರಿಗೆ ಉಚಿತ ಆರೋಗ್ಯ ತಪಾಸಣೆ ಶಿಬಿರವನ್ನು ಏರ್ಪಡಿಸಲಾಗಿತ್ತು.
ಕೆಜಿಎಫ್ ನಗರಸಭೆ ಕಾರ್ಯಾಲಯ ಆವರಣದಲ್ಲಿ ಬೆಳಗ್ಗೆ 10 ಗಂಟೆಯಿಂದ ಸಂಜೆ 5 ಗಂಟೆಯ ವರೆಗೆ ಏರ್ಪಡಿಸಲಾಗಿದ್ದ ಶಿಬಿರದಲ್ಲಿ ಸುಮಾರು 200ಕ್ಕೂ ಹೆಚ್ಚು ಪೌರ ಕಾರ್ಮಿಕರಿಗೆ ಮತ್ತು ಕುಟುಂಬದ ಸದಸ್ಯೆರಿಗೆ ಸಾಮಾನ್ಯ ಆರೋಗ್ಯ ತಪಾಸಣೆ ನಡೆಸಿ ಉಚಿತವಾಗಿ ಔಷಧಿಗಳನ್ನು ವಿತರಿಸಲಾಯಿತು. ಅಲ್ಲದೆ ಹೃದಯ ಖಾಯಿಲೆ, ಕಿಡ್ನಿ, ಮೆದುಳು ಸೇರಿದಂತೆ ಇತರೆ ಖಾಯಿಲೆಗಳಿಗೆ ಹೆಚ್ಚಿನ ಚಿಕಿತ್ಸೆಗಾಗಿ ಕೋಲಾರದ ಆರ್.ಎಲ್. ಜಾಲಪ್ಪ ಆಸ್ಪತ್ರೆಯಲ್ಲಿ ಪಡೆದುಕೊಳ್ಳಲು ಕಾರ್ಮಿಕರಿಗೆ ಚೀಟಿಗಳನ್ನು ವಿತರಿಸಲಾಯಿತು.
ಈ ವೇಳೆ ಮಾತನಾಡಿದ ಪೌರಾಯುಕ್ತ ವಿ. ಬಾಲಚಂದ್ರ ಪ್ರತಿ ದಿನ ಕೆಜಿಎಫ್ ನಗರವನ್ನು ಸುಂದರ ಮತ್ತು ಸ್ವಚ್ಛವಾಗಿಡಲು ಕಾರ್ಮಿಕರು ಕೆಲಸ ನಿರ್ವಹಿಸುತ್ತಾರೆ. ಪೌರ ಕಾರ್ಮಿಕರ ದಿನಾಚರಣೆ ಪ್ರಯುಕ್ತ ಪ್ರತಿ ವರ್ಷವೂ ಅವರ ಆರೋಗ್ಯವನ್ನು ಉತ್ತಮ ರೀತಿಯಲ್ಲಿ ರಕ್ಷಿಸಲು ಉಚಿತ ಆರೋಗ್ಯ ತಪಾಸಣೆ ಶಿಬಿರವನ್ನು ಹಮ್ಮಿಕೊಳ್ಳಲಾಗಿದೆ ಎಂದರು.
ಶಿಬಿರದಲ್ಲಿ ಕೋಲಾರದ ಆರ್.ಎಲ್. ಜಾಲಪ್ಪ ಆಸ್ಪತ್ರೆಯ ವೈದ್ಯರಾದ ಡಾ. ಆಲ್ವಿನ್, ಡಾ. ಅಬಿದಾ, ಡಾ.ಅರುಂದತ್ತಿ, ಡಾ. ಅರ್ಗಾ, ನಗರಸಭೆ ಹಿರಿಯ ಆರೋಗ್ಯಾಧಿಕಾರಿ ಸರಸ್ವತಿ, ಅಖಿಲಾಬಾನು, ವ್ಯವಸ್ಥಾಪಕ ನಂಜುಂಡಸ್ವಾಮಿ, ಅದಿಕಾರಿಗಳಾದ ಜಯರಾಮ್, ಹರಿನಾಥ್, ರವೀಂದ್ರ ಹಾಜರಿದ್ದರು.