ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಕಾಲೇಜು ವಿದ್ಯಾರ್ಥಿಗಳ ಫಲಿತಾಂಶ ತ್ವರಿತ ಪ್ರಕಟಣೆ

Srinivasa Murthy VN
Updated On : 11 Apr 2014, 1:14 am

ಮುಳಬಾಗಲು: ಸರ್ಕಾರಿ ಪ್ರಥಮ ದರ್ಜೆ ಕಾಲೇಜು ವಿದ್ಯಾರ್ಥಿಗಳ ಅಂಕಪಟ್ಟಿ ಫಲಿತಾಂಶ ತ್ವರಿತ ಪ್ರಕಟಣೆ ಮಾಡಲು ಬೆಂಗಳೂರು ವಿವಿ ಅಧಿಕಾರಿಗಳು ಮುಂದಾಗಿದ್ದಾರೆ.
ಅಂಕಪಟ್ಟಿಯಲ್ಲಿಛ ಫಲಿತಾಂಶ ವಿಳಂಬವಾದ ಕುರಿತು ಕನ್ನಡಪ್ರಭದಲ್ಲಿ ಏ.9ರಂದು ಸುದ್ದಿ ಪ್ರಕಟವಾಗಿತ್ತು. ಇದರಿಂದ ಎಚ್ಚಿತ್ತಕೊಂಡ ವಿವಿ ಅಧಿಕಾರಿಗಳು ಕಾಲೇಜಿನ ಪ್ರಾಂಶುಪಾಲ ಡಾ. ಜಮೀರ್ ಅಹ್ಮದ್ ಅವರನ್ನು ದೂರವಾಣಿ ಮೂಲಕ ಸಂಪರ್ಕಿಸಿ ಮಾಹಿತಿ ಕೋರಿದ್ದಾರೆ. ವಿವಿಗೆ ಕಾಲೇಜಿನಿಂದ ಕಳುಹಿಸಿರುವ ಎಲ್ಲ ದಾಖಲೆಗಳ ದೃಡೀಕರಣ ಪ್ರತಿಗಳನ್ನು ಮತ್ತೊಮ್ಮೆ ಕಳುಹಿಸಲು ತಿಳಿಸಿದ್ದಾರೆ.
ಒಂದು ವಾರದಲ್ಲಿ ಫಲಿತಾಂಶ ಹಾಗೂ ಅಂಕಪಟ್ಟಿಗಳನ್ನು ಕಳುಹಿಸಿಕೊಡುವುದಾಗಿ ಭರವಸೆ ನೀಡಿದ್ದಾರೆ.

ಲೋಕ ಅದಾಲತ್ ಕಾರ್ಯಕ್ರಮ 12ರಂದು
ಚಿಕ್ಕಬಳ್ಳಾಪುರ: ಜಿಲ್ಲಾ ನ್ಯಾಯಾಲಯದಲ್ಲಿ ಜನವರಿ 6 ರಿಂದ ಏಪ್ರಿಲ್ 12 ರ ವರೆಗೆ ಬೃಹತ್ ಜನತಾ ನ್ಯಾಯಾಲಯ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು, ಏಪ್ರಿಲ್ 12 ರಂದು ನ್ಯಾಯಾಲಯದಲ್ಲಿ  ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಎ.ಎಸ್. ಬೆಳ್ಳುಂಕೆ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸರ್ವೋಚ್ಚ ನ್ಯಾಯಾಲಯ ತಾಲೂಕು ಮಟ್ಟದಲ್ಲೂ ಲೋಕ್ ಅದಾಲತ್ ಕಾರ್ಯಕ್ರಮ ನಡೆಸಲು ತಿಳಿಸಿದೆ. ಏ.12 ರಂದು ನ್ಯಾಯಾಲಯದಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು, ಇಲ್ಲಿ ರಾಜಿ ಮಾಡಿಕೊಳ್ಳಬಹುದಾದ ಸಣ್ಣ ಪುಟ್ಟ ಕ್ರಿಮಿನಲ್ ಪ್ರಕರಣಗಳು, ಭಾಗಕ್ಕಾಗಿ ಹಾಕಿರುವ ದಾವೆಗಳು, ವೈವಾಹಿಕ ಪ್ರಕರಣಗಳು ಹಾಗೂ ಇತರೆ ಸಿವಿಲ್ ದಾವೆಗಳು ಮತ್ತಿತರ ಪ್ರಕರಣಗಳು ಇತ್ಯರ್ಥ ಪಡಿಸಲಾಗುವುದು ಎಂದರು. ರಾಜಿ ಸಂಧಾನದ ಮೂಲಕ ಪ್ರಕರಣ ಇತ್ಯರ್ಥ ಪಡಿಸಿಕೊಂಡಲ್ಲಿ ನ್ಯಾಯಾಲಯಕ್ಕೆ ಪಾವತಿಸಲಾದ ನ್ಯಾಯಾಲಯ ಶುಲ್ಕವನ್ನು ಪೂರ್ಣವಾಗಿ ಮರು ಪಾವತಿಸಲಾಗುವುದು. ಆದ್ದರಿಂದ ಈ ಜನತಾ ನ್ಯಾಯಾಲಯದ ಸದುಪಯೋಗ ಪಡೆದುಕೊಳ್ಳಬೇಕೆಂದರು. ಈವರೆಗೂ ಸಾವಿರಕ್ಕೂ ಹೆಚ್ಚು ಪ್ರಕರಣಗಳು ಇತ್ಯರ್ಥಪಡಿಸಲಾಗಿದೆ ಎಂದರು. ಹಿರಿಯ ಸಿವಿಲ್‌ನ್ಯಾಯಾಧೀಶೆ ಹಾಗೂ ಸಿಜೆಎಂ ಆದ ಎಸ್. ಶೋಭ ಉಪಸ್ಥಿತರಿದ್ದರು.

ರಜಾ ಅವಧಿಯಲ್ಲೂ ಬಿಸಿಯೂಟ
ಮುಳಬಾಗಲು: ಬೇಸಿಗೆ ರಜೆ ಅವಧಿಯಲ್ಲಿ ತಾಲೂಕಿನ ಎಲ್ಲಾ  ಶಾಲೆಗಳಲ್ಲಿ ಮಧ್ಯಾಹ್ನ ಬಿಸಿಯೂಟ ವಿತರಿಸಬೇಕು ಎಂದು ಮುಳಬಾಗಲು ಕ್ಷೇತ್ರ ಶಿಕ್ಷಣಾಧಿಕಾರಿ ಎನ್. ದೇವರಾಜ್ ಸೂಚಿಸಿದ್ದಾರೆ.
ಸುಪ್ರಿಕೋರ್ಟ್ ಆದೇಶದ ಮೇರೆಗೆ ಎಲ್ಲಾ ಸರ್ಕಾರಿ ಮತ್ತು ಅನಿದಾನಿತ ಶಾಲೆಗಳ 1ರಿಂದ 8 ನೇ ತರಗತಿ ಮಕ್ಕಳಿಗೆ ಬಿಸಿಯೂಟ ಮುಂದುವರಿಸಬೇಕು ಎಂದು ಅದೇಶಿಸಿರುವುದಾಗಿ ತಿಳಿಸಿದ್ದಾರೆ. ಬೇಸಿಗೆ ರಜೆ ಇರುವ ಏ.11ರಿಂದ ಮೇ 28ರವರೆವಿಗೂ ಬಿಸಿಯೂಟ ಮುಂದುವರಿಸಲು ಮುಖ್ಯಶಿಕ್ಷಕರು, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷರು ಸಭೆ ಕರೆದು ಕ್ರಮ ತೆಗೆದುಕೊಳ್ಳಬೇಕು. ಬೇರೆ ಶಾಲೆಯಿಂದ ಊಟಕ್ಕೆ ಬರುವ ಮಕ್ಕಳ ಮಾಹಿತಿ ಪಡೆದು ಊಟ ನೀಡುವಂತೆ ತಿಳಿಸಿದ್ದಾರೆ. ಊಟ ನೀಡಿದ ಮಾಹಿತಿಯನ್ನು ವಾರಕ್ಕೊಮ್ಮೆ ಜಿಲ್ಲಾ ಕಚೇರಿಗೆ ತಿಳಿಸಬೇಕು. ಪ್ರತಿ ದಿವಸ ಮಧ್ಯಾಹ್ನ 12.30ರೊಳಗೆ ಊಟ ಸಿದ್ಧಪಡಿಸಬೇಕು ಶಾಲೆಗಳಲ್ಲಿ ಪೌಷ್ಠಿಕಾಂಶದ ಮಾತ್ರೆಗಳನ್ನು ರಜೆ ಅವಧಿಯಲ್ಲೂ ನೀಡಲು ಕ್ರಮ ವಹಿಸಬೇಕು ಎಂದು ಸೂಚಿಸಿದ್ದಾರೆ.
ರಜಾ ಅವಧಿಯಲ್ಲಿ ಶಾಲೆಯಲ್ಲಿ  ಪ್ರತಿ ದಿವಸ ಒಬ್ಬ ಶಿಕ್ಷಕ ಹಾಜರಿದ್ದು ಮಕ್ಕಳಿಗೆ ಪಠ್ಯೇತರ ಚಟುವಟೆಕೆಗಳನ್ನೊಳಗೊಂಡಂತೆ ಬೇಸಿಗೆ ಶಿಬಿರಗಳನ್ನು ಅಯೋಜಿಸಬೇಕು. ಬಿಸಿಯೂಟ ನೀಡದೆ ಬೋಗಸ್ ಮಾಹಿತಿ ನೀಡಿ ಅನುದಾನ ದುರುಪಯೋಗಕ್ಕೆ ಕಾರಣರಾದರೆ ಶಿಸ್ತು ಕ್ರಮ ಜರುಗಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.

ಇಟ್ಟಿಗೆಗೂಡು ಕುಸಿದು ಕಾರ್ಮಿಕ ಸಾವು
ಬಂಗಾರಪೇಟೆ: ಇಟ್ಟಿಗೆಗೂಡಿನಲ್ಲಿ ಇಟ್ಟಿಗೆಗಳನ್ನು ಟ್ರ್ಯಾಕ್ಟರ್‌ಗೆ ತುಂಬಿಸುವಾಗ ಆಕಸ್ಮಿಕವಾಗಿ ಗೂಡು ಬಿದ್ದು ವ್ಯಕ್ತಿಯೊಬ್ಬ ಮೃತಪಟ್ಟಿರುವ ಘಟನೆ ಪಟ್ಟಣದ ಹೊರವಲಯದಲ್ಲಿ ನಡೆದಿದೆ.ದೊಡ್ಡಯಲವಹಳ್ಳಿ ಗ್ರಾಮದ ನಾರಾಯಣಸ್ವಾಮಿಯೇ ಇಟ್ಟಿಗೆ ಗೂಡು ಬಿದ್ದು ಮೃತಪಟ್ಟವರಾಗಿದ್ದು, ಪಟ್ಟಣದ ಹೊರವಲಯದ ಟೇಕಲ್ ರಸ್ತೆಯಲ್ಲಿರುವ ಎಂಟಿಬಿ ಇಟ್ಟಿಗೆ ಕಾರ್ಖಾನೆಯಲ್ಲಿ ಕೂಲಿ ಕೆಲಸವನ್ನು ಮಾಡಿಕೊಂಡಿದ್ದ ಗುರುವಾರ ಗೂಡಿನಿಂದ ಇಟ್ಟಿಗೆಗಳನ್ನು ಟ್ರ್ಯಾಕ್ಟರ್‌ಗೆ ತುಂಬುವಾಗ ಆಕಸ್ಮಿಕವಾಗಿ ಈ ದುರ್ಘಟನೆ ಸಂಭವಿಸಿದೆ. ಪಟ್ಟಣ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಅಪಘಾತದಲ್ಲಿ ವ್ಯಕ್ತಿ ಸಾವು
ಕೆಜಿಎಫ್: ತಮಿಳುನಾಡು ಸರ್ಕಾರಿ ಬಸ್ ಡಿಕ್ಕಿ ಹೊಡೆದ ಪರಿಣಾಮ ಪಾದಚಾರಿಯೊಬ್ಬರು ಸ್ಥಳದಲ್ಲೇ ಮೃತ್ಪಟ್ಟಿರುವ ಘಟನೆ ಬೇತಮಂಗಲ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ವಿ. ಕೋಟ-ಕೆಜಿಎಫ್ ಮುಖ್ಯ ರಸ್ತೆಯ ವೆಂಕಟಾಪುರ ಗ್ರಾಮದ ಬಳಿ ನಾರಾಯಮೂರ್ತಿ(40) ಎಂಬುವರು ನಡೆದು ಬರುತ್ತಿದ್ದ ವೇಳೆ ತಮಿಳುನಾಡಿನಿಂದ ಕೆಜಿಎಫ್‌ಗೆ ಬರುತ್ತಿದ್ದ ತಮಿಳುನಾಡು ಸರ್ಕಾರಿ ಬಸ್‌ನ ಚಾಲಕ ಅತಿ ವೇಗ ಮತ್ತು ಅಜಾಗರುಕತೆಯಿಂದ ಚಲಾಯಿಸಿ ಬಂದು ನಾರಾಯಣಮೂರ್ತಿಗೆ ಡಿಕ್ಕಿ ಹೊಡೆದ ಪರಿಣಾಮ ಬಸ್ ಚಕ್ರಕ್ಕೆ ಸಿಲುಕಿ ಸ್ಥಳದಲ್ಲೇ ಮೃತಪಟ್ಟಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಬೇತಮಂಗಲ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಬಸ್ ಚಾಲಕ ರಾಮಚಂದ್ರನನ್ನು ಬಂಧಿಸಿ ಬಸ್‌ನ್ನು ವಶಕ್ಕೆ ಪಡೆದು ಮುಂದಿನ ಕ್ರಮ ಕೈಗೊಂಡಿದ್ದಾರೆ.

ಮರಳು ದಿಬ್ಬ ಕುಸಿದು ವ್ಯಕ್ತಿ ಸಾವು
ಗೌರಿಬಿದನೂರು: ನದಿಯಲ್ಲಿ ದಿಬ್ಬ ಕುಸಿದು ವ್ಯಕ್ತಿಯೊಬ್ಬ ಮೃತಪಟ್ಟ ಘಟನೆ ತಾಲೂಕಿನ ಕಾಮಗಾನಹಳ್ಳಿ ಗ್ರಾಮದಲ್ಲಿ ಗುರುವಾರ ಬೆಳಗ್ಗೆ ಸಂಭವಿಸಿದೆ. ಮೃತನನ್ನು ಉಮೇಶ್(40) ಎಂದು ಗುರುತಿಸಲಾಗಿದೆ. ತಮ್ಮ ಮನೆಯನ್ನು ಕಟ್ಟಿಕೊಳ್ಳಲು ಎತ್ತಿನ ಬಂಡಿಯಲ್ಲಿ ಮರಳು ತುಂಬುತ್ತಿದ್ದರು. ಆಗ ದಿಬ್ಬ ಕುಸಿದು ಈ ಅವಘಡ ಸಂಭವಿಸಿದೆ. ಈ ಸಂಬಂಧ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement