ಪತಿ ಪರ ಪತ್ನಿ ಮನೆ ಮನೆಗೆ ತೆರಳಿ ಪ್ರಚಾರ
ಮಾಲೂರು: ಕೋಲಾರ ಲೋಕಸಭೆ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಕೆ.ಕೇಶವ ಅವರ ಧರ್ಮಪತ್ನಿ ಹೇಮಲತಾ ಅವರು ಪಟ್ಟಣದಲ್ಲಿ ತಮ್ಮ ಪತಿಯ ಪರವಾಗಿ ಮತಯಾಚಿಸಿದರು.
ಶಾಸಕ ಮಂಜುನಾಥ್ ಗೌಡ ಅವರ ಪತ್ನಿ ಅರಿದ್ರಾ ಮಂಜುನಾಥ್ ಜತೆಯಲ್ಲಿ ಪಟ್ಟಣದ ಹಲವು ವಾರ್ಡ್‌ಗಳಲ್ಲಿ ಸಂಚರಿಸಿದ ಹೇಮಲತಾ ಅವರು, 'ಶಾಶ್ವತ ನೀರಾವರಿ ಯೋಜನೆಗೆ ಮೊದಲು ಆದ್ಯತೆ ನೀಡುವುದಕ್ಕಾಗಿ ಜೆಡಿಎಸ್‌ಗೆ ಬೆಂಬಲಿಸಿ. ಬಡತನದಲ್ಲಿ ಬೆಳೆದು ಬಂದ ಕೇಶವ್ ಅವರಿಗೆ ದೀನ ದಲಿತರ ಬಗ್ಗೆ ಅಪಾರ ಕಾಳಜಿ ಇದೆ. ಕೇಶವ್ ಅವರು ಹಣ ಮಾಡಲು ರಾಜಕೀಯಕ್ಕೆ ಬಂದಿಲ್ಲ ಎಂದರು.
ಪುರಸಭೆ ಸದಸ್ಯರಾದ ರೇಖಾ, ಜಾಕೀರ್‌ಖಾನ್, ವಿಜಯ ಲಕ್ಷ್ಮಿ, ಗೀತಾ ರಮೇಶ್, ಮಾಜಿ ಸದಸ್ಯರಾದ ರಾಮಚಂದ್ರ, ನಾಗರಾಜ್, ದೇವರಾಜ್, ರಮೇಶ್, ಜುಟ್ಟುಕೃಷ್ಣ, ಬಾಬು, ಗಾಯಿತ್ರಿ, ಮುನವರ್, ಚಾನ್ ಇದ್ದರು.
ಕಾಂಗ್ರೆಸ್ ಪರ ಕೃಷ್ಣಯ್ಯ ಶೆಟ್ಟಿ ಪ್ರಚಾರ
ಟೇಕಲ್: ಪ್ರಜಾಪ್ರಭುತ್ವದ ಮೌಲ್ಯಗಳನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಬಿಂಬಿಸಿದ ಏಕೈಕ ರಾಜಕೀಯ ಪಕ್ಷ ಕಾಂಗ್ರೆಸ್ ಎಂದು ಮಾಜಿ ಸಚಿವ ಎಸ್.ಎನ್. ಕೃಷ್ಣಯ್ಯಶೆಟ್ಟಿ ತಿಳಿಸಿದರು. ಕೆ.ಜಿ. ಹಳ್ಳಿಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಕೆ.ಎಚ್. ಮುನಿಯಪ್ಪ ಪರ ಪ್ರಚಾರ ಸಭೆಯಲ್ಲಿ ಮಾತನಾಡಿ, ತಾಲೂಕಿನ ಎಲ್ಲ ಮತದಾರರು ಕಾಂಗ್ರೆಸ್ ಬೆಂಬಲಿಸಬೇಕೆಂದರು. ಚನ್ನಕೇಶವ ಮಾತನಾಡಿ, ಅಭಿವೃದ್ಧಿಗಾಗಿ ಕೆಎಚ್‌ಎಂರನ್ನು ಆಯ್ಕೆ ಮಾಡಬೇಕೆಂದು ಮನವಿ ಮಾಡಿದರು. ಕೆಪಿಸಿಸಿ ಕಾರ್ಯದರ್ಶಿ ಎಸ್.ಎನ್. ರಘುನಾಥ್, ಎನ್. ವೆಂಕಟರಾಮ್, ಟಿ.ಎಂ. ಅಶೋಕ್ ಕುಮಾರ್, ಆರ್. ರಾಜಣ್ಣ, ಬಿ.ಕೆ. ನಾರಾಯಣಸ್ವಾಮಿ, ತಾಪಂ ಅಧ್ಯಕ್ಷ ಪುಟ್ಟುಸ್ವಾಮಿ, ಸದಸ್ಯ ಲೋಕೇಶ್, ಜಿಪಂ ಸದಸ್ಯೆ ಯಲ್ಲಮ್ಮ ಇದ್ದರು.
'ಮೋದಿ ಅಲೆ ತಡೆಯಲು ಸಾಧ್ಯವಿಲ್ಲ'
ಮಾಲೂರು: ಮೋದಿ ಕುರಿತು ವಿರೋಧಿಗಳು ಎಷ್ಟೇ ಅಪಪ್ರಚಾರ ನಡೆಸಿದರೂ ಎಲ್ಲರ ಮನಸ್ಸಿನಲ್ಲೇ ಈಗಾಗಲೇ ಇರುವ ಮೋದಿ ಪರ ಅಲೆಯನ್ನು ತಡೆಯಲು ಸಾಧ್ಯವಿಲ್ಲ ಎಂದು ಬಿಜೆಪಿ ಮುಖಂಡ ರಾಮೇಗೌಡ ಹೇಳಿದರು. ಪಟ್ಟಣದ ಕೋಲಾರ ರಸ್ತೆಯಲ್ಲಿರುವ ಸಿದ್ಧಗುಂಟೆ ಆಂಜನೇಯಸ್ವಾಮಿ ದೇವಾಲಛಯದಲ್ಲಿ ವಿಶೇಷ ಪೊಜೆ ಸಲ್ಲಿಸಿ ಪ್ರಚಾರಕ್ಕೆ ಚಾಲನೆ ನೀಡಿ ಮಾತನಾಡಿದರು. ಪುರಸಭೆ ಅಧ್ಯಕ್ಷೆ ಭಾರತಮ್ಮ, ಪುರಸಭೆ ಸದಸ್ಯರಾದ ವೇಮನ, ಸಿ.ಪಿ.ನಾಗರಾಜ್, ಹನುಮಂತರೆಡ್ಡಿ, ರಾಮಮೂರ್ತಿ, ಸೋಮಣ್ಣ, ಪ್ರಾಧಿಕಾರದ ಮಾಜಿ ಅಧ್ಯಕ್ಷ ಎಂ.ಕೆ. ಆಂಜಿನಪ್ಪ, ವೆಂಕಟೇಶ್, ನಂಜುಂಡಪ್ಪ,ಚಲಪತಿ, ನಾರಾಯಣ ರೆಡ್ಡಿ, ತಬಲ ನಾರಾಯಣಪ್ಪ ಸೇರಿ ಅನೇಕರಿದ್ದರು.
ಮುನಿಯಪ್ಪಗೆ ಸೋಲಿನ ಭೀತಿ: ಕೇಶವ
ಶಿಡ್ಲಘಟ್ಟ: ಕೇಂದ್ರ ಸಚಿವ ಕೆ.ಎಚ್. ಮುನಿಯಪ್ಪನವರು ಸೋಲಿನ ಭೀತಿಯಿಂದಾಗಿ ಕೋಲಾರಕ್ಕೆ ಸೋನಿಯಾಗಾಂಧಿಯವರನ್ನು ಕರೆಯಿಸಿದ್ದಾರೆ ಎಂದು ಕೋಲಾರ ಜೆಡಿಎಸ್ ಅಭ್ಯರ್ಥಿ ಕೆ. ಕೇಶವ ಲೇವಡಿ ಮಾಡಿದರು. ಪಟ್ಟಣದಲ್ಲಿ ರೋಡ್ ಶೋ ಮೂಲಕ ಮತಯಾಚನೆ ಮಾಡಿದ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಸೋಲಿನ ಭಯ ಮುನಿಯಪ್ಪರನ್ನು ಕಾಡಲಾರಂಭಿಸಿದೆ, ಸೋನಿಯಾಗಾಂಧಿಯವರ ಆಗಮನದಿಂದ ರಾಜಕೀಯವಾಗಿ ನಿರ್ಗುನವಾಗುತ್ತಾರೆ ಎಂದರು. ಶಾಸಕ ಎಂ. ರಾಜಣ್ಣ ಮಾತನಾಡಿದರು. ಆಯೆಷಾ ಸುಲ್ತಾನ್, ಜಿಪಂ ಸದಸ್ಯೆ ಶಿವಲೀಲಾರಾಜಣ್ಣ, ಬಂಕ್ಮುನಿಯಪ್ಪ, ಜೆಡಿಎಸ್ ತಾಲೂಕು ಅಧ್ಯಕ್ಷ ಧನಂಜಯರೆಡ್ಡಿ, ಶಿವಾರೆಡ್ಡಿ, ಪಿ.ವಿ.ನಾಗರಾಜ್ ಇದ್ದರು.
'ಸ್ವಾಮಿ ವಿರುದ್ಧ ಕೇಸ್ ದಾಖಲಿಸಿ'
ಮಾಲೂರು: ದಲಿತರಿಗೆ ನೀಡುವ ಮೀಸಲು ಸಾಕು. ಅದನ್ನು ರದ್ದು ಮಾಡಬೇಕು ಎಂದು ಹೇಳಿಕೆ ನೀಡಿರುವ ಬಿಜೆಪಿಯ ರಾಷ್ಟ್ರೀಯ ನಾಯಕ ಡಾ.ಸುಬ್ರಹ್ಮಣ್ಯಸ್ವಾಮಿ ವಿರುದ್ಧ ಕೇಸ್ ದಾಖಲಿಸಿಕೊಂಡು, ಗಡಿಪಾರು ಮಾಡಬೇಕು ಎಂದು ಪ್ರೊ.ಬಿ.ಕೃಷ್ಣಪ್ಪ ಹಾಗೂ ದಲಿತ ಸಂಘರ್ಷ ಸಮಿತಿಯ ತಾಲೂಕು ಸಂಚಾಲಕ ಎಸ್.ಎಂ.ವೆಂಕಟೇಶ್‌ಮೂರ್ತಿ ಒತ್ತಾಯಿಸಿದ್ದಾರೆ.
ಈ ಬಗ್ಗೆ ತಹಸೀಲ್ದಾರ್ ಮೂಲಕ ರಾಜ್ಯಪಾಲರಿಗೆ ಮನವಿ ಮಾಡಿರುವ ಅವರು, 'ಇದು ದಲಿತರಿಗೆ ಮಾಡಿರುವ ಅವಮಾನ. ಹಾಗಾಗಿ ಅವರು ವಿರುದ್ಧ ಪ್ರಕರಣ ದಾಖಲಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು' ಎಂದು ಅವರು ಒತ್ತಾಯಿಸಿದ್ದಾರೆ. ಜಿಲ್ಲಾ ಸಂಚಾಲಕ ಚವ್ವೇನಹಳ್ಳಿ, ಡಿ.ನಾರಾಯಣಸ್ವಾಮಿ ಇದ್ದರು.
ಪಟ್ಟಣದಲ್ಲಿ ಮತದಾನ ಜಾಗೃತಿಗೆ ರ್ಯಾಲಿ
ಶಿಡ್ಲಘಟ್ಟ: ಮತದಾನ ಜಾಗೃತಿಗೆ ಪಟ್ಟಣದಲ್ಲಿ ಗುರುವಾರ ರ್ಯಾಲಿ ಆಯೋಜಿಸಲಾಗಿತ್ತು. ನಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಂಚಿರಿಸಿದ ವಿದ್ಯಾರ್ಥಿಗಳು, ಮತದಾರರೇ ಮತ ಹಾಕಿ, ಮತ ಹಾಕಿ ಭಾರತ ಗೆಲ್ಲಿಸಿ ಎಂಬ ಘೋಷಣೆಗಳನ್ನು ಕೂಗುತ್ತಾ ಸಾಗಿದ್ದು ಪ್ರಮುಖ ಆಕರ್ಷಣೆಯಾಗಿತ್ತು. ರ್ಯಾಲಿಯಲ್ಲಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿಗಳು, ತಹಸೀಲ್ದಾರ್ ನಾರಾಯಣಸ್ವಾಮಿ ಸೇರಿದಂತೆ ಹಲವು ಅಧಿಕಾರಿಗಳು ಪಾಲ್ಗೊಂಡಿದ್ದರು. ತಾಲ್ಲೂಕು ಕಚೇರಿಯಿಂದ ಪ್ರಾರಂಭವಾದ ರ್ಯಾಲಿ ಕೋಟೆ ಸರ್ಕಲ್ ಮೂಲಕ ಬಸ್‌ನಿಲ್ದಾಣವೆಗೂ ಬಂತು. ಅಲ್ಲಿಂದ ಮತ್ತೆ ಮತ್ತೆ ಕೋಟೆ ಸರ್ಕಲ್‌ಗೆ ಬಂದು ರ್ಯಾಲಿಯನ್ನು ಮುಕ್ತಾಯಗೊಳಿಸಲಾಯಿತು.