ಜೆಡಿಎಸ್ ರೋಡ್ ಶೋಗೆ ಜನಸಾಗರ
ಚಿಕ್ಕಬಳ್ಳಾಪುರ ಕ್ಷೇತ್ರ ಜನರ ಸಮಸ್ಯೆಗಳಿಗೆ ಸ್ಪಂದನೆ: ಕುಮಾರಸ್ವಾಮಿ ಭರವಸೆ
ಕ್ಷೇತ್ರದಲ್ಲಿ ಕೈಗಾರಿಕಾ ವಲಯ ಸ್ಥಾಪನೆ, ಸ್ವಚ್ಛ ಕುಡಿಯುವ ನೀರು ಪೂರೈಕೆಗೆ ಕ್ರಮ
ಕನ್ನಡಪ್ರಭ ವಾರ್ತೆ, ಗುಡಿಬಂಡೆ, ಏ.10
ಚುನಾವಣೆ ಪ್ರಚಾರಕ್ಕಾಗಿ ಪಟ್ಟಣಕ್ಕೆ ಆಗಮಿಸಿದ್ದ ಮಾಜಿ ಪ್ರಧಾನಿ ದೇವೇಗೌಡ ಮತ್ತು ಮಾಜಿ ಮುಖ್ಯಮಂತ್ರಿ ಹಾಗೂ ಚಿಕ್ಕಬಳ್ಳಾಪುರ ಕ್ಷೇತ್ರದ ಅಭ್ಯರ್ಥಿ ಎಚ್.ಡಿ.ಕುಮಾರಸ್ವಾಮಿ ಅವರನ್ನ ನೋಡಲು ಬುಧುವಾರ ಪಟ್ಟಣದಲ್ಲಿ ಅಪಾರ ಜನಸ್ತೋಮ ನೆರೆದಿತ್ತು.
ಮಧ್ಯಾಹ್ನ 3 ಗಂಟೆಗೆ ನಿಗದಿಯಾಗಿದ್ದ ರೋಡ್ ಶೋ ಸಂಜೆ 4.30ರ ಸುಮಾರಿಗೆ ಪಕ್ಷದ ನಾಯಕ ದೇವೇಗೌಡರ ಆಗಮನದೊಂದಿಗೆ ಪ್ರಾರಂಭವಾಯಿತು. ಪಕ್ಷದ ಕಾರ್ಯಕರ್ತರು ಹಾಗೂ ಜನರ ಹಷೋದ್ಘಾರ ಮುಗಿಲುಮುಟ್ಟಿತ್ತು. ಸ್ಥಳೀಯ ನಾಯಕರು ಹೂ ಮಾಲೆ ಹಾಕುವುದರ ಮೂಲಕ ಭರ್ಜರಿ ಸ್ವಾಗತ ಕೋರಿದರ, ನಾಯಕರೊಂದಿಗೆ ಸ್ವಲ್ಪ ಹೊತ್ತು ಸಮಾಲೋಚಿಸಿದ ಬಳಿಕ ದೇವೇಗೌಡರು ನಿರ್ಗಮಿಸಿದರು. ಬಳಿಕ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಆಗಮಿಸಿದರು. ಬಿಸಿಲು ಲೆಕ್ಕಿಸದೆ ತಮ್ಮನ್ನು ಕಾಣಲು ಬಂದ ಜನಸಾಗರವನ್ನು ಕಂಡು ಭಾವಪರವಶವಾದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, 'ಪ್ರಚಾರ ಸಮಯಲ್ಲಿ ಚಿಕ್ಕಬಳ್ಳಾಪುರ ಕ್ಷೇತ್ರದ ಎಲ್ಲ ಸಮಸ್ಯೆಗಳನ್ನು ಅರಿತಿದ್ದೇನೆ. ಅಭಿವೃದ್ಧಿಯಲ್ಲಿ ಈ ಕ್ಷೇತ್ರ ತುಂಬಾ ಹಿಂದುಳಿದಿದೆ. ಕುಡಿಯುವ ನೀರು, ನಿರುದ್ಯೋಗ, ವಿದ್ಯುತ್ ಸೇರಿದಂತೆ ಅನೇಕ ಸಮಸ್ಯೆಗಳು ಇಲ್ಲಿವೆ. ರೈತರಿಗೆ ಶಾಶ್ವತವಾದ ನೀರಾವರಿ ಸೌಕರ್ಯವಿಲ್ಲ. ಇಲ್ಲಿಂದ ಜನರನ್ನು ನನ್ನನ್ನು ಆಯ್ಕೆ ಮಾಡಿದರೆ, ಎಲ್ಲ ಸಮಸ್ಯೆಗಳನ್ನು ನಿವಾರಿಸುತ್ತೇನೆ' ಎಂದರು.
ಕ್ಷೇತ್ರದಲ್ಲಿ ಕೈಗಾರಿಕೆಗಳನ್ನು ಸ್ಥಾಪಿಸಿ ನಿರುದ್ಯೋಗ ಹೋಗಲಾಡಿಸುತ್ತೇನೆ. ಸ್ವಚ್ಛ ಕುಡಿಯುವ ನೀರು ಪೂರೈಕೆಗೆ ಕ್ರಮ ಕೈಗೊಳ್ಳುತ್ತೇನೆ ಎಂದು ಭರವಸೆ ನೀಡಿದರು.
ಜೆಡಿಎಸ್ ಕಾರ್ಯಾಧ್ಯಕ್ಷ ಸಿ.ಆರ್.ಮನೋಹರ್ ಮಾತನಾಡಿ, 'ಬಡವರ, ದಲಿತರ ಮತ್ತು ನೊಂದವರ ಧ್ವನಿಯಾಗಿರುವ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಅಧಿಕಾರದಲ್ಲಿದ್ದಾಗ ಅನೇಕ ಜನೋಪಯೋಗಿ ಕಾರ್ಯಕ್ರಮಗಳನ್ನು ಜಾರಿಗೆ ತಂದಿದಾರೆ. ಅವರನ್ನು ಬೆಂಬಲಿಸಿ' ಎಂದು ಹೇಳಿದರು. ಈ ವೇಳೆ, ಶಾಸಕ ಜಮೀರ್ ಅಹಮ್ಮದ್, ಚಲುವರಾಯಸ್ವಾಮಿ, ಹರಿನಾಥ್ ರೆಡ್ಡಿ, ಭಾಸ್ಕರ್ ರೆಡ್ಡಿ, ಸೀತಾರಾಮ್ ರೆಡ್ಡಿ, ಜಿ.ಟಿ.ಆನಂದ್ ಸೇರಿದಂತೆ ಅನೇಕ ನಾಯಕರು ಉಪಸ್ಥಿತರಿದ್ದರು.
ಈ ಬಾರಿ ಮುನಿಯಪ್ಪ ಮನೆಗೆ: ಕೇಶವ ವ್ಯಂಗ್ಯ
ಕೆಜಿಎಫ್: ಕೆ.ಎಚ್. ಮುನಿಯಪ್ಪರನ್ನು ಮನೆಗೆ ಕಳುಹಿಸುವ ಉದ್ದೇಶದಿಂದಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಕೋಲಾರಕ್ಕೆ ಆಗಮಿಸಿದ್ದಾರೆ ಎಂದು ಜೆಡಿಎಸ್ ಅಭ್ಯರ್ಥಿ ಕೇಶವ ವ್ಯಂಗ್ಯ ಮಾಡಿದ್ದಾರೆ.
ಬೇತಮಂಗಲ ಹೋಬಳಿ, ಸುಂದರಪಾಳ್ಯ ಹೋಬಳಿ ಹಾಗೂ ಕ್ಯಾಸಂಬಳ್ಳಿ ಹೋಬಳಿಯ ವಿವಿಧ ಗ್ರಾಮೀಣ ಪ್ರದೇಶದಲ್ಲಿ ಬಿರುಸಿನ ಪ್ರಚಾರ ನಡೆಸಿ ಮಾತನಾಡಿ, ಚಿನ್ನದ ಗಣಿ ಕಾರ್ಮಿಕರ 8 ಸಾವಿರ ಕುಟುಂಬಗಳಿಗೆ ಮನೆಯಿಂದ ಹೊರ ಹಾಕಲಾಗುತ್ತದೆ. ಈ ಸತ್ಯವನ್ನು ಜನರಿಂದ ಮುಚ್ಚಿಟ್ಟು ಚಿನ್ನದ ಗಣಿ ಪುನರಾರಂಭ ಮತ್ತು ಕಾರ್ಮಿಕರ ಮನೆ ಅವರಿಗೆ ಸ್ವಂತ ಮಾಡುವುದಾಗಿ ಸುಳ್ಳು ಆಶ್ವಾಸನೆ ನೀಡಿ ಜನರನ್ನು ವಂಚಿಸುತ್ತಿದ್ದಾರೆ ಎಂದು ಆರೋಪಿಸಿದರು.
ಚಿಂತಾಮಣಿ ಮಾಜಿ ಶಾಸಕ ಸುಧಾಕರರೆಡ್ಡಿ ಮಾತನಾಡಿದರು.
ಮಾಜಿ ಸಚಿವ ಶ್ರೀನಿವಾಸಗೌಡ ಮಾತನಾಡಿದರು. ಮಾಜಿ ಶಾಸಕರಾದ ಎಂ. ಭಕ್ತವತ್ಸಲಂ, ವೆಂಕಟಶಿವಾರೆಡ್ಡಿ, ಜಯಸಿಂಹ, ಕೃಷ್ಣಪ್ಪ, ಚಾನ್‌ಬಾಯ್ ಇದ್ದರು.