ಉತ್ತಮ ಗುರುವಿದ್ದರೆ ಸಾಧನೆ ಸುಲಭ: ಅರ್ಜುನ
ಕೋಲಾರ: ಛಲ ಇರುವ ಪ್ರತಿಯೊಬ್ಬ ವ್ಯಕ್ತಿಗೆ ಉತ್ತಮ ಗುರುಗಳಿದ್ದರೆ ಸಾಧನೆ ಸುಲಭವೆಂದು ಅಂತಾರಾಷ್ಟ್ರೀಯ ಮಾಜಿ ಕ್ರೀಡಾಪಟು ಅರ್ಜುನ್ ದೇವಯ್ಯ ಪ್ರತಿಪಾದಿಸಿದರು.
ನಗರದ ಶ್ರೀ ದೇವರಾಜ್ ಅರಸ್ ವೈದ್ಯಕೀಯ ಮಹಾವಿದ್ಯಾಲಯದಲ್ಲಿ ಕ್ರೀಡಾ ಮತ್ತು ಸಾಂಸ್ಕೃತಿಕ ಸಮಿತಿಯ ವತಿಯಿಂದ ಆಯೋಜಿಸಿದ್ದ ಅಂತರ್ ವೈದ್ಯ ಕ್ರೀಡಾ ಮತ್ತು ಸಾಂಸ್ಕೃತಿಕ ಮೇಳ ಫ್ಲೆಕ್ಸಸ್-2013 ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿ, ವೈದ್ಯರು ಮತ್ತು ವೈದ್ಯ ವಿದ್ಯಾರ್ಥಿಗಳು ಸಮಾಜಕ್ಕಿಂತ ನಾವು ದೊಡ್ಡವರಲ್ಲವೆಂಬುದನ್ನು ಅರಿತು ಸಮಾಜಮುಖಿಗಳಾದಾಗ ಮಾತ್ರ ಕೀರ್ತಿ ಸಂಪಾದಿಸಲು ಸಾಧ್ಯವಾಗುತ್ತದೆ ಎಂದರು.
ಏಳಿ, ಎದ್ದೇಳಿ, ಗುರಿ ಮುಟ್ಟುವ ತನಕ ನಿಲ್ಲದಿರಿ ಎಂಬ ವಿವೇಕವಾಣಿ ಎಲ್ಲರ ಜೀವನಕ್ಕೂ ಅನ್ವಯವಾಗುತ್ತದೆ. ನನ್ನಂಥ ಓಟಗಾರನಿಗಂತೂ ನೂರಕ್ಕೆ ನೂರರಷ್ಟು ಸತ್ಯ. ಸಾಧನೆ ಮಾಡಬೇಕೆಂಬ ಛಲವಿರುವವನಿಗೆ ಉತ್ತಮ ಗುರುವಿದ್ದರೆ ಸಾಧನೆ ಮಾಡಲೇಬಹುದು. ಮನುಷ್ಯನಲ್ಲಿ ಅದ್ಭುತ ಶಕ್ತಿ ಇದ್ದು ಯಾರು ಬೇಕಾದರೂ, ಏನು ಬೇಕಾದರೂ ಸಾಧನೆ ಮಾಡಬಹುದು ಎಂದರು.
ಇಂದಿನ ಯುವಕರಲ್ಲಿ ಶೇ.60ರಷ್ಟು ಯುವಕರ ಕಾಲುಗಳು ಶಕ್ತಿಹೀನವಾಗಿರುವುದು ದುರಂತವೇ ಸರಿ. ದೇಹದ ಸೌಂದರ್ಯಕ್ಕಿಂತ ಆಂತರಿಕವಾಗಿರುವ ಜೀವನ ಕೌಶಲ್ಯಗಳಿಂದ ಮಾತ್ರ ಸಾಧನೆ ಸಾಧ್ಯ. ಜಪಾನಿನ ಸಂಸ್ಕೃತಿಯಾದ ಇಬ್ಬರಿಗೆ ಸಾಧ್ಯವಾಗದ ಕೆಲಸವನ್ನು ನಾನೊಬ್ಬನೇ ಮಾಡುತ್ತೇನೆ, ಯಾರಿಂದಲೂ ಸಾಧ್ಯವಾಗದ ಕೆಲಸವನ್ನು ನಾನು ಮಾಡಲು ಪ್ರಯತ್ನಿಸುತ್ತೇನೆ ಎಂಬ ಮನೋಭಾವದ ಅಗತ್ಯ ಭಾರತಕ್ಕಿದೆ ಎಂದರು.
ಪ್ರತಿಯೊಬ್ಬರು ಗಳಿಕೆಯ ಮೂವತ್ತು ಭಾಗವನ್ನು ಸಮಾಜ ಕಾರ್ಯಗಳಿಗೆ ಮೀಸಲಿಡಬೇಕಾಗಿದೆ. ಎಲ್ಲ ವೈದ್ಯರು ಇದನ್ನು ಅಳವಡಿಸಿಕೊಳ್ಳುವ ಮೂಲಕ ವೈದ್ಯ ಕ್ಷೇತ್ರದ ಮೇಲೆ ಜನತೆ ಮತ್ತಷ್ಟು ವಿಶ್ವಾಸ ಹೊಂದುವ ರೀತಿಯಲ್ಲಿ ಕಾರ್ಯಪ್ರವೃತ್ತರಾಗಬೇಕೆಂದು ಕಿವಿಮಾತು ಹೇಳಿದರು.
ದೇವರಾಜ್ ಅರಸ್ ಉನ್ನತ ಶಿಕ್ಷಣ ಸಂಶೋಧನಾ ಸಂಸ್ಥೆಯ ಕುಲಪತಿ ಡಾ..ಪಿ.ಎಫ್.ಕೊಟೂರ್, ಕುಲಸಚಿವ ಡಾ.ಎ.ವಿ.ಎಂ.ಕುಟ್ಟಿ, ಆರ್.ಎಲ್.ಜಾಲಪ್ಪ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷರಾದ ಡಾ.ಪಿ.ಎನ್.ಶ್ರೀರಾಮುಲು, ಕ್ರೀಡಾ ಸಂಚಾಲಕ ಡಾ.ವಿದ್ಯಾಸಾಗರ್, ಸಾಂಸ್ಕೃತಿಕ ಸಂಚಾಲಕಿ ಡಾ. ಸಂಗೀತ ಇದ್ದರು.
ಶ್ರೀ ದೇವರಾಜ್ ಅರಸ್ ವೈದ್ಯಕೀಯ ಮಹಾವಿದ್ಯಾಲಯದ ಪ್ರಾಂಶುಪಾಲ ಡಾ.ಎಂ.ಬಿ.ಸಾಣಿಕೊಪ್ಪ ಸ್ವಾಗತಿಸಿ, ಉಪ ಪ್ರಾಂಶುಪಾಲ ಡಾ.ಬಿ.ಜಿ.ರಂಗನಾಥ ವಂದಿಸಿದರು.