ರಾಷ್ಟ್ರಾಭಿವೃದ್ಧಿಗೆ ಪೂರಕವಾದ ನೀತಿಗಳು ಅಗತ್ಯ
ಕ.ಪ್ರ.ವಾರ್ತೆ ಕೋಲಾರ ಸೆ.28
ದೇಶದ ಸಮಗ್ರ ಅಭಿವೃದ್ಧಿಗೆ ಪೂರಕವಾದ ನೀತಿಗಳು ಜಾರಿಗೆ ಬಂದಾಗ ದೇಶ ಪ್ರೇಮಿ ಭಗತ್ ಸಿಂಗ್ ಆಶಯಗಳು ಈಡೇರಿದಂತಾಗುತ್ತದೆ ಎಂದು ಜನಶಕ್ತಿ ಪತ್ರಿಕೆ ಸಂಪಾದಕ ಕಾ. ಗುರುಶಾಂತ್ ಪ್ರತಿಪಾದಿಸಿದರು.
ನಗರದ ಟಿ. ಚನ್ನಯ್ಯರಂಗ ಮಂದಿರದಲ್ಲಿ ಶನಿವಾರ ಎಸ್ಎಫ್ಐ ಹಮ್ಮಿಕೊಂಡಿದ್ದ ದೇಶ ಪ್ರೇಮಿ ಭಗತ್ ಸಿಂಗ್ ಅವರ 106ನೇ ಜನ್ಮ ದಿನೋತ್ಸವದಲ್ಲಿ ಮಾತನಾಡಿ, ಭಾರತಕ್ಕೆ ಸ್ವಾತಂತ್ರ್ಯ ಬಂದು 60 ವರ್ಷಗಳಾಗಿದೆ. ವಿಜ್ಞಾನ, ತಂತ್ರಜ್ಞಾನ ಹಾಗೂ ಆಹಾರ ಉತ್ಪಾದನಾ ಕ್ಷೇತ್ರದಲ್ಲಿ ಸಾಕಷ್ಟು ಪ್ರಗತಿ ಆಗಿದೆ ಎಂದು ಸರ್ಕಾರಗಳು ಹೇಳಿಕೊಳ್ಳುತ್ತಿವೆಯಾದರೂ ಬಡತನ ಸಂಪೂರ್ಣವಾಗಿ ನಿವಾರಣೆ ಆಗದಿರುವುದಕ್ಕೆ ಬ್ರಿಟಿಷರ ನಂತರ ಅಮೆರಿಕನ್ ಸಾಮ್ರಾಜ್ಯಶಾಹಿಗಳು ದೇಶದ ಮೇಲೆ ಹಿಡಿತ ಸಾಧಿಸಿ ತಮ್ಮ ಕೈಗೊಂಬೆಯನ್ನಾಗಿ ಮಾಡಿಕೊಂಡಿರುವುದೇ ಕಾರಣವೆಂದು ತಿಳಿಸಿದರು.
ಭಗತ್ ಸಿಂಗ್ ತನ್ನ ಯೌವನವನ್ನು ದೇಶದ ವಿಮೋಚನೆಗಾಗಿ ತ್ಯಾಗಮಾಡಿದ ಧೀರ ಹಾಗೂ ತ್ಯಾಗ ಪುರುಷ. ನಮ್ಮ ಇಂದಿನ ಯುವಕರು ಭಗತ್ ಸಿಂಗ್ರಂತೆ ದೇಶ ಪ್ರೇಮಿಗಳಾಗುವ ಮೂಲಕ ಅಮೆರಿಕಾ ಕಪಿಮುಷ್ಟಿಯಿಂದ ಭಾರತವನ್ನು ರಕ್ಷಣೆ ಮಾಡಲು ಸಂಘಟಿತರಾಗಬೇಕೆಂದರು. ಭಗತ್ಸಿಂಗ್ ಬ್ರಿಟಿಷರ ವಿರುದ್ಧ ಹೋರಾಡಿ ದೇಶವನ್ನು ವಿಮೋಚನೆಗೊಳಿಸಲೇಬೇಕೆಂದು ಪಣತೊಟ್ಟ ಮಹಾನ್ ಪುರುಷ. ಇದೇ ರೀತಿ ಇಂದಿನ ಯುವಕರು ಬಡತನ, ಜಾತಿವಾದ, ಕೋಮುವಾದ, ಸಾಮ್ರಾಜ್ಯಶಾಹಿತನದ ವಿರುದ್ಧ ಕ್ರಾಂತಿಕಾರಿ ನೀತಿಗಳನ್ನು ಅನುಸರಿಸುವ ಮೂಲಕ ತಾವು ದೇಶ ಪ್ರೇಮಿಗಳಾಗಬೇಕೆಂದು ಕರೆ ನೀಡಿದರು.
ಸಂಘಟನೆಗೆ ಶಕ್ತಿ: ಕ್ರಾಂತಿ ಎಂದರೆ ಬಾಂಬ್ ಹಾಕುವುದು ಎಂದು ಅನೇಕರ ವಾದವಾಗಿತ್ತು. ಆದರೆ, ಭಗತ್ ಸಿಂಗ್ ಯಾವುದೇ ಬಾಂಬ್ ಹಾಕದೆ, ಜನತೆಯಲ್ಲಿ ಅರಿವು ಮೂಡಿಸುವ ಮೂಲಕ, ಸಂಘಟನೆಗೆ ಶಕ್ತಿ ತುಂಬುವ ಮೂಲಕ ಬದಲಾವಣೆ ತರಲು ಯತ್ನಿಸಿದ್ದಾರೆ. ಇದನ್ನು ಕ್ರಾಂತಿ ಎಂದು ಕರೆದಿದ್ದು. ಯುವಕರು ಸ್ವಹಿತಾಸಕ್ತಿಗಾಗಿ ನೀತಿಗಳನ್ನು ಜಾರಿಗೆ ತರುವವರ ವಿರುದ್ಧ ಎಚ್ಚರಿಕೆ ವಹಿಸಿ ಪ್ರತಿಯೊಬ್ಬರ ಒಳತಿಗಾಗಿ ನೀತಿಗಳನ್ನು ಜಾರಿಗೆ ತರುವುದಕ್ಕೆ ಕೈಜೋಡಿಸಬೇಕೆಂದರು.
ರೈತರ ಮೇಲೆ ಪ್ರಕರಣ: ಗುಜರಾತ್ ರಾಜ್ಯದಲ್ಲಿ ಉಚಿತ ವಿದ್ಯುತ್ ನೀಡುವುದಾಗಿ ಹೇಳಿ ಅದನ್ನು ಜಾರಿಗೆ ತರದ ಆ ರಾಜ್ಯದ ಮುಖ್ಯಮಂತ್ರಿ ನರೇಂದ್ರ ಮೋದಿ ಉಚಿತ ವಿದ್ಯುತ್ ಬಳಸಿದ ರೈತರ ಮೇಲೆ ಪ್ರಕರಣ ದಾಖಲು ಮಾಡಿಸಿದ್ದಾರೆ. ಅಪೌಷ್ಠಿಕ ಆಹಾರದ ಸಮಸ್ಯೆಯಿಂದ ಬಳಲುತ್ತಿರುವ ಅಲ್ಲಿನ ಬಡವರ ಬಗ್ಗೆ ಕಾಳಜಿ ತೋರಿಲ್ಲ. ಇಂತಹ ವ್ಯಕ್ತಿಗೆ ಹೆಚ್ಚಿನ ಅಧಿಕಾರ ನೀಡಲು ನೀತಿಗಳು ಜಾರಿಗೆ ಬರಬೇಕೇ ಎಂದು ಪ್ರಶ್ನಿಸಿದರು.
ರಾಹುಲ್ ಗಾಂಧಿ, ಡಾ. ಮನಮೋಹನ್ಸಿಂಗ್ ಅವರು ತಮ್ಮ ಸ್ವಹಿತಕ್ಕಾಗಿ ಮತ್ತು ಅಧಿಕಾರಕ್ಕಾಗಿ ನೀತಿಗಳನ್ನು ಜಾರಿಗೆ ತರಲು ಹಂಬಲಿಸುತ್ತಿದ್ದಾರೆ. ಇಂತಹ ನೀತಿಗಳಿಂದ ದೇಶಕ್ಕೆ ಪ್ರಯೋಜನವಿಲ್ಲ. ಯುವಕರು ಪ್ರತಿಯೊಬ್ಬರ ಹಿತಕ್ಕಾಗಿ ನೀತಿಗಳನ್ನು ಜಾರಿಗೆ ತರುವವರಿಗೆ ಬೆಂಬಲ ನೀಡುವ ಸಂಬಂಧ ಭಗತ್ಸಿಂಗ್ ಅಂತಹ ಮಹಾನ್ ಪುರುಷನ ಜೀವನ ಚರಿತ್ರೆಯನ್ನು ಅಧ್ಯಯನ ಮಾಡಿ, ಸಾಮ್ರಾಜ್ಯಶಾಹಿಗಳಿಂದ ದೇಶವನ್ನು ಕಾಪಾಡಲು ಸಂಕಲ್ಪ ಮಾಡಿದಾಗ ಮಾತ್ರ ಭಗತ್ಸಿಂಗ್ ಅವರನ್ನು ಸ್ಮರಿಸುವುದು ಸಾರ್ಥಕವಾಗುತ್ತದೆ ಎಂದರು. ದೇಶದ ಅಭಿವೃದ್ಧಿ, ಪ್ರಗತಿಗೆ ನಾವೇ ನೀತಿಗಳನ್ನು ರೂಪಿಸುವಂತಾಗಬೇಕು, ಇದು ಯುವಶಕ್ತಿಯಿಂದ ಮಾತ್ರ ಸಾಧ್ಯ. ಭಗತ್ಸಿಂಗ್ ಅವರಂತೆ ಪ್ರತಿಯೊಬ್ಬ ಯುವಕ ಸಾಮ್ರಾಜ್ಯಶಾಹಿ ವಿರುದ್ಧ ಹೋರಾಡಬೇಕೆಂದು ತಿಳಿಸಿದರು.
ಕಾರ್ಯಕ್ರಮದ ಸ್ವಾಗತ ಸಮಿತಿ ಅಧ್ಯಕ್ಷ ಎಂ.ಬಿ. ಮುಬಾರಕ್ ಮಾತನಾಡಿ, ಪ್ರತಿ ವ್ಯಕ್ತಿ ತಾಯಿ-ತಂದೆ, ಗುರುಗಳ ಋಣದ ಜೊತೆಗೆ ದೇಶದ ಋಣ ತೀರಿಸಲು ಸಂಕಲ್ಪ ಮಾಡಬೇಕೆಂದರು. ಯಾವುದೇ ಧರ್ಮ, ಜಾತಿಯವರಾಗಿರಲಿ ಮೊದಲು ರಾಷ್ಟ್ರೀಯತೆ ಮತ್ತು ಭಾವೈಕ್ಯತೆಯ ರೂಢಿಸಿಕೊಳ್ಳುವುದಕ್ಕೆ ಹೆಚ್ಚಿನ ಆದ್ಯತೆ ನೀಡಿದಾಗ ಮಾತ್ರ ದೇಶದ ಐಕ್ಯತೆ, ಸಮಗ್ರತೆ ಚಿರಕಾಲ ಉಳಿಯುತ್ತದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಸ್ಎಫ್ಐ ಜಿಲ್ಲಾಧ್ಯಕ್ಷ ಅಂಬರೀಷ್ ವಹಿಸಿದ್ದರು. ಮಾಜಿ ಅಧ್ಯಕ್ಷ ಎಂ.ಪಿ. ಮುನಿವೆಂಕಟಪ್ಪ, ರಾಜ್ಯ ಕಾರ್ಯದರ್ಶಿ ಹುಳ್ಳಿ ಉಮೇಶ್, ಜನವಾದಿ ಮಹಿಳಾ ಸಂಘಟನೆಯ ರಾಜ್ಯಾಧ್ಯಕ್ಷೆ ವಿ. ಗೀತಾ, ಡಿವೈಎಫ್ಐ ಜಿಲ್ಲಾಧ್ಯಕ್ಷ ಬಿ.ವಿ. ಸಂಪಂಗಿ ಹಾಗೂ ಎಸ್.ಎಫ್.ಐ ಜಿಲ್ಲಾ ಕಾರ್ಯದರ್ಶಿ ವಾಸುದೇವರೆಡ್ಡಿ ಇದ್ದರು.
ಸಂಘಟನೆ ಕಾರ್ಯಕರ್ತ ಮುರಳಿ ಸ್ವಾಗತಿಸಿ, ಚಿಕ್ಕನಹಳ್ಳಿ ರಮೇಶ್ ನಿರೂಪಿಸಿದರು. ಕಾರ್ಯಕ್ರಮಕ್ಕೆ ಮುಂಚೆ ನಗರದ ಪ್ರಮುಖ ಬೀದಿಗಳಲ್ಲಿ ಭಗತ್ಸಿಂಗ್ ಭಾವಚಿತ್ರದೊಂದಿಗೆ ಮೆರವಣಿಗೆ ನಡೆಯಿತು.