ಬಿಜೆಪಿ ಅಭ್ಯರ್ಥಿ ಗೆಲ್ಲಿಸಲು ಮನವಿ
ಮೋದಿ ಪ್ರಧಾನಿಯಾಗಲು ಬಿಜೆಪಿ ಬೆಂಬಲಿಸಿ: ಶಿವಕುಮಾರಗೌಡ
ಚಿಂತಾಮಣಿ: ದೇಶದಲ್ಲಿ ಕಾಡುತ್ತಿರುವ ಅನೇಕ ಸಮಸ್ಯೆಗಳ ಪರಿಹಾರಕ್ಕಾಗಿ ನರೇಂದ್ರ ಮೋದಿಯನ್ನು ಪ್ರಧಾನಮಂತ್ರಿ ಮಾಡಲು, ಬಿಜೆಪಿ ಅಭ್ಯರ್ಥಿ ಎಂ.ನಾರಾಯಣಸ್ವಾಮಿ ಅವರನ್ನು ಗೆಲ್ಲಿಸಿ ಎಂದು ಕರ್ಣಶ್ರೀ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ಹಾಗೂ ಬಿಜೆಪಿ ಮುಖಂಡ ಡಿ.ಆರ್. ಶಿವಕುಮಾರಗೌಡ ಹೇಳಿದರು.
ತಾಲೂಕಿನ ಚಿಲಕಲನೇರ್ಪು ಹೋಬಳಿ ಕೆಂಚಾರ್ಲಹಳ್ಳಿಯಲ್ಲಿ ಬಿಜೆಪಿ ಪರ ಪಾದಯಾತ್ರೆ ನಡೆಸಿ, ಮತಯಾಚಿಸಿದ ಅವರು, 'ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳಿಗೆ ಶಾಶ್ವತ ನೀರಾವರಿ ಯೋಜನೆಯನ್ನು ಜಾರಿಗೆ ತರಲು ಒಮ್ಮೆ ಬಿಜೆಪಿಗೆ ಅವಕಾಶ ಕೊಡಿ. 6 ಬಾರಿ ಗೆದ್ದು ಅಭಿವೃದ್ಧಿ ಕೆಲಸದಲ್ಲಿ ವಿಫಲವಾಗಿರುವ ಕಾಂಗ್ರೆಸ್ ಕೇಂದ್ರ ಸಚಿವ ಮುನಿಯಪ್ಪಗೆ ವಿಶ್ರಾಂತಿ ನೀಡಿ' ಎಂದು ಹೇಳಿದರು. ಇದೇ ಸಂದರ್ಭದಲ್ಲಿ ಜೆಡಿಎಸ್ ಮತ್ತು ಕಾಂಗ್ರೆಸ್ನಿಂದ ಮುನಿರಾಜ್, ವಿಜಯ್, ಶ್ರೀಕಾಂತ್, ರೆಡ್ಡೆಪ್ಪ, ನಾಗರಾಜ, ಶ್ರೀನಿವಾಸ, ಮೂರ್ತಿ, ಚಲಪತಿ ಪ್ರಭು, ಗಂಗಾಧರ, ನರಸಿಂಹ, ಜಯರಾಮ, ವೆಂಕಟೇಶಪ್ಪ, ಪ್ರಕಾಶರೆಡ್ಡಿ ಸೇರಿದಂತೆ ಇನ್ನೂ ಹಲವು ಮುಖಂಡರು ಬಿಜೆಪಿ ಸೇರಿದರು. ಸುರೇಂದ್ರಗೌಡ, ಮಂಜುನಾಥ್, ರವೀಂದ್ರ, ಸೂರ್ಯಪ್ರಕಾಶ್, ಮೋಹನ್, ಗಾಜುಲ ಶಿವ, ಬಂಗಾರುಬಾಬು ಸೇರಿದಂತೆ ಇನ್ನೂ ನೂರಾರು ಬಿಜೆಪಿ ಕಾರ್ಯಕರ್ತರು ಹಾಜರಿದ್ರು.
ಮತ ನಕಾರ, ಸೌಲಭ್ಯ ಕಡಿತಕ್ಕೆ ಒತ್ತಾಯ
ಕೋಲಾರ: ಮತದಾನ ಮಾಡದವರಿಗೆ ಸರ್ಕಾರದಿಂದ ದೊರೆಯುವ ಎಲ್ಲಾ ಸೌಲಭ್ಯಗಳನ್ನು ಕಡಿತಗೊಳಿಸುವಂತೆ ಒತ್ತಾಯಿಸಿ ರೈತ ಸಂಘದಿಂದ ಜಿಲ್ಲಾ ಚುನಾವಣಾಧಿಕಾರಿ ಡಿ.ಕೆ. ರವಿಯವರಿಗೆ ಮನವಿ ಸಲ್ಲಿಸಲಾಯಿತು. ಜಿಲ್ಲಾಧ್ಯಕ್ಷ ನಾರಾಯಣಗೌಡ ಮಾತನಾಡಿ ಇಂದಿನ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಚುನಾವಣೆ ಎನ್ನುವುದು ಭ್ರಷ್ಟಾಚಾರಿಗಳಿಗೆ ಹಣ ಮಾಡುವ ಸ್ವರ್ಗವಾಗಿದೆ. ಚುನಾವಣೆಯಲ್ಲಿ ಭ್ರಷ್ಟಾಚಾರಕ್ಕೆ ಸಂಪೂರ್ಣ ಕಡಿವಾಣ ಹಾಕಿ ದೇಶ ಮತ್ತು ರಾಜ್ಯದ ಅಭಿವೃದ್ಧಿಗೆ ಉತ್ತಮ ಜನಪ್ರತಿನಿಧಿಗಳನ್ನು ಆಯ್ಕೆ ಮಾಡಬೇಕಾಗಿರುವುದರಿಂದ ಪ್ರತಿಯೊಬ್ಬ ಮತದಾರ ಕಡ್ಡಾಯವಾಗಿ ಮತದಾನದಲ್ಲಿ ಭಾಗವಹಿಸುವಂತೆ ಸರ್ಕಾರ ಇವತ್ತಿನ ಪರಿಸ್ಥಿತಿಯಲ್ಲಿ ಕಾನೂನು ಮಾಡುವುದು ಅವಶ್ಯಕವೆಂದರು. ಜಿಲ್ಲಾ ಸಂಚಾಲಕ ಕೆ. ಶ್ರೀನಿವಾಸಗೌಡ ಮಾತನಾಡಿದರು.ಬಂಗವಾದಿ ನಾಗರಾಜಗೌಡ, ಹುಲ್ಕೂರ್ ಹರಿಕುಮಾರ್, ಹೂವಳ್ಳಿ ನಾಗರಾಜ್, ರಂಜೀತ್ಕುಮಾರ್, ಕಲ್ವಮಂಜಲಿ ರಾಮ, ರಂಜೀತ್ ಸೇರಿ ಅನೇಕರಿದ್ದರು.