ಮಾನವ ಸಾಗಾಣಿಕೆ ನಿರ್ಮೂಲನೆ ಆಂದೋಲನ
ಬಾಗೇಪಲ್ಲಿ: ಮಹಿಳೆಯರು ಹಾಗೂ ಮಕ್ಕಳು ದುರ್ಬಲರಾಗಿರುವುದರಿಂದ ಸುಲಭವಾಗಿ ಮೋಸದ ಬಲೆಗೆ ಬೀಳಿಸುವ ಸಾಧ್ಯತೆಗಳ ಹೆಚ್ಚಿಗಿರುವುದರಿಂದ ಅವರನ್ನು ಮಾನವ ಸಾಗಾಣಿಕೆಯ ದಂಧೆಕೋರರಿಂದ ರಕ್ಷಿಸುವ ಹಾಗೂ ಮಹಿಳೆಯರ ಮತ್ತು ಮಕ್ಕಳ ಸಾಗಾಣಿಕೆಯನ್ನು ನಿರ್ಮೂಲನೆ ಮಾಡುವ ಜವಾಬ್ದಾರಿ ಪ್ರತಿಯೊಬ್ಬರ ಮೇಲಿದೆ ಎಂದು ಶಾಸಕ ಎಸ್.ಎನ್. ಸುಬ್ಬಾರೆಡ್ಡಿ ತಿಳಿಸಿದರು.
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ಧಿ ಇಲಾಖೆ ಆಶ್ರಯದಲ್ಲಿ ಪಟ್ಟಣದ ಕನ್ಯಕಾ ಪರಮೇಶ್ವರಿ ಕಲ್ಯಾಣ ಮಂಟಪದಲ್ಲಿ ಏರ್ಪಡಿಸಿದ್ದ ಮಹಿಳೆಯರ ಮತ್ತು ಮಕ್ಕಳ ಅನೈತಿಕ ಸಾಗಾಣೆ ತಡೆಗಟ್ಟಲು ತಾಲೂಕು ಮಟ್ಟದ ಆಂದೋಲನ ಕಾರ್ಯಕ್ರಮ ಉದ್ಟಾಟಿಸಿ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಮಾನವ ಸಾಗಾಣಿಕೆ ಮಿತಿ ಮೀರಿದ ರೀತಿಯಲ್ಲಿ ನಡೆಯುತ್ತಿದೆ, ಮಕ್ಕಳು, ಅಪ್ರಾಪ್ತ ವಯಸ್ಕರು, ಕೂಲಿ ಕಾರ್ಮಿಕರು, ಮಹಿಳೆಯರು ಸೇರಿದಂತೆ ಯುವಜನರು ಮಾನವ ಸಾಗಾಣಿಕೆ ದಂಧೆಗೆ ಬಲಿಯಾಗುತ್ತಿದ್ದಾರೆ. ಹೆಣ್ಣು ಮಕ್ಕಳ ಸಾಗಾಣಿಕೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ, ಈ ನಿಟ್ಟಿನಲ್ಲಿ ಮಾನವ ಸಾಗಾಣಿಕೆಯ ದಂಧೆಕೋರರನ್ನು ಪತ್ತೆಹಚ್ಚಿ ದಂಧೆಕೋರರಿಗೆ ಕಠಿಣ ಶಿಕ್ಷೆಗೆ ಒಳಪಡಿಸುವಂತೆ ಸರ್ಕಾರವನ್ನು ಒತ್ತಾಯಿಸಿದರು. ರಾಜ್ಯದಲ್ಲಿ ಹೆಣ್ಣು ಮಕ್ಕಳು ಮತ್ತು ಮಹಿಳೆಯರು ನಾಪತ್ತೆಯಾಗುತ್ತಿದ್ದಾರೆ ಅದರಲ್ಲೂ ಬಹುತೇಕರು ಅಪ್ರಾಪ್ತರು. ದೆಹಲಿ, ಮುಂಬೈ, ಬೆಂಗಳೂರು ಮುಂತಾದ ನಗರಗಳಲ್ಲಿ ಈ ಸಾಗಾಣಿಕೆ ಕೃತ್ಯಗಳು ಹೆಚ್ಚಾಗಿ ನಡೆಯುತ್ತಿವೆ. ಮೂರು ವರ್ಷಗಳಿಂದ ಈಚೀಗೆ 2 ಲಕ್ಷ 40 ಸಾವಿರ ಮಹಿಳೆಯರು ನಾಪತ್ತೆಯಾಗಿದ್ದಾರೆ ಎಂದರು.
ಮಹಿಳೆಯರ ಮೇಲೆ ನಡೆಯುತ್ತಿರುವ ದೌರ್ಜನ್ಯಗಳಿಂದ ಇಡೀ ಸಮಾಜವೇ ತಲೆ ತಗ್ಗಿಸುವಂತಾಗಿದೆ. ಇದರಿಂದ ಮಹಿಳೆಯರ ಮತ್ತು ಮಕ್ಕಳ ಕಾನೂನನ್ನು ಸರ್ಕಾರ ಇನ್ನಷ್ಟು ಬಿಗಿಗೊಳಿಸಬೇಕು, ಅಸ್ತಿ ಹಕ್ಕು ಕಾಯಿದೆ ಪ್ರಕಾರ ಬಹುಪಾಲು ಮಹಿಳೆಯರು ಅಸ್ತಿಯಿಂದ ವಂಚಿತರಾಗುತ್ತಿರುವುದರಿಂದ ಮಹಿಳಾ ಮೀಸಲಾತಿಯನ್ನು ಸಮರ್ಪಕ ರೀತಿಯಲ್ಲಿ ಜಾರಿಗೊಳಿಸಿ, ಹಾಲಿ ಇರುವ ಶೇ.30 ರಷ್ಟು ಮೀಸಲಾತಿಯ ಬದಲಿಗೆ ಶೇ.50 ರಷ್ಟು ಮೀಸಲಾತಿ ಜಾರಿಗೆ ತರಬೇಕೆಂದು ಸರ್ಕಾರವನ್ನು ಒತ್ತಾಯಿಸಿದರು.
ಇದಕ್ಕೂ ಮೊದಲು ಪಟ್ಟಣದ ಪುರಸಭೆ ಮುಂಭಾಗದಿಂದ ಕನ್ಯಕಾ ಪರಮೇಶ್ವರಿ ದೇವಸ್ಥಾನದವರೆವಿಗೂ ಮೆರವಣಿಗೆ ಮೂಲಕ ಜನರಲ್ಲಿ ಜಾಗೃತಿ ಮೂಡಿಸಿದರು. ತಹಸೀಲ್ದಾರ್ ಎಂ.ಎ. ಪದ್ಮಾ, ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷ ಎ.ಜಿ. ಸುಧಾಕರ್, ಜಿಪಂ ಸದಸ್ಯರಾದ ಬಿ. ಸಾವಿತ್ರಮ್ಮ ಮುನಿಸ್ವಾಮಿ, ನಾರಾಯಣಮ್ಮ, ಅಮರಾವತಿ ಕೃಷ್ಣಪ್ಪ, ತಾಪಂ ಅಧ್ಯಕ್ಷೆ ಮುನಿರತ್ನಮ್ಮ, ಸಾಮಾಜಿ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷ ನಾರಾಯಣ ನಾಯಕ್, ಸದಸ್ಯರಾದ ಗೋಪಾಲಕೃಷ್ಣ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಭಿವೃದ್ಧಿ ಇಲಾಖೆ ಉಪನಿರ್ದೇಶಕಿ ಸುರೇಖಾ ವಿಜಯ ಪ್ರಕಾಶ್, ಸಿ.ಡಿ.ಪಿ.ಓ. ಜಿ.ಕೆ. ಲಕ್ಷ್ಮೀದೇವಮ್ಮ, ಪುರಸಭಾ ಸದಸ್ಯರಾದ, ಮಮತಾ ನಾಗರಾಜರೆಡ್ಡಿ, ಬಿ.ಎನ್. ಶ್ರೀನಿವಾಸ್, ಅ.ನ. ಮೂರ್ತಿ, ವೇಣು, ತಾ.ಪಂ. ಕಾರ್ಯ ನಿರ್ವಹಣಾಧಿಕಾರಿ ಸಿ. ಶ್ರೀನಿವಾಸ್, ಸಿ.ಡಿ.ಪಿ.ಓ. ಇಲಾಖೆಯ ಮೇಲ್ವಿಚಾರಕಿ ಗಂಗಮ್ಮ ಹಾಜರಿದ್ದರು.