ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಚುನಾವಣೆಗೆ ಭರದ ಸಿದ್ಧತೆ: ನಾಗರಾಜಶೆಟ್ಟಿ

Srinivasa Murthy VN
Updated On : 10 Apr 2014, 2:03 am

ಗುಡಿಬಂಡೆ: ಮತದಾನಕ್ಕೆ ಸಂಬಂಧ ಪಟ್ಟಂತೆ ತಾಲೂಕಿನಲ್ಲಿ ಎಲ್ಲಾ ಸಿದ್ಧತೆ ಕೈಗೊಳ್ಳಲಾಗಿದೆ ಎಂದು ಸಹಾಯಕ ಚುನಾವಣಾಧಿಕಾರಿ ನಾಗರಾಜಶೆಟ್ಟಿ ತಿಳಿಸಿದ್ದಾರೆ. ಮತದಾರರಲ್ಲಿ ಮತದಾನದ ಬಗ್ಗೆ ಜಾಗೃತಿ ಮೂಡಿಸಲು ಪಟ್ಟಣದಲ್ಲಿ ಹಮ್ಮಿಕೊಂಡಿದ್ದ ಮೇಣದ ಬತ್ತಿ ಬೆಳಕಿನ ಮೆರವಣಿಗೆಯಲ್ಲಿ ಮಾತನಾಡಿ, ತಾಲೂಕಿನಲ್ಲಿ 43,095 ಮತದಾರರಿದ್ದು, ಈ ಪೈಕಿ 21,719 ಪುರುಷರು ಹಾಗೂ 21,376 ಮಹಿಳಾ ಮತದಾರರಿದ್ದಾರೆ. ಮತದಾನಕ್ಕಾಗಿ ಪಟ್ಟಣ ಸೇರಿದಂತೆ ಗ್ರಾಮಾಂತರ ಪ್ರದೇಶದಲ್ಲಿ ಒಟ್ಟು 57 ಮತಗಟ್ಟೆಗಳನ್ನು ಸ್ಥಾಪಿಸಲಾಗಿದ್ದು ಇವುಗಳಲ್ಲಿ 12 ಸೂಕ್ಷ ಹಾಗೂ 16 ಮತಗಟ್ಟೆಗಳನ್ನು ಅತೀ ಸೂಕ್ಷ ಎಂದು ಗುರ್ತಿಸಲಾಗಿದೆ. ಎಲ್ಲಾ ಮತಗಟ್ಟೆಗಳಲ್ಲೂ ಕುಡಿಯುವ ನೀರಿನ ಸೌಲಭ್ಯ ಒದಗಿಸಲಾಗಿದೆ. ಚುನಾವಣಾ ಕಾರ್ಯಕ್ಕಾಗಿ ಒಂದು ಮತಗಟ್ಟೆಗೆ 4 ಜನರಂತೆ ಒಟ್ಟು 250 ಮಂದಿ ಸಿಬ್ಬಂದಿಯನ್ನು ನೇಮಿಸಲಾಗಿದ್ದು, ಸಾರ್ವಜನಿಕರು ಯಾವುದೇ ಆಸೆ ಆಮಿಷಗಳಿಗೆ ಒಳಗಾಗದೆ ನಿರ್ಭೀತಿಯಿಂದ ಮತದಾನ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಬೇಕೆಂದು ಅವರು ಕೋರಿದ್ದಾರೆ. ಈ ಸಂದರ್ಭದಲ್ಲಿ ತಹಸೀಲ್ದಾರ್ ಶೈಲಜಾ, ತಾಪಂ ಕಾರ್ಯ ನಿರ್ವಹಣಾಧಿಕಾರಿ ತಿಮ್ಮಪ್ಪ, ವೃತ್ತ ನಿರೀಕ್ಷಕ ಶಿವ ಕುಮಾರ್, ವಿನಯ್, ಚುನಾವಣಾ ಕಾರ್ಯಕ್ಕೆ ನೇಮಕವಾಗಿರುವ ಅಧಿಕಾರಿಗಳ ತಂಡ ಹಾಗೂ ಸರ್ಕಾರಿ ನೌಕರರು ಭಾಗವಹಿಸಿದ್ದರು.

ಅದ್ಧೂರಿ ಸಾಯಿ ರಾಮ ಪಲ್ಲಕ್ಕಿ ಉತ್ಸವ
ಮಾಲೂರು: ರಾಮನವಮಿ ಪ್ರಯುಕ್ತ ಸ್ಥಳೀಯ ಸಾಯಿ ಸೇವಾ ಟ್ರಸ್ಟ್ ಆಯೋಜಿಸಿದ್ದ ಸಾಯಿ ರಾಮ ಪಲ್ಲಕ್ಕಿ ಉತ್ಸವ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಅದ್ಧೂರಿಯಾಗಿ ಸಂಚರಿಸಿತು.
ಪಟ್ಟಣದ ಶ್ರೀ ಶಂಕರನಾರಾಯಣ ಸ್ವಾಮಿ ದೇವಾಲಯದಿಂದ ಹೊರಟ ಶ್ರೀ ಸಾಯಿ ರಾಮ ಪಲ್ಲಕ್ಕಿ ರಾಜ ಬೀದಿಗಳಲ್ಲಿ ಸಂಚರಿಸಿತು. ರಸ್ತೆ ಇಕ್ಕೆಲಗಳಲ್ಲಿರುವ ಮನೆಯವರು ಭಕ್ತಿಯಿಂದ ಪಲ್ಲಕ್ಕಿಗೆ ಪೂಜೆ ಸಲ್ಲಿಸಿದರು ಶಿರಡಿ ಸಾಯಿ ಸೇವಾ ಟ್ರಸ್ಟ್‌ನ ಮಹಿಳಾ ಭಜನಾ ಮಂಡಳಿಯವರು ಮೆರವಣಿಗೆಯ ಉದ್ದಕ್ಕೂ ಸಾಯಿ ಭಜನೆ ಮಾಡುತ್ತಾ ಸಾಗಿದರು. ಟ್ರಸ್ಟ್ ವತಿಯಿಂದ ಪ್ರಸಾದ ವಿನಿಯೋಗ ಮಾಡಲಾಯಿತು. ಟ್ರಸ್ಟ್ ಕಾರ್ಯದರ್ಶಿ ಎಸ್.ಆರ್. ಶ್ರೀನಿವಾಸ್ ರೆಡ್ಡಿ, ವಾಸವಿ ಮಂಜು, ಮುನಿಕೃಷ್ಣಪ್ಪ, ನರಸಿಂಹ, ಗಜೇಂದ್ರ ಇದ್ದರು.

ಜೆಡಿಎಸ್‌ಗೆ ಹಲವರ ಸೇರ್ಪಡೆ
ಟೇಕಲ್: 11 ರಂದು ಜೆಡಿಎಸ್ ಅಭ್ಯರ್ಥಿ ಕೆ. ಕೇಶವ ಮಾಲೂರಿನ ಎಲ್ಲಾ ಪುರಸಭೆ ವಾರ್ಡ್‌ಗಳಲ್ಲಿ ಮತಯಾಚನೆ ಮಾಡಲಿದ್ದಾರೆ ಎಂದು ತಾಪಂ ಮಾಜಿ ಅಧ್ಯಕ್ಷ ಕೆ.ವೈ. ನಂಜೇಗೌಡ ತಿಳಿಸಿದರು. ಕೆ.ಜಿ. ಹಳ್ಳಿಯ ಆರ್. ಶ್ರೀರಾಮುಲುರನ್ನು ಪಕ್ಷಕ್ಕೆ ಬರಮಾಡಿಕೊಂಡು ಮಾತನಾಡಿ, ಅದೇ ದಿನ ರೋಡ್ ಶೋ ಇದೆ ಎಂದು ತಿಳಿಸಿದರು. ಇದೇ ಸಂದರ್ಭದಲ್ಲಿ ಜೆಡಿಎಸ್‌ಗೆ ಮಾಕಾರಹಳ್ಳಿಯ ನೂರುಲ್ಲಾ, ಸಮೀವುಲ್ಲಾ, ಚಾನ್ ಪಾಷಾ, ಪಾಚಾ ನೇತೃತ್ವದಲ್ಲಿ ಜೆಡಿಎಸ್ ಸೇರಿದರು. ಎಚ್. ಹನುಮಂತಪ್ಪ, ಯಲುವಗುಳಿ ಶ್ರೀನಿವಾಸ್, ಬಿ.ಜಿ. ಮುನಿಶಾಮಿಗೌಡ ಇದ್ದರು.

ಮತ ಜಾಗೃತಿ: ಇಂದು ಮ್ಯಾರಾಥಾನ್
ಚಿಕ್ಕಬಳ್ಳಾಪುರ: ಮತದಾನ ಜಾಗೃತಿ ಮೂಡಿಸುವ ಸಲುವಾಗಿ ಏ.10ರಂದು ಬೆಳಗ್ಗೆ 8 ಗಂಟೆಗೆ ನಂದಿ ರಂಗಮಂದಿರದಿಂದ ಅಂಬೇಡ್ಕರ್ ಭವನದವರೆಗೆ ಮ್ಯಾರಾಥಾನ್ ಹಮ್ಮಿಕೊಳ್ಳಲಾಗಿದೆ. ಮ್ಯಾರಾಥಾನ್‌ಕ್ಕೆ ಜಿಲ್ಲಾಧಿಕಾರಿ ಡಾ.ಆರ್.ವಿಶಾಲ್, ಜಿಪಂ ನೀಲಾ ಮಂಜುನಾಥ್, ಎಸ್‌ಪಿ ದಿವ್ಯಾ ಗೋಪಿನಾಥ್ ಚಾಲನೆ ನೀಡಲಿದ್ದಾರೆ. ಈ ಮ್ಯಾರಾಥಾನ್ ಓಟದಲ್ಲಿ ಸ್ವಯಂ ಸೇವಾ ಸಂಸ್ಥೆಗಳು, ಯುವತಿ, ಯುವಕ ಮಂಡಳಿಯವರು, ಕ್ರೀಡಾಪಟುಗಳು ಎಂದು ಯುವಜನ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕಿ ಜಯಲಕ್ಷ್ಮಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಟೇಕಲ್‌ನಲ್ಲಿ ಕಾಂಗ್ರೆಸ್ ಪ್ರಚಾರ
ಟೇಕಲ್: ಎಸ್‌ಸಿ, ಎಸ್‌ಟಿ ಜನಾಂಗದ ಅಭಿವೃದ್ಧಿ ಕಾಂಗ್ರೆಸ್‌ನಿಂದ ಮಾತ್ರ ಸಾಧ್ಯ ಎಂದು ಕೆಪಿಸಿಸಿ ಪರಿಶಿಷ್ಟ ಪಂಗಡ ವಿಭಾಗದ ರಾಜ್ಯಪ್ರಧಾನ ಕಾರ್ಯದರ್ಶಿ ಎನ್. ವೆಂಕಟರಾಮ್ ತಿಳಿಸಿದರು. ವೆಂಕಟರಾಜನಹಳ್ಳಿಯಲ್ಲಿ ವಾಲ್ಮೀಕಿ ನಾಯಕ ಜನಾಂಗದ ಸಭೆಯಲ್ಲಿ ಮತಯಾಚನೆ ಮಾಡಿ ಮಾತನಾಡಿ, ಶ್ರೀನಿವಾಸಪುರದ ತಂಗವಾರಪಲ್ಲಿಯಲ್ಲಿ ಹದಿನೇಳು ಕೋಟಿ ರುಪಾಯಿ ವೆಚ್ಚದಲ್ಲಿ ವಾಲ್ಮೀಕಿ ವಸತಿ ಶಾಲೆ ಪ್ರಾರಂಭವಾಗುತ್ತಿದ್ದು, ಇದರ ರುವಾರಿ ಕೆ.ಎಚ್. ಮುನಿಯಪ್ಪ ಎಂದರು. ಜಿಲ್ಲಾಧ್ಯಕ್ಷ ಎಸ್.ಎಂ. ನಾಗರಾಜ್ ಮಾತನಾಡಿದರು.

ಸಿಪಿಎಂ ಕಾರ್ಯಕರ್ತರ ಮೇಲೆ ದಾಳಿ: ಖಂಡನೆ
ಚಿಕ್ಕಬಳ್ಳಾಪುರ: ಸಿಪಿಎಂಗೆ ಜನರು ಹೆಚ್ಚಿಗೆ ಒಲವು ವ್ಯಕ್ತಪಡಿಸುತ್ತಿರುವುದರಿಂದ ಹತಾಶಗೊಂಡು ವಿಪಕ್ಷಗಳು ತಮ್ಮ ಪಕ್ಷದ ಕಾರ್ಯಕರ್ತರ ಮೇಲೆ ದಾಳಿ ಮಾಡುತ್ತಿವೆ ಎಂದು ಸಿಪಿಎಂ ಪಕ್ಷದ ರಾಜ್ಯ ಕಾರ್ಯದರ್ಶಿ ಮಂಡಳಿ ಸದಸ್ಯ ಯು. ಬಸವರಾಜು ಆಕ್ರೋಶ ವ್ಯಕ್ತಪಡಿಸಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಳೆದೆರಡು ದಿನ ಹಿಂದೆ ಸೂಲಿಬೆಲೆಯಲ್ಲಿ ಜಿ.ವಿ. ಶ್ರೀರಾಮರೆಡ್ಡಿಯವರ ಸಮ್ಮುಖದಲ್ಲಿಯೆ ಬಿಜೆಪಿ ಕಾರ್ಯಕರ್ತರು ಅಡ್ಡಿಪಡಿಸಲು ಮುಂದಾದರು. ಕೆ. ಸತ್ಯಾವರದಲ್ಲಿ ಪ್ರಚಾರದಲ್ಲಿ ತೊಡಗಿದ್ದ ಕಾರ್ಯಕರ್ತರ ಮೇಲೆ ಹಲ್ಲೆ, ವಾಹನದ ಗಾಜುಗಳನ್ನು ಒಡೆದು ಹಾಕಿದರು. ಈ ಹಿನ್ನೆಲೆಯಲ್ಲಿ ದಾಳಿ ಮಾಡಿದ ಗೂಂಡಾಗಳನ್ನು ಪೊಲೀಸರು ಕೂಡಲೇ ಬಂಧಿಸಬೇಕೆಂದು ಆಗ್ರಹಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement