ಸಾಂಬಾರ್ ಪಾತ್ರೆಗೆ ಬಿದ್ದ ಮೂರು ವರ್ಷದ ಮಗು
ಮಾಲೂರು: ಅಡುಗೆ ಸಹಾಯಕಿಯ 3 ವರ್ಷದ ಮಗು ಬಿಸಿಯೂಟ ಸಾಂಬಾರ್ ಪಾತ್ರೆಯಲ್ಲಿ ಬಿದ್ದು ತೀವ್ರವಾಗಿ ಗಾಯಗೊಂಡ ಘಟನೆ ತಾಲೂಕಿನ ಬ್ಯಾಲಹಳ್ಳಿ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಶುಕ್ರವಾರ ನಡೆದಿದೆ.
ತೀವ್ರವಾಗಿ ಗಾಯಗೊಂಡಿರುವ ಮಗುವನ್ನು ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ಹೆಚ್ಚಿನ ಚಿಕಿತ್ಸೆಗೆ ದಾಖಲಿಸಲಾಗಿದೆ. ಗಾಯಗೊಂಡ ಮನೋಜಕುಮಾರ್ ಗೌಡ(3) ಮಗು ಅಡುಗೆ ಸಹಾಯಕಿ ಮಂಜುಳಾರದ್ದು.
ಶಾಲೆಯಲ್ಲಿರುವ 22 ವಿದ್ಯಾರ್ಥಿಗಳಿಗೆ ಎಂದಿನಂತೆ ಬಿಸಿಯೂಟ ಅಡುಗೆ ತಯಾರಿಸಲಾಗುತ್ತಿತ್ತು. ಈ ಸಂದರ್ಭದಲ್ಲಿ ಒಲೆಯಿಂದ ಬಿಸಿ ಸಾಂಬಾರ್ ಪಾತ್ರೆಯನ್ನು ಕೆಳಗಿಳಿಸುವಾಗ ಮಂಜುಳಾ ಹಿಂದಿದ್ದ ಮಗುವಿಗೆ ತಾಗಿದೆ. ಆಗ ನಿಯಂತ್ರಣ ತಪ್ಪಿದ ಮಗು ಸಾಂಬಾರ್ ಪಾತ್ರೆಗೆ ಬಿದ್ದಿದೆ. ಮಗುವನ್ನು ಪಾತ್ರೆಯಿಂದ ಮಂಜುಳಾ ಮೇಲೆತ್ತುವಷ್ಟರಲ್ಲಿ ತೀವ್ರವಾಗಿ ಗಾಯಗೊಂಡಿತ್ತು. ನಂತರ ಮಗುವನ್ನು ಹೆಚ್ಚಿ ಚಿಕಿತ್ಸೆಗಾಗಿ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ಕಳುಹಿಸಲಾಯಿತು.