ಗರ್ಭಿಣಿ ಸಾವು: ವೈದ್ಯರ ವಿರುದ್ಧ ಕ್ರಮಕ್ಕೆ ಆಗ್ರಹ
ಚಿಂತಾಮಣಿ: ಗರ್ಭಿಣಿ ಸಾವಿಗೆ ಕಾರಣವಾದ ಡಾ.ಮಂಜುಳ ವಿರುದ್ಧ ಕಾನೂನು ಕ್ರಮ ಜರಗಿಸಲು ಒತ್ತಾಯಿಸಿ ಇಲ್ಲಿನ ಸಾರ್ವಜನಿಕ ಆಸ್ಪತ್ರೆಯ ಮುಂಭಾಗದಲ್ಲಿ ಮಾತೃಭೂಮಿ ಸ್ವಯಂ ಸೇವಾ ಸಂಘದ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ತಾಲೂಕಿನ ಬೊಮ್ಮೆಕಲ್ಲು ಗ್ರಾಮದ ಗರ್ಭಿಣಿ ಸಾವಿಗೆ ವೈದ್ಯರ ನಿರ್ಲಕ್ಷ್ಯವೇ ಕಾರಣ. ಅವರ ವಿರುದ್ಧ ಕ್ರಮ ಜರುಗಿಸಬೇಕು ಎಂದು ನೂರಾರು ಕಾರ್ಯಕರ್ತರು ಆಸ್ಪತ್ರೆ ಮುಂಭಾಗದಲ್ಲಿ ಧರಣಿ ಕುಳಿತು ಪ್ರತಿಭಟಿಸಿದರು. ತನಿಖೆ ನಡೆಸಿ ಕ್ರಮ: ಡಾ.ಮಂಜುಳಾ ವಿರುದ್ಧ ಪ್ರಾಥಮಿಕ ತನಿಖೆ ನಡೆಸಿ, ತಪ್ಪಿತಸ್ಥರಾಗಿದ್ದರೆ ಕ್ರಮ ಕೈಗೊಳ್ಳಲಾಗುವುದು. ಇದಕ್ಕಾಗಿ ತನಿಖೆಗೆ ವೆಂಕಟೇಶ್‌ಮೂರ್ತಿ ಅವರನ್ನು ತನಿಖಾಧಿಕಾರಿಯಾಗಿ ನೇಮಿಸಲಾಗಿದೆ ಎಂದು ಜಿಲ್ಲಾ ವೈದ್ಯಾಧಿಕಾರಿ ರಂಗಸ್ವಾಮಿ ಅವರು ದೂರವಾಣಿ ಮೂಲಕ ಪ್ರತಿಭಟನಾಕಾರರಿಗೆ ಭರವಸೆ ನೀಡಿದರು.
ಖಾಸಗಿ ನರ್ಸಿಂಗ್ ದರ್ಬಾರ್: ನಗರದ ಮಾಳಪ್ಪಲ್ಲಿಯಲ್ಲಿ ಖಾಸಗಿ ನರ್ಸಿಂಗ್ ನಡೆಸುತ್ತಿರುವ ಮತ್ತೊಬ್ಬ ಸರ್ಕಾರಿ ವೈದ್ಯರಾದ ಡಾ.ಜಯಂತಿ, ಹಳ್ಳಿಗರಿಂದ ಸಾವಿರಾರು ರುಪಾಯಿ ವಸೂಲಿ ಮಾಡುತ್ತಿದ್ದಾರೆ. ಈ ಸಂಬಂಧ ಭೂಮಿ ಸಂಘಟನೆ ಕಾರ್ಯಕರ್ತರು ಚಿಕ್ಕಬಳ್ಳಾಪುರ ಜಿಲ್ಲಾ ವೈದ್ಯಾಧಿಕಾರಿ ಡಾ.ಎಚ್.ಇ.ರಂಗಸ್ವಾಮಿಗೆ ದೂರು ನೀಡಿದ್ದಾರೆ. ಚಿಂತಾಮಣಿ ಸಾರ್ವಜನಿಕ ಆಸ್ಪತ್ರೆಯಲ್ಲಿ ವೈದ್ಯರು ಮತ್ತು ಸಿಬ್ಬಂದಿ ಕೊರತೆ ಇದೆ. ಹೀಗಿದ್ದಾಗ್ಯೂ ಜಯಂತಿ ಅವರು ಖಾಸಗಿ ನರ್ಸಿಂಗ್ ಹೋಮ್ ನಡೆಸುತ್ತಿರುವುದ ಎಷ್ಟು ಸರಿ ಎಂದು ಪ್ರತಿಭಟನಾಕಾರರು ಪ್ರಶ್ನಿಸಿದರು.